ನರೇಂದ್ರ ಮೋದಿಯವರ ಉತ್ತಮ ಆಡಳಿತ; ಅಭಿವೃದ್ಧಿಯ ವಾಗ್ದಾನಕ್ಕೆ ದೊರೆತ ಜನಾದೇಶ

ದಶಕದ ದುರಾಡಳಿತದ ಘೋರ ಪರಿಸ್ಥಿತಿಗಳು ಕೊನೆಗೊಂಡಿದೆ. 2014ರ ಚುನಾವಣೆಯಲ್ಲಿ ಭಾರತದ ಪ್ರಧಾನಮಂತ್ರಿಯಾಗಲು ನರೇಂದ್ರ ಮೋದಿಯವರಿಗೆ ಅಭೂತಪೂರ್ವ ಜನಾದೇಶ ದೊರಕಿದೆ. ಮತ್ತು ಇದೊಂದು ಸರ್ವಾನುಮತದ ಅಗಾಧ ಜನಾದೇಶವಾಗಿದೆ. ಜಾತಿ, ಮತ, ಸಮುದಾಯಗಳ ಪರಿಧಿಗಳನ್ನು ಮೀರಿ ಮೋದಿಯವರ ಉತ್ತಮ ಆಡಳಿತ, ಅಭಿವೃದ್ಧಿ ಮತ್ತು ಉತ್ತರದಾಯಿಯಾಗಿರುವೆನೆಂಬ ಭರವಸೆಗೆ ಭಾರತೀಯರು ಅವರನ್ನು ಮುಕ್ತ ಹೃದಯದಿಂದ ಬೆಂಬಲಿಸಿದ್ದಾರೆ. ಆದ್ದರಿಂದ ಮೊದಲು ಅವರ ಸಚಿವ ಸಂಪುಟವನ್ನು ರಚಿಸಿಕೊಳ್ಳಲು ಅವರಿಗೆ ಮುಕ್ತ ಅವಕಾಶ ನೀಡಬೇಕು.
ನರೇಂದ್ರ ಮೋದಿಯವರಿಗೆ ಭಾರತದ ಪ್ರಧಾನಮಂತ್ರಿಯಾಗಿ ನಾಯಕತ್ವ ವಹಿಸಿಕೊಳ್ಳಲು ಜನಾದೇಶ
ಸುಮಾರು 6 ತಿಂಗಳುಗಳಿಂದಲೂ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ವಿರೋಧ ಪಕ್ಷಗಳು, ಸ್ವತಂತ್ರ ಮಾಧ್ಯಮಗಳು, ರಾಜಕೀಯ ವಿಶ್ಲೇಷಕರು ಮತ್ತು ಜನಸಾಮಾನ್ಯರಾದಿಯಾಗಿ ಎಲ್ಲರೂ ಒಪ್ಪಿದ ಒಂದು ವಿಷಯವೆಂದರೆ, ಈ ಚುನಾವಣೆಯ ಪ್ರಚಾರಗಳೆಲ್ಲವೂ ಕೂಡ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನೆ ಕೇಂದ್ರೀಕರಿಸಿ, ಅದರ ಪರ-ವಿರೋಧದಲ್ಲಿ ನಡೆಯಿತು. ಬಿಜೆಪಿಯ ಕೆಲವು ಹಿರಿಯ ನಾಯಕರು ಸಂಪೂರ್ಣವಾಗಿ ಒಪ್ಪಿಕೊಳ್ಳದೆ ಇರಬಹುದು- ಆದರೆ ವಾಸ್ತವವೆಂದರೆ, ಮೋದಿಯವರಿಗೆ, ಅವರ ಸಾಧನೆಗೆ, ಅವರ ವರ್ಚಸ್ಸಿಗೆ ಮತ್ತು ಅವರ ನಾಯಕತ್ವಕ್ಕೆ ಭಾರತೀಯರು ಮತ ನೀಡಿದ್ದಾರೆ. ಸ್ಥಳೀಯ ಅಭ್ಯರ್ಥಿಗಳಿಗಿಂತಲೂ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿಸಲೆಂದೇ ಮತದಾರರು ಮತ ನೀಡಬೇಕೆಂದು ನನ್ನದೂ ಸೇರಿದಂತೆ ದೇಶದ ಎಲ್ಲೆಡೆ ನಡೆದ ಅನೇಕ ಅಭಿಯಾನಗಳೂ ಕೂಡ ಕೋರಿದ್ದವು. ಬಹಳಷ್ಟು ಕಡೆ ಮತದಾರರಿಗೆ ಮೋದಿಯೇ ಪರೋಕ್ಷ ಅಭ್ಯರ್ಥಿಯಾಗಿ ಕಂಡಿರುವುದಂತೂ ಸತ್ಯ.
ಎಲ್ಲ ವಿಷಯಗಳು, ಪ್ರಶ್ನೆಗಳು ಮತ್ತು ಆರೋಪಗಳನ್ನು ಎಳೆ ಎಳೆಯಾಗಿ ಚರ್ಚಿಸಲಾಯಿತು
ಈ ಚುನಾವಣೆಯ ಸಂದರ್ಭದಲ್ಲಿ, ಮೋದಿಯವರ ಗುಜರಾತ್ ಮಾದರಿ ಅಭಿವೃದ್ಧಿ, ಅವರ ಜಾತ್ಯತೀತತೆ, ಅವರ ಕಾರ್ಯವೈಖರಿ ಇತ್ಯಾದಿಗಳ ಬಗ್ಗೆ ಪ್ರತಿಯೊಂದು ವಿಷಯಗಳನ್ನು, ಆರೋಪಗಳನ್ನು ಮೇಲಿಂದ ಮೇಲೆ ಚರ್ಚಿಸಲಾಯಿತು. ಹಿಂದೆಂದೂ ಕಂಡು ಕೇಳಿರದ ರೀತಿಯಲ್ಲಿ ಅವರ ಎಲ್ಲ ಚರ್ಯೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಯಿತು. ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ದೇಶಾದ್ಯಂತದ ಟಿವಿ, ದಿನಪತ್ರಿಕೆಗಳು ಮತ್ತು ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಎಲ್ಲ ಸ್ತರಗಳಲ್ಲಿ ಚರ್ಚೆಗಳು, ವಾಗ್ದಾಳಿಗಳು, ವಿಮರ್ಶೆ, ಟೀಕೆ-ಟಿಪ್ಪಣಿಗಳು ನಡೆದವು. ಸುಮಾರು ಆರು ತಿಂಗಳುಗಳ ಕಾಲ ನಡೆದ ಪ್ರಚಾರ ಮತ್ತು ಒಂಭತ್ತು ಹಂತಗಳ ಸುದೀರ್ಘ ಚುನಾವಣೆಯ ಪ್ರಕ್ರಿಯೆಯಲ್ಲಿ, ಈ ಎಲ್ಲ ಚರ್ಚೆ, ಅಭಿಪ್ರಾಯ, ವಾಸ್ತವ, ಸಾಕ್ಷ್ಯಗಳನ್ನು ಗಮನಿಸುತ್ತಲೇ ಬಂದ ನಾಗರೀಕರು ಮಾತ್ರ ನಿರ್ಧರಿಸಿದ್ದೆಂದರೆ, ಭಾರತದ ಮುಂದಿನ ಪ್ರಧಾನಮಂತ್ರಿಯಾಗಿ ದೇಶದ ನಾಯಕತ್ವವನ್ನು ನರೇಂದ್ರ ಮೋದಿಯವರೇ ವಹಿಸಿಕೊಳ್ಳಬೇಕು ಎಂಬುದಾಗಿತ್ತು.
ನರೇಂದ್ರ ಮೋದಿ ಉತ್ತರದಾಯಿಯಾಗಿರಬೇಕು
ಪ್ರಸಕ್ತ ಸನ್ನಿವೇಶದಲ್ಲಿ, ಮೋದಿಯವರ ಮೇಲೆ ಜನರ ಅಪಾರ ನಿರೀಕ್ಷೆಗಳನ್ನು ತಲುಪುವ ಗುರುತರ ಜವಾಬ್ದಾರಿಯ ಜೊತೆಗೆ ಅವರೇ ವಾಗ್ದಾನ ನೀಡಿರುವಂತೆ, ಭಾರತದ ಪ್ರಧಾನಮಂತ್ರಿಯಾಗಿ ಮತ್ತು ಭಾರತೀಯ ಜನತಾ ಪಕ್ಷದ ಪ್ರತೀಕವಾಗಿ ಜನರು ಅವರ ಮೇಲಿಟ್ಟ ವಿಶ್ವಾಸಕ್ಕೆ ಅವರು ವೈಯಕ್ತಿಕವಾಗಿ ಉತ್ತರದಾಯಿಯಾಗಿರಲೇ ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ, ಸಂಸತ್ತಿನ ಅಧಿವೇಶನಗಳಲ್ಲಿ, ಮಾಧ್ಯಮಗಳೆದುರು, ಜಾಗತಿಕ ಸಮುದಾಯದ ಮುಂದೆ ಮತ್ತು ಮುಂದಿನ 2019ರ ಮಹಾಚುನಾವಣೆಯನ್ನೂ ಸೇರಿಸಿದಂತೆ ಪ್ರತಿದಿನ ಎಲ್ಲ ರೀತಿಯ ಪರೀಕ್ಷೆಗಳನ್ನು ಎದುರಿಸಲೇಬೇಕಾಗುತ್ತದೆ.
ಸಮಸ್ತ ಭಾರತೀಯರನ್ನು ತಲುಪುವ ತನ್ನ ಪ್ರಾಮಾಣಿಕ, ಆಡಳಿತಾತ್ಮಕ ಮತ್ತು ಅಭಿವೃದ್ಧಿಯ ಪರಿಕಲ್ಪನೆಯನ್ನು ಹಂಚಿಕೊಳ್ಳುವ ಸಚಿವ ಸಂಪುಟವನ್ನು ನರೇಂದ್ರಮೋದಿ ಹೊಂದಬೇಕು
ಅಭೂತಪೂರ್ವ ಪ್ರಚಾರ ಮತ್ತು ನರೇಂದ್ರ ಮೋದಿಯವರಿಗೆ ಭಾರತದ ಪ್ರಧಾನ ಮಂತ್ರಿಯಾಗಲು ಜನತೆ ನೀಡಿದ ಜನಾದೇಶದ ಹಿನ್ನೆಲೆಯಲ್ಲಿ ತನ್ನ ಆಯ್ಕೆಯ ಸಚಿವ ಸಂಪುಟವನ್ನು ರಚಿಸಲು ಮತ್ತು ಪ್ರಮುಖ ಖಾತೆಗಳನ್ನು ಹಂಚಲು ಮೋದಿಯವರಿಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದು ಅತ್ಯವಶ್ಯಕ. ಈ ತಂಡವು ಮೋದಿಯವರಲ್ಲಿ ಮತ್ತು ಅವರಿಗೆ ಈ ತಂಡದ ಮೇಲೆ ನಿಸ್ಸಂದೇಹಿತ ಗೌರವ, ವಿಶ್ವಾಸ ಮತ್ತು ಭರವಸೆಯನ್ನು ಹೊಂದಿರಬೇಕು. ಜೊತೆಗೆ ಸಾಮೂಹಿಕ ಜವಾಬ್ದಾರಿಯನ್ನು ಹೊರುವ ತಂಡ ಇದಾಗಿರಬೇಕು. ಚುನಾವಣೆ ಮುಗಿದಿದೆ ಮತ್ತು ಆಡಳಿತದ ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕಾಲ ಇದಾಗಿದೆ. ಚರ್ಚೆ ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶವಿದ್ದಾಗಿಯೂ ಸಂಪುಟವು ಒಂದು ಸಮರ್ಥ ಸಂಯುಕ್ತ ತಂಡದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಶೇಷವಾಗಿ ಪ್ರಸಕ್ತ ರಾಷ್ಟ್ರದ ಆರ್ಥಿಕ, ಆಡಳಿತಾತ್ಮಕ ಮತ್ತು ಜಾಗತಿಕ ವಿಶ್ವಾಸದ ಕೊರತೆಯನ್ನು ಉಪೇಕ್ಷಿಸಿ ಮುನ್ನಡಿಯಿಡುವುದು ಮೋದಿಯವರಿಗೆ ಸಾಧ್ಯವಾಗುವುದಿಲ್ಲ. ಶೀಘ್ರ ನಿರ್ಧಾರ ತೆಗೆದುಕೊಳ್ಳಲು ವಿಶ್ವಾಸವನ್ನು ಮರುಸ್ಥಾಪಿಸುವುದೇ ಮೋದಿಯವರ ಮೊದಲ ಆದ್ಯತೆಯಾಗಬೇಕು.
ತನ್ನ ಆಯ್ಕೆಯ ಸಚಿವ ಸಂಪುಟವನ್ನು ಮೋದಿ ಆರಿಸಿಕೊಳ್ಳಬೇಕು
ನಂತರದ ಅತಿ ಪ್ರಮುಖ ಹೆಜ್ಜೆಯೆಂದರೆ, ದೇಶದ ತಕ್ಷಣದ ಮತ್ತು ದೂರಗಾಮಿ ಆವಶ್ಯಕತೆಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸುವಂತಾಗಲು ತನ್ನ ಆಯ್ಕೆಯ ಸಚಿವ ಸಂಪುಟದ ತಂಡವನ್ನು ಕಟ್ಟಿಕೊಳ್ಳಲು ಮೋದಿಯವರಿಗೆ ಸಾಧ್ಯವಾಗಬೇಕು. ದೇಶವನ್ನು ಮತ್ತೆ ಸರಿದಾರಿಗೆ ತರಲು ಮತ್ತು ಯಾವ ಭರವಸೆ, ಆಶ್ವಾಸನೆ ಮತ್ತು ಭವಿಷ್ಯದ ಕನಸುಗಳನ್ನು ನಂಬಿ ಜನತೆ ತನ್ನ ಸಂಪೂರ್ಣ ವಿಶ್ವಾಸವನ್ನು ಮೋದಿಯವರ ಮೇಲಿರಿಸಿತೋ, ಅದನ್ನು ಸಾಕಾರಗೊಳಿಸಲು ಅರ್ಹ ಸ್ವಾತಂತ್ರ್ಯ ಮತ್ತು ಪೂರ್ಣ ಬೆಂಬಲ ಅವರಿಗೆ ಸಿಗಬೇಕು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕರಾಗಿ ನರೇಂದ್ರ ಮೋದಿಯವರ ಮೇಲೆ ಭಾರತ ತನ್ನ ವಿಶ್ವಾಸವನ್ನು ಸುಸ್ಪಷ್ಟವಾಗಿ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


