ಮನಮೋಹಕ ಶೀರ್ಷಿಕೆ ಏಕಮುಖ ಪತ್ರಿಕೆ
ನೀವು 'ವಿಜಯ ಕರ್ನಾಟಕ' ತೊರೆದು 'ಕನ್ನಡಪ್ರಭ'ಕ್ಕೆ ಬಂದಾಗ, ನಾನೂ ವಿ.ಕ ಬಿಟ್ಟು ಕ.ಪ್ರಭದ ಚಂದಾದಾರನಾದೆ. ಆದರೆ ಈಗೀಗ ನಿಮ್ಮ ಪತ್ರಿಕೆಯಿಂದ ನನಗೆ ಸಾಕಾಗಿ ಹೋಗಿದೆ. ನೀವು, ನಿಮ್ಮ ಅಂಕಣಕಾರರು ಮತ್ತು ಇಡೀ ಪತ್ರಿಕೆಯೇ ಬಿಜೆಪಿ ಮತ್ತು ಮೋದಿ ಪರ ಬದಲಾಗಿದ್ದೀರಿ. ನಿಮ್ಮ ಪತ್ರಿಕೆ ನಿಷ್ಪಕ್ಷಪಾತಿಯಲ್ಲ. ಈ ಕಾರಣಕ್ಕಾಗೇ ಬೇರೆ ಪತ್ರಿಕೆಗಳನ್ನು ಓದಲು ನಿರ್ಧರಿಸಿದ್ದೇನೆ. ಸಾಧ್ಯವಾದರೆ 'ಕನ್ನಡಪ್ರಭ' ಮಾಸ್ಟ್ ಹೆಡ್ ಕೆಳಗೆ "ಬಿಜೆಪಿಯ ಮುಖವಾಣಿ" ಎಂದು ಮುದ್ರಿಸುವುದೊಳಿತು! ನೀವು ತಟಸ್ಥ ಪತ್ರಿಕೆಗಳಾದ 'ಡೆಕ್ಕನ್ ಹೆರಾಲ್ಡ್' ಮತ್ತು 'ದಿ ಹಿಂದು'ಗಳಿಂದ ಸಾಕಷ್ಟು ಕಲಿಯುವುದಿದೆ (ಈ ಪತ್ರಿಕೆಗಳಿಗೂ ನಾನು ಚಂದಾದಾರ). ಅಲ್ಲದೆ ನೀವು ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸುತ್ತೀರಿ, ಆದರೆ ಕಳೆದ ಹತ್ತು ವರ್ಷಗಳಲ್ಲಿನ ಅದರ ಯಾವುದೇ ಸಾಧನೆಗೂ ಕ್ರೆಡಿಟ್ ಕೊಡುವುದಿಲ್ಲ. ಮಿ. ಮೋದಿಯವರೇ ಆ ಸರ್ಕಾರದ ಗುಣಾತ್ಮಕ ಅಂಶಗಳನ್ನು ಮೆಚ್ಚಿದ್ದಾರೆ.
-ಕೆ. ವೀರಣ್ಣ, 9900569524.
ಆತ್ಮೀಯ ಮಿತ್ರ, ಸಹೋದ್ಯೋಗಿ ಎಲ್ಲವೂ ಆದ ಪ್ರತಾಪಸಿಂಹರ ಮೇಲೆ ವಿಶ್ವೆಶ್ವರ ಭಟ್ಟರು ಬರೆದ "ಇದು ಬಾಯಿಮಾತಿನ ಪ್ರತಾಪವಲ್ಲ" ಲೇಖನ ಸಂದರ್ಭೋಚಿತವಾಗಿತ್ತು. 35-40 ದಿನಗಳಲ್ಲಿ ಅತಿ ಕಷ್ಟ ಸಾಧ್ಯವಾದ ಸಾಧನೆ ಮಾಡಿದ ಪ್ರತಾಪ್ರ ಮೇಲೆ ವಿ.ಭಟ್ಟರು ತಮ್ಮ ಪ್ರೀತಿಯನ್ನು ಹರಿಸಿ, ಅವರ ಸಾಧನೆಗಳನ್ನು ಕೊಂಡಾಡಿದ್ದಾರೆ. ಇದು ನಿಜವಾಗಿಯೂ ಕ.ಪ್ರ. ಬಳಗದ ಓದುಗರಿಗೆ ಸಂತಸದ ವಿಷಯ. ಇಲ್ಲಿ ಭಟ್ಟರು ಮತ್ತು ಪ್ರತಾಪ್ ಸಿಂಹ ಇಬ್ಬರೂ ಅಭಿನಂದನಾರ್ಹರು. ಮುಂದೆಯೂ ಪ್ರತಾಪ ಸಿಂಹರ ಲೇಖನಗಳು ಮುಂದುವರೆಯಲಿ. ಹಾಗೆಯೇ ಚೈತನ್ಯ ಹೆಗಡೆಯವರ ಲೇಖನ "ಕರಗದ ಕೆಟ್ಟ ದರ್ಪ, ಕಾಂಗ್ರೆಸ್ಗೆಲ್ಲಿಯ ಕಾಯಕಲ್ಪ?" ಸೌಜನ್ಯವಿಲ್ಲದ, ಅಹಂಕಾರಿ ವರ್ತನೆಯ, ಅಸಂಸ್ಕೃತ ಕಾಂಗ್ರೆಸ್ ನಾಯಕರ ವಕ್ರತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಈ ಕಾರಣಕ್ಕಾಗಿ ಹೆಗಡೆಯವರಿಗೆ ವಂದನೆಗಳು.
-ವೆಂಕಟೇಶ್ ಮುಡಿಯನೂರು, 9886538681.
ಅಗ್ನಿ ಶ್ರೀಧರ್ ಅವರು ಬಹಳ ಅಪರೂಪಕ್ಕೆ ಕೆಲವು ಸತ್ಯ ಸಂಗತಿಗಳನ್ನು ಹೇಳುವ ಮನಸ್ಸು ಮಾಡಿದ್ದಾರೆ. ಇರಲಿ, ಓದಿ ಸಮಾಧಾನವಾಯಿತು. ಏಕೆಂದರೆ, ಕೆಲವು ವರ್ಷಗಳ ಹಿಂದೆ ಇವರ ತಮಸ್ಸು ಎನ್ನುವ ಚಲನಚಿತ್ರವನ್ನು ನೋಡುವ ದೌರ್ಭಾಗ್ಯ ನನ್ನದಾಗಿತ್ತು. ಇವತ್ತಿನ ಅವರ ಲೇಖನ ಓದಿ ಇವರಿಗೆ ಅನಂತಮೂರ್ತಿಯವರಿಗಿಂತ ಹೆಚ್ಚು ಪ್ರಬುದ್ಧತೆ ಇದೆ ಎಂದು ತಿಳಿಯಿತು. ಸಂತೋಷ. ಇವರ ಲೇಖನಕ್ಕೆ ನನ್ನ ಗೌರವವಿದೆ. ಧನ್ಯವಾದಗಳು.
-ಶ್ರೀಗಣೇಶ ದಾಮ್ಲೆ, ಬ್ರಹ್ಮಾವರ
ಮೇ 6ರ ಬೈಟುಕಾಫಿಯಲ್ಲಿ 'ವಿಕೆಟ್ ಕೆಡವಿದ ಮದನಾರಿಯರು' -ಲೇಖನಕ್ಕೆ ಮೂಡಿ ಬಂದ ನಟಿಯರ ಚಿತ್ರಗಳು ತೀರ ಅಶ್ಲೀಲವಾಗಿದ್ದವು. ಕನ್ನಡಪ್ರಭದ ಓದುಗರ ಬಳಗಕ್ಕೆ ಸ್ವಲ್ಪ ಮಟ್ಟಿಗೆ ಮುಜುಗರವಾಗಿರಬಹುದು. ಇಂತಹ ಚಿತ್ರಗಳನ್ನು ಪ್ರಕಟಿಸುವಾಗ ಸಭ್ಯತೆಯ ಮೇರೆ ಮೀರಬಾರದು. ಕಾರಣವೇನೆಂದರೆ ಕನ್ನಡಪ್ರಭ ಅನೇಕ ಮಠಗಳಿಗೆ, ವಿದ್ಯಾಸಂಸ್ಥೆಗಳಿಗೆ ಹಾಗೂ ಗೌರವಸ್ಥ ಕುಟುಂಬಗಳಿಗೆ ತಲುಪುತ್ತದೆ. ಪತ್ರಿಕೆಯಲ್ಲಿ ಪ್ರಕಟವಾದ ನಟಿಯರ ಚಿತ್ರಗಳು ಅಶ್ಲೀಲವೆನ್ನುವುದಕ್ಕಿಂತ ಉದ್ರೇಕಕಾರಿಯಾಗಿದ್ದವು ಎಂದು ಹೇಳಬಹುದು. ಇದು ಮನೆಮಂದಿಯೆಲ್ಲಾ ಓದುವ ಪತ್ರಿಕೆಯಾದ್ದರಿಂದ ಇಂತಹ ಚಿತ್ರಗಳನ್ನು ಪ್ರಕಟಿಸುವಾಗ ಸ್ವಲ್ಪ ಎಚ್ಚರಿಕೆಯಿರಲಿ ಎಂಬುದು ನಮ್ಮ ಸಲಹೆ.
-ಶ್ರವಣಕುಮಾರ ರಾಯ್ಕರ್, ಗಂಗಾವತಿ. ಮೊ. 944 871 8444
ಮನಮೋಹನಸಿಂಗ್ ಅಧಿಕಾರದಿಂದ ಕೆಳಗಿಳಿದು, ನರೇಂದ್ರ ಮೋದಿ ಪ್ರಧಾನಿ ಹುದ್ದೆಗೇರುವುದನ್ನು ಸೂಚ್ಯವಾಗಿ ತಿಳಿಸುವಂತಹ, ದಿ. 17.5.2014ರ ನಿಮ್ಮ ಪತ್ರಿಕೆಯ ಮುಖಪುಟದ ಶೀರ್ಷಿಕೆ ಮನಮೋಹನ ಅತ್ಯದ್ಭುತವಾಗಿತ್ತು. ಅಲ್ಲದೆ ಮೋದಿಯವರು ಎಲ್ಲಾ ಮತದಾರರ, ಎಲ್ಲಾ ಭಾರತೀಯರ ಮನವನ್ನು ಮೋಹಕಗೊಳಿಸಿ ಜನರ ಪ್ರೀತಿಗೆ ಪಾತ್ರರಾದದ್ದನ್ನು ಇದು ಸೂಚಿಸುತ್ತದೆ.
-ಪ್ರಶಾಂತ್ ಮಾರ್ಪಳ್ಳಿ, ಮೊ. 944 1910 549
ಮೇ 19ರ ಸಂಚಿಕೆಯ ಒಳಸುರುಳಿ ಅಂಕಣದಲ್ಲಿ ಪಿ. ತ್ಯಾಗರಾಜ್ರವರ ಕಾಂಗ್ರೆಸ್ ಹೀನಾಯ ಸ್ಥಿತಿಯೇ...ಲೇಖನ ವಾಸ್ತವಿಕವಾಗಿದ್ದು ಸದ್ಯದ ಕಾಂಗ್ರೆಸ್ ಪರಿಸ್ಥಿತಿಯ ಚಿತ್ರಣವನ್ನು ಅಕ್ಷರ ಮಾಧ್ಯಮದ ಮೂಲಕ ಪ್ರಸ್ತುತಪಡಿಸಲಾಗಿದೆ. ಹತ್ತು ವರ್ಷದ ಕೇಂದ್ರ ಸರ್ಕಾರ ಹತ್ತು ತಲೆ ರಾವಣನ ಸಂಹಾರ ಎಂಬಂತಿದ್ದು- ಈ ಸಾರಿಯ ರಾಷ್ಟ್ರೀಯ ಹೊಡೆತ ಹೇಗಿತ್ತೆಂದರೆ ಅಮೃತಾಂಜನ, ಜಂಡೂಬಾಮ್, ಅಯೋಡೆಕ್ಸ್, ಮೂವ್ನಂತಹ ನೋವು ನಿವಾರಕಗಳೂ ಉಪಶಮನಗೊಳಿಸಲಾಗಲಿಲ್ಲ. ರಾಷ್ಟ್ರಮಟ್ಟದಲ್ಲಿ ಗೋಣು ಮುರಿದು ಕೊಂಡು ಬಿದ್ದಿರುವ 'ಮಹಾಗಜ' ಚೇತರಿಸಿಕೊಳ್ಳಲು ತುಂಬಾ ಕಾಲಾವಕಾಶವೇ ಬೇಕು.
-ವಿ. ಹೇಮಂತಕುಮಾರ್, ಬೆಂಗಳೂರು, ಮೊ. 990 1739 104
ದಿನಾಂಕ 17ರ ಕ.ಪ್ರ. ನೋಡಿ ಮೈಯೆಲ್ಲಾ ರೋಮಾಂಚನವಾಯಿತು. ಎಂಥಾ ಅದ್ಭುತ ಕ್ರಿಯಾಶೀಲತೆ, ಅಪ್ರತಿಮ ಪುಟ ಚಿತ್ತಾರ! ನನಗನ್ನಿಸಿದಂತೆ, ಬಹುಷಃ ಬಿಜೆಪಿ ಮೈತ್ರಿಕೂಟದ ದಾಖಲೆಯ ಫಲಿತಾಂಶ ನೋಡಿ ಯುಪಿಎ ಹಾಗೂ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿ ಹೊಟ್ಟೆಯೊಳಗೆ ಕಲಸುಮೇಲೋಗವಾಗುತ್ತಿರುವ ಅನುಭವವಾದಂತೆ ಕ.ಪ್ರ.ದ ಪುಟ ವಿನ್ಯಾಸ ಇತ್ಯಾದಿ ನೋಡಿ ಪ್ರತಿಸ್ಪರ್ಧಿಗೂ ಹಾಗೇ ಅನ್ನಿಸಿರಬಹುದೆಂದು ನನ್ನ ವಿಚಾರ.
-ವಿಜಯಾ ವ. ಡೋಂಗ್ರೆ, ಕೊಪ್ಪ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

