ಜಾತಿವಾದಕ್ಕಿಂತ ಕುಟುಂಬವಾದ ಅಪಾಯಕಾರಿಯಲ್ಲವೇ?

ಬರೀ ಜಾತಿ ಎಂದಾಗ ಅಲ್ಲಿ ನಮ್ಮ ರಕ್ತ ಸಂಬಂಧಿಕರಲ್ಲದ ಒಂದು ದೊಡ್ಡ ಸಮುದಾಯವಾದರೂ ಇರುತ್ತದೆ. ಅವರಲ್ಲಿಯೇ ಅನೇಕ ಮಂದಿ ಅರ್ಹರು ಮತ್ತು ಪ್ರತಿಭಾಶಾಲಿಗಳಾದ ಸಮರ್ಥರಿಗೆ ಅವಕಾಶ ದೊರೆಯುವ ಸಾಧ್ಯತೆಯಾದರೂ ಇರುತ್ತದೆ. ಆದರೆ ಕುಟುಂಬ ಎಂದಾಗ ಅಲ್ಲಿ ಕೇವಲ ಒಬ್ಬ ವ್ಯಕ್ತಿ ಅಥವಾ ಅವರ ಪರಿವಾರದ ಕೌಟುಂಬಿಕ ಸ್ವಾರ್ಥವೇ ಮುಖ್ಯವಾಗಿಬಿಡುತ್ತದೆ.
ಆತ ಒಬ್ಬ ಧ್ರುವೀಕರಣ ಮಾಡಬಲ್ಲ ವ್ಯಕ್ತಿ. "He is a polarizing personality'. ಇದು 2013ರ ಸೆಪ್ಟೆಂಬರ್ನಲ್ಲಿ ಭಾರತೀಯ ಜನತಾಪಕ್ಷ ನರೇಂದ್ರ ಮೋದಿಯನ್ನು ತನ್ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ ಕ್ಷಣದಿಂದಲೇ ದೇಶಾದ್ಯಂತ ಮೊಳಗಿದ ಸೆಕ್ಯುಲರ್ವಾದಿಗಳ ತೀಕ್ಷ್ಣ ಪ್ರತಿಕ್ರಿಯೆ. ಇದರ ಮುಂದುವರಿದ ಭಾಗವಾಗಿ, "ಆತ ಒಬ್ಬ ನರಹಂತಕ. 2002ರ ಅಲ್ಪಸಂಖ್ಯಾತರ ನರಮೇಧಕ್ಕೆ ಕಾರಣನಾದ ಕೊಲೆಗಡುಕ" ಎಂಬ ಅಗ್ನಿಭಕ್ಷಕೆ ಆರ್ಭಟವೂ ಲೋಕಸಭೆಯ ಮತದಾನದ ಕಟ್ಟಕಡೆಯ ಹಂತದವರೆಗೂ ಸ್ಫೋಟಗೊಳ್ಳತ್ತಲೇ ಬಂತು. ಸೆಕ್ಯುಲರಿಸಂನ ಈ ಅಹಂಕಾರಕ್ಕೆ ಮೊನ್ನೆ ಮೇ 16 ರಂದು ಪ್ರಕಟಗೊಂಡ ಫಲಿತಾಂಶ ಮರ್ಮಾಘಾತವನ್ನುಂಟು ಮಾಡಿದೆ.
ಕದನ ಮುಗಿದಿದೆ. ಫಲಿತಾಂಶ ನಿಚ್ಚಳವಾಗಿದೆ. ಆದ್ದರಿಂದಲೇ ಇದೀಗ ಯಾವುದೇ ಮತಬ್ಯಾಂಕುಗಳ ಮರ್ಜಿ-ಮುಲಾಜಿಲ್ಲದೆಯೆ ಈ ಸೆಕ್ಯುಲರ್ ಕಮ್ಯುನಲ್ ಧ್ರುವೀಕರಣ ಕುರಿತು ಮುಕ್ತವಾಗಿ ಚರ್ಚಿಸಬಹುದಾಗಿದೆ. ಯಾವುದೇ ಪಕ್ಷ ರಾಜಕಾರಣದ ಹಂಗಿಲ್ಲದೆಯೆ ಅಷ್ಟೆನೂ ಜನಪ್ರಿಯವಲ್ಲದ, ಪ್ರಗತಿಪರತೆಯ ಪರಿಕಲ್ಪನೆಗೇ ವ್ಯತಿರಿಕ್ತವೆನಿಸಬಲ್ಲ ಹಲವು ಸತ್ಯಗಳನ್ನಿವತ್ತು ಬಹಿರಂಗ ಸಂವಾದಕ್ಕೋಸ್ಕರ ಮಂಡಿಸಬಹುದಾಗಿದೆ.
ಮೋದಿ ಓರ್ವ ಧ್ರುವೀಕರಿಸಬಲ್ಲ ವ್ಯಕ್ತಿ ಎಂಬ ಚುಚ್ಚುಮಾತುಗಳ ಹಿಂದಿದ್ದ ಭಾವಾರ್ಥ "ಅವರೊಬ್ಬ ಸಮಾಜ ವಿಭಜಕ ರಾಕ್ಷಸ. ಭಾರತದ ಜನಸಮುದಾಯವನ್ನು ಹಿಂದು-ಮುಸ್ಲಿಮರೆಂದು ಪರಸ್ಪರರ ವಿರುದ್ಧ ಎತ್ತಿಕಟ್ಟಿ ಅಧಿಕಾರಕ್ಕೋಸ್ಕರ ಕೋಮುವಾದಿ ಭಾವನೆಗಳೊಂದಿಗೆ ಚೆಲ್ಲಾಟವಾಡುವ ಒಂದು ದುಷ್ಟಶಕ್ತಿ !" ಹೀಗೆ ಅಲೋಚಿಸುತ್ತಲೇ ತಮ್ಮ ಮನದಾಳದ ಅಸಹನೆ, ಆಕ್ರೋಶ ಮತ್ತು ಪೂರ್ವಾಗ್ರಹಗಳನ್ನೇ ಮೋದಿಯ ವಿರುದ್ಧದ ತಮ್ಮ ಸೈದ್ದಾಂತಿಕ ಪ್ರತಿಭಟನೆ ಎಂಬಂತೆ ಕರ್ನಾಟಕವೂ ಸೇರಿದಂತೆ ಇಡೀ ರಾಷ್ಟ್ರಾದ್ಯಂತ ಮೋದಿಯ ಕುರಿತು ಭಯ, ಆತಂಕಗಳನ್ನು ಬಿತ್ತುತ್ತಾ ಬಂದ ರಾಜಕೀಯ ಚಿಂತಕರು ಹಾಗೂ ಬುದ್ಧಿಜೀವಿಗಳೆದುರು ಒಂದಷ್ಟು ಮೂಲಭೂತ ಗ್ರಹಿಕೆಗಳನ್ನು ಮೆಲುಕುಹಾಕಬೇಕಾಗಿ ಬಂದಿದೆ.
ಸೆಕ್ಯುಲರಿಸಂ ಎಂಬ ಸಂವಿಧಾನಾತ್ಮಕ ಆದರ್ಶವನ್ನು ಜಾತ್ಯತೀತತೆ ಎಂಬರ್ಥದಲ್ಲಿ ವಿವೇಚಿಸಿದಾಗ ಅದು ಜಾತೀಯತೆ ಎಂಬುದರ ತದ್ವಿರುದ್ಧ ಭಾವವಾಗುತ್ತದಲ್ಲವೇ? ಹಾಗಾದರೆ ಜಾತೀಯತೆ ಅಥವಾ ಕೋಮುವಾದ ಎಂದರೇನು? ಜಾತಿ ಎಂಬುದು ಸ್ವಜನಪಕ್ಷಪಾತದ ಅತ್ಯಂತ ಹೇಯ ಸ್ಥಿತಿ, "caste is the worst form of nepotism'', ಇದು ಕನ್ನಡದ ಅತ್ಯಂತ ಪ್ರಖರ ಚಿಂತಕ ಹಾಗೂ ವಿಶಿಷ್ಟ ಪ್ರತಿಭೆಯ ಪತ್ರಕರ್ತ ಪಿ.ಲಂಕೇಶರು ಆಗಾಗ್ಗೆ ತಮ್ಮ ಪತ್ರಿಕೆಯ ಬಳಗದೊಂದಿಗೆ ಹರಟೆ ಹೊಡೆಯುತ್ತಿದ್ದಾಗ ಮಾಡುತ್ತಿದ್ದ ಅತ್ಯಂತ ಸರಳ ವ್ಯಾಖ್ಯಾನ.
ಜಾತೀಯತೆ ಎಂದರೆ ಸ್ವಜಾತಿಯವನೆಂಬ ಏಕೈಕ ಕಾರಣಕ್ಕಾಗಿ ಒಬ್ಬನನ್ನು ಪ್ರೀತಿಸುವುದು, ಅವನೆಷ್ಟೇ ಅಯೋಗ್ಯ, ಅನರ್ಹ ಮತ್ತು ಭ್ರಷ್ಟನಾಗಿದ್ದರೂ ಅವನನ್ನು ಸಮರ್ಥಿಸಿಕೊಳ್ಳುವುದು ಅಥವಾ ಬೆಂಬಲಿಸುವುದು. ಹಾಗೆಯೇ ಅನ್ಯಜಾತಿಯವನು ಎಂಬ ಏಕೈಕ ಕಾರಣಕ್ಕಾಗಿಯೇ ಮತ್ತೊಬ್ಬನನ್ನು ವಿನಾಕಾರಣ ದ್ವೇಷಿಸುವುದು, ದೂರವಿಡುವುದು ಮತ್ತು ಸಾಧ್ಯವಾದಾಗಲೆಲ್ಲ ಆತನನ್ನು ತುಳಿಯುವುದು- ಆ ವ್ಯಕ್ತಿ ಅದೆಷ್ಟೇ ಯೋಗ್ಯ, ಪ್ರಾಮಾಣಿಕ ಹಾಗೂ ಪ್ರತಿಭಾವಂತನಾಗಿದ್ದರೂ ಸಹ! ಇದನ್ನೇ ಜಾತೀಯತೆ ಎಂದಾದಲ್ಲಿ, ಜಾತ್ಯತೀತತೆ ಅಥವಾ ಸೆಕ್ಯುಲರಿಸಂ ಅಂದರೇನಾದೀತು? ಕೇವಲ ಆರ್ಎಸ್ಎಸ್ನ ಖಂಡನೆ ಅಥವಾ ಬಿಜೆಪಿಯ ವಿರೋಧ ಮಾತ್ರವೇ ಸೆಕ್ಯುಲರಿಸಮ್ಮಾ ಅಥವಾ ರಾಜಕೀಯವಾಗಿ ಕಾಂಗ್ರೆಸ್ ಅಥವಾ ಇನ್ನಾವುದೇ ಬಿಜೆಪಿ ವಿರೋಧಿ ಪಕ್ಷಕ್ಕೆ ಕುರುಡು ಬೆಂಬಲ ವ್ಯಕ್ತಪಡಿಸುವುದಾ? ಛೆ, ಇದಾವುದೂ ಅಲ್ಲ. ಜಾತೀಯತೆಯನ್ನು ಸ್ವಜನಪಕ್ಷಪಾತದ ಅತ್ಯಂತ ಹೇಯ ಮನಸ್ಥಿತಿ ಎಂದು ಒಪ್ಪಿಕೊಳ್ಳುವುದಾದಲ್ಲಿ ಜಾತ್ಯತೀತತೆ ಎಂಬುದು ಎಲ್ಲ ಬಗೆಯ ಸ್ವಜನಪಕ್ಷಪಾತದ ನಿರಾಕರಣೆ ಎಂದಾಗಬೇಕಲ್ಲವೇ? ಸೆಕ್ಯುಲರಿಸಂ ಎಂದರೆ ಎಲ್ಲ ಬಗೆಯ ನೆಪೋಟಿಸಂನ ನಿರಾಕರಣೆ ಎಂಬುದೇ ಅಸಲಿ ಅರ್ಥವಾಗಬೇಕಲ್ಲವೇ? ಯಾವುದೇ ಜಾತಿ, ಜನಾಂಗ, ಧರ್ಮ, ಭಾಷೆ ಅಥವಾ ಲಿಂಗ ಆಧಾರಿತ ಪಕ್ಷಪಾತ ಅಥವಾ ಪೂರ್ವಾಗ್ರಹವಿಲ್ಲದೆ ಎಲ್ಲಾ ಜಾತಿ-ಜನಾಂಗಗಳ ಪ್ರತಿಭಾವಂತರು, ಸಮರ್ಥರು, ಕ್ರಿಯಾಶಾಲಿಗಳು ಹಾಗೂ ಎಲ್ಲ ನ್ಯಾಯವಂತ ಪ್ರಜೆಗಳಿಗೆ ಸಮಾನ ಗೌರವ ಮತ್ತು ಸಮಾನ ಅವಕಾಶ ನೀಡುವುದೇ ಜಾತ್ಯತೀತತೆ ಅಥವಾ ಸೆಕ್ಯುಲರಿಸಮ್ಮಿನ ನಿಜವಾದ ತಿರುಳಾಗಬೇಗಿತ್ತಲ್ಲವೇ?
ಹಾಗಾದರೆ ಜಾತಿವಾದಕ್ಕಿಂತಲೂ 'ಕುಟುಂಬವಾದ' ಎಂಬುದು ಇನ್ನೂ ಅಪಾಯಕಾರಿಯಾದ, ಅತ್ಯಂತ ಸಂಕುಚಿತ ಮನಸ್ಸಿನ ಹಾಗೂ ಯಾವುದೇ ಮಾನದಂಡದಿಂದಲೂ ಪ್ರಜಾಸತ್ತಾತ್ಮಕವಲ್ಲದ ಒಂದು ಕೆಟ್ಟ ವ್ಯವಸ್ಥೆ ಅಲ್ಲವೇ? ಬರೀ ಜಾತಿ ಎಂದಾಗ ಅಲ್ಲಿ ನಮ್ಮ ರಕ್ತ ಸಂಬಂಧಿಕರಲ್ಲದ ಒಂದು ದೊಡ್ಡ ಸಮುದಾಯವಾದರೂ ಇರುತ್ತದೆ. ಅವರಲ್ಲಿಯೇ ಅನೇಕ ಮಂದಿ ಅರ್ಹರು ಮತ್ತು ಪ್ರತಿಭಾಶಾಲಿಗಳಾದ ಸಮರ್ಥರಿಗೆ ಅವಕಾಶ ದೊರೆಯುವ ಸಾಧ್ಯತೆಯಾದರೂ ಇರುತ್ತದೆ. ಆದರೆ ಕುಟುಂಬ ಎಂದಾಗ ಅಲ್ಲಿ ಕೇವಲ ಒಬ್ಬ ವ್ಯಕ್ತಿ ಅಥವಾ ಅವರ ಪರಿವಾರದ ಕೌಟುಂಬಿಕ ಸ್ವಾರ್ಥವೇ ಮುಖ್ಯವಾಗಿಬಿಡುತ್ತದೆ. ಅದರಲ್ಲೂ ಒಂದು ರಾಜಕೀಯ ಪಕ್ಷ ಅಥವಾ ಸಾರ್ವಜನಿಕ ಸಂಸ್ಥೆಯ ವಿಚಾರದಲ್ಲಂತೂ ಕುಟುಂಬವಾದ ಅಥವಾ ಡೈನಾಸ್ಟಿ ಎಂದರೆ ಅದು ಕೇವಲ ವ್ಯಕ್ತಿಗತ ಸ್ವಾರ್ಥ ಮತ್ತು ಕೌಟುಂಬಿಕ ಪಾಳೇಗಾರಿಕೆಯ ವಿಜೃಂಭಣೆಯಾಗಿಬಿಡುವುದಿಲ್ಲವೆ?
ಕಳೆದ ಎರಡು ದಶಕಗಳಿಂದಲೂ, ಅಂದರೆ 1992 ರ ಡಿಸೆಂಬರ್ 6 ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಬೀಳಿಸಿದ ದಿನದಿಂದಲೂ ಭಾರತದ ಗಣರಾಜ್ಯವನ್ನು ಈ ಸೆಕ್ಯುಲರ್-ಕಮ್ಯುನಲ್ ಧ್ರುವೀಕರಣದತ್ತ ದೂಡುತ್ತ ಬಂದ ರಾಜಕೀಯ ಘಟನಾವಳಿಗಳ ಪರಿಣಾಮವೇನಾಯಿತೆಂಬುದೀಗ ಗುಟ್ಟಾಗುಳಿದಿಲ್ಲ. ಅಲ್ಲಿಂದೀಚೆಗೆ ನಡೆದ ಪ್ರತಿಯೊಂದು ಚುನಾವಣೆಯಲ್ಲೂ ರಾಷ್ಟ್ರದ ಮತದಾರರೆದುರು ಲಭ್ಯವಾಗುತ್ತಿದ್ದ ಆಯ್ಕೆಗಳು ಎರಡೇ ಎರಡು: ಸಂಘಪರಿವಾರದ ಕೋಮುವಾದ ಮತ್ತು ಸೆಕ್ಯುಲರ್ ಪರಿವಾರದ ಕುಟುಂಬವಾದ!
ಇತರ ಎಲ್ಲಾ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ತತ್ವ-ಸಿದ್ಧಾಂತಗಳನ್ನು ಸೈಡ್ಲೈನ್ ಮಾಡುತ್ತ ಬಂದ ಈ ಸೆಕ್ಯುಲರ್ ಕಮ್ಯುನಲ್ ವರ್ಗೀಕರಣದ ನಿರರ್ಥಕತೆಯನ್ನು ಇದೀಗ ನರೇಂದ್ರ ಮೋದಿಯವರ "ಸುಶಾಸನ್ ಔರ್ ವಿಕಾಸ್" ದಕ್ಷ ಆಡಳಿತ ಮತ್ತು ಸರ್ವಾಂಗೀಣ ಅಭಿವೃದ್ಧಿ ಎಂಬ ಎರಡಂಶಗಳ ಆಧಾರಿತ ಚುನಾವಣಾ ಹೋರಾಟದ ಪ್ರಚಂಡ ಯಶಸ್ಸೆನ್ನುವುದನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತುಮಾಡಿದೆ. ಆರಂಭದಲ್ಲಿ ಮೋದಿ ವಿರುದ್ಧದ ಪ್ರಚಾರ ಸಮರ ಸೆಕ್ಯುಲರ್ ಕಮ್ಯುನಲ್ ಧ್ರುವೀಕರಣಕ್ಕೆ ಕಾರಣವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬರಬರುತ್ತ ಕಾಂಗ್ರೆಸ್ಸಿನ ರಾಜವಂಶದ ಸಾರಥಿಗಳಾದ ರಾಹುಲ್, ಸೋನಿಯಾ ಮತ್ತು ಕಡೆಯಲ್ಲಿ ಪ್ರಿಯಾಂಕಾ ಹೇಗೆ ಒಬ್ಬೊಬ್ಬರಾಗಿ ತಮ್ಮ ಪಾರ್ಟಿಯ ಮಾನ ಉಳಿಸುವುದಕ್ಕೆಂದು ವೇದಿಕೆಯೇರುತ್ತ "ಮೋದಿ ಅಲೆ ಇಲ್ಲ, ಗುಜರಾತ್ ಮಾದರಿ ಎಲ್ಲಾ ಸುಳ್ಳು" ಎಂತೆಲ್ಲ ಚೀರಾಡುತ್ತ ಹೋದಂತೆಲ್ಲಾ ಧ್ರುವೀಕರಣದ ದಿಕ್ಕೇ ಬದಲಾಗಿಬಿಟ್ಟಿತು. ಮೋದಿಯನ್ನು "ಯಕಃಶ್ಚಿತ್ ಒಬ್ಬ ಚಾಯ್ವಾಲಾ, ನೀಚ್ ರಾಜನೀತಿ ಯ ರಕ್ಕಸ" ಎಂದು ಈ ತಾಯಿ-ಮಕ್ಕಳು ಮತ್ತವರ ಪಾರ್ಟಿಯ ನಾಯಕರು ಘೀಳಿಡುತ್ತ ಬಂದಂತೆಲ್ಲ ಈ ಧ್ರುವೀಕರಣ ಪ್ರಜಾಪ್ರಭುತ್ವ ಮತ್ತು ರಾಜಪ್ರಭುತ್ವದ ನಡುವಿನ ಸಂಘರ್ಷವಾಗಿಬಿಟ್ಟಿತು.
ಈ ಡೆಮಾಕ್ರಸಿ ವರ್ಸಸ್ ಡೈನಾಸ್ಟಿ ಎಂಬ ಧ್ರುವೀಕರಣವೇ ಮೋದಿಯ ಪ್ರಚಂಡ ಗೆಲುವು ಹಾಗೂ ಸೋನಿಯಾ ಕಾಂಗ್ರೆಸ್ಸಿನ ದಯನೀಯ ಸೋಲಿನಲ್ಲಿ ಪರ್ಯಾವಸಾನಗೊಂಡಿತು. ಎಲ್ಲಿ ಸಮಾನತೆ ಮತ್ತು ಸಹೋದರತ್ವದ ಭಾವನೆ ಇರುತ್ತದೋ ಅದು ಪ್ರಜಾಪ್ರಭುತ್ವ. ಎಲ್ಲಿ ವಂಶಪಾರಂಪರ್ಯ ಆಳ್ವಿಕೆ ಇರುತ್ತದೋ ಅದು ರಾಜಪ್ರಭುತ್ವ. ಎಲ್ಲಿ ಕೇವಲ ಜಾತಿ, ಕೋಮು ಅಥವಾ ಧರ್ಮಾಧಾರಿತ ರಾಜಕಾರಣವಿರುತ್ತದೋ ಅದು ಪಂಗಡಪ್ರಭುತ್ವ! ಈ ಸೂಕ್ಷ್ಮ ವ್ಯತ್ಯಾಸಗಳನ್ನೇ ನಮ್ಮ ಎಡಪಂಥೀಯ, ಪ್ರಗತಿಪರ ಚಿಂತಕರು ಅರಿಯದೇ ಹೋದದ್ದೇ ಅವರೆಲ್ಲ ಈ ವ್ಯತಿರಿಕ್ತ ಫಲಿತಾಂಶದ ಮುಜುಗರ ಅನುಭವಿಸುವಂತಾಯ್ತು.
ಪರಾಭವದ ನಂತರವೂ ಆ ಮಾ-ಬೇಟಾ ಪಾರ್ಟಿಯ ಮನೋಧರ್ಮವೇನೂ ಬದಲಾಗುವಂತೆ ಕಾಣುತ್ತಿಲ್ಲ. ಬದಲಾಗುವುದಕ್ಕೆ ಬಿಡುವುದೂ ಇಲ್ಲ ಅವರ ಆಶ್ರಯದಲ್ಲೇ ತಮ್ಮ ರಾಜಕೀಯ ಪ್ರತಿಷ್ಠೆಯನ್ನು ಬೆಳೆಸಿಕೊಂಡಿರುವ ಕಾಂಗ್ರೆಸ್ಸಿನ ಸಾಮಂತ ರಾಜರುಗಳು.
ಅಂದಹಾಗೆ ಈ 21ನೇ ಶತಮಾನದಲ್ಲಿಯೂ ಸೆಕ್ಯುಲರ್ ಪಕ್ಷಗಳ ರಾಜಕೀಯ ಪರಂಪರೆ ಎಷ್ಚು ಅಭಾಸಕರವಾಗಿದೆ ನೋಡಿ: ಯಾವ ಖಾಸಗಿ ಉದ್ಯಮ ಅಥವಾ ಕೈಗಾರಿಕಾ ಕಂಪನಿಗಳಲ್ಲಿ ಕೌಟುಂಬಿಕ ಮಾಲಿಕತ್ವವಿರುತ್ತಿತ್ತೊ ಅಲ್ಲೆಲ್ಲ ಇವತ್ತು ಸಾಮೂಹಿಕ ನಾಯಕತ್ವ (Managerial Leadership)ಜಾರಿಗೆ ಬಂದಿದೆ. ಆದರೆ ಯಾವ ರಾಜಕೀಯ ಪಕ್ಷಗಳಲ್ಲಿ ಸಾಮುದಾಯಿಕ ನಾಯಕತ್ವವಿರಬೇಕಾಗಿತ್ತೋ ಅಲ್ಲೆಲ್ಲ ಕೌಟುಂಬಿಕ ಯಜಮಾನಿಕೆಯ ಪ್ರತಿಷ್ಠಾಪನೆಯಾಗಿದೆ! ಇದು ಸೆಕ್ಯುಲರಿಸಮ್ಮಾ? ಇದು ಡೆಮಾಕ್ರಸಿಯಾ? ಇದೇ ಸಾಮಾಜಿಕ ನ್ಯಾಯದ ರಾಜಕಾರಣವಾ?
"ಈ ಸೆಕ್ಯುಲರ್ ಕಮ್ಯುನಲ್ ಧ್ರುವೀಕರಣದಿಂದಾಗಿ ಪಕ್ಷ ರಾಜಕಾರಣ ಪಕ್ಷಪಾತದ ರಾಜಕಾರಣವಾಗಿಬಿಡಲಿದೆ" (Party politics will become partisan politics on account of this secular-communal polarisation) ಹೀಗೆನ್ನುತ್ತ ಲೋಕಸಭೆಯಲ್ಲಿ ಎಚ್ಚರಿಕೆಯ ದನಿಯನ್ನು ಮೊಳಗಿಸಿದ್ದು ಮಾಜಿ ಪ್ರಧಾನಿ ಹಾಗೂ ಅಂದು ಕೇವಲ ಮೂರೇ ಮೂವರು ಸದಸ್ಯಬಲವುಳ್ಳ ಸಮಾಜವಾದಿ ಜನತಾ ಪಾರ್ಟಿಯ ನಾಯಕ ಚಂದ್ರಶೇಖರ್. ಅವರು ಮತ್ತೆ ಮುಂದುವರಿದು ಇಂತಹ ಮನೆಮುರುಕ ರಾಜಕೀಯದಿಂದಾಗಿ ಸಂಸದೀಯ ಪ್ರಜಾಪ್ರಭುತ್ವವು ತನ್ನ ಸಹಜ ಲಯವನ್ನೇ ಕಳೆದುಕೊಂಡುಬಿಡುತ್ತದೆ, ಆಳುವ ಪಕ್ಷ ಹಾಗೂ ವಿರೋಧಪಕ್ಷಗಳ ನಡುವಿನ ಸೂಕ್ಷ್ಮ ವ್ಯತ್ಯಾಸದ ಗೆರೆಯೇ ಮಸಕಾಗಿಬಿಡುವ ಅಪಾಯ ಎದುರಾಗುತ್ತದೆ. ಇಂತಹ ಸೋಗಲಾಡಿತನದ ವಾತಾವರಣದಲ್ಲಿ ಅವಕಾಶವಾದಿ ರಾಜಕಾರಣವೇ ಎಲ್ಲೆಲ್ಲೂ ವಿಜೃಂಭಿಸತೊಡಗುತ್ತದೆ. ತನ್ಮೂಲಕ ಪಕ್ಷರಾಜಕಾರಣದ ಹಂದರವೇ ಶಿಥಿಲಗೊಂಡುಬಿಡುವ ದಯನೀಯ ಸನ್ನಿವೇಶ ನಿರ್ಮಾಣವಾಗಿಬಿಡುತ್ತದೆ ಎಂದಿದ್ದರು. ತಮ್ಮ ಅಸ್ಖಲಿತ ವಾಣಿಯಲ್ಲಿ ದಿವಂಗತ ಚಂದ್ರಶೇಖರ್ ಅಂದು ಸೆಕ್ಯುಲರ್ ಕಮ್ಯುನಲ್ ವರ್ಗೀಕರಣದ ಅಸಹಜತೆ, ಕೃತ್ರಿಮತೆ ಹಾಗೂ ಬೂಟಾಟಿಕೆ ಕುರಿತು ಭಿಡೆಯಿಲ್ಲದೆ ಮಾತನಾಡಿದ ಸಂದರ್ಭವೂ ತೀರಾ ಅಪರೂಪದ್ದಾಗಿತ್ತು. ಅಂದು ಚಂದ್ರಶೇಖರ್ ತಮ್ಮ ಬಹುಕಾಲದ ಮಿತ್ರ ಹಾಗೂ ರಾಜಕೀಯ ಅನುಯಾಯಿ ಎಚ್.ಡಿ.ದೇವೇಗೌಡರು ಭಾರತದ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬಂದಾಗ ಲೋಕಸಭೆಯಲ್ಲಿ ಮಂಡಿಸಿದ ವಿಶ್ವಾಸಮತಯಾಚನೆಯ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
1975-77 ರ ತುರ್ತುಪರಿಸ್ಥಿತಿ ಹೇರಿಕೆಯನ್ನು ಇಂದಿರಾಗಾಂಧಿಯ ಕಾಂಗ್ರೆಸ್ ಪಕ್ಷದಲ್ಲಿದ್ದುಕ್ಕೊಂಡೇ ಅದನ್ನು ಧಿಕ್ಕರಿಸಿ ಹೋರಾಡಿದ್ದ 'ಯಂಗ್ ಟರ್ಕ್' ಚಂದ್ರಶೇಖರ್ ಸಮಾಜವಾದಿ ನೆಲೆಯಿಂದ ಬಂದ ಅಪ್ರತಿಮ ಜನನಾಯಕರಾಗಿದ್ದರು. ರಾಜಕೀಯ ವಿಪ್ಲವಗಳ ಕಾರಣದಿಂದಾಗಿ ಅತ್ಯಂತ ಕೋಲಾಹಲಕಾರಿ ಸನ್ನಿವೇಶದಲ್ಲಿ 1990 ರಲ್ಲಿ ರಾಷ್ಟ್ರದ ಪ್ರಧಾನಮಂತ್ರಿ ಗದ್ದುಗೆಗೇರಿ ವಿವಾದಗ್ರಸ್ತ ಎಂಬ ಹಣೆಪಟ್ಟಿಯನ್ನಂಟಿಸಿಕೊಂಡ ನತದೃಷ್ಟರೂ ಆದರು. ಆದರೆ ಅವರದ್ದು ಯಾವತ್ತೂ ಸಂಖ್ಯಾಬಲವನ್ನು ಅವಲಂಬಿಸದ, ಜನಪ್ರಿಯವಲ್ಲದ ಸತ್ಯನುಡಿಯಬಲ್ಲ ದಿಟ್ಟ ವ್ಯಕ್ತಿತ್ವ. ಇಡೀ ಲೋಕಸಭೆಯ ಸಾಕ್ಷಿ ಪ್ರಜ್ಞೆಯಂತೆ ದನಿಯೆತ್ತಬಲ್ಲ ಧೀಮಂತಿಕೆ ಅವರದ್ದಾಗಿತ್ತು. ಹಾಗಾಗಿಯೇ ಅವರಿಗೆ ಈ ಸೆಕ್ಯುಲರ್ ಕಮ್ಯುನಲ್ ಧ್ರುವೀಕರಣ ಎಂಬುದು ರಾಜಕೀಯ ಸೋಗಲಾಡಿತನದ ಸಂಕೇತವಾಗಿ ಕಂಡಿತ್ತು. ಸಂಸದೀಯ ಪ್ರಜಾಪ್ರಭುತ್ವದ ಅತ್ಯಂತ ಹಾಸ್ಯಾಸ್ಪದ ಅಣಕದಂತೆ ಅವರನ್ನು ಕೆರಳಿಸಿತ್ತು.
= ರವೀಂದ್ರ ರೇಷ್ಮೆ
ಹಿರಿಯ ಪತ್ರಕರ್ತರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


