ಅಂಕಣಗಳು

ಸತ್ಯ ಹೇಳಿದರೆ ಸಿಟ್ಟಾಗುವುದೇಕೆ?

Published On :

ಮೇ 23ರ ಸಂಚಿಕೆಯಲ್ಲಿ ಪ್ರಕಟವಾಗಿರುವ, ಅಗ್ನಿಶ್ರೀಧರ್ ಅವರ ಲೇಖನ 'ಮೋದಿ: ಹಳಿ ತಪ್ಪಿದ ಭಾರತ' ಈಚಿನ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ಲೇಖನ. ಸಮರ್ಥವೂ, ವಿಚಾರಶೀಲವೂ, ವಸ್ತುನಿಷ್ಠವೂ, ಪ್ರೌಢವೂ, ಪ್ರಾಮಾಣಿಕವೂ ಆಗಿರುವ ಆ ಲೇಖನವು ನರೇಂದ್ರ ಮೋದಿಯವರ ವಿಜಯಪಥಕ್ರಮಣವನ್ನು ಕೇಂದ್ರವಾಗಿಟ್ಟುಕೊಂಡು ಅವಲೋಕಿಸಿ ವಿಶ್ಲೇಷಿಸಿದೆಯಲ್ಲದೆ ಆ ಮನಃಸ್ಥಿತಿಯ ವಿಕಲ್ಪಗಳಿಗೆ ತಮ್ಮ ಕೊಡುಗೆ ನೀಡಿದ ಹಲವು ವರ್ಗಗಳ ಸ್ವಭಾವ ಕಥನವನ್ನು (ಡೈಅಗ್ನೋಸಿಸ್ ಅನ್ನು) ಮನಮುಟ್ಟುವಂತೆ ಮಾಡಿದೆ.
ಶ್ರೀಧರರ ಕೆಲವು ಹೇಳಿಕೆಗಳು ಚರ್ಚಾರ್ಹವಾಗಿದ್ದರೂ ಲೇಖನದ ಆಶಯಕ್ಕೆ ಆ ಹೇಳಿಕೆಗಳಿಂದ ಕುಂದುಂಟಾಗಿಲ್ಲ. 'ಕನ್ನಡಪ್ರಭ'ದಲ್ಲಿ ಇನ್ನೂ ಆ ಲೇಖನವನ್ನು ಓದಿರದವರಿದ್ದರೆ ಅಂತರ್ಜಾಲ ಆವೃತ್ತಿಯಲ್ಲಿ ಓದಬಹುದು.
-ಎಚ್. ಆನಂದರಾಮಶಾಸ್ತ್ರಿ, ಬೆಂಗಳೂರು, 810 500 3369

 ಮೇ 25ರ ಖುಷಿ ಸಾಪ್ತಾಹಿಕ ಓದುತ್ತಿದ್ದಂತೆ ತುಂಬಾ ಖುಷಿಯಾಯಿತು. ಹಲವು ಅಂಕಣಗಳಿಗೆ ವಿರಾಮ ಕೊಟ್ಟು ಪ್ರಧಾನಿ ಮೋದಿಯವರಿಗೇ ಸಿಂಹಪಾಲು ಕೊಟ್ಟಂತಹ ಲೇಖನಗಳು ಸಂಗ್ರಹ ಯೋಗ್ಯವೆನಿಸಿ ಮೋದಿ ನೆಲದಲ್ಲಿ ಓಡಾಡಿದಂತಾಯಿತು. ಗುಜರಾತ್‌ನಲ್ಲಿರುವ ಸಿಟಿ ಬಸ್ ಸೌಲಭ್ಯ, ಮನೆ ಮನೆಯೂ ವ್ಯಾಪಾರ ಕೇಂದ್ರ, ಪವರ್‌ಕಟ್ ಕಾಣದ, 'ಇವತ್ತು ನೀರಿಲ್ಲ' ಅಂತ ಪತ್ರಿಕಾ ಪ್ರಕಟಣೆ ಇಲ್ಲದ, ಘೋರ ಭೂಕಂಪವಾದರೂ ಆ ಗುರುತನ್ನೆಲ್ಲ ಅಭಿವೃದ್ಧಿಯ ಮೇಕಪ್‌ನಿಂದ ಮುಚ್ಚಿಕೊಂಡ ಗುಜರಾತ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಲ್ಲೂ ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ, ಸ್ವತಂತ್ರ ಇರುವ ಸನ್ನಿವೇಶ ಇದೆ.
ಗುಜರಾತ್ ಒಂದೇ ಬೆಳೆದರೆ ಸಾಲದು. ಇಡೀ ದೇಶ ಗುಜರಾತ್‌ನಂತೆ ಅಭಿವೃದ್ಧಿ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮೋದಿ ಸಾಹೇಬರು ಪ್ರಧಾನಿಯಾಗಿದ್ದಾರೆ. ರಾಮರಾಜ್ಯದ ಕನಸು ನನಸಾಗುವ ಕಾಲ ಹತ್ತಿರದಲ್ಲಿದೆ.
-ವಿ. ಹೇಮಂತಕುಮಾರ್, ಬೆಂಗಳೂರು, 9035 992900

ಲೋಕಸಭಾ ಚುನಾವಣೆ ಕಾಲದ ಕಳಪೆ ನಿರ್ವಹಣೆಯಿಂದ ಕೈಪಕ್ಷ ದೇಶಾದ್ಯಂತ ಧರಾಶಾಹಿಯಾದ ನಂತರ ಎಚ್ಚೆತ್ತುಕೊಂಡಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ನೀಡಿದ ಖಡಕ್ ಆದೇಶದ ಹಿನ್ನೆಲೆಯಲ್ಲಿ ಮಂತ್ರಿಗಳು ವಿಧಾನಸೌಧದೆಡೆಗೆ ದೌಡಾಯಿಸುತ್ತಿರುವ ದೃಶ್ಯ ಮೋಜಿನದ್ದಾಗಿದೆ. ತಾವು ಕೆಲಸ ಮಾಡುತ್ತಿರುವುದನ್ನು ಪ್ರದರ್ಶಿಸಲು ಸಿದ್ದರಾಮಯ್ಯನವರ ಸುತ್ತ ಗಿರಕಿ ಹೊಡೆಯುತ್ತಿರುವ ಮಂತ್ರಿಗಳು ಬಿಳಿ ನಗೆಯೊಡನೆ ವಿಧಾನಸೌಧ ಸುತ್ತುತ್ತಿರುವುದು ಕನ್ನಡಪ್ರಭದಲ್ಲಿ 24.5.14 ಉತ್ತಮವಾಗಿ ಮೂಡಿಬಂದಿದೆ. ಈ ಎಲ್ಲಾ ಮಂತ್ರಿಗಳು ದೇಶದ ಅಭಿವೃದ್ಧಿಗಾಗಿ ಸಕಲ ತ್ಯಾಗಕ್ಕೂ ಸಿದ್ಧರಾಗಿದ್ದಾರೆಂಬ ಸುದ್ದಿ ಕಚಗುಳಿಯಿಡುತ್ತಿದೆ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬಸವನಗುಡಿ, ಬೆಂಗಳೂರು.

ನಾನು ವಿಶ್ವೇಶ್ವರ ಭಟ್ಟರ ಹಾಗೂ ಪ್ರತಾಪ್ ಸಿಂಹರವರ ಅಂಕಣಗಳ ನಿರಂತರ ಓದುಗಾರ್ತಿ ಹಾಗೂ ಅಭಿಮಾನಿ. ಅದರ ಜೊತೆಗೆ ಕನ್ನಡಪ್ರಭ ಪತ್ರಿಕೆಯ 6 ಮತ್ತು 7ನೇ ಪುಟಗಳನ್ನು ತಪ್ಪದೇ ಓದುತ್ತೇನೆ. ಏಕೆಂದರೆ 6 ಮತ್ತು 7 ಪುಟಗಳು ಕ.ಪ್ರ. ಪತ್ರಿಕೆಯ ಬುದ್ಧಿ ಮತ್ತು ಹೃದಯಗಳಾಗಿವೆ. ತಾವು ತಮ್ಮ ಮಾರ್ಚ್ ತಿಂಗಳ ಅಂಕಣದ ಕೊನೆಗೆ ಪ್ರತಾಹಸಿಂಹರ ಕುರಿತು 'ಐ ಮಿಸ್ ಹಿಮ್‌' ಎಂದಿದ್ದೀರಿ. ಆದರೆ ನೀವು ಅವರನ್ನು ಮಿಸ್ ಮಾಡ್ಕೋತೀನಿ ಅನ್ನಿಸಿದಾಗ ನೀವು ಅವರನ್ನು ಭೇಟಿ ಮಾಡಬಹುದು ಅಥವಾ ಫೋನ್‌ನಲ್ಲಿ ಮಾತನಾಡಬಹುದು. ಆದರೆ ಆ ಅವಕಾಶ ಅವರ ಓದುಗರಿಗೆ ಇರುವುದಿಲ್ಲ. ಏಕೆಂದರೆ ನಾವು ಅವರ ಬರಹಗಳೊಂದಿಗೆ ಬಾಂಧವ್ಯವನ್ನು ಹೊಂದಿದವರು. ಅವರ ಬರಹಗಳು ಪತ್ರಿಕೆಯಲ್ಲಿ ನಿರಂತರವಾಗಿ ನಮಗೆ ಸಿಗುವುದಿಲ್ಲವಾದ್ದರಿಂದ ವಿ ಆರ್ ಮಿಸ್ಸಿಂಗ್ ಹಿಮ್ ವೆರಿ ಮಚ್. ಕೊನೆಗೆ ಪ್ರತಾಪ್ ಸಿಂಹ ಸರ್ ಅವರು ಮೈಸೂರು ಕ್ಷೇತ್ರದಲ್ಲಿ ಎಂ.ಪಿ. ಚುನಾವಣೆಯಲ್ಲಿ ಗೆಲವು ಸಾಧಿಸಿರುವುದಕ್ಕೆ ಅಭಿನಂದನೆಗಳು. ಅವರ ಬರಹಗಳಂತೆಯೇ ಅವರ ಕಾರ್ಯವೂ ಸಹ ಬೇರೆಯವರಿಗೆ ಮಾದರಿಯಾಗುವಂತಹ ಉತ್ತಮೋತ್ತಮ ಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಷ್ಟೇ ಅಲ್ಲ ದೇಶಕ್ಕಾಗಿ ಮಾಡಲಿ. ಪತ್ರಕರ್ತರಾಗಿ ಗಳಿಸಿದ ಅವರ ಜ್ಞಾನ ಮತ್ತು ಅನುಭವಗಳು ಅವರ ಎಲ್ಲ ಒಳ್ಳೆಯ ಕಾರ್ಯಗಳಿಗೆ ಮಾರ್ಗದರ್ಶಿಯಾಗಲಿ ಎಂದು ಹಾರೈಸುತ್ತೇನೆ.
-ಎಂ. ಮಂಜುಳಾ

ಮೇ 25 ರ ಗೋಡೆ ಬರಹದಲ್ಲಿ ಕೆ. ವೀರಣ್ಣ ಎನ್ನುವವರು, ಕನ್ನಡಪ್ರಭ ಪತ್ರಿಕೆಯನ್ನು ಮೋದಿ ಮುಖವಾಣಿ ಎನ್ನುವ ಧಾಟಿಯಲ್ಲಿ ಕರೆದಿದ್ದಾರೆ. ಅಲ್ಲಾ ರೀ, ದೇಶದಲ್ಲಿ ನಡೆದಿರುವ, ನಡೆಯುತ್ತಿರುವ ಸತ್ಯ ಸಂಗತಿಗಳನ್ನು ಜನರಿಗೆ ತೋರಿಸುವುದು ತಪ್ಪಾ? ಯಾವುದು ಸತ್ಯ, ಯಾವುದು ಮಿಥ್ಯ ಅನ್ನೋದನ್ನ ಸಮಾಜಕ್ಕೆ ತಿಳಿಸೋದು ಕೂಡ ಪತ್ರಿಕೋದ್ಯಮದ ಒಂದು ಭಾಗ. ಈ ಕೆಲಸದಲ್ಲಿ ನಾವು ಕನ್ನಡಪ್ರಭಕ್ಕೆ ಋಣಿಯಾಗಿದ್ದೇವೆ. ಏಕೆಂದರೆ ನಮಗೆ ಗೊತ್ತಿರದ ನೂರಾರು ಸತ್ಯ ಸಂಗತಿಗಳನ್ನು ಇವರು ಎಳೆ ಎಳೆಯಾಗಿ ತೋರಿಸಿದ್ದಾರೆ. ಸತ್ಯವನ್ನು ಕೇಳಲು ನಿಮಗೆ ಇಷ್ಟವಿಲ್ಲದಿದ್ದರೆ ದಯವಿಟ್ಟು ಓದಬೇಡಿ. ಪತ್ರಿಕೋದ್ಯಮ ಇರುವುದು ಓದುಗರಿಗೆ ಇಷ್ಟವಾಗುವುದನ್ನು ಪ್ರಕಟಿಸುವುದಕ್ಕಾಗಿ ಅಲ್ಲ, ಸತ್ಯವನ್ನು ಹೇಳುವುದಕ್ಕೆ.
-ವೇಣುಗೋಪಾಲ್. ಕೆ

"ಮೋದಿ ಯುಗಾದಿ" ಎಂಬ ಚಿತ್ತಾಕರ್ಷಕ ಶೀರ್ಷಿಕೆಯೊಂದಿಗೆ ವಿಶಿಷ್ಟ, ಸಂಗ್ರಹಯೋಗ್ಯ ಸಂಚಿಕೆಯಾಗಿ ಹೊರಬಂದ 27 ಮೇ 2014 ರ 'ಕನ್ನಡ ಪ್ರಭ'ವನ್ನು ಬಣ್ಣಿಸಲು ನನ್ನಲ್ಲಿ ಪದಗಳ ಕೊರತೆಯಿದೆ. ತಮಗೆ ಯಾವ ರೀತಿ ಅಭಿನಂದಿಸಬೇಕೋ ನೀವೇ ತಿಳಿಸಿಬಿಡಿ!
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರು, 9980660155

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!
ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.