ಗಣ್ಯರ ಮತ ಚಲಾವಣೆ ಪ್ರಚಾರವೇಕೆ ಈ ನಮೂನೆ?
ಮೇ 4ರ ಭಾನುವಾರದ ವಿಶ್ವೇಶ್ವರಭಟ್ಟರ 'ನಂಗೆ ಇಷ್ಟಾನೋ' ಅಂಕಣದಲ್ಲಿ ಈ ಬಾರಿ ಚುನಾವಣೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದ ಸಾಮಾಜಿಕ ಜಾಲತಾಣ ಟ್ವಿಟರ್ನ ಬಗ್ಗೆಯ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ. ವಿಶ್ವೇಶ್ವರಭಟ್ರವರು ರಾಜಕೀಯದ ಮೇಲೆ ಟ್ವಿಟರ್ ಹಕ್ಕಿಗೂಡಿನ ವಿವಿಧ ಮಜಲುಗಳನ್ನು ಚೆನ್ನಾಗಿ ವಿವರಿಸಿದ್ದಾರೆ. ಆದರೆ ಈ ಲೇಖನಕ್ಕೆ 'ಅಬ್ ಕೀ ಬಾರ್, ಟ್ವಿಟರ್ ಸರ್ಕಾರ್' ಎಂಬ ಶೀರ್ಷಿಕೆ ಅಷ್ಟು ಸೂಕ್ತವೆನಿಸಲಿಲ್ಲ. ಟ್ವಿಟರ್ಗೂ ಸರ್ಕಾರಕ್ಕೂ ಎಲ್ಲಿಯ ಸಂಬಂಧ. ಸರ್ಕಾರವನ್ನು ಟ್ವಿಟರ್ನ ಮೂಲಕ ನಡೆಸಲಾಗುತ್ತಿದೆಯೇ. ಹಾಗಾಗಿ ಈ ಲೇಖನಕ್ಕೆ 'ಅಬ್ ಕೀ ಬಾರ್ ಟ್ವಿಟರ್ ಸರ್ಕಾರ್' ಎಂಬ ಶೀರ್ಷಿಕೆಯ ಬದಲಾಗಿ 'ಅಬ್ ಕರೀ ಬಾರ್, ಟ್ವಿಟರ್ ದರ್ಬಾರ್' ಎಂಬ ಶೀರ್ಷಿಕೆಯನ್ನು ನೀಡಿದ್ದರೆ ತರ್ಕಬದ್ಧವಾಗುತ್ತಿತ್ತು.
-ಆರ್.ಸಿ. ಪರಶುರಾಮ್, ಶಿಕಾರಿಪುರ.
ಮೊ. 990 220 3492
'ಅಧ್ಯಯನ ಪೀಠಗಳು ಸಂಶೋಧನೆಗೊ ರಾಜಕೀಯಕ್ಕೋ?' ರಾಜೀವ ಹೆಗಡೆಯವರ ಲೇಖನ (ಕ.ಪ್ರ. 3/5) ಸಕಾಲಿಕವಾಗಿದೆ. ನಮ್ಮ ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ನಾಯಿಕೊಡೆಗಳಂತೆ ಅಧ್ಯಯನಪೀಠಗಳನ್ನು ತೆರೆಯುತ್ತಿದೆ. ರಾಜಕೀಯ ಕಾರಣಗಳಿಗಾಗಿ ಜಾತಿಗೊಂದು ಅಧ್ಯಯನ ಪೀಠ ತೆರೆಯುತ್ತಿದ್ದು ಈ ಪೀಠಗಳ ಲಾಭವನ್ನು ಯಾರೂ ಪಡೆಯುತ್ತಿಲ್ಲ. ಈ ಪೀಠಗಳಲ್ಲಿ ಅಧ್ಯಯನ, ಸಂಶೋಧನೆ, ಸಂಪಾದನೆ ಹಾಗೂ ಪ್ರಕಟಣೆ ನಡೆಯುತ್ತಿಲ್ಲ. ಮುಂದಾಲೋಚನೆ ಇಲ್ಲದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಓಲೈಸಲು ಸರ್ಕಾರ ಹೀಗೆ ಪೀಠಗಳನ್ನು ತೆರೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
-ಆರ್.ಎಸ್. ಚಾಪಗಾವಿ
644 ರಾಮತೀರ್ಥ ನಗರ, ಬೆಳಗಾವಿ
ಓದುಗರು ಹಣ ಕೊಟ್ಟು ಪತ್ರಿಕೆ ಕೊಳ್ಳುವುದು ದೇಶ-ವಿದೇಶ-ರಾಜ್ಯಗಳ ಸುದ್ದಿ, ವಿಶಿಷ್ಟ ಸುದ್ದಿಗಳನ್ನು ಓದಲು. ದಿ. 5.5.14ರ ನಿಮ್ಮ ಪತ್ರಿಕೆಗೆ ಪುಟ 3 ಮೈಸೂರು ಪ್ರದೇಶಕ್ಕೆ ಪ್ರಕಟಿಸಲು ಪ್ರೇಮಕುಮಾರಿಯವರಿಗೆ ಸಂಬಂಧಿಸಿದ ಮನೆ ಬಾಡಿಗೆ ಸುದ್ದಿಗೋಷ್ಠಿಯ ವರದಿಯೇ ಬೇಕಾಗಿತ್ತೇ? ಈ ಸುದ್ದಿ ಈ ಪುಟದಲ್ಲಿ 1/3 ಭಾಗವನ್ನುವ ಅತಿಕ್ರಮಿಸಿದ್ದು ಯಾವ ಪುರುಷಾರ್ಥಕ್ಕಾಗಿ. ನಾವು ಈ ಸುದ್ದಿಯನ್ನು ಏಕೆ ಓದಬೇಕು? ಇದಕ್ಕಿಂತಲೂ ಮೈಸೂರು ಪ್ರದೇಶಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಮುಖ್ಯ ಸುದ್ದಿ ಸಿಗಲಿಲ್ಲವೆ? ಸಾವಿರಾರು ಜನರು ಬಾಡಿಗೆ ಮನೆಯನ್ನು ಪಡೆಯುತ್ತಿದ್ದಾರೆ ಈ ಮೈಸೂರಲ್ಲಿ. ಯಾರಿಗೋ ಮನೆ ಬಾಡಿಗೆಗೆ ಸಿಗುತ್ತಿಲ್ಲವಾದರೆ ಅವರು ಜಾಹೀರಾತು ಕೊಟ್ಟು ಬ್ರೋಕರ್ಗಳನ್ನು ಸಂಪರ್ಕಿಸಲಿ. ಅದು ಬಿಟ್ಟು ಪತ್ರಿಕಾಗೋಷ್ಠಿ ಕರೆದು ಬಾಡಿಗೆಗೆ ಮನೆ ಸಿಗುತ್ತಿಲ್ಲವೆಂದು ಅವಲತ್ತುಕೊಂಡ ಚಿತ್ರ ಸಹಿತ ವರದಿಯನ್ನು ಓದುವ ದೌರ್ಭಾಗ್ಯ ನಮಗೆ ಬೇಡ.
-ಸಿ. ದಿನಮಣಿರಾವ್, ನಂ.17, ಕುವೆಂಪುನಗರ, ಮೈಸೂರು.
ಕ.ಪ್ರ. 24.4.2014 ಮುಖಪುಟ 'ಕ್ರಿಕೆಟ್ ದೇವರು' ಓಟ್ ಹಾಕುವ ಮೂಲಕ ಸಚಿನ್ ವಿಶೇಷವಾಗಿ ಹಬ್ಬ ಆಚರಿಸಿಕೊಂಡ ಬಗ್ಗೆ ಏನಿದೆ ವಿಶೇಷ?
ಯೋಧರೊಂದಿಗೆ ಆಚರಿಸಿಕೊಂಡರೆ? ಅನಾಥ ಮಕ್ಕಳೊಂದಿಗೆ ಆಚರಿಸಿಕೊಂಡರೆ? ಹಸಿರು ಅಭಿಯಾನ ಆರಂಭಿಸಿ ಹು.ಹ. ಆಚರಿಸಿಕೊಂಡರೆ?
ಜಾತ್ಯತೀತ ನೀತಿಯನ್ನು ಬಿತ್ತಿ ಹು.ಹ. ಆಚರಿಸಿಕೊಂಡರೆ? ಕನಿಷ್ಠ ಸಂದರ್ಭಕ್ಕೆ ತಕ್ಕಂತೆ ದೇಶದ ಎಲ್ಲರೂ ಮತದಾನದಲ್ಲಿ ಭಾಗವಹಿಸುವಂತೆ ಕಳಕಳಿಯ ಮನವಿ ಮಾಡಿ ಮತದಾನದ ಪ್ರಚಾರ ಮಾಡಿ ಹು.ಹ. ಆಚರಿಸಿಕೊಂಡರೆ? ಇಲ್ಲ. ಚುನಾವಣೆ ದಿನ ಸಚಿನ್ರಂತೆ ದೇಶದ ಸಾವಿರಾರು ಜನ ಹು.ಹ. ಅದೇ ದಿನ ಆಚರಿಸಿಕೊಂಡಿರುತ್ತಾರೆ. ಅಲ್ಲವೇ? ಗಣ್ಯರ ಮತದಾನದ ಚಿತ್ರ ಪ್ರಕಟಿಸುತ್ತೀರಿ. ಸರಿ. ವಿಶೇಷ ಏನು ಬಂತು?
-ರಮೇಶ್ ಎನ್.ಎ., ತುಮಕೂರು.
ಮೊ. 9844 782562
'ಫಲಿತಾಂಶ ಏನೇ ಇರಲಿ, ಗೆಲ್ಲೋದು ಆಯೋಗವೇ' ವಿಶ್ವೇಶ್ವರಭಟ್ ಅವರ ನೂರೆಂಟು ನೋಟ ಲೇಖನ ಚುನಾವಣಾ ಆಯೋಗದ ಜವಾಬ್ದಾರಿಯುತ ಕೆಲಸಗಳ ಸಂಪೂರ್ಣ ಚಿತ್ರಣವನ್ನು ನಮ್ಮ ಮುಂದಿಟ್ಟಿದೆ. ಇಷ್ಟೊಂದು ಅಧಿಕಾರ ಇರುವ ಈ ಆಯೋಗ, ಚುನಾವಣಾ ಸಂದರ್ಭದಲ್ಲಿ ಪ್ರಧಾನ ಪ್ರಚಾರಕರ ತೀರ ಕೆಳಹಂತದ ಮಾತುಗಳಿಗೇಕೆ ಕಡಿವಾಣ ಹಾಕುತ್ತಿಲ್ಲ? ಎರಡನೆಯದಾಗಿ ಅಷ್ಟೊಂದು ಶ್ರಮಪಟ್ಟು ವರ್ಷದಿಂದಲೇ ತಯಾರಿ ನಡೆಸಿ, ಸುಮಾರು 120 ವಿಶೇಷ ರೈಲಿನ 3060 ಬೋಗಿಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಸೈನಿಕರು, ಅರೆ-ಸೈನಿಕರು, ಪೊಲೀಸರು, ಭದ್ರತಾ ಸಿಬ್ಬಂದಿ, ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳನ್ನು ತಯಾರು ಮಾಡಿ, ದೇಶದ ಪ್ರತಿಯೊಬ್ಬ ಮತದಾನದ ಹಕ್ಕನ್ನು ಪಡೆಯುವಂತೆ ಮಾಡಿದರೂ, ಮತದಾರ ಮಾತ್ರ ತನಗೇನೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುವುದು ಈಗಷ್ಟೇ ನಡೆದ ಕೆಲವು ಮತಕ್ಷೇತ್ರಗಳಲ್ಲಿ ಸಾಬೀತಾಗಿದೆ. ಮತದಾನ ಪ್ರತಿಯೊಬ್ಬನ ಹಕ್ಕು, ಅಧಿಕಾರ ಹಾಗೂ ಕರ್ತವ್ಯ ಎಂದು ಆಯೋಗ ಎಷ್ಟೇ ಬೊಬ್ಬೆ ಹೊಡೆಯುತ್ತಿದ್ದರೂ, ಮತದಾನ ಮಾಡದೇ ಇರುವವರಿಗೆ ದಂಡಿಸುವ ಅವಕಾಶವೂ ಇರಬೇಕು. ಮತದಾನ ಮಾಡದೇ ಇರುವವರು ಕೇವಲ ಅಶಿಕ್ಷಿತರು ಎಂದು ಭಾವಿಸಲಾಗದು. ಅದೆಷ್ಟೋ ಸುಶಿಕ್ಷಿತರ ಕ್ಷೇತ್ರದಲ್ಲೂ ಹೀಗಾಗಿದೆ.
-ಶಂಕರನಾರಾಯಣ ಭಟ್ ಮಾಡಗೇರಿ, ಹೊನ್ನಾವರ.
ನೀವು ಏನ್ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

