ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಪ್ಪಿಕೊಳ್ಳುವರೇ ಮೋದಿ?

2012ರಲ್ಲಿ ಕೆಲ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳ ಜೊತೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಅರ್ಧ ಗಂಟೆಗಳ ಕಾಲ ಭೇಟಿಯಾಗುವ ಸಂದರ್ಭ ಒದಗಿ ಬಂದಿತ್ತು. ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ನಮ್ಮೊಡನೆ ಜೈವಿಕ ತಂತ್ರಜ್ಞಾನದ ಬಗ್ಗೆ ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಕೂಲಂಕಷವಾಗಿ ಪ್ರಸ್ತಾಪಿಸಿದರು. ಆದಾಗಲೇ ನರೇಂದ್ರ ಮೋದಿಯವರು ಬಿಟಿ ಹತ್ತಿಯಿಂದ ಗುಜರಾತ್ ರೈತರುಗಳಿಗೆ ಆಗಿರುವ ಲಾಭಗಳ ಬಗ್ಗೆ ಸುಮಾರು ಆರು ಅಧಿಕೃತ ವರದಿಗಳನ್ನು ಓದಿಕೊಂಡಿದ್ದರು ಮತ್ತು ಖುದ್ದಾಗಿ ಬಿಟಿ ಹತ್ತಿ ಹೊಲಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿ, ನಂತರ ಗುಜರಾತ್ ಕೃಷಿಯ ಬಗ್ಗೆ ವಿವಿಧ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದು 2002ರಲ್ಲಿ, ಆಶ್ಚರ್ಯಕರ ಸಂಗತಿ ಎಂದರೆ ಅದೇ ವರ್ಷ ಅಲ್ಲಿ ಬಿಟಿ ಹತ್ತಿ ಬೆಳೆಯಲು ಭಾರತ ಸರ್ಕಾರ ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲಿ ಅನುಮತಿ ನೀಡಿತ್ತು. ಅಂದರೆ, ಭಾರತದಲ್ಲಿ ಎಷ್ಟು ವರ್ಷದಿಂದ ವಂಶಾಂತರಿ ತಳಿಗಳು ಬೆಳೆಯಲ್ಪಡುತ್ತಿದ್ದವೋ ಅಷ್ಟು ವರ್ಷದಿಂದ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬಿಟಿ ಹತ್ತಿ ಬೆಳೆಯುವಾಗ ಗುಜರಾತ್ನಲ್ಲಿ ಒಂದು ಕಠಿಣ ಸಂದರ್ಭವೇ ಏರ್ಪಟ್ಟಿತ್ತು. ಕುಲಾಂತರಿ ಬೆಳೆಗಳನ್ನು ಬೆಳೆಯಲು ಭಾರತ ಸರ್ಕಾರದಿಂದ ಅನುಮತಿ ದೊರೆವುದಕ್ಕಿಂತಮೂರು ವರ್ಷ ಹಿಂದಿನಿಂದಲೇ ಗುಜರಾತ್ ರೈತರು ಬಿಟಿ ಹತ್ತಿ ಬೆಳೆಯುತ್ತಿದ್ದರು ಮತ್ತು ಅದರಿಂದ ಅಧಿಕ ಲಾಭ ಕೂಡ ಬರುತ್ತಿತ್ತು. ಇದು ಅನಧಿಕೃತ ಬಿಟಿ ಹತ್ತಿ ಬೆಳೆ ಎಂದು ಅರಿವಾದಾಗ, ಭಾರತ ಸರ್ಕಾರ ಎಚ್ಚೆತ್ತುಕೊಂಡು ಸಂಪೂರ್ಣವಾಗಿ ಬಿಟಿ ಹತ್ತಿಯನ್ನು ಸುಡಬೇಕೆಂದು ಗುಜರಾತ್ಗೆ ಆಜ್ಞೆ ಹೊರಡಿಸಿತು. ದೆಹಲಿಯಿಂದ ಇನ್ಸ್ಪೆಕ್ಟರ್ಗಳು ಬಂದಿಳಿದು ಬೆಳೆಯನ್ನು ಸುಡುವುದಕ್ಕೆ ಮುಂದಾದರು. ಆಗ ಗುಜರಾತಿನ ಕೃಷಿ ಮಂತ್ರಿಗಳು ಬಿಟಿ ಹತ್ತಿಯ ಬೀಜಕ್ಕೆ ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ಘೋಷಿಸಿಬಿಟ್ಟರು. ಅದು ನಿಜವೂ ಆಗಿತ್ತು. ಹಾಗಾಗಿ ಗುಜರಾತ್ನ ಹತ್ತಿ ಬೆಳೆಗಾರರು ದೆಹಲಿಯಿಂದ ಬಂದ ಇನ್ಸ್ಪೆಕ್ಟರ್ಗಳಿಗೆ "ತಮ್ಮ ಹೊಲಕ್ಕೆ ಕಾಲಿಟ್ಟರೆ ಕಾಲು ಮುರಿಯುತ್ತೇವೆಂದು" ಧಮಕಿ ಹಾಕಿದರು. ಬಂದ ದಾರಿಗೆ ಸುಂಕವಿಲ್ಲವೆಂದು ಅರಿತ ಪೊಲೀಸರು ಕಂಬಿ ಕಿತ್ತರು. ಈ ಘಟನೆ ನಡೆದ ಒಂದು ತಿಂಗಳಲ್ಲಿ
ಬಿಟಿ ಹತ್ತಿಯನ್ನು ದೇಶಾದ್ಯಂತ ಬೆಳೆಯಲು ಭಾರತ ಸರ್ಕಾರ ಅನುಮತಿ ನೀಡಿತು. ಇಲ್ಲದೇ ಹೋಗಿದ್ದರೆ ಅನುಮತಿ ನೀಡುವುದಕ್ಕೆ ಅದು ಇನ್ನೆಷ್ಟು ವರ್ಷ ಮೀನಮೇಷ ಎಣಿಸುತ್ತಿತ್ತೋ?! ಆ ಹೊತ್ತಿಗೆ ಬಿಟಿ ಹತ್ತಿಯ ಪ್ರಯೋಗ ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಸುಮಾರು ಎಂಟು ವರ್ಷಗಳ ಕಾಲ ಭಾರತ ಪರಿಸರ ಮಂತ್ರಾಲಯ ಅಳೆದು -ಸುರಿದೂ ಅನುಮತಿ ನೀಡದೆ ಕಾಲಹರಣ ಮಾಡುತ್ತಿತ್ತು. ಅಂದರೆ ಭಾರತದಲ್ಲಿ ಮೊದಲು ಅಕ್ರಮವಾಗಿ ಕೆಲಸ ಆರಂಭಿಸುವುದು ನಂತರ ಸರ್ಕಾರ ಎಚ್ಚೆತ್ತುಕೊಂಡು ಅಕ್ರಮವನ್ನು ಸಕ್ರಮವಾಗಿಸುವುದು ಹಿಂದಿನಿಂದ ಬಂದ ಚಾಳಿ. ಇದನ್ನೆಲ್ಲ ಏಕೆ ಹೇಳಬೇಕಾಯಿತೆಂದರೆ, ನರೇಂದ್ರ ಮೋದಿಯವರು, ಗುಜರಾತ್ ಸರ್ಕಾರದಲ್ಲಿದ್ದಾಗ ಅತ್ಯಂತ ಆಧುನಿಕ ತಂತ್ರಜ್ಞಾನದಿಂದ ಆವಿಷ್ಕರಿಸಲ್ಪಟ್ಟ ಬಿಟಿ ಹತ್ತಿ ಬೀಜವನ್ನು ಭಾರತದ ರೈತರಿಗೆ ತಲುಪಿಸುವುದರಲ್ಲಿ ಪರೋಕ್ಷವಾಗಿ ಕಾರಣರಾದರು ಎಂದು ಯಾವ ಅಳಕೂ ಇಲ್ಲದೇ ಹೇಳಬಹುದು.
ನಾವು ಮೋದಿಯವರನ್ನು ಭೇಟಿ ಮಾಡಿದಾಗ ಅವರು ಹೇಳಿದ್ದೇನೆಂದರೆ: "ನನ್ನ ಬಳಿ ಬಿಟಿ ಹತ್ತಿ ಯಶಸ್ಸಿನ ಬಗ್ಗೆ ಸಕಲ ಮಾಹಿತಿಗಳಿವೆ. ಅದನ್ನು ಬಿಟ್ಟು ಬೇರೆ ಯಾವ ಜೈವಿಕ ತಂತ್ರಜ್ಞಾನದ ಆವಿಷ್ಕಾರಗಳು ಇವೆ ಮತ್ತು ಅವುಗಳಿಂದ ಗುಜರಾತಿನ ರೈತರಿಗೆ ಯಾವ ರೀತಿ ಲಾಭವಾಗುತ್ತದೆ ಎನ್ನುವ ಮಾಹಿತಿಯನ್ನು ನನ್ನ ಮೇಜಿನ ಮೇಲಿಡಿ" ಎಂದರು. ಆವಾಗ ನಾವೆಲ್ಲ ಕೊಂಚ ತಬ್ಬಿಬ್ಬಾದದ್ದು ನಿಜ. ಆಮೇಲೆ ಜೈವಿಕ ತಂತ್ರಜ್ಞಾನದಿಂದ ತಯಾರಾಗಿ, ಪರೀಕ್ಷಾವಧಿಯಲ್ಲಿರುವ ಬೀಜಗಳ ಪಟ್ಟಿಯನ್ನೇ ನೀಡಿದೆವು. ಪಟ್ಟಿಯನ್ನು ನೋಡುತ್ತಾ ಇವುಗಳಲ್ಲಿ ಲನಾಳೆ ಬೆಳೆಯನ್ನು ನಮ್ಮ ರೈತರುಗಳಿಗೆ ಕೊಡಲು ಸಾಧ್ಯವೇ ಎಂದು ಕೇಳಿದರು. ಆದರೆ ಅದು ಸಾಧ್ಯವಿರಲಿಲ್ಲ. ಏಕೆಂದರೆ ಅವೆಲ್ಲವೂ ಕೇಂದ್ರ ಪರಿಸರ ಮಂತ್ರಾಲಯದ ಕಪಿಮುಷ್ಠಿಯಲ್ಲಿದ್ದವು. ಅದನ್ನೇ ಅವರಿಗೂ ಹೇಳಿದೆವು. ನಮ್ಮ ಮಾತು ಕೇಳಿ ಮೋದಿ ನಸುನಕ್ಕರು. ಕೊನೆಗೆ, ಅವರು ಅಂದದ್ದೇನೆಂದರೆ, "ಗುಜರಾತ್ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಯಾವುದೇ ತಂತ್ರಜ್ಞಾನವಿರಲಿ ಅದನ್ನು ಕಾರ್ಯಗತ ಮಾಡುತ್ತೇವೆ. ಕೇಂದ್ರದ ಯಾವುದೇ ಮಂತ್ರಾಲಯಗಳು ಅಡ್ಡಿಪಡಿಸಿದರೆ ಅದನ್ನು ನಾನೇ ಖುದ್ದಾಗಿ ವಿಚಾರಿಸಿಕೊಳ್ಳುತ್ತೇನೆ" ಎಂದರು. ಆಗ ನಾನವರಿಗೆ "ಕೇಂದ್ರ ಸರ್ಕಾರವೂ ಕುಲಾಂತರಿ ತಂತ್ರಜ್ಞಾನವನ್ನು ಪ್ರೋತ್ಸಾಹಿಸುತ್ತದೆ. ಆದರೆ ಪರಿಸರವಾದಿಗಳ ಭಯದಿಂದ ಅದು ಕೈ ಕಟ್ಟಿ ಕುಳಿತಿದೆ" ಎಂದೆ. ಕೂಡಲೇ ಮೋದಿಯವರು ಹೇಳಿದರು: "ನನಗೆ ಈ ಪರಿಸರವಾದಿಗಳಿಂದ ಆಗಬೇಕಾದದ್ದೂ ಏನೂ ಇಲ್ಲ ಮತ್ತು ಅವರುಗಳನ್ನು ಹತ್ತಿಕ್ಕುವ ವಿಧಾನ ನನಗೆ ಗೊತ್ತಿದೆ. ನೀವು (ವಿಜ್ಞಾನಿಗಳು) ತಂತ್ರಜ್ಞಾನದ ಉತ್ಪನ್ನಗಳನ್ನು ನನಗೆ ತಂದುಕೊಡಿ ಎಂದು ಹೇಳಿ ನಮ್ಮನ್ನು ಬೀಳ್ಕೊಡುತ್ತಾ ಬಾಗಿಲವರೆಗೆ ಎದ್ದು ಬಂದು "ಗುಜರಾತ್ ರಾಜ್ಯಕ್ಕೆ ನೂರಾರು ಮೈಲಿಯಷ್ಟು ಸಮುದ್ರದ ಸೀಮೆ ಇದೆ. ನನಗೆ ಮರೀನ್ ಬಯೋಟೆಕ್ನಾಲಜಿಯ ಆವಿಷ್ಕಾರಗಳನ್ನು ತಂದು ಕೊಡಿ" ಎನ್ನುತ್ತಾ ಕಳುಹಿಸಿಕೊಟ್ಟರು. ಅವರಲ್ಲಿರುವ ಅಭಿವೃದ್ಧಿಯ ಕುರಿತ ಜ್ಞಾನ ಬೇರೆ ಯಾವ ರಾಜಕಾರಣಿಯಲ್ಲೂ ನಾನು ಕಂಡಿಲ್ಲ. 21ನೇ ಶತಮಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂಬುದು ಸತ್ಯಸಂಗತಿ. ಮೋದಿಯವರಿಗೆ ಬಿಟಿ ಬದನೆಕಾಯಿಯ ಬಗ್ಗೆ ತಿಳಿವಳಿಕೆ ಇತ್ತು. ತಮ್ಮ ರಾಜ್ಯಕ್ಕೆ ಬಿಟಿ ಬದನೆ ಕೊಡಿ ಎಂದು ಅಂದಿನ ಕೇಂದ್ರ ಪರಿಸರ ಮಂತ್ರಿ ಜೈರಾಮ್ ರಮೇಶ್ಗೆ ಕಾಗದ ಸಹ ಬರೆದಿದ್ದರು. ಆದರೆ ಜೈರಾಮ್ ರಮೇಶ್ ಅವರು ಕಳೆದ ವರ್ಷ ದೆಹಲಿಯ ನೆಹರು ಮ್ಯೂಸಿಯಂನಲ್ಲಿ ನಡೆದ ಒಂದು ಸೆಮಿನಾರ್ನಲ್ಲಿ, "ನರೇಂದ್ರ ಮೋದಿಯವರ ಸದಭಿಪ್ರಾಯವಿಲ್ಲದ ಕಾರಣ ಬಿಟಿ ಬದನೆಗೆ ನಿರ್ಬಂಧ ಹೇರಬೇಕಾಯಿತು" ಎಂದು ಸುಳ್ಳು ಹೇಳಿದರು! ಈ ವಿಷಯವನ್ನು ಆ ಸೆಮಿನಾರ್ನ ಮುಖ್ಯ ಭಾಷಣಕಾರ ಕಾರ್ನೆಟ್ ವಿ.ವಿ. ಪ್ರಾಧ್ಯಾಪಕ ಡಾ. ರಾನ್ ಹೆರಿಂಗ್ ನನಗೆ ತಿಳಿಸಿದರು. ಅಲ್ಲದೇ ಜೈರಾಮ್ ರಮೇಶ್ ಅವರಿಗೆ ರಾನ್ ಹೆರಿಂಗ್ "ನಿಮ್ಮ ಮಾತು ಸುಳ್ಳು. ಏಕೆಂದರೆ ಗುಜರಾತ್ ರಾಜ್ಯದ ಕಾಗದದ ಪ್ರತಿ ನನ್ನಲ್ಲಿದೆ" ಎಂದು ನೇರವಾಗಿ ಹೇಳಿದರಂತೆ! ಒಂದು ಮಾತಂತೂ ನಿಜ, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಯದಲ್ಲಿ ಸ್ಪಷ್ಟ ಮಾಹಿತಿ ಆಧಾರವುಳ್ಳ ನಿಲುವನ್ನು ನರೇಂದ್ರ ಮೋದಿಯವರ ಮಂತ್ರಿಮಂಡಲ ತೆಗೆದುಕೊಳ್ಳುವುದೆಂದು ಹೇಳಬಲ್ಲೆ. ಮತ್ತೊಂದು ಮುಖ್ಯ ವಿಷಯವೇನೆಂದರೆ, ಇನ್ಮುಂದೆ ಪರಿಸರವಾದಿಗಳಿಗೆ ಅಂತಾರಾಷ್ಟ್ರೀಯ ಕುಹಕಿಗಳೊಡಗೂಡಿ ವೈಜ್ಞಾನಿಕಧಾರವಿಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿರೋಧಿಸುವ, ಆ ಮೂಲಕ ದೇಶದ ಪ್ರಗತಿಗೆ ಅಡ್ಡ ಬರುವುದಕ್ಕೆ ಮೋದಿ ಸರ್ಕಾರದಲ್ಲಿ ಸಾಧ್ಯವಾಗುವುದಿಲ್ಲ. ಮೋದಿಯವರಿಗೂ ಸಹ ಪರಿಸರ ಕಾಳಜಿ ಇದೆ. ಆದರೆ ಸುಳ್ಳುಪೊಳ್ಳು ಆಧಾರದ ಮೇಲೆ ಯಾರಾದರು ಅಡಚಣೆ ಉಂಟು ಮಾಡಿದರೆ, ಅವರು ಸಹಿಸುವುದಿಲ್ಲ.
- ಡಾ. ಶಾಂತು ಶಾಂತಾರಾಮ್
shanthus@iastate.edu
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


