ರಾಕ್ಷಸರ ಆರಂಭದ ನಾಯಕರುಗಳು ಇಬ್ಬರು. ಅವರೇ ಹೇತಿ ಮತ್ತು ಪ್ರಹೇತಿ. ಅದೆಂತೋ ಪ್ರಹೇತಿಗೆ ಹುಟ್ಟಿನಿಂದಲೇ ಜೀವನದ ಬಗ್ಗೆ ವಿರಕ್ತಿ. ಮಡದಿ, ಮಕ್ಕಳು, ಆಸ್ತಿ, ಸಂಗ್ರಹ, ಅದರ ರಕ್ಷಣೆ, ಅದರ ಅಭಿವೃದ್ಧಿ, ಇದೆಲ್ಲ ಅರ್ಥಹೀನವೆನಿಸಿ ಆತ ಮುನಿಯಾಗಿ ಬಿಟ್ಟ. ಇವನ ಸಹೋದರ ಹೇತಿಯೇ ಮುಂದಿನ ರಾಕ್ಷಸ ಮೂಲಪುರುಷ. ಈತನ ವಾಮಾಂಗಿಯಾದಾಕೆ ಯಮನ ಸಹೋದರಿ ಭಯಾ. ಹೆಸರೇ ಭಯ ಹುಟ್ಟಿಸುವಂತೆ !! ಆದರೆ ಆ ಭಯ ನಮಗೆ. ಹೇತಿಗಲ್ಲ. ಹೇತಿಗೆ ಪುತ್ರಸಂತಾನ ಈಕೆಯಲ್ಲಿ. ಅವನೇ ವಿದ್ಯುತ್ಕೇಶ. ರಾಕ್ಷಸ ಕುಲಾಧೀಶನೀತನ ಕೈ ಹಿಡಿದದ್ದು ಸಾಯಂ ಸಂಧ್ಯೆಯ ಅಭಿಮಾನ ದೇವಿಯ ಪುತ್ರಿ. ಆಕೆಯೇ ಸಾಲಕಟಂಕಟೆ. ಅನ್ಯೋನ್ಯ ಜೋಡಿ. ಅಮಿತ ಆಕರ್ಷಣೆ ಪರಸ್ಪರರಲ್ಲಿ. ವರ್ಷಗಳುರುಳಿದರೂ ಕಾಮ ತೃಷ್ಟೆ ಕೇವಲ ಏರಿಕೆ. ಸದಾ ಭೋಗಮುಖ. ಮಿತಿಮೀರಿದ ಈ ಸಂಯೋಗ ತೀವ್ರತೆ ಎಷ್ಟಿತ್ತೆಂದರೆ, ಹೆತ್ತ ಮಗನ ಮರೆತು ಜೋಡಿಯಾಗಿ ವಿಹರಿಸ ಹೋಗಿದ್ದರು. ತಾಯ ಸಾನ್ನಿಧ್ಯವಿಲ್ಲದೆ; ಮಾತೆಯ ಮಡಿಲಿಲ್ಲದೆ; ಕ್ಷೀರ ಭಾಗ್ಯವಿರದೇ ಸುಕೇಶ ಕಿರಿಚುತ್ತಿದ್ದ. ಅರಚುತ್ತಿದ್ದ . ಹಶಿವಿನಿಂದ ಬೊಬ್ಬಿಡುತ್ತಿದ್ದ. ಬಳಿಯಲ್ಲೇ ಹಾದು ಹೋಗುತ್ತಿದ್ದ ಪಾರ್ವತಿಯ ಮಾತೃ ರಕ್ಷಣೆಯೇ ಸಿಕ್ಕಿತವನಿಗೆ. ಇರಲಿ, ಆ ಕಥೆಯನ್ನು ಹೆಚ್ಚು ಲಂಬಿಸುವುದು ಬೇಡ. ಇವನ ಮಕ್ಕಳೇ ಮಾಲ್ಯವಂತ, ಸುಮಾಲಿ, ಮತ್ತು ಮಾಲಿ. ಈ ಸುಮಾಲಿಯ ಮಗಳೇ ಕೈಕಸಿ; ನಮ್ಮ ಖಳನಾಯಕನ ಮಹಾ ಜನನಿ.