ಅಂಕಣಗಳು

ಎಲ್ಲವೂ ನಿರೀಕ್ಷಿಸಿದಂತೆ ಆದರೆ...

ಎಲ್ಲವೂ ನಿರೀಕ್ಷಿಸಿದಂತೆ ಆದರೆ...
Published On :

ನಿರ್ಗಮನ ಸಮೀಕ್ಷೆ, ಅಭಿಪ್ರಾಯ ಸಂಗ್ರಹಗಳೆಲ್ಲ ಇಂದಿನ ಮತ ಎಣಿಕೆಯಲ್ಲಿ ಎನ್ಡಿಎ ಬಹುಮತ ಗಳಿಸಲಿದೆ ಎಂಬುದನ್ನೇ ಹೇಳಿವೆ. ಆದರೆ ಮತದಾರ ಪ್ರಭುವಿನ ತೀರ್ಪೇ ಅಂತಿಮವಾದ್ದರಿಂದ ಲೆಕ್ಕಾಚಾರಗಳು ಹೇಗೂ ಮೇಲೆ ಕೆಳಗೆ ಆಗಬಹುದು. ಮಾಧ್ಯಮದ ಅಭಿಪ್ರಾಯ ನಿರೂಪಕರ ಕಡೆಯಿಂದಲೂ ಅಂತ ತವಕ-ತಲ್ಲಣಗಳು ಬಿಚ್ಚಿಕೊಂಡಿವೆ. ಅವೇನೇ ಇದ್ದರೂ ಹೆಚ್ಚಿನವರೆಲ್ಲ ಮೋದಿ ನೇತೃತ್ವದ ಎನ್ಡಿಎ ಸರ್ಕಾರವೇ ಖಚಿತ ಎಂಬ ಧಾಟಿಯಲ್ಲೇ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಹಾಗೆಂದೇ, ಮೋದಿ ಸರ್ಕಾರದಲ್ಲಿ ಯಾರ ಪಾತ್ರ ಏನು ಎಂಬ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲೆಲ್ಲ ಬಲು ಬಿರುಸಿನ ಚರ್ಚೆಗಳು ನಡೆದಿವೆ. ಅಂಥ ಎಲ್ಲ ಆಲೋಚನೆಯ ಜಾಡುಗಳನ್ನು ಹರವಿಟ್ಟಾಗ..
ನನನ
ಎನ್ಡಿಟಿವಿ ವೆಬ್ಸೈಟ್ನಲ್ಲಿ ಅಶೋಕ್ ಮಲಿಕ್ ಹೀಗೆ ಬರೆಯುತ್ತಾರೆ- ಬಿಜೆಪಿ 235 ಸ್ಥಾನಗಳನ್ನು ಪಡೆದುಕೊಳ್ಳುವುದರೊಂದಿಗೆ ಎನ್ಡಿಎ ಕೂಟಕ್ಕೆ 279 ಸ್ಥಾನಗಳು ಒಲಿಯಲಿವೆ ಎಂದು ಎನ್ಡಿಟಿವಿಯ ಸಮೀಕ್ಷೆ ಸಾರುತ್ತದೆ. ಈ ಸಮೀಕ್ಷೆ ಇತರ ಪ್ರಮುಖ ಮಾಧ್ಯಮ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಜತೆಗೂ ಬಹಳವಾಗಿ ಹೋಲುತ್ತದೆ. ಹೀಗಾಗಿ ಮೇ 16ರಂದು ಎರಡು ಸಾಧ್ಯತೆಗಳಿವೆ. ಒಂದೋ ಎಲ್ಲ ಸಮೀಕ್ಷಾಕಾರರೂ ಸಂತೃಪ್ತಿಯ ಮುಖ ಹೊತ್ತಿರುತ್ತಾರೆ. ಇಲ್ಲವೇ ಎಲ್ಲರೂ ಮುಜುಗರ ಅನುಭವಿಸುವ ಸ್ಥಾನದಲ್ಲಿರುತ್ತಾರೆ. ಒಟ್ಟಾರೆ ದೇಶದ ಚಿತ್ರಣ ನೀಡುವಲ್ಲಿ ಎಲ್ಲ ಟಿವಿ ಚಾನೆಲ್ಗಳು ಏಕರೂಪ ಹೊಂದಿರುವುದು ತಿಳಿಯುತ್ತದೆ. ಆದರೆ ಆಯಾ ರಾಜ್ಯಗಳ ಫಲಿತಾಂಶಕ್ಕೆ ಸಂಬಂಧಿಸಿ ಭಿನ್ನ ಲೆಕ್ಕಾಚಾರಗಳು ಬಂದಿವೆ. ಈ ಅಂಕಿಸಂಖ್ಯೆಗಳು ಸರಿಯಾಗುತ್ತವೆ ಎಂಬುದೇ ಆದಲ್ಲಿ ಉತ್ತರ ಪ್ರದೇಶ ಬಹಳ ಆಸಕ್ತಿಕರ ಚಿತ್ರಣವನ್ನು ತೆರೆದಿರಿಸುತ್ತದೆ. 2014ರ ಬಿಜೆಪಿ ಮೈತ್ರಿ ಬಲಗೊಂಡಿದ್ದು ನಗರೀಕೃತ ವರ್ಗ ಮತ್ತು ಮೇಲ್ವರ್ಗದ ಬಲದಿಂದಲಾದರೂ ಅಷ್ಟೇ ಸಾಕಾಗುತ್ತಿರಲಿಲ್ಲ. ಬಿಜೆಪಿ ಉತ್ತರ ಪ್ರದೇಶದಲ್ಲಿ 56 ಸ್ಥಾನಗಳನ್ನು ಗೆಲ್ಲುವಷ್ಟು ಸಾಧ್ಯತೆ ಪಡೆದುಕೊಂಡಿದ್ದರೆ ಅದು ಒಬಿಸಿ ಯುವಕರನ್ನು ಆಕರ್ಷಿಸಿದ್ದೇ ಕಾರಣ. ಜಾತವ್ದಂಥ ದಲಿತ ಪಂಗಡ ಮಾಯಾವತಿ ಅವರೊಂದಿಗೇ ಉಳಿದುಕೊಂಡಿದ್ದರೂ ಉಳಿದ ಉಪ ಪಂಗಡಗಳನ್ನು ಬಿಜೆಪಿ ಸೆಳೆದಿದೆ. ಅಮೇಠಿಯಂಥ ಸ್ಥಳದಲ್ಲಿ ಪಾಸಿ ಸಮುದಾಯದ 40 ಸಾವಿರ ಮತಗಳಿರುವುದರಿಂದ ಅಲ್ಲಿ ಚಿರಾಗ್ ಪಾಸ್ವಾನ್ ಅವರ ರ್ಯಾಲಿ ನಡೆಸಿ ಆ ಬಗ್ಗೆಯೂ ಬಿಜೆಪಿ ವಿಶ್ವಾಸ ಹೊಂದುವಂಥ ಸ್ಥಿತಿಯಲ್ಲಿದೆ. ಇವೆಲ್ಲ ಮೂರು ಸಂಗತಿಗಳಿಂದ ಸಾಧ್ಯವಾಗಿದೆ. ನರೇಂದ್ರ ಮೋದಿ ಜನಪ್ರಿಯತೆ, ಅಮಿತ್ ಶಾ ಕಾರ್ಯಯೋಜನೆ, ಆರೆಸ್ಸೆಸ್ ಕಾರ್ಯಕರ್ತರ ಅಸೀಮ ಕೆಲಸ. ಇವೆಲ್ಲ ಉತ್ತರ ಪ್ರದೇಶದಲ್ಲಿ ಈ ಹಿಂದೆ ಕಳೆದುಕೊಂಡಿದ್ದ ಪ್ರಭಾವವನ್ನು ಬಿಜೆಪಿ ಮರಳಿ ಪಡೆಯುವುದಕ್ಕೆ ಕಾರಣವಾಗುತ್ತಿದೆ.
************
ಇಂಡಿಯನ್ ಎಕ್ಸ್ಪ್ರೆಸ್ನ ವಿಶ್ಲೇಷಣಾ ವರದಿಯೊಂದರಲ್ಲಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚಾಣಾಕ್ಷ್ಯ ನಡೆಯನ್ನು ಬಿಂಬಿಸಲಾಗಿದೆ. ಆ ಪತ್ರಿಕೆಯೊಂದಿಗೆ ನಡೆದ ಸಂವಾದದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಅಮಿತ್ ಶಾ, ರಾಜ್ಯದಲ್ಲಿ ತಮಗೆ 50-55 ಸ್ಥಾನಗಳ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಅಷ್ಟೇ ಪ್ರಮುಖವಾಗಿ ಅವರು ಹೇಳಿರುವ ಇನ್ನೊಂದು ಮಾತು- ಬಿಎಸ್ಪಿ ಎರಡನೇ ಸ್ಥಾನದಲ್ಲಿ ಇರಲಿದೆ ಎಂಬುದು. ಇದನ್ನೂ ದೀರ್ಘಾವಧಿಯ ಉತ್ತಮ ಹೆಜ್ಜೆ ಎಂದು ವಿಶ್ಲೇಷಿಸಲಾಗುತ್ತಿದೆ. ದಲಿತರಲ್ಲಿ ಕೆಲವರು ಬಿಜೆಪಿ ಕಡೆ ವಾಲಿರುವ ಸಂದರ್ಭದಲ್ಲಿ, ಮಾಯಾವತಿ ಬಗ್ಗೆ ಸಾಫ್ಟ್ ಆಗಿರುವುದು ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬ ವಿಶ್ಲೇಷಣೆ ಇದೆ. ಮುಂದಿನ ವಿಧಾನಸಭೆ ಚುನಾವಣೆ ಸಹ ಬಿಜೆಪಿಯ ಕಣ್ಣಲಿದ್ದು, ಬಿಎಸ್ಪಿಯನ್ನು ತಾವು ನಾಮಾವಶೇಷ ಮಾಡುತ್ತಿದ್ದೇವೆ ಎಂಬ ಅಭಿಪ್ರಾಯ ಬರದಂತೆ, ಆ ಮೂಲಕ ಒಂದು ವರ್ಗದ ಜನರಲ್ಲಿ ಬಿಜೆಪಿ ಬಗ್ಗೆ ಸಾಫ್ಟ್ಕಾರ್ನರ್ ಇರುವಂತೆ ನೋಡಿಕೊಳ್ಳಲಾಗುತ್ತಿದೆ.
ನನನ
ನಿರ್ಗಮನ ಸಮೀಕ್ಷೆಗಳು ಏನೇ ಹೇಳಿದರೂ ಎಲ್ಲವೂ ವಾಸ್ತವದಲ್ಲಿ ಅಡಿಮೇಲಾಗಬಹುದಲ್ಲವೇ ಎಂಬ ಆತಂಕ ಎಲ್ಲ ಪಾಳೆಯಗಳಲ್ಲೂ ಇದ್ದೇ ಇದೆ. ಅಂಕಣಕಾರ ರಾಜೀವ್ ಶ್ರೀನಿವಾಸನ್ ಹೀಗೆ ಬರೆಯುತ್ತಾರೆ- 'ನಿರ್ಗಮನ ಸಮೀಕ್ಷೆಗಳು ಏನು ಹೇಳಿದರೂ ಎನ್ಡಿಎಗೆ ಅಷ್ಟು ಸುಲಭದಲ್ಲಿ ಅಧಿಕಾರ ಹಸ್ತಾಂತರವಾಗಿಬಿಡುತ್ತದೆ ಎಂದು ಹೇಳಲಾಗದು. ಹೀಗೆ ಅಧಿಕಾರ ತಪ್ಪಿಸುವುದಕ್ಕೆ ಈ ಹಿಂದೆಯೂ ಕಾಂಗ್ರೆಸ್ ಹಲವು ವಿಪ್ಲವಗಳನ್ನು ಮಾಡಿದೆ. ಪಿ. ಚಿದಂಬರಂ ಅವರಂಥ ಕಾಂಗ್ರೆಸ್ ಮುತ್ಸದ್ಧಿಗಳು ಮೇ 16ಕ್ಕೆ ಆಶ್ಚರ್ಯ ಕಾದಿದೆ ಎಂದಿರುವುದರ ಅರ್ಥ ಏನಿರಬಹುದು? ರಾಹುಲ್ ಗಾಂಧಿ ಅವರಂತೂ ಬಿಜೆಪಿ ಅಧಿಕಾರಕ್ಕೆ ಬಂದರೆ 22 ಸಾವಿರ ಜನರ ಮಾರಣಹೋಮ ಆಗಲಿದೆ ಎನ್ನುತ್ತಾರೆ. ಇಂತಿಷ್ಟೇ ಸಂಖ್ಯೆಯನ್ನು ಯಾವ ಆಧಾರದ ಮೇಲೆ ಕೊಟ್ಟರು ಎಂಬುದು ಸ್ಪಷ್ಟವಿಲ್ಲ. ಅಮರೇಶ್ ಮಿಶ್ರಾನಂಥ ಕಾಂಗ್ರೆಸ್ ಬೆಂಬಲಿಗರು ರಸ್ತೆ ಮೇಲೆ ರಕ್ತದೋಕುಳಿ ಆಗಲಿದೆ ಎಂದೂ ಬೆದರಿಕೆ ಹಾಕಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಕೆಲವು ಸಾಧ್ಯತೆಗಳ ಬಗ್ಗೆ ಯೋಚಿಸಬೇಕಾಗುತ್ತದೆ.
1.    1996ರ ಮಾದರಿ. ಎನ್ಡಿಎ ಕೇವಲ 250 ಸ್ಥಾನಗಳನ್ನು ಪಡೆದು 13 ದಿನಗಳಲ್ಲೇ ಅಧಿಕಾರ ತ್ಯಜಿಸಬೇಕಾಗಿ ಬರುವಂಥದ್ದು.
2.    ಆಪ್ ಮಾದರಿಯಲ್ಲಿ ಯಾವುದೋ ಪಕ್ಷ ಅಧಿಕಾರ ಸೂತ್ರ ಹಿಡಿದು ಕಾಂಗ್ರೆಸ್ ನೇಪಥ್ಯದಿಂದ ಆಟವಾಡುವುದು.
3.    1957ರಲ್ಲಿ ಕೇರಳದಲ್ಲಾದಂತೆ ಸಂಘಟಿತ ಹಿಂಸೆಯ ಮೂಲಕ ದೇಶವನ್ನು ಆಳಲೇ ಆಗದಂತಹ ಪರಿಸ್ಥಿತಿ ನಿರ್ಮಾಣ.
4.    ಮೋದಿ ಮಂಕಾಗಿ ಸೇನಾ ಕಾಯಿದೆ ಹೇರುವ ಅತಿಕೆಟ್ಟ ಸಾಧ್ಯತೆ.'
ನನನ
ಇವೆಲ್ಲದರ ನಡುವೆಯೂ ಹೆಚ್ಚಿನ ಅಭಿಪ್ರಾಯ ನಿರೂಪಕರು ಮೋದಿ ಸರ್ಕಾರದ ಸಂಭಾವ್ಯ ನಡೆಗಳೇನು ಎಂಬ ಬಗ್ಗೆಯೇ ಹೆಚ್ಚು ಚರ್ಚಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದದ್ದೇ ಆದರೆ ದೆಹಲಿಯಲ್ಲಿ ಅಧಿಕಾರ ವಲಯವು ಅವರ ವೇಗಕ್ಕೆ ಹೊಂದಿಕೊಳ್ಳುವಂತಿಲ್ಲ. ಅದೇ ಅವರಿಗೆ ಮೊದಲ ಸವಾಲು ಎಂದು ರೀಡಿಫ್ನಲ್ಲಿ ಶೀಲಾ ಭಟ್ ವಿಶ್ಲೇಷಿಸಿದ್ದಾರೆ. 'ದ ನ್ಯೂಸ್ ಮಿನಿಯಟ್' ಎಂಬ ಜಾಲತಾಣ ಖ್ಯಾತ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಮ್ ನೇತೃತ್ವದ್ದು. ಅದರಲ್ಲಿ ಮೋದಿ ಸರ್ಕಾರ ಬಂದರೆ ಅದರಲ್ಲಿ ರೈಲ್ವೆ ಸಚಿವರಾಗಿ ಮೆಟ್ರೊ ಖ್ಯಾತಿಯ ಇ. ಶ್ರೀಧರನ್ ಅವರನ್ನು ತೆಗೆದುಕೊಳ್ಳಬಹುದು ಎಂದು ಬರೆಯಲಾಗಿದೆ. ಅದಕ್ಕೆ ಯಾವ ನಿಖರ ಆಧಾರಗಳೂ ಇಲ್ಲವಾದರೂ ರೋಚಕ ಗಾಳಿಸುದ್ದಿಯಾಗಿ ಓದಿಕೊಳ್ಳಬಹುದು. ಹಾಗಾಗಲಿ ಎಂದೂ ಬಯಸಬಹುದು.
ನನನ
ಇನ್ನು ಕೆಲ ಪತ್ರಿಕೆಗಳ ಒಟ್ಟಾರೆ ವಿಶ್ಲೇಷಣಾತ್ಮಕ ವರದಿಗಳು- ಇಲ್ಲ, ಇಲ್ಲ. ನರೇಂದ್ರ ಮೋದಿಯವರಿಗೆ ಬಹುಮತದೊಂದಿಗೆ ಸರ್ಕಾರ ರಚಿಸುವುದಕ್ಕೇನೂ ತೊಂದರೆ ಆಗುವುದಿಲ್ಲ. ಆದರೆ, ಆಡ್ವಾಣಿ, ಸುಷ್ಮಾ ಸ್ವರಾಜ್ ಅವರೇ ಸರ್ಕಾರದಲ್ಲಿ ತೊಂದರೆ ಉಂಟುಮಾಡುವವರಾಗಿದ್ದಾರೆ ಎಂಬರ್ಥದ ಸಾಕಷ್ಟು ಧ್ವನಿಗಳಿವೆ. ಹೀಗಾಗಿಯೇ ಇದೀಗ ನಿತಿನ್ ಗಡ್ಕರಿ ಅವರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ರಾಜನಾಥ್, ಮೋದಿ, ಜೇಟ್ಲಿ ಚರ್ಚೆಯಲ್ಲಿ ಗಡ್ಕರಿ ಕೂಡ ನಾಲ್ಕನೆಯವರಾಗಿ ಸೇರಿಕೊಂಡಿರುವುದು ಕೆಲ ಹೊಂದಾಣಿಕೆಗಳಿಗಾಗಿ ಎನ್ನಲಾಗುತ್ತಿದೆ. ಆರೆಸ್ಸೆಸ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದು, ಆಡ್ವಾಣಿಯಂಥ ಹಿರಿ ನಾಯಕರೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿರುವ ಇವರು ಮೋದಿ ಸರ್ಕಾರ ಮತ್ತು ಬಿಜೆಪಿ ಹಿರಿತಲೆಗಳ ನಡುವೆ ಸಂವಹನದ ತಂತು ಆಗಲಿದ್ದಾರೆ ಎಂದು ವಿಶ್ಲೇಶಿಸಲಾಗುತ್ತಿದೆ.
ಮೋದಿ ಅರ್ಥವ್ಯವಸ್ಥೆಯನ್ನು ಸುಧಾರಿಸಬಲ್ಲರೇ, ದೆಹಲಿ ಆಡಳಿತ ವರ್ಗವನ್ನು ಅಹಮದಾಬಾದ್ ಐಎಎಸ್ ಶ್ರೇಣಿಯ ಅಧಿಕಾರಿಗಳೊಂದಿಗೆ ಬದಲಿಸಲಾಗುವುದೇ ಎಂಬೆಲ್ಲ ಕುರಿತೂ ಚರ್ಚೆಗಳು ನಡೆದಿವೆ. ನೀವಿದನ್ನು ಟಿವಿ ಎದುರು ಕುಳಿತು ಓದುತ್ತಿರುವ ಹೊತ್ತಿಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದಿರಲೂಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.