ಅಂಕಣಗಳು

ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೆಲಕಚ್ಚಿದ್ದೇಕೆ?

ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೆಲಕಚ್ಚಿದ್ದೇಕೆ?
Published On :

ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ರಾಜಕೀಯವಾಗಿ ಅಧಃಪತನವಾಗುತ್ತಿದೆ ಎನ್ನುವ ಸಂದೇಶವನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶಗಳು ಸಾರಿವೆ. ಆ ಪಕ್ಷಕ್ಕೆ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಸಿಕ್ಕ ಸಂದೇಶವೆಂದರೆ, ಅದು ತನ್ನ ಕಾಶ್ಮೀರ ಕಣಿವೆ ಕೇಂದ್ರಿತ ನೀತಿ ಮತ್ತು ನಡೆಗಳಿಂದಾಗಿಯೇ ಇಂದು ಈ ಪರಿಸ್ಥಿತಿಗೆ ಬಂದು ನಿಂತಿದೆಯೆಂಬುದು. 1951ರಲ್ಲಿ ಜಮ್ಮು ಮತ್ತು ಕಾಶ್ಮೀರದ ಬಹುದೊಡ್ಡ ಧ್ವನಿಯಾಗಿದ್ದ ನ್ಯಾಷನಲ್ ಕಾನ್‌ಫರೆನ್ಸ್ ಈಗ ಉಪಪ್ರಾದೇಶಿಕ ಪಕ್ಷವಾಗಿ, ಕಾಶ್ಮೀರ ಕಣಿವೆಯ ಜನರಿಂದಲೂ(ಅತಿ ಚಿಕ್ಕ ಪ್ರದೇಶ) ನಿರಾಕರಿಸಲ್ಪಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಪಕ್ಷಗಳ ಮತ ಗಳಿಕೆ ಪ್ರಮಾಣ- ಬಿಜೆಪಿ(ಶೇ.32.4), ಕಾಂಗ್ರೆಸ್(ಶೇ.22.9), ಪಿಡಿಪಿ (ಶೇ.20.5) ಗಿಂತಲೂ ಹಿಂದಿದೆ. ಎನ್‌ಸಿ ಮತಪಾಲು ಕೇವಲ 11.1 ಪ್ರತಿಶತದಷ್ಟಿದೆ. ಎನ್‌ಸಿ ಮತ್ತು ಕಾಂಗ್ರೆಸ್ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಎರಡಕ್ಕೂ ಸೇರಿ ಬಿಜೆಪಿಯಷ್ಟೇ ಪ್ರಮಾಣದ ಮತಗಳಿಸಲು ಸಾಧ್ಯವಾಯಿತು!  
ಜಮ್ಮು ಮತ್ತು ಕಾಶ್ಮೀರದ ಕುರಿತ ಹೊರಗಿನವರ ಗ್ರಹಿಕೆಯನ್ನು ಈ ಫಲಿತಾಂಶ ಬದಲಿಸಲಿದೆ. ಇದುವರೆಗೂ ದೆಹಲಿಯಲ್ಲಿ ಕಾರೋಬಾರ್ ನಡೆಸಿದ ವ್ಯಾಖ್ಯಾನಕಾರರು, ಅಭಿಪ್ರಾಯ ನಿರೂಪಕರು, ರಾಜಕೀಯ ವಿಶ್ಲೇಷಕರು, ಕಾಶ್ಮೀರ ಕಣಿವೆಯ ಕೆಲ ನಾಯಕರು ನೀಡುವ ಸಲಹೆಗಳು, ಅವರ ಬೇಡಿಕೆಗಳು ಮತ್ತು ಒಡ್ಡಿದ ಸವಾಲುಗಳನ್ನೇ  ಜಮ್ಮು ಕಾಶ್ಮೀರ ರಾಜ್ಯದ ಒಟ್ಟಾರೆ ಅಭಿಪ್ರಾಯ ಎಂದು ಭಾವಿಸುತ್ತಿದ್ದರು. ಈಗ ಆ ರಾಜ್ಯದ ಕುರಿತ ಜಗತ್ತಿನ ಅಭಿಪ್ರಾಯವೂ ಸರಿಯಾಗಲಿದೆ ಮತ್ತು ಒಂದು ವೇಳೆ ಅದು ಸರಿಯಾಯಿತೆಂದರೆ, ಜಮ್ಮು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ದುಡಿಯುತ್ತಿರುವವರ ಶ್ರಮಕ್ಕೂ ಯಶಸ್ಸು ಸಿಗುತ್ತದೆ. ಕಡೇಪಕ್ಷ ದೆಹಲಿಯಾದರೂ ಅಂಥ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕಿದೆ.
ನಿಶ್ಚಿತವಾಗಿಯೂ ಪಾಕಿಸ್ತಾನಕ್ಕಂತೂ ಈ ಚುನಾವಣೆಯ ಫಲಿತಾಂಶಗಳು ನೇರವಾಗಿ ಯಾವುದೇ ಪರಿಣಾಮ ಬೀರವು. ಆದರೆ ಕಾಶ್ಮೀರ ಕಣಿವೆಯೊಂದೇ ಜಮ್ಮು ಕಾಶ್ಮೀರದ ಏಕೈಕ ಚಹರೆ ಎನ್ನುವ ಪ್ರಪಂಚದ ಪರಿಕಲ್ಪನೆಯನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಬದಲಿಸಲಿದೆ ಮತ್ತು ಅದೀಗ 'ಭಾರತದ ಜಮ್ಮು ಕಾಶ್ಮೀರ" ಎಂಬ ಹೊಸ ರೂಪ ಪಡೆಯಬಹುದು.
ಸ್ಪಷ್ಟವಾದ ಸ್ಥಳೀಯ ರಾಜಕೀಯ ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತಿರುವ ಜಮ್ಮು ಮತ್ತು ಕಾಶ್ಮೀರದ ಮೂರು ವಿಶಿಷ್ಟ ಪ್ರದೇಶಗಳ ಚಿತ್ರಣವನ್ನು ನೋಡುವುದು ಸಮಂಜಸವಾದೀತು. ಲದಾಖ್ ಮತ್ತು ಜಮ್ಮು ಪ್ರದೇಶಗಳು ನ್ಯಾಷನಲ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಜೋಡಿಯನ್ನು ಸಂಪೂರ್ಣವಾಗಿ ನಿರಾಕರಿಸಿ ಬಿಜೆಪಿಯತ್ತ ವಾಲಿವೆ. ಆ ರಾಜ್ಯದ ವ್ಯವಹಾರಗಳ ಬಗ್ಗೆ ಹಿಂಬಾಗಿಲ ಮೂಲಕ ತಿಳಿದುಕೊಳ್ಳುತ್ತಿದ್ದವರಿಗೆ ಈ ಫಲಿತಾಂಶದಿಂದ ಸ್ಪಷ್ಟ ಸಂದೇಶ ಸಿಕ್ಕಿದೆ. ಇನ್ನು ಕಾಶ್ಮೀರ ಕಣಿವೆಯೂ ಕೂಡ ನ್ಯಾಶನಲ್ ಕಾನ್ಫರೆನ್ಸ್ ಅನ್ನು ಕೈ ಬಿಟ್ಟು ಪಿಡಿಪಿಯ ಭುಜ ಹಿಡಿದಿರುವುದೂ 'ಪರಿಹಾರ ಹುಡುಕುತ್ತಿರುವವರಿಗೆ' ಪಾಠ ಕಲಿಸಿದೆ.
2014ರ ಚುನಾವಣೆಯಲ್ಲಿ ಎನ್‌ಸಿ ಪಕ್ಷದ ನಿಲುವು ಬಹುತೇಕರನ್ನು ದಂಗುಬಡಿಸಿತ್ತು. ಅದರ ಹಿರಿಯ ನಾಯಕರು, ಕಾಶ್ಮೀರದ ಪ್ರತ್ಯೇಕತಾವಾದಿಗಳ ಧಾಟಿಯಲ್ಲೇ ಮಾತನಾಡಿದ್ದರು. ಆ ಸಮಯದಲ್ಲಿ ಆ ಪಕ್ಷ ಅಧಿಕಾರದಲ್ಲಿತ್ತು ಮತ್ತು ಕೇಂದ್ರ ಕ್ಯಾಬಿನೆಟ್‌ನಲ್ಲಿ ಒಬ್ಬ ಸಚಿವನನ್ನೂ ಹೊಂದಿತ್ತು! ಇವೆಲ್ಲವನ್ನೂ ನೋಡಿದಾಗ, ವರ್ಷಗಳಿಂದ ಕಾಶ್ಮೀರ ಕಣಿವೆಯಲ್ಲಿ ಕುಣಿದಾಡುತ್ತಿದ್ದ ಪ್ರತ್ಯೇಕತಾವಾದಿಗಳ ಅಭಿಪ್ರಾಯ ಮತ್ತು ಭಾರತ ವಿರೋಧಿ ಚಟುವಟಿಕೆಗಳಿಗೆ ಆಡಳಿತ ಪಕ್ಷಗಳು ಕಡಿವಾಣ ಹಾಕುವ ಪ್ರಯತ್ನವನ್ನೇ ಮಾಡಲಿಲ್ಲವೇ ಎನ್ನುವ ಅನುಮಾನ ಕಾಡುತ್ತದೆ. ಬದಲಾಗಿ, ಜಮ್ಮು ಕಾಶ್ಮೀರ ಕುರಿತಾದ ಕೆಲವು ಅಂಶಗಳನ್ನು(ಆರ್ಟಿಕಲ್-370, ಧ್ವಜ, ಸಂವಿಧಾನ ಇತ್ಯಾದಿ) ತಪ್ಪಾಗಿ ಸ್ಥಳೀಯರು ಮತ್ತು ಜಗತ್ತಿನೆದುರು ತೆರೆದಿಟ್ಟು, ಆ ಅಂಶಗಳನ್ನೇ ಭಾರತದಿಂದ ದೂರವಾಗುವ ಚಿಹ್ನೆಯನ್ನಾಗಿ ಬಿಂಬಿಸಲಾಯಿತು. ಜಮ್ಮು ಕಾಶ್ಮೀರದ ಜನರ ದುರ್ದೈವವೆಂಬಂತೆ, ಭಾರತದ ನಾಯಕರೂ ಕೂಡ(ಸರ್ಕಾರದಲ್ಲಿದ್ದವರು) ಕಾಶ್ಮೀರ ಕಣಿವೆ ಕೇಂದ್ರಿತ ಅಭಿಪ್ರಾಯಗಳಿಗೇ ಗಂಟುಬಿದ್ದರು.  
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರಂಥ ಮುಖ್ಯವಾಹಿನಿ ನಾಯಕ, "ಅನ್ಯ ರಾಜ್ಯಗಳಂತೆ ಜಮ್ಮು ಮತ್ತು ಕಾಶ್ಮೀರ ಭಾರತದೊಂದಿಗೆ ಬೆರೆತಿಲ್ಲ" ಎಂದು ತಪ್ಪು ವ್ಯಾಖ್ಯಾನ ಮಾಡಿದರೂ ಅದನ್ನು ಸರಿಪಡಿಸುವ ಕೆಲಸವನ್ನು ಕೇಂದ್ರದಲ್ಲಿರುವವರು ಮಾಡಲಿಲ್ಲ. ಈ ರೀತಿಯ ಹಳಿ ತಪ್ಪಿಸುವ ಹೇಳಿಕೆಗಳಿಂದ ದೂರ ಉಳಿಯಿರೆಂದು ರಾಜ್ಯ ನಾಯಕರಿಗೆ ಸಲಹೆ ನೀಡುವ ಕೆಲಸವೂ ಆಗಲಿಲ್ಲ. ಇದೆಲ್ಲದರ ಫಲವಾಗೇ 2014ರ ಚುನಾವಣೆಯಲ್ಲಿ ಪಿಡಿಪಿಯನ್ನು ಎದುರಿಸಲು ಎನ್‌ಸಿ ಈ ಹಾದಿಯನ್ನು ಹಿಡಿಯಿತು. ಅದರಲ್ಲೂ ಡಾ. ಫಾರೂಕ್ ಅಬ್ದುಲ್ಲಾ(ಹೆಚ್ಚು ನಷ್ಟ ಅನುಭವಿಸಿದ್ದೂ ಅವರೇ) ಈ ಮಾರ್ಗದಲ್ಲಿ ನಡೆಯುತ್ತಾರೆಂದು ಯಾರೂ ಊಹಿಸಿರಲಿಲ್ಲ.
ಆದರೆ ಈ ಚುನಾವಣೆಯ ಫಲಿತಾಂಶಗಳಿಂದ ಕೆಲವು 'ಮಹತ್ವದ ಆಲೋಚನೆಯನ್ನೂ' ಮತದಾರ ನ್ಯಾಷನಲ್ ಕಾನ್ಫರೆನ್ಸಿಗೆ ಕಳುಹಿಸಿದ್ದಾನೆ. ಭಾರತದೊಂದಿಗೆ 'ಅಂತರವಿಟ್ಟುಕೊಳ್ಳುವ' ಅಥವಾ 'ಬೆರೆಯದಿರುವ' ನಿಲುವಿನಿಂದ ಈಗ ಅಲ್ಲಿನ ಮುಗ್ಧ ಜನರ ಓಲೈಕೆ ಸಾಧ್ಯವಿಲ್ಲ! ಅದು "ಕಾಶ್ಮೀರಿಗಳ ಆಕಾಂಕ್ಷೆಗಳನ್ನು ಕಾಪಾಡುವವರು" ಎಂಬ ಹಣೆಪಟ್ಟಿ ಹಚ್ಚಿಕೊಂಡ ಕೆಲವು ಸ್ಥಳೀಯ ನಾಯಕರಿಗೆ ಖುಷಿ ಕೊಡಬಹುದಷ್ಟೆ.  
ನ್ಯಾಷನಲ್ ಕಾನ್ಫರೆನ್ಸ್ ಕೇವಲ ಕಾಶ್ಮೀರ ಕಣಿವೆಯತ್ತಲಷ್ಟೇ ಗಮನ ಹರಿಸುವುದನ್ನು ಬಿಟ್ಟು, ಜಮ್ಮು ಮತ್ತು ಲದಾಖ್ ಭಾಗಗಳನ್ನು ಮತ್ತೆ ಕಟ್ಟುವ ಹೊಸ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲದಿದ್ದರೆ ಆ ಪಕ್ಷಕ್ಕೆ ಉಳಿಗಾಲವಿಲ್ಲ.

=  ದಯಾ ಸಾಗರ್
ಸಾಮಾಜಿಕ ಕಾರ್ಯಕರ್ತರು ಹಾಗೂ ಜಮ್ಮು-ಕಾಶ್ಮೀರ ವಿದ್ಯಮಾನಗಳ ವಿಶ್ಲೇಷಕರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.