

ಈಗ ಎಲ್ಲ್ಲ ಮೊಬೈಲು ಸ್ಮಾರ್ಟ್‌ಫೋನ್‌ಗಳಲ್ಲೂ ತ್ರಿಜಿ ತರಂಗಾಂತರದ ಸಹಾಯದಿಂದ ಫೇಸ್‌ಬುಕ್ ಅಂಗೈಯಲ್ಲಿಯೇ ದಕ್ಕುವುದರಿಂದ ಮಕ್ಕಳನ್ನು ನಿಯಂತ್ರಿಸುವುದಾದರೂ ಹೇಗೆ? ಮೊಬೈಲ್ ಹಿಡಿದು ಫೇಸ್‌ಬುಕ್ ಓಪನ್ ಮಾಡಿ ಕುಳಿತುಬಿಟ್ಟರೆ ಕದಲಿಸಲಾಗದಂತೆ ಮೈಮರೆತು ಕುಳಿತುಬಿಡುತ್ತಾರೆ.
ಫೇಸ್‌ಬುಕ್ ಹಾಗೂ ಟ್ವಿಟರ್ ಹೇಗೆ ಹಠಾತ್ ಆಗಿ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆಯೆಂಬುದನ್ನು ಯೋಚಿಸಿದರೆ ಅಚ್ಚರಿಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಹದಿಹರೆಯದ ಹುಡುಗ-ಹುಡುಗಿಯರ ಮುಂದೆ ಫೇಸ್‌ಬುಕ್ ಒಂದು ಹೊಸ ಪ್ರಪಂಚವಾಗಿ ತೆರೆದುಕೊಂಡಿದೆ. ಫೇಸ್‌ಬುಕ್ ಮುಂದೆ ಕುಳಿತುಕೊಂಡರೆ ಊಟ, ತಿಂಡಿ, ಓದು ಬಿಡಿ, ತಂದೆ, ತಾಯಿ, ಬಂಧು-ಬಾಂಧವರೂ ಬೇಡ. ಅಂಥ ಗೀಳನ್ನು ಹಚ್ಚಿಕೊಂಡುಬಿಟ್ಟಿದ್ದಾರೆ. ಮೊನ್ನೆ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿ ನಿಜಕ್ಕೂ ಮನಕಲಕಿತು. ತಾಯಿ ಮಗಳಿಗೆ ಗದರಿದ್ದಾಳೆ. ಇತ್ತೀಚೆಗೆ ಓದು-ಬರಹಕ್ಕಿಂತ ಫೇಸ್‌ಬುಕ್ ಮೇಲೆಯೇ ನಿನ್ನ ಆಸಕ್ತಿ ಹೆಚ್ಚಾಗುತ್ತಿದೆಯೆಂದು ಬೈಯ್ದಿದ್ದಾಳೆ. ಮಗಳಿಗೆ ತನ್ನ ಖಾಸಗಿ ಬದುಕು, ಸ್ವಚ್ಛಂದ ಯೋಚನೆಯನ್ನು ಕಸಿದುಕೊಂಡಂತೆ ಭಾಸವಾಗಿದೆ. ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇತ್ತೀಚೆಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿರುವ ನನ್ನ ಕ್ಲಾಸ್‌ಮೇಟ್ ಮನೆಗೆ ಬಂದಿದ್ದಳು. ಮನೆಯಲ್ಲಿದ್ದಷ್ಟು ಹೊತ್ತು ಅವಳು ಫೇಸ್‌ಬುಕ್‌ನಿಂದ ಈ ಯುವತಲೆಮಾರು ಹೇಗೆ ದಾರಿತಪ್ಪುತ್ತಿದೆ ಎಂಬುದನ್ನು ಹೇಳಿದಳು. ಅವಳಿಗೂ, ಪ್ರಥಮ ಡಿಗ್ರಿಯಲ್ಲಿ ಓದುತ್ತಿರುವ ಅವಳ ಮಗಳ ನಡುವೆ ಪ್ರತಿದಿನ ಮನೆಯಲ್ಲಿ ನಡೆಯುವ 'ಸಮರ'ದ ಬಗ್ಗೆ ಹೇಳಿ ವ್ಯಥೆ ಪಟ್ಟುಕೊಂಡಳು. ಫೇಸ್‌ಬುಕ್ ಎಂಬ ಫೇಸ್‌ಲೆಸ್ (ಮುಖೇಡಿ) ತಲೆಮಾರು ಹೇಗೆ ಕಂಟಕಪ್ರಾಯವಾಗಿ ಪರಿಣಮಿಸುತ್ತಿದೆಯೆಂಬುದನ್ನು ವಿವರಿಸಿದಳು. ಫೇಸ್‌ಬುಕ್ ಎಂಬುದೊಂದು ಇರದಿದ್ದರೆ ತನ್ನ ಬಾಳು ನಂದನವನ ಎಂದಳು. ಅದೊಂದರಿಂದ ತನ್ನ ಕುಟುಂಬ ಎಂಥ ಸೀರಿಯಸ್ ಆದ ಬಿಕ್ಕಟ್ಟು ಎದುರಿಸುತ್ತಿದೆಯೆಂಬುದನ್ನು ಹತ್ತಾರು ನಿದರ್ಶನಗಳಿಂದ ಹೇಳಿದಳು. ಅವಳು ಸಮಸ್ಯೆಯನ್ನು ವಿಜೃಂಭಿಸುತ್ತಿದ್ದಾಳೆಂದೂ, ವಯಸ್ಸಿಗೆ ಬಂದ ಮಗಳನ್ನು ತುಸು ಒರಟಾಗಿಯೇ ನಿಭಾಯಿಸುತ್ತಿದ್ದಾಳೆಂದು ಅನಿಸಿದರೂ, ಅವಳ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿರಲ್ಲ.
ಇಂದು ಎಲ್ಲರ ಮನೆಯಲ್ಲೂ ಫೇಸ್‌ಬುಕ್ ಎಂಬ ಹೆಮ್ಮಾರಿ ಹೊಕ್ಕಿದೆ. ಅದನ್ನು ಹೊರಹಾಕುವ ಸ್ಥಿತಿಯಲ್ಲಿ ಯಾರೂ ಇಲ್ಲ. ಹೇಗೆ ನಿಭಾಯಿಸಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಬುಕ್ ಹಿಡಿಯಬೇಕಾದ ಕೈಗಳ ಮುಂದೆ ಫೇಸ್‌ಬುಕ್ ಬಂದು ಕುಳಿತಿದೆ. ಹಾಗೆಂದು ಇದು ಬೇಡವೇ ಬೇಡ ಎಂದು ವಾದಿಸುವವರೂ ಫೇಸ್‌ಬುಕ್ ಅಕೌಂಟ್ ತೆರೆದಿದ್ದಾರೆ. ಎಷ್ಟು ಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಮಾದಕ ದ್ರವ್ಯ, ಮಾದಕ ಪದಾರ್ಥ ಸೇವನೆಯಂತೆ ಫೇಸ್‌ಬುಕ್ ಸಹ.
ಶೀಲ- ಅಶ್ಲೀಲದ ನಡುವಿನ ವ್ಯತ್ಯಾಸದಂತೆ. ಮೂರ್ನಾಲ್ಕು ವರ್ಷಗಳ ಹಿಂದಿನವರೆಗೆ, ಮನೆಯಲ್ಲಿನ ಕಂಪ್ಯೂಟರ್‌ನ್ನು ಬಳಸುತ್ತಿದ್ದ ಮಕ್ಕಳಿಗೆ ಫೇಸ್‌ಬುಕ್ ಬಳಕೆಗೆ ಸಂಬಂಧಿಸಿದಂತೆ ಕಡಿವಾಣ ಹಾಕಬಹುದಿತ್ತು. ಈಗ ಎಲ್ಲ್ಲ ಮೊಬೈಲು ಸ್ಮಾರ್ಟ್‌ಫೋನ್‌ಗಳಲ್ಲೂ ತ್ರಿಜಿ ತರಂಗಾಂತರದ ಸಹಾಯದಿಂದ ಫೇಸ್‌ಬುಕ್ ಅಂಗೈಯಲ್ಲಿಯೇ ದಕ್ಕುವುದರಿಂದ ಮಕ್ಕಳನ್ನು ನಿಯಂತ್ರಿಸುವುದಾದರೂ ಹೇಗೆ? ಮೊಬೈಲ್ ಹಿಡಿದು ಫೇಸ್‌ಬುಕ್ ಓಪನ್ ಮಾಡಿ ಕುಳಿತುಬಿಟ್ಟರೆ ಕದಲಿಸಲಾಗದಂತೆ ಮೈಮರೆತು ಕುಳಿತುಬಿಡುತ್ತಾರೆ. ಇದು ಎಂಥ ತಂದೆ-ತಾಯಿಗಳಿಗೂ ಅರಗಿಸಿಕೊಳ್ಳಲು ಆಗದ ಪೀಡೆ!
ಇತ್ತೀಚೆಗೆ ನಾನು ದುಬೈಯಲ್ಲಿ ಸ್ನೇಹಿತರಾದ ರೇಜಿ ಅಬ್ರಹಾಂ ಎಂಬ ಉದ್ದಿಮೆದಾರರೊಬ್ಬರನ್ನು ಭೇಟಿ ಮಾಡಿದ್ದೆ. ಅವರು ಆಫ್ರಿಕಾದ ಜಿಬೋಟಿಯಲ್ಲಿ ತಮ್ಮದೇ ಸ್ವಂತ ಉದ್ಯಮ ಹೊಂದಿದ್ದಾರೆ. ಅವರು ಮಾತಿನ ಮಧ್ಯೆ ಒಂದು ಕುತೂಹಲಕರ ಸಂಗತಿ ಪ್ರಸ್ತಾಪಿಸಿದರು. ಈಜಿಪ್ತ್, ಲೆಬನಾನ್, ಸಿರಿಯಾ ಸೇರಿದಂತೆ ಹದಿಮೂರು ದೇಶಗಳಲ್ಲಿ ಅಲ್ಲಿನ ಸರ್ಕಾರಗಳ ದುರಾಡಳಿತದ ವಿರುದ್ಧ ಸ್ಥಳೀಯ ಜನರು ದಂಗೆ ಎದ್ದರು. ಕೆಲವು ಕಡೆ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಕಿತ್ತೊಗೆದರು. ಭಾರತದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಆ ಹದಿಮೂರು ದೇಶಗಳಿಗಿಂತ ಭಾರತದಲ್ಲಿನ ಸರ್ಕಾರ ಭ್ರಷ್ಟವಾಗಿತ್ತು. ಸಾಮಾನ್ಯ ಜನರ ಸ್ಥಿತಿ ಅಯೋವುಯವಾಗಿತ್ತು. ಇದೇ ಸಂದರ್ಭದಲ್ಲಿ ಅಣ್ಣಾ ಹಜಾರೆಯವರು ಆರಂಭಿಸಿದ ಜನಲೋಕಪಾಲ ಆಂದೋಲನಕ್ಕೆ ಅಭೂತಪೂರ್ವ ಜನಬೆಂಬಲ ಸಿಕ್ಕಿತು. ಆದರೆ ಅದು ಕ್ರಮೇಣ ಸ್ಥಗಿತವಾಯಿತು. ಜನರ ಆಕ್ರೋಶವೂ ನಿಧಾನವಾಗಿ ತಣ್ಣಗಾಯಿತು.
ಇದಕ್ಕೆ ಕಾರಣ ಏನು ಗೊತ್ತಾ?
ಹಾಗೆಂದು ಕೇಳಿದರು ರೇಜಿ ಅಬ್ರಹಾಂ.
'ಬೀದಿಯಲ್ಲಿ ಇಳಿದು ಹೋರಾಟ ಮಾಡಬೇಕಾದ ಯುವಪೀಳಿಗೆ ಫೇಸ್‌ಬುಕ್ ಮುಂದೆ ಕುಳಿತಿದ್ದು!'
ನನಗೆ ಅವರ ಮಾತನ್ನು ಸಂಪೂರ್ಣವಾಗಿ ನಂಬಲು ಆಗಲಿಲ್ಲ. ಅದಕ್ಕೆ ಅವರು ಹೇಳಿದರು-'ಭಾರತದಲ್ಲಿ ಇಂದು ಯಾವ ಚಳವಳಿಯೂ ಅಸಾಧ್ಯ. ಹೋರಾಟಕ್ಕಿಳಿಯಬೇಕಾದ ಮನಸ್ಸುಗಳು ಫೇಸ್‌ಬುಕ್, ಟ್ವಿಟರ್ ಮುಂದೆ ಕುಳಿತಿವೆ. ತಮ್ಮ ಆಕ್ರೋಶ, ಸಿಟ್ಟು, ಸೆಡವುಗಳನ್ನು ಈ ಸಾಮಾಜಿಕ ತಾಣಗಳ ಮೂಲಕ ಪ್ರಕಟಿಸಲು ನಾ ಮುಂದು ತಾ ಮುಂದು ಎಂದು ಜನ ಉತ್ಸಾಹ ತೋರುತ್ತಾರೆ. ಅದೇ ಬೀದಿಗಿಳಿದು ಹೋರಾಡೋಣ ಬನ್ನಿ ಎಂದರೆ ಯಾರೂ ಬರುವುದಿಲ್ಲ. ಯುವ ಜನತೆಗೆ ಆ ಹೋರಾಟದಲ್ಲಿ ಆಸಕ್ತಿಯಿಲ್ಲ. ಫೇಸ್‌ಬುಕ್, ಟ್ವಿಟರ್ ಮೂಲಕ ಈ ಜಗತ್ತನ್ನು ಸುಧಾರಿಸುವ ಕನಸು ಹೊಂದಿದ್ದಾರೆ. ಈ ಕಾರಣದಿಂದ ಭಾರತ ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡಿತು. ಸದ್ಯದ ಭವಿಷ್ಯತ್ತಿನಲ್ಲಿ ಈ ಅವಕಾಶ ಬರಲಾರದು. ಒಂದು ವೇಳೆ ಬಂದರೂ, ಫೇಸ್‌ಬುಕ್, ಟ್ವಿಟರ್ ಕೋಟೆಯನ್ನು ಭೇದಿಸಿಕೊಂಡು ಯುವಜನತೆ ಮುಂದೆ ಬರುತ್ತಾರಾ? No'
ರೇಜಿ ಅಬ್ರಹಾಂ ಮಾತಿನಲ್ಲಿ ಒಂದು ಪಾಯಿಂಟ್ ಇದೆ.
ಯುವಜನರೊಂದನ್ನೇ ಜರಿದು ಫಲವಿಲ್ಲ. ಫೇಸ್‌ಬುಕ್ ಪಿಡುಗಿಗೆ ಮರುಳಾದವರು ಬರೀ ಯುವಕ-ಯುವತಿಯರೊಂದೇ ಅಲ್ಲ. ಎಲ್ಲ ವಯೋವಾನದವರೂ ಅದರ ಮೋಡಿಗೆ ಆಕರ್ಷಿತರಾಗಿದ್ದಾರೆ. ಸರ್ಕಾರವೇನಾದರೂ ಫೇಸ್‌ಬುಕ್ ಅಕೌಂಟ್ ತೆರೆದು, ಎಲ್ಲರನ್ನೂ ಸದಸ್ಯರನ್ನಾಗಿ ಸೇರಿಸಿಕೊಳ್ಳುವಂತಾದರೆ, ಅದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾಗುತ್ತದೆ ಎಂದು ಇಂಟರ್‌ನೆಟ್ ಆಸ್ಫೋಟದ ಭವಿಷ್ಯಕಾರ ನಿಕೊಲಸ್ ನಿಗ್ರೋಪಾಂಟೆ ಹೇಳಿದ್ದನ್ನು ನೆನಪಿಸಿಕೊಂಡರೆ, ಆ ದಿನವೂ ದೂರವಿಲ್ಲವೇನೋ ಅನಿಸುತ್ತದೆ.
ಫೇಸ್‌ಬುಕ್ ಬಳಕೆಯ ಪರಿಣಾಮದ ಒಳಿತು-ಕೆಡಕುಗಳ ಬಗ್ಗೆ ಯೋಚಿಸುತ್ತಾ ಕುಳಿತರೆ, ಅತಿಯೋಚನೆಯ ಕೆಡಕುಗಳ ಪರಿಣಾಮವನ್ನಂತೂ ಎದುರಿಸಲೇಬೇಕು. ಎಲ್ಲವೂ ಅಯೋವುಯ!
ಹೊಸ ಉದ್ಯೋಗ, ಹಳೆ ಉದ್ಯೋಗ
ಡ್ರೈವರ್ ಟ್ಯಾಕ್ಸಿಯನ್ನು ಜೋರಾಗಿ ಓಡಿಸುತ್ತಿದ್ದ. ಹಿಂದೆ ಕುಳಿತಿದ್ದ ಪ್ಯಾಸೆಂಜರ್ ಡ್ರೈವರ್ ಭುಜದ ಮೇಲೆ ಕೈ ಹಾಕಿ, 'ಹಲೋ ಮಿಸ್ಟರ್... ಏನೂಂದ್ರೆ' ಎಂದ. ಆ ಮಾತಿಗೆ ಡ್ರೈವರ್ ಗಾಬರಿಯಾದ. ಟ್ಯಾಕ್ಸಿಯನ್ನು ಯದ್ವಾತದ್ವಾ ಓಡಿಸಿದ. ವೇಗವನ್ನು ಇಮ್ಮಡಿಗೊಳಿಸಿದ. ಆ ವೇಗಕ್ಕೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕದಲ್ಲಿ ಹೋಗಿ ಬಿದ್ದಿತು.
ಅದೃಷ್ಟವಶಾತ್, ಡ್ರೈವರ್‌ಗಾಗಲಿ, ಪ್ಯಾಸೆಂಜರ್‌ಗಾಗಲಿ ಪೆಟ್ಟಾಗಲಿಲ್ಲ. ಇಬ್ಬರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.
ಹಿಂದಿನ ಸೀಟಿನಿಂದ ಪ್ರಯಾಸಪಟ್ಟು ಕಾರಿನ ಬಾಗಿಲನ್ನು ತೆರೆದ ಪ್ಯಾಸೆಂಜರ್, 'ಅಲ್ಲಾ ಮಾರಾಯ, ನಿನಗೆ ಏನಾಯಿತು? ಹಲೋ ಮಿಸ್ಟರ್... ಏನೂಂದ್ರೆ... ಅಂತ ಹೇಳಿದ್ದಕ್ಕೆ ನೀನು ಯದ್ವಾತದ್ವಾ ಕಾರನ್ನು ಓಡಿಸುವುದಾ? ಮೈ ಮೇಲೆ ಭೂತ ಬಂದವನಂತೆ ಕಾರನ್ನು ಓಡಿಸಿದೆಯಲ್ಲಾ, ನಿನಗೆ ಏನಾಯಿತು?' ಎಂದು ಡ್ರೈವರ್‌ನನ್ನು ಕೇಳಿದ.
ಅದಕ್ಕೆ ಡ್ರೈವರ್ ಹೇಳಿದ-'ಸ್ವಾಮಿ, ನಾನು ನನ್ನ ಮೂವತ್ತು ವರ್ಷವನ್ನು ಹೆಣ ಸಾಗಿಸುವ ವಾಹನದ ಡ್ರೈವರ್ ಆಗಿ ಕಳೆದೆ. ಇಂದು ಮೊದಲ ಬಾರಿಗೆ ಉದ್ಯೋಗ ಬದಲಿಸಿ ಟ್ಯಾಕ್ಸಿ ಓಡಿಸಿದೆ. ಅದೇ ತಪ್ಪಾಯಿತು ನೋಡಿ.'
ನೀತಿ: ನೀವು ಒಂದು ಉದ್ಯೋಗವನ್ನು ಬಿಟ್ಟು, ಬೇರೆಯ ಹೊಸ ಉದ್ಯೋಗ ಆರಂಭಿಸಿದಾಗ, ಇನ್ನೂ ಹಳೆಯ ಉದ್ಯೋಗದಿಂದ ಸಂಪೂರ್ಣ ಬಿಡುಗಡೆ ಹೊಂದಿರುವುದಿಲ್ಲ.
ಅಂದ ಹಾಗೆ ಈ ಪ್ರಸಂಗವನ್ನು ಓದಿದ್ದು ಫೇಸ್‌ಬುಕ್‌ನಲ್ಲಿಯೇ.
ಅರ್ನಬ್ ಗೋಸ್ವಾಮಿ ಅಭಿಮಾನಿಗಳಿಗೆ
ದೇವರಿಗೆ ಈ ಸಂಕೀರ್ಣ ಜಗತ್ತನ್ನು ಸೃಷ್ಟಿಸಿದ ನಂತರ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ನಿರ್ಧರಿಸುವುದು ಹೇಗೆಂದು ಚಿಂತೆಯಾಯಿತು. ಅದಕ್ಕಾಗೇ ಆತ ಅರ್ನಬ್‌ನನ್ನು ಸೃಷ್ಟಿಸಿದ!
ಹೇಗೆ ಅರ್ನಬ್ ಗೋಸ್ವಾಮಿ ವರ್ಷಗಳಿಂದ ದೇಶದಲ್ಲಿ ಭಯೋತ್ಪಾದನೆ ಮಾಡುತ್ತಿದ್ದಾರೆ ಎನ್ನುವ ಕುರಿತು ಸತ್ಯಮೇವ ಜಯತೆ ಕಾರ್ಯಕ್ರಮ ತನ್ನ ಮುಂದಿನ ಎಪಿಸೋಡ್‌ನಲ್ಲಿ ಗಮನ ಹರಿಸುತ್ತದೆ ಎಂದು ಆಶಿಸೋಣ.
"ಯಾಕೆ? ಯಾಕೆ? ಯಾಕೆ? ದಿ ನೇಷನ್ ಡಿಮ್ಯಾಂಡ್ಸ್ ಆ್ಯನ್ ಆನ್ಸರ್"
"ಇಡ್ಲಿ ವಡೆ ಖಾಲಿಯಾಗಿದೆ ಸರ್" ಎಂದ ಉಡುಪಿ ಹೊಟೇಲ್ ಮಾಣಿಗೆ ಅರ್ನಬ್‌ನ ಪ್ರತಿಕ್ರಿಯೆಯಿದು!
ಒಂದು ವೇಳೆ ಅರ್ನಬ್ ಗೋಸ್ವಾಮಿ ಫೋಟೋದಲ್ಲಿ ಬಾಯಿ ಮುಚ್ಚಿದ್ದರೆಂದರೆ. ಆ ಕ್ಯಾಮೆರಾ ಅತ್ಯುತ್ತಮ ಶಟರ್ ಸ್ಪೀಡ್ ಹೊಂದಿದೆ ಎಂದರ್ಥ.
ಅರ್ನಬ್ ಸಂದರ್ಶನದಲ್ಲಿ ಒಂದು ವಾಕ್ಯವನ್ನು ಸಂಪೂರ್ಣ ಮಾಡುವುದಕ್ಕೆ ಇದುವರೆಗೂ ಸಾಧ್ಯವಾಗಿದ್ದು ರಜನೀಕಾಂತ್‌ಗೆ ಮಾತ್ರ.
ಅರ್ನಬ್ ತಮ್ಮ ಕಾರ್ಯಕ್ರಮದ ಹೆಸರನ್ನು The Noise Hour ಎಂದು ಬದಲಿಸಲಿದ್ದಾರಂತೆ.
-ವಿಶ್ವೇಶ್ವರ ಭಟ್