ಪ್ಲಾಸ್ಟಿಕ್ನಿಂದ ಪರಿಸರವನ್ನು ರಕ್ಷಿಸಲು ಹೀಗೊಂದು ಉಪಾಯ

ಈ ಹಿಂದೆ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಬರೆದಿದ್ದೆ. ಇದರ ಜೊತೆಗೆ ಸಾಮೂಹಿಕ ಸ್ವಚ್ಛತೆ ಸಹ ಅತ್ಯಂತ ಅನಿವಾರ್ಯ ಎಂಬುದು ಸತ್ಯ. ನಮ್ಮ ಸಂಸ್ಕೃತಿ ನಮಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಕಲಿಸಿದೆ. ಸಾಮಾನ್ಯವಾಗಿ ಅದನ್ನು ಚಾಚೂತಪ್ಪದೇ ಪಾಲಿಸುತ್ತೇವೆ. ಆದರೆ ನಮ್ಮ ಸ್ವಂತ ಮನೆಯ ಕಸವನ್ನು ವಿಚಾರ ಮಾಡದೇ ಮನೆಯ ಹೊರಗೆ ಬಿಸಾಡುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲಿಯೂ ಈ ಕಾಲದಲ್ಲಿ ಪ್ಲಾಸ್ಟಿಕ್ ಚೀಲಗಳು ಹೆಚ್ಚು ಉಪಯೋಗಿಸುವುದರಿಂದ ಕಸದಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಒಂದು ದೊಡ್ಡ ಸವಾಲು ಎದುರಾಗಿದೆ.
ಪ್ಲಾಸಿಕ್ ಆವಿಷ್ಕಾರದಿಂದ ಮನುಷ್ಯನ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಕಡಿಮೆ ಖರ್ಚಿನಲ್ಲಿ ನಮಗೆ ಬೇರೆಬೇರೆ ಪ್ಲಾಸ್ಟಿಕ್ ವಸ್ತುಗಳು ಲಭ್ಯ ಇರುವುದರಿಂದ ನಾವು ಅವುಗಳ ಪ್ರಯೋಗವನ್ನು ದಿನನಿತ್ಯ ಮಾಡುತ್ತೇವೆ. ಆದರೆ 40 ಮೈಕ್ರೋನ್ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಚೀಲಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ವಿಷಕಾರಿ ಗ್ಯಾಸ್ಗಳು ಉದ್ಭವಿಸಿ ಪ್ರದೂಷಣಕ್ಕೆ ದೊಡ್ಡ ಕಾರಣವಾಗುತ್ತವೆ. ಮಾತ್ರವಲ್ಲ ತಿನಿಸುಗಳ ಜೊತೆಗೆ ಪ್ಲಾಸ್ಟಿಕ್ ಚೀಲಗಳು ಕಸದ ಬುಟ್ಟಿಯಲ್ಲಿ ಇದ್ದಾಗ ನಾಯಿ, ಹಸು ಮುಂತಾದ ಪಶುಗಳು ಅವುಗಳನ್ನು ತಿಂದರೆ ಸಾಯುತ್ತವೆ. ಅಲ್ಲದೇ, ಈ ಚೀಲಗಳು ಭೂಮಿಯಲ್ಲಿ ಸಿಲುಕಿದವೆಂದರೆ ಭೂಮಿಯ ಫಲವತ್ತತೆಯೂ ಕಡಿಮೆ ಆಗುತ್ತದೆ. ನದಿ, ಸಮುದ್ರದಲ್ಲಿ ಸೇರಿದರೆ ನೀರು ಕಲುಷಿತಗೊಳ್ಳುತ್ತದೆ ಹಾಗೂ ಚರಂಡಿಗಳಲ್ಲಿ ಕಟ್ಟಿಕೊಂಡರೆ ಚರಂಡಿಯ ನೀರು ಹರಿಯದೇ ನಿಂತುಬಿಡುತ್ತದೆ. ದಪ್ಪ ಪ್ಲಾಸ್ಟಿಕ್ ಸಾಮಾಗ್ರಿಯನ್ನು ಉದ್ಯಮಿಗಳು ಮರುಬಳಕೆಗೆ ತೆಗೆದುಕೊಳ್ಳಬೇಕು. ಆದರೆ ಚೀಲಗಳಿಗೆ ಮಾರುಕಟ್ಟೆ ಇಲ್ಲದಿರುವುದರಿಂದ ಮತ್ತು ಕಸದಲ್ಲಿ ಸೇರಿ ಅತ್ಯಂತ ಮಲಿನವಾಗಿರುವುದರಿಂದ ಯಾರೂ ಅದನ್ನು ಮುಟ್ಟಲು ಇಷ್ಟಪಡುವುದಿಲ್ಲ. ಇಂಥ ತೀವ್ರವಾದಂತಹ ಸಮಸ್ಯೆಗಳನ್ನು ತಡೆಗಟ್ಟಲು ಅತ್ಯಂತ ಸುಲಭ ಉಪಾಯವೊಂದಿದೆ. ಅದೇನೆಂದರೆ, ಮನೆಯಲ್ಲಿ ಇಂತಹ ಚೀಲಗಳನ್ನು ತಂದರೂ ಸಹ ಆಹಾರ ಪದಾರ್ಥಗಳ ಜೊತೆಗೆ ಅಥವಾ ಇನ್ನಿತರೆ ಘನತ್ಯಾಜ್ಯ ವಸ್ತುಗಳ ಜೊತೆಗೆ ಅವುಗಳನ್ನು ಬೆರೆಸಬಾರದು. ಆದರೆ ಈ ಪರಿಪಾಠವನ್ನು ನಾವು ಇದುವರೆಗೂ ರೂಢಿಸಿಕೊಂಡಿಲ್ಲ. ಈಗಲಾದರೂ ಹಾಗೆ ಮಾಡಬೇಕು ಎಂದರೆನೂರಾರು ನೆಪಗಳನ್ನು ಸೃಷ್ಟಿಸುತ್ತೇವೆ. ಆದರೆ ಇದರಿಂದಾಗಿ ಖಂಡಿತವಾಗಿ ಒಂದಲ್ಲ ಒಂದು ದಿನ ನಮ್ಮ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂತಹ ಒಂದು ಗಂಭೀರ ಪರಿಸ್ಥಿತಿಯನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಕೆಂದ್ರದ ಪರ್ಯಾವರಣ ಸಮಿತಿ ವಿಶ್ಲೇಷಿಸಿ ಒಂದು ವಿನೂತನ ಯೋಜನೆಯನ್ನು ಕೈಗೊಂಡಿತು.
ಪರಿಸರ ಶಿಕ್ಷಣ ಕೇಂದ್ರ (Centre for Environment Education) ಎಂಬ ಒಂದು ಸಂಸ್ಥೆಯ ಕಚೇರಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಟ್ಟಡದಲ್ಲಿ ಬಾಡಿಗೆ ಮೇಲೆ ಕಾರ್ಯನಿರ್ವಹಿಸುತ್ತಿತ್ತು. ಒಂದು ದಿನ ಆ ಕಚೇರಿಗೆ ಭೇಟಿ ನೀಡಿ ಅವರೇನು ಮಾಡುತ್ತಾರೆಂದು ತಿಳಿದುಕೊಂಡೆ. ಆ ಸಂಸ್ಥೆ ಮೊಟ್ಟಮೊದಲನೆಯದಾಗಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಯೋಜನೆಯನ್ನು ಪ್ರಾರಂಭಿಸಿತು. ಆನಂತರ ಅಹಮದಾಬಾದ್, ಗೋವಾ, ಪಾಟ್ನಾ ಮತ್ತು ತಿರುಪತಿಗೆ ತನ್ನ ಶಾಖೆಗಳನ್ನು ವಿಸ್ತರಿಸಿತು. ಮನೆ ಕಸವನ್ನು ಮರುಬಳಕೆ ಮಾಡುವುದು, ಒಣ ತ್ಯಾಜ್ಯ ವಸ್ತುಗಳನ್ನು ಪೇಪರ್, ಪ್ಯಾಕೇಜಿಂಗ್ ಮಟಿರಿಯಲ್ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸಲು ಬಳಸಿಕೊಳ್ಳುವುದು (ಉದಾ: ಬ್ಯಾಸ್ಕೆಟ್, ಫೈಲ್ ಕವರ್, ಬ್ಯಾಟ್ಸ್, ಪೆನ್ ಸ್ಟ್ಯಾಂಡ್ ಮುಂತಾದವುಗಳು) ಅದರ ಯೋಜನೆಯ ಭಾಗವಂತೆ. ಅತ್ಯಂತ ವಿಶಿಷ್ಟವಾಗಿರುವ ಅವರ ಕೆಲಸದಲ್ಲಿ ನನಗೆ ಇಷ್ಟವಾದುದೇನೆಂದರೆ ಪ್ಲಾಸ್ಟಿಕ್ ಚೀಲಗಳನ್ನು ನೇಕಾರರ ಮಗ್ಗದಲ್ಲಿ (ಲೂಮ್) ನೇಯ್ಗೆ ಮಾಡುವುದು.
ನಾವು ಒಂದು ಲೆಕ್ಕ ಮಾಡಿದೆವು. ಒಂದು ಕಡೆ, ಸುಮಾರು ಐವತ್ತು ಕೆ.ಜಿ ಪ್ಲಾಸ್ಟಿಕ್ ಚೀಲಗಳು ಕೇವಲ ಗುಲ್ಬರ್ಗಾ ನಗರವೊಂದರಿಂದಲೇ ಘನತ್ಯಾಜ್ಯದೊಂದಿಗೆ ಮಿಶ್ರಣವಾಗಿ ಬರುತ್ತವೆ. ಇನ್ನೊಂದೆಡೆ ಸಾವಿರಾರು ನೇಕಾರರು ತಮ್ಮ ವೃತ್ತಿ ಅಷ್ಟು ಲಾಭಕರ ಅಲ್ಲದೇ ಇರುವುದರಿಂದ ಈ ಮಗ್ಗಗಳನ್ನು ಖಾಲಿ ಬಿಟ್ಟಿದ್ದಾರೆ. ಈ ಮಗ್ಗಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿದಲ್ಲಿ, ಅದರಲ್ಲಿ ಸ್ವಚ್ಛಗೊಳಿಸಿದ ಪ್ಲಾಸ್ಟಿಕ್ ಚೀಲಗಳ ಪಟ್ಟಿಗಳನ್ನು ಹಾಕಿ ನೇಯ್ಗೆ ಮಾಡಬಹುದಿಕತ್ತು. ಆದುದರಿಂದ ನಮ್ಮ ಜವಳಿ ಇಲಾಖೆಗೆ ಇಂತಹ ಮಗ್ಗಗಳನ್ನು ಹುಡುಕಿಕೊಡಲು ಕೋರಿದೆ.
ಗುಲ್ಬರ್ಗಾದಲ್ಲಿ ಒಂದು ಹಳೆಯ ಸೆರೆಮನೆ ಇದ್ದು, ಅಲ್ಲಿನ ಖೈದಿಗಳಿಗೆ ಆರ್ಥಿಕ ಚಟುವಟಿಕೆಗಳನ್ನು ಕಲಿಸಲು ಒಬ್ಬ ತರಬೇತುದಾರರು ಇದ್ದರು. ಅವರನ್ನು ಸಂಪರ್ಕಿಸಿದಾಗ ಜೈಲಿನಲ್ಲಿ ನೇಯುವ ಮಗ್ಗಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಆಗ ತರಬೇತುದಾರರಿಗೂ ಸಹ ಪರಿಸರ ಶಿಕ್ಷಣ ಕೇಂದ್ರ ಕಡೆಯಿಂದ ತರಬೇತಿ ಕೊಡಲಾಯಿತು. ಕಾರ್ಪೊರೇಷನ್ ಮತ್ತು ಜೈಲಿನ ಅಧಿಕಾರಿಗಳ ಜೊತೆಗೆ ಒಂದು ಕರಡು ಒಪ್ಪಂದವನ್ನು ತಯಾರಿಸಲಾಯಿತು. ಅದು ಏನೆಂದರೆ, ಪ್ಲಾಸ್ಟಿಕ್ ಚೀಲಗಳನ್ನು ಬೇರ್ಪಡಿಸಿ ಕಾರ್ಪೊರೇಷನ್ ವತಿಯಿಂದ ಜೈಲಿಗೆ ಪ್ರತಿದಿನ ಕಳುಹಿಸಿಕೊಡುವುದು. ಅಲ್ಲಿರುವ ಖೈದಿಗಳು ಆ ಚೀಲಗಳಿಂದ ನೇಯ್ಗೆ ಮಾಡಿ ಕೆಲವು ಉತ್ಪನ್ನಗಳನ್ನು ತಯಾರಿಸುವುದು. ಪರಿಸರ ಶಿಕ್ಷಣ ಕೇಂದ್ರ ಸಂಸ್ಥೆಯವರು ಅವುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರವನ್ನು ಒದಗಿಸಲು ಕ್ರಮ ಜರುಗಿಸಿದರು. ಆದರೆ ಕಾರಣಾಂತರಗಳಿಂದ ಜೈಲಿನ ಭದ್ರತೆಗೆ ಯಾವುದೇ ತೊಂದರೆ ಆಗಬಾರದೆಂಬ ಕಾರಣಕ್ಕೆ ಖೈದಿಗಳೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ.
ಪರಿಸರ ಶಿಕ್ಷಣ ಕೇಂದ್ರ, ಮಹಾನಗರ ಪಾಲಿಕೆ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮಧ್ಯೆ ಒಪ್ಪಂದ ಮಾಡಲಾಯಿತು. ಮಹಾನಗರ ಪಾಲಿಕೆ ಹಾಗೂ ಪರಿಸರ ಶಿಕ್ಷಣ ಕೇಂದ್ರ ಸಂಸ್ಥೆಯವರು Disposal of Bio-Medical Waste ಎಂಬ ಘಟಕದ ಸ್ಥಳವನ್ನೇ ಈ ಚೀಲಗಳನ್ನು ಸ್ವಚ್ಛಮಾಡುವುದಕ್ಕೆ ಉಪಯೋಗಿಸಲು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಒಪ್ಪಿಕೊಂಡರು. ಸ್ವಚ್ಛ ಮಾಡಿದ ಚೀಲಗಳನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಟ್ಟಡದಲ್ಲಿ ಎರಡು ನೇಯುವ ಮಗ್ಗಗಳನ್ನು ತರಿಸಿ ಒಂದು ನೇಯ್ಗೆ ಕೇಂದ್ರವನ್ನು ತೆರೆಯಲಾಯಿತು. ಜಾಗ ಮತ್ತು ಮಗ್ಗಗಳ ಖರ್ಚನ್ನು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು ಕೊಟ್ಟರು ಮತ್ತು ತರಬೇತಿ ಮತ್ತು ಮಾರುಕಟ್ಟೆ ಕೆಲಸವನ್ನು ಪರಿಸರ ಶಿಕ್ಷಣ ಕೇಂದ್ರ ಸಂಸ್ಥೆಯವರಿಗೆ ನೀಡಲಾಯಿತು. ಈ ಘಟಕವನ್ನು ನೇಕಾರರ ಕುಟುಂಬದ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಪ್ರದರ್ಶನ ಹಾಗೂ ತರಬೇತಿಗಾಗಿ ಉಪಯೋಗಿಸಲಾಯಿತು. ಅನಂತರ ಮಹಾನಗರಪಾಲಿಕೆಯ ಪರಿಸರ ಇಂಜಿನಿಯರ್ಗಳಿಗೆ, ಪರಿಸರ ಶಿಕ್ಷಣ ಕೇಂದ್ರ ದ ಮೂಲಕ ತರಬೇತಿ ನೀಡಿ, ಸ್ಯಾನಿಟರಿ ಇನ್ಸ್ಪೆಕ್ಟರ್ ಮತ್ತು ಪೌರ ಕಾರ್ಮಿಕರಿಗೆ ಈ ಚೀಲಗಳನ್ನು ಕಸದಿಂದ ಬೇರ್ಪಡಿಸಲು ಕೋರಿದೆವು. ಅಲ್ಲದೇ ಮೇಯರ್ ಹಾಗೂ ಕಾರ್ಪೊರೇಟರುಗಳ ಸಹಭಾಗಿತ್ವದಿಂದ ಪ್ರತಿಯೊಂದು ವಾರ್ಡ್ನಲ್ಲಿ ಘನತ್ಯಾಜ್ಯ ವಿಂಗಡಣೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗುಲ್ಬರ್ಗಾದಲ್ಲಿ ಒಂದು ಎನ್.ಸಿ.ಸಿ. ಕಚೇರಿ ಇತ್ತು. ಅದರ ಕಮಾಂಡರ್ ಅನ್ನು ಸಂಪರ್ಕಿಸಿ ಸುಮಾರು ಒಂದು ಸಾವಿರ ಜನರನ್ನು ಪ್ರಚಾರ ಕಾರ್ಯಕ್ಕೆ ಉಪಯೋಗಿಸಿಕೊಳ್ಳಲಾಯಿತು.
ಕಸದಿಂದ ಬೇರ್ಪಡಿಸಿದ ಪ್ಲಾಸ್ಟಿಕ್ ಚೀಲಗಳಿಂದ ತಯಾರಿಸಲಾದ ಫೈಲ್ ಕವರ್ ಮತ್ತು ಬ್ಯಾಗ್ಗಳು ನಿಜವಾಗಿಯೂ ಬಹಳ ಆಕರ್ಷಕವಾಗಿದ್ದವು, ಮಾತ್ರವಲ್ಲ ಜಲನಿರೋಧಕ ಕೂಡ ಆಗಿದ್ದವು. ಅದಕ್ಕಾಗಿ ಈ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಕೂಡ ಬಂತು. ಇಂತಹ ಘಟಕಗಳನ್ನು ಪ್ರತಿಯೊಂದು ನಗರಪಾಲಿಕೆ ಅಥವಾ ಮುನ್ಸಿಪಾಲಿಟಿಯಲ್ಲಿ ನೇಕಾರರ ಸಹಭಾಗಿತ್ವದಿಂದ ಪ್ರಾರಂಭಿಸಿದರೆ ವಿನಾಶಕ್ಕೆ ಕಾರಣವಾಗಿರುವ ಇದೇ ಪ್ಲಾಸ್ಟಿಕ್ ಉತ್ತಮ ಅಧ್ಯಾಯಕ್ಕೆ ಮೂಲವಾಗಬಹುದೆಂದು ಪ್ರಮಾಣೀಕರಿಸಲಾಯಿತು.
ಮತ್ತೊಂದು ಅಧ್ಯಯನದಿಂದ ಕಂಡು ಬಂದಿರುವ ಅಂಶವೇನೆಂದರೆ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆಯನ್ನು ಮಾಡಲು ಬಳಸುತ್ತಾರೆ ಎಂಬುದು. ತುಸು ಬುದ್ಧಿವಂತಿಕೆಯಿಂದ ಎಚ್ಚರಿಕೆಯಿಂದ ವರ್ತಿಸಿದರೆ ನಾವು ಪರಿಸರ ಮಾಲಿನ್ಯವನ್ನು ತಡೆಗಟ್ಟಬಲ್ಲೆವು. ಬುದ್ದಿವಂತರಾಗಿ ಮಾನವ ಜೀವನವನ್ನು ಹೊಂದಿರುವ ನಾವೆಲ್ಲರೂ ಬುದ್ಧಿಹೀನ ಚಟುವಟಿಕೆಗಳಲ್ಲಿ ತೊಡಗಿದ್ದೇವೆ. ಒಂದು ವೇಳೆ ಕಣ್ಣೆದುರಿಗೇ ತಪ್ಪು ಸಂಭವಿಸುತ್ತಿದ್ದರೂ ಅದನ್ನು ನಿಲ್ಲಿಸುವ ಮನಸ್ಸು ಮಾಡುವುದಿಲ್ಲ. ಪ್ಲಾಸ್ಟಿಕ್ಕಿನ ಉಪಯೋಗವನ್ನು ತಡೆಯುವುದು ಕಷ್ಟ. ಆದರೆ ನಾವು ಬಳಸುವ ಪ್ಲಾಸ್ಟಿಕ್ಕಿನಿಂದಾಗಿ ಪರಿಸರ ಹಾನಿಯಾಗಲೀ, ಇತರ ಜೀವಗಳಿಗೆ ಹಾನಿಯಾಗಲೀ ನಮ್ಮಿಂದ ಆಗಬಾರದು. ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಿಟ್ಟು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮುಂದಿನ ಜನಾಂಗದ ಒಳಿತಿಗಾಗಿ ಮನಸ್ಸು ಮಾಡಿ ಪ್ಲಾಸಿಕ್ನಿಂದ ಆಗುತ್ತಿರುವ ಪ್ರದೂಷಣವನ್ನು ನಾವೆಲ್ಲರೂ ನಿಲ್ಲಿಸೋಣ.
- ಶಾಲಿನಿ ರಜನೀಶ್, ಐಎಎಸ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


