ಇಂಟರ್ ನೆಟ್ ವಿಶ್ವವ್ಯಾಪಿ. ಹಳ್ಳಿ ಹಳ್ಳಿಗಳಲ್ಲೂ ಇದು ವ್ಯಾಪಿಸಿದೆ. ಒಂದು ಕೊರತೆಯೆಂದರೆ ಜನವಸತಿಯಿರುವ ಪ್ರದೇಶದಲ್ಲಿ ಮಾತ್ರ ಇಂಟರ್ ನೆಟ್ ಸಿಗುತ್ತದೆ. ದಟ್ಟಾರಣ್ಯಗಳು, ಸಮುದ್ರದ ನಡುವೆ, ಅಗಲವಾದ ನದಿ ಪಾತ್ರಗಳು, ಹಿಮವತ್ ಪರ್ವತಗಳು, ಧ್ರುವಗಳು ಇತ್ಯಾದಿ ಪ್ರದೇಶಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಗಳನ್ನು ಎಳೆಯುವುದು ಅಸಾಧ್ಯವಾದ ಮಾತು. ಇಂತಹ ಕಡೆಗಳಲ್ಲಿ ಕೃತಕ ಉಪಗ್ರಹಗಳ ಮೂಲಕ ಅಂತರ್ಜಾಲ ಸಂಪರ್ಕ ಕೊಡುವುದು ದುಬಾರಿ ಬಾಬ್ತು. ಇದಕ್ಕಾಗಿ ಹುಡುಕಾಟದ ಇಂಜಿನ್ ನ ಗೂಗಲ್ ಒಂದು ಹೊಸ ಉಪಾಯವನ್ನು ಕಂಡುಕೊಂಡಿದೆ. ಅದರ ಹೆಸರು "ಲೂನ್ ಪ್ರಾಜೆಕ್ಟ್"! ಗೂಗಲ್ ವಿಶ್ವದ ಪ್ರತಿ ಇಂಚನ್ನೂ ಇಂಟರ್ ನೆಟ್ ಸಂಪರ್ಕಕಕ್ಕೊಳಪಡಿಸಲು ಹಾರುವ ಬಲೂನುಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ. ಈ ಬಲೂನುಗಳು ನೆಲದಿಂದ ಸುಮಾರು ಮೂವತ್ತೆರಡು ಕಿಲೋಮೀಟರುಗಳಷ್ಟು ಎತ್ತರಕ್ಕೆ ಹಾರುತ್ತಿರುತ್ತವೆ. ಹಾರಾಟದ ವೇಗ ಮತ್ತು ದಿಕ್ಕನ್ನು ಕಂಪ್ಯೂಟರ್ ಮುಖಾಂತರ ನಿಯಂತ್ರಿಸಬಹುದು. ಒಂದು ಬಲೂನು ಸುಮಾರು ಐದು ಸಾವಿರ ಚದರ ಕಿಲೋಮೀಟರುಗಳಷ್ಟು ವ್ಯಾಪ್ತಿಯ ನೆಲಕ್ಕೆ ಇಂಟರ್ ನೆಟ್ ಸಂಪರ್ಕ ಒದಗಿಸಲಿದೆ ಎಂದು ಹೇಳಲಾಗುತ್ತದೆ. ಇದು ಸೌರಶಕ್ತಿಯಿಂದ ತನಗೆ ಬೇಕಾದ ವಿದ್ಯುತ್ತನ್ನು ಉತ್ಪಾದಿಸಿಕೊಳ್ಳಲಿದೆ. ವಾಯುಮಂಡಲದಲ್ಲಿ ಗಾಳಿಯ ವೇಗ ಗಂಟೆಗೆ 5 ಕಿ ಮೀ ಯಿಂದ 10 ಕಿಮೀ ಇರುವ ಎತ್ತರದಲ್ಲಿ ಈ ಬಲೂನುಗಳು ಹಾರಾಡಲಿವೆ.