ಮನಮೋಹನ ಮಾರ್ಗವನ್ನು ಮಮತೆಯಿಂದ ನೋಡಿದಾಗ

2014ರ ಲೋಕಸಭೆ ಚುನಾವಣೆಗೆ ಮತ ಚಲಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಫಲಿತಾಂಶ ಬರಬೇಕು. ಈಗೇನಿದ್ದರೂ ಸಾಧ್ಯತೆಗಳ ಬಗ್ಗೆ ಚರ್ಚಿಸುವುದಕ್ಕೆ ನಿರ್ಗಮನ ಸಮೀಕ್ಷೆಗಳು ನಮ್ಮ ಮುಂದಿವೆ. ಫಲಿತಾಂಶ ಏನೇ ಬಂದಿದ್ದರೂ ತಾವು ಹುದ್ದೆಯಿಂದ ನಿರ್ಗಮಿಸುವುದಾಗಿ ಪ್ರಧಾನಿ ಮನಮೋಹನ ಸಿಂಗ್ ಅವರು ಅದಾಗಲೇ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಂಸತ್ತಿನಲ್ಲಿ ಅದನ್ನು ಮುನ್ನಡೆಸುವ ಹೊಣೆಗಾರಿಕೆ ಮುಂದಿನ ಪೀಳಿಗೆಗೆ ಹಸ್ತಾಂತರವಾಗಲಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಹತ್ತಿರದಿಂದ ಗಮನಿಸುವ ಅವಕಾಶ ನನ್ನದಾಗಿತ್ತು. ಕಳೆದ ಐದು ವರ್ಷಗಳಲ್ಲಿ ಪ್ರತಿಪಕ್ಷದ ನಾಯಕನಾಗಿ ಅವರು ಸಂಸತ್ತಿನಲ್ಲಿ ಪ್ರಸ್ತಾವಿಸಿದ್ದನ್ನೆಲ್ಲ ನಾನು ಕೇಳಿಸಿಕೊಂಡಿದ್ದೇನೆ. ಅವರ ಪ್ರತಿಯೊಂದು ಕಾರ್ಯವನ್ನೂ ಸೀಳುನೋಟಕ್ಕೆ ಒಳಪಡಿಸಿದ್ದೇನೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಅವರನ್ನು ಹೇಗೆ ವಿಶ್ಲೇಷಿಸುವುದು ಎಂಬುದಕ್ಕೆ ಇದು ಸಕಾಲ.
ನಿರ್ವಿವಾದವಾಗಿ ಡಾ. ಮನಮೋಹನ್ ಸಿಂಗ್ ಅವರು ಉತ್ತಮ ಹಣಕಾಸು ಸಚಿವರು. 1991ರಲ್ಲಿ ಪಿ. ವಿ. ನರಸಿಂಹರಾವ್ ಸರ್ಕಾರದಲ್ಲಿ ಆರ್ಥಿಕ ಸುಧಾರಣೆಗಳನ್ನು ತರುವುದಕ್ಕೆ ಅವರಿಗೆ ಉತ್ತಮ ಬೆಂಬಲವೇ ದೊರೆತಿತ್ತು. ಕೇವಲ ನಿಯಂತ್ರಣಗಳ ಮೂಲಕವೇ ತನ್ನನ್ನು ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಸುಧಾರಣಾವಾದಿ ಧೋರಣೆಯು ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದ್ದಾಗಿದೆ. ಆದರೆ ಪಿವಿ ನರಸಿಂಹರಾವ್ ಅವರಿಗೆ ಸಲ್ಲಿಸಬೇಕಾದ ಶ್ರೇಯಸ್ಸನ್ನು ಈ ನಿಟ್ಟಿನಲ್ಲಿ ತಕ್ಕದಾಗಿ ನೀಡಲಾಗಿಲ್ಲ. ಇತಿಹಾಸ ಅವರನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಲಿದೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ. 1991-96ರ ಅವಧಿಯ ನಿಮ್ಮ ಆತ್ಮಕಥನವನ್ನು ಓದುವುದಕ್ಕೆ ನಾನು ಬಲು ಆಸಕ್ತನಾಗಿದ್ದೇನೆ ಎಂದು ನಾನು ಇತ್ತೀಚೆಗೆ ಪ್ರಧಾನಿಯವರಿಗೆ ಖಾಸಗಿ ಮಾತುಕತೆಯಲ್ಲಿ ತಿಳಿಸಿದ್ದೆ. ಈ ಅವಧಿಯಲ್ಲಿ ಹಣಕಾಸು ಸಚಿವರಾಗಿ ಅವರು ಮೂಡಿಸಿದ್ದ ಹೆಜ್ಜೆಗುರುತುಗಳನ್ನು ಇತಿಹಾಸ ಬಹುಕಾಲದವರೆಗೆ ನೆನಪಿನಲ್ಲಿ ಇಡಲಿದೆ.
ಸೋನಿಯಾ ಗಾಂಧಿಯವರು ತಮ್ಮ ಹೆಸರೇ ಮುಂಚೂಣಿಗೆ ಬರುವುದನ್ನು ತಡೆಯಬೇಕಾದ ಅನಿವಾರ್ಯ ಪ್ರಕರಣವೊಂದರಲ್ಲಿ ಸಿಲುಕಿದ ಪರಿಣಾಮವಾಗಿ ಮನಮೋಹನ ಸಿಂಗ್ ಅವರ ಹೆಸರು ಪ್ರಧಾನಿ ಹುದ್ದೆಗೆ ಸೂಚಿತವಾಯಿತು. ಅವರು ಅಕ್ಷರಶಃ ಸೋನಿಯಾ ಗಾಂಧಿಯವರು ಘೋಷಿಸಿದ ಪ್ರಧಾನಿಯಾದರು. ಈ ಮಿತಿಯಲ್ಲೇ ಅವರು ಕೆಲಸ ಮಾಡಬೇಕಾಗಿ ಬಂತು.
ನಾನು ಪ್ರಧಾನಿಯವರಲ್ಲಿ ಮೆಚ್ಚಿಕೊಂಡಿರುವ ಎರಡು ಬಲಿಷ್ಠ ಗುಣಗಳಿವೆ. ಮೊದಲನೆಯದಾಗಿ ಪ್ರಧಾನಿ ಅವರೊಂದಿಗೆ ನೀವು ಯಾವುದೇ ಗಂಭೀರ ವಿಷಯವನ್ನು ಚರ್ಚಿಸಿದಾಗಲೂ ಅವರು ತಮ್ಮ ಪಾಂಡಿತ್ಯವನ್ನು ಹೊರಸೂಸುತ್ತಿದ್ದರು. ಏನನ್ನೇ ಹೇಳುವುದಕ್ಕೆ ಮೊದಲು ತುಂಬ ಅಳೆದು ತೂಗಿ ಮಾತನಾಡುತ್ತಿದ್ದರು. ಅವರ ವೈಯಕ್ತಿಕ ಪ್ರಾಮಾಣಿಕತೆ ಯಾವತ್ತೂ ಮೇಲ್ಸ್ತರದಲ್ಲಿತ್ತು. ಅವರು ವ್ಯವಹರಿಸುವ ಯಾವುದೇ ವಿಷಯದ ಬಗ್ಗೆ ತುಂಬ ಆಳವಾಗಿ ಅಧ್ಯಯನ ಮಾಡಿಕೊಂಡಿರುತ್ತಿದ್ದರು.
ಇಷ್ಟೆಲ್ಲ ಆಗಿಯೂ ಅವರು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಅವರೊಬ್ಬ ನಾಯಕನಾಗಿ ತೋರಿಸಿಕೊಳ್ಳಲೇ ಇಲ್ಲ. ಹೀಗೆ ನಾಯಕತ್ವವನ್ನು ತೋರಿಸದೇ ಇದ್ದಿದ್ದಕ್ಕೂ ಕಾರಣವಿತ್ತು. ತಮ್ಮ ಅಧಿಕಾರವ್ಯಾಪ್ತಿ ತುಂಬ ಸೀಮಿತ ಎಂದು ಅವರಿಗೆ ಅರಿವಿತ್ತು. ನಿಜಾರ್ಥದಲ್ಲಿ ಚುಕ್ಕಾಣಿ ಹಿಡಿದಿದ್ದ ಕುಟುಂಬವನ್ನು ಅವರು ಸಂತುಷ್ಟವಾಗಿ ಇರಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಹೀಗಾಗಿಯೇ ರಾಷ್ಟ್ರೀಯ ಸಲಹಾ ಸಮಿತಿಯು ಸರ್ಕಾರದ ಸುಧಾರಣಾ ನೀತಿಗಳಿಗೆ ಆಕ್ಷೇಪಗಳನ್ನು ನೀಡಿದಾಗ, ರಾಹುಲ್ ಗಾಂಧಿಯವರು ಸುಗ್ರೀವಾಜ್ಞೆಯ ಪ್ರತಿಗಳನ್ನು ಹರಿದು ಹಾಕಿದಾಗ, ಪ್ರಧಾನಿ ತಮ್ಮ ಅಭಿಪ್ರಾಯಗಳನ್ನು ಪ್ರಕಟಪಡಿಸದೇ ಎಲ್ಲವನ್ನೂ ಒಪ್ಪಿಕೊಳ್ಳುವ ನಾಯಕನಲ್ಲದ ವ್ಯಕ್ತಿಯಂತೆ ಕಂಡುಬಂದರು. ಸರ್ಕಾರದಲ್ಲಿರುವ ವ್ಯಕ್ತಿಗಳನ್ನು ನಿರ್ದೇಶಿಸಲಾಗದ ಅವರ ಅಸಾಮರ್ಥ್ಯವೇ ಅವರ ಕಾರ್ಯಕ್ಷಮತೆಯನ್ನು ಕುಂದಿಸಿತು. ತಮ್ಮ ಮಾತು ಅಂತಿಮ ಎಂಬ ಸ್ಥಿತಿಯೇ ಅವರಲ್ಲಿರಲಿಲ್ಲ. ಪೂರ್ವಾನ್ವಯ ತೆರಿಗೆಯ ದುಷ್ಪರಿಣಾಮಗಳನ್ನು ತಿಳಿದಿದ್ದರಿಂದ ಚಿದಂಬರಂ ಅವರು ಅದನ್ನು ಜಾರಿಗೆ ತಂದಾಗ ತಳ್ಳಿಹಾಕಿದ್ದೇ ಆದರೆ ಅವರು ಮಾದರಿಯಾಗಿ ಉಳಿದುಬಿಡುತ್ತಿದ್ದರು. ಕಲ್ಲಿದ್ದಲು ಹಂಚಿಕೆ ವಿಚಾರದಲ್ಲಿ ಹಗರಣದ ವಾಸನೆ ಬಡಿಯುತ್ತಲೇ ಅವನ್ನು ರದ್ದುಪಡಿಸಿದ್ದೇ ಆದರೆ, ನ್ಯಾಯಾಲಯವು ಮಧ್ಯಪ್ರವೇಶಿಸುವುದಕ್ಕೆ ಮುಂಚೆಯೇ 2ಜಿ ತರಂಗಾಂತರ ಪರವಾನಗಿಗಳನ್ನು ಅವರೇ ರದ್ದುಪಡಿಸಿಬಿಟ್ಟಿದ್ದರೆ, ಇತಿಹಾಸ ಅವರನ್ನು ಬೇರೆಯದೇ ರೀತಿಯಲ್ಲಿ ನೆನಪಲ್ಲಿ ಇಟ್ಟುಕೊಳ್ಳುತ್ತಿತ್ತು. ತಮ್ಮದೇ ಪಕ್ಷದಲ್ಲಿ ಯಾರಿಗೂ ಮಾತು ಕೇಳಿಸಲಾಗದಿದ್ದ ಅವರ ಸ್ಥಿತಿಯೇ ಇತಿಹಾಸಕಾರರು ಮನಮೋಹನ್ ಸಿಂಗ್ ಅವರ ಬಗ್ಗೆ ಭಿನ್ನ ನಿಲವು ತಾಳುವುದಕ್ಕೆ ಕಾರಣವನ್ನು ಒದಗಿಸುತ್ತದೆ.
ಭಾರತ ಸರ್ಕಾರವನ್ನು ಹತ್ತು ವರ್ಷಗಳ ಅವಧಿಗೆ ಮುನ್ನಡೆಸಿದ ಅವರ ಕಾರ್ಯಭಾರಕ್ಕೆ ತೆರೆಬೀಳುತ್ತಿರುವ ಗಳಿಗೆಯಲ್ಲಿ ಪ್ರಧಾನಿ ಬಹಳ ಗೌರವದಿಂದಲೇ ನಿರ್ಗಮಿಸಿದ್ದಾರೆ. ದೇಶ ನಡೆಸುವ ವಿಚಾರದಲ್ಲಿ ಸಲಹೆ ಕೇಳಬಹುದಾದ ಮುತ್ಸದ್ಧಿಯಾಗಿಯೇ ಅವರು ಉಳಿದುಕೊಳ್ಳುತ್ತಾರೆ. ಸೂಕ್ತ ಸಮಯದಲ್ಲಿ ಎದ್ದುನಿಂತು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಕೆಲವನ್ನು ನಿರೋಧಿಸಿದ್ದರೆ ಅವರನ್ನು ಇನ್ನೂ ಹೆಚ್ಚಿನ ಗೌರವದಿಂದ ನೆನಪಿಸಿಕೊಳ್ಳಬಹುದಿತ್ತು.
ಇನ್ನೂ ಹೆಚ್ಚಿನ ಅವಧಿಗೆ ಸಾರ್ವಜನಿಕ ಸೇವೆಯಲ್ಲಿರುವುದಕ್ಕೆ ಆರೋಗ್ಯ ಸಹಕರಿಸಲಿ ಎಂಬುದು ನನ್ನ ಹಾರೈಕೆ. ಅವರೇನಾದರೂ ತಮ್ಮ ನೆನಪಿನ ಕತೆಯನ್ನು ಬರೆದರೆ ಅದರಲ್ಲಿ 1991-96ರ ಅವಧಿಯ ಚಿತ್ರಣವನ್ನು ನಾನು ತಪ್ಪದೇ ಓದುತ್ತೇನೆ.
ನನನ
ಈ ಬಾರಿಯ ಫಲಿತಾಂಶದಲ್ಲಿ ಕಾಂಗ್ರೆಸ್ ಎರಡಂಕಿಯ ಸಾಧನೆಗೆ ಸೀಮಿತಗೊಳ್ಳಲಿದೆ ಎಂಬುದು ಒಂದು ತಾರ್ಕಿಕ ನಿರೀಕ್ಷೆ. ಇದೇಕೆ ಹೀಗೆ? ಇತಿಹಾಸದಲ್ಲೇ ಕಡಿಮೆ ಸ್ಥಾನಗಳನ್ನು ಗಳಿಸುವ ಪರಿಸ್ಥಿತಿಗೆ ಕಾಂಗ್ರೆಸ್ ಏಕೆ ಬಂದಿದೆ ಎಂಬ ಪ್ರಶ್ನೆಗಳು ಏಳುತ್ತವೆ.
ಚುನಾವಣೆಯ ಸೋಲುಗಳು ಒಂದು ಸಹಜ ಪ್ರಕ್ರಿಯೆ. ಆದರೆ ಆ ಸೋಲಿಗೆ ಪ್ರಾಮಾಣಿಕವಾಗಿ ಕಾರಣಗಳನ್ನು ಹುಡುಕುವ, ವಿನಮ್ರವಾಗಿ ಅದನ್ನು ಒಪ್ಪಿಕೊಳ್ಳುವ ಹಾಗೂ ಅದರಿಂದ ಪಾಠ ಕಲಿಯುವ ಮನಸ್ಥಿತಿ ಇರಬೇಕಾಗುತ್ತದೆ. ಅದು ಮತ್ತೆ ಮೂಲತತ್ತ್ವಗಳಿಗೆ ಮರಳಿ, ಬೇರುಮಟ್ಟದಿಂದ ಪಕ್ಷವನ್ನು ಸಂಘಟಿಸಿ ಒಂದು ವಿಶ್ವಾಸಾರ್ಹ ನಾಯಕತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇವೆಲ್ಲ ಸಾಧ್ಯವಾಗುವುದೇ ಎಂಬ ಬಗ್ಗೆ ಅನುಮಾನಗಳಿವೆ.
ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಸುತ್ತ ತಿರುಗುವ ಸಿದ್ಧಾಂತಗಳೇ ಇಲ್ಲದ ಜನರ ಗುಂಪಾಗಿ ಪರಿವರ್ತನೆ ಹೊಂದಿದೆ. ಸರ್ಕಾರದ ರಚನೆಯಲ್ಲಿ ಪಾತ್ರ ವಹಿಸುವ ಯಾವುದೇ ಅವಕಾಶ ಕಾಂಗ್ರೆಸ್ಗೆ ಸಿಗುವುದಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಪ್ರತಿಪಕ್ಷದಲ್ಲಿ ಕೂರುವುದಕ್ಕೆ ಮಾತ್ರವೇ ಅದಕ್ಕೆ ಜನಾದೇಶ ದೊರೆಯಲಿದೆ ಹಾಗೂ ಅದನ್ನು ಆ ಪಕ್ಷವು ಘನತೆಯಿಂದ ನಿರ್ವಹಿಸಬೇಕಿದೆ. ಅರ್ಥವ್ಯವಸ್ಥೆಯನ್ನು ಸಂಭಾಳಿಸುವಲ್ಲಿ ವೈಫಲ್ಯ, ಭ್ರಷ್ಟಾಚಾರ ಹೆಚ್ಚಳ ಹಾಗೂ ನಾಯಕತ್ವದ ವೈಫಲ್ಯಗಳು ಕಾಂಗ್ರೆಸ್ನ ಸೋಲಿಗೆ ಪ್ರಮುಖ ಕಾರಣಗಳು.
ಅರ್ಥವ್ಯವಸ್ಥೆಯನ್ನು ನಿರ್ವಹಿಸುವ ಕಾಂಗ್ರೆಸ್ನ ಸಾಂಪ್ರದಾಯಿಕ ವ್ಯಕ್ತಿಗಳು ಉದಾರ ಧೋರಣೆಯನ್ನು ಹೊಂದಿದವರಾಗಿದ್ದರು. ರಾಷ್ಟ್ರೀಯ ಸಲಹಾ ಸಮಿತಿ ಮೂಲಕ ಯುರೋಪಿನ ಆರ್ಥಿಕತೆಯನ್ನು ಹೇರುವುದಕ್ಕೆ ಹೊರಟ ಸೋನಿಯಾ ಗಾಂಧಿಯವರ ನಡೆಯಿಂದ ಗೊಂದಲಗಳು ಸೃಷ್ಟಿಯಾದವು. 2ಜಿ ತರಂಗಾಂತರ ಹಂಚಿಕೆ, ಕಲ್ಲಿದ್ದಲು ಹಂಚಿಕೆ, ಕಾಮನ್ವೆಲ್ತ್ಗಳಲ್ಲಿ ಎಸಗಿದ ಭ್ರಷ್ಟಾಚಾರ ಅದು ಎಲ್ಲದರೊಂದಿಗೆ ರಾಜಿಯಾಗಿರುವುದನ್ನು ಸಾರಿ ಹೇಳಿತು. ಪ್ರಧಾನಿ ಹುದ್ದೆಯನ್ನೇ ದುರ್ಬಲಗೊಳಿಸಿದ್ದು ಕಾಂಗ್ರೆಸ್ಗೆ ನಾಯಕತ್ವವೇ ಇಲ್ಲ ಎಂಬುದನ್ನು ನಿರೂಪಿಸಿತು. ಪ್ರಧಾನಿ ಹುದ್ದೆಯೇ ಮೆರಗು ಕಳೆದುಕೊಂಡರೆ ಯಾವ ದೇಶವೂ ಸರಿಯಾಗಿ ಕಾರ್ಯನಿರ್ವಹಿಸದು. ಪ್ರಧಾನಿಗೆ ಮೀರಿದ ಸಂವಿಧಾನಕ್ಕೆ ಹೊರತಾದ ಶಕ್ತಿಯೊಂದು ಕಾರ್ಯನಿರ್ವಹಿಸುತ್ತಿದ್ದದ್ದು ಎಲ್ಲೆಡೆ ಅನುಭವಕ್ಕೆ ಬರುವಂತಿತ್ತು.
ಒಂದು ಕುಟುಂಬಕ್ಕೆ ನಿರಂತರವಾಗಿ ನಾಯಕತ್ವ ನೀಡುವುದು ಯಾವುದೇ ಪಕ್ಷಕ್ಕೆ ಒಳಿತುಂಟು ಮಾಡುವುದಿಲ್ಲ ಎಂಬುದನ್ನು ಬಲವಾಗಿ ನಂಬುವವನು ನಾನು. ಒಂದು ಪೀಳಿಗೆ ಒಪ್ಪಿಕೊಂಡಷ್ಟು ಸಮಯವಷ್ಟೇ ಪಕ್ಷದ ಬಲವಿರುತ್ತದೆ. ರಾಹುಲ್ ಗಾಂಧಿ ನಾಯಕತ್ವ ದೇಶವನ್ನಾಗಲೀ, ಅವರ ಪಕ್ಷವನ್ನಾಗಲೀ ಉತ್ತೇಜಿಸಲೇ ಇಲ್ಲ. ಇದನ್ನೆಲ್ಲ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುವುದಿಲ್ಲ. ಕುಟುಂಬದ ಒಬ್ಬರು ವಿಫಲರಾದರೆ ಇನ್ನೊಬ್ಬರಿಗೆ ಹೊಣೆ ನೀಡುವುದು ಅದರ ಮಾದರಿ. ಲೋಕಸಭೆ ಚುನಾವಣೆಯಲ್ಲಿ ನಾವು ಇದನ್ನೇ ನೋಡಿದ್ದೇವೆ.
ಎರಡಂಕಿಗೆ ಸೀಮಿತಗೊಳ್ಳುವ ಫಲಿತಾಂಶ ಹೊರಬಿದ್ದರೂ ಕಾಂಗ್ರೆಸ್ ತುಸುವಾದರೂ ಬದಲಾಗುತ್ತದೆ ಎಂದು ನಾನು ಅಂದುಕೊಂಡಿಲ್ಲ. ಅಬ್ಬಬ್ಬಾ ಎಂದರೆ ಸೋಲಿನ ಬಗ್ಗೆ ವರದಿಗೆ ಅದು ಎ. ಕೆ. ಆ್ಯಂಟನಿ ನೇತೃತ್ವದ ಸಮಿತಿ ರಚಿಸುತ್ತದೆ. ಎಲ್ಲರಿಗೂ ಸೋಲಿನ ನೆನಪು ಮರೆಯಾಗುವ ಹಂತಕ್ಕೆ ಆ ಸಮಿತಿ ವರದಿ ಕೊಡುತ್ತದೆ, ಅಷ್ಟೆ.
- ಅರುಣ್ ಜೇಟ್ಲಿ
ರಾಜ್ಯಸಭೆ ಪ್ರತಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


