ಅಂದಿನಿಂದಿಂದಿನ ವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಅಲ್ಲಿ ಅಯೋಧ್ಯೆಯಲ್ಲಿದ್ದಾಳೆ, ನೋಡು...!

ಗಾಳಿಯಲ್ಲಿದ್ದ ಅಣುಮಾತ್ರ ಗಂಧವನ್ನು ಕುಡಿದವಳವಳು . ಅಂದಿನಿಂದಿನವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಇಲ್ಲಿ ಅಯೋಧ್ಯೆಯಲ್ಲಿದ್ದಾಳೆ ನೋಡು . ಇವಳೀಗ ಸಹಜವಾಗಿ ಎಚ್ಚತ್ತಿದ್ದಾಳೆ ನೋಡು .
ಅಂದಿನಿಂದಿಂದಿನ ವರೆಗೆ ಸಾವಿರಾರು ಜನ್ಮಗಳನ್ನೆತ್ತಿ  ಇದೀಗ ಅಲ್ಲಿ ಅಯೋಧ್ಯೆಯಲ್ಲಿದ್ದಾಳೆ, ನೋಡು...!
Updated on: 
ಅದು ಸತ್ಯಲೋಕ . ಬ್ರಹ್ಮರ್ಷಿಗಳು , ಅಶ್ವಮೇಧ , ರಾಜಸೂಯ , ವೈಷ್ಣವ , ವಾಜಪೇಯ ... ಇತ್ಯಾದಿ ಯಾಗಗಳನ್ನು ಮಾಡಿದ ಚಕ್ರವರ್ತಿಗಳು , ದೇವ ರೂಪದಲ್ಲಿ ನಿಂತಿರುವ ಸತ್ಯ , ಧರ್ಮ , ನ್ಯಾಯ , ಅಹಿಂಸೆ , ಙ್ಞಾನ , ಶಾಸ್ತ್ರ , ವೇದ , ಸಂಗೀತ , ಕಲೆ , ನೃತ್ಯ , ಕೀರ್ತಿ , ಪುಣ್ಯ ... ಇತ್ಯಾದಿಗಳು , ಸಂದರ್ಶನಕ್ಕಾಗಿ ಕಾಯುತ್ತಿರುವ ದೇವತೆಗಳು , ಭೂಲೋಕದಲ್ಲಿ ತಪಸ್ಸಿನಲ್ಲಿರುವ ಋಷಿಗಳ , ಅವರ ತಪಸ್ಸಿನ ನೆಲೆಯನ್ನು , ಬೆಲೆಯನ್ನು ತಿಳಿಸಲು ಕಾಯುತ್ತಿರುವ ಬ್ರಹ್ಮಾದೂತರು , ಜೀವಿಯ ಪುಣ್ಯಾಪುಣ್ಯಗಳಿಗನುಗುಣವಾಗಿ ಸ್ವರ್ಗ - ನರಕಗಳನ್ನನುಭವಿಸಿ ಮುಂದಿನ ಜನ್ಮಕ್ಕಾಗಿ ಕಾಯುತ್ತಿರುವ ಜೀವಿಗಳು , ಸನಕ , ಸನಂದನ , ಸನತ್ಕುಮಾರಾದಿ ಶುದ್ಧ ಋಷಿಗಳು ... ಈ ಎಲ್ಲರೂ ಕಾಯುತ್ತಿದ್ದಾರೆ ಪರಮೇಷ್ಠಿ ಸಂದರ್ಶನಕ್ಕೆ ! ಕೊಂಚ ಹೊತ್ತಿನಲ್ಲಿ ಎದುರಿದ್ದ , ಮುಚ್ಚಿದ್ದ , ಬಿಳಿಬಣ್ಣದ , ತೆಂಗಿನ ಮರದೆತ್ತರದ ಶುದ್ಧ ಶ್ವೇತ ಸಹಸ್ರ ದಳ ಕಮಲ ಅರಳಿತು . ಅದರ ಮಧ್ಯದಲ್ಲಿ ಅತಿತೇಜಸ್ವೀ , ಅತಿವರ್ಚಸ್ವೀ ಸೃಷ್ಟಿಕರ್ತ . ಮುಖದ ತುಂಬ ಗಡ್ಡ . ಅದರಲ್ಲಿ ಅರ್ಧ ಭಾಗದಷ್ಟು ಕೃಷ್ಣ , ಉಳಿದರ್ಧ ಭಾಗ ಬಿಳಿಬಿಳಿ ನೊರೆನೊರೆ ಬಿಳುಪು . ಅರೆ ಮುಚ್ಚಿದ ನಯನ . ಪ್ರಸನ್ನ ವದನ . ಒಂದೇ ಅಚ್ಚಿನ ಮೂರು ಮುಖಗಳು . ಚಿನ್ನದ ಕಿರೀಟದಿಂದ ಹೊಳೆವ ಉತ್ತಮಾಂಗ ! ಶ್ವೇತ ರೇಶಿಮೆಯ ಮೇಲ್ವಸ್ತ್ರ . ಕೈನಲ್ಲಿ ಜಪಮಾಲೆ . ಮತ್ತೊಂದರಲ್ಲಿ ಕಮಂಡುಲ . ಅದರಲ್ಲಿ ಪರಮ ಪಾವನೆಯಾದ ಗಂಗೆ . ಪ್ರಪಂಚದಲ್ಲಿನೆಲ್ಲ ನದಿಗಳ ಸಂಗಮ. 
ವಾಣೀಪತಿಯ ಪಕ್ಕದಲ್ಲಿ ಶ್ವೇತ ದುಕೂಲ ಧಾರಿಣಿ ಸರಸ್ವತಿ . ಋಕ್ , ಯಜುಸ್ , ಸಾಮ , ಅಥರ್ವಣ ವೇದಗಳೂ , ಶಿಕ್ಷಾ , ಕಲ್ಪ , ನಿರುಕ್ತ , ಜ್ಯೋತಿಷ , ವ್ಯಾಕರಣ , ಛಂದಸ್ಸು , ಎಂಬ ಷಟ್ಶಾಸ್ತ್ರಗಳೂ , ಪುರಾಣಗಳು , ಸ್ಮೃತಿಗಳು , ಅರ್ಥ , ನ್ಯಾಯ , ಗಜ , ಅಶ್ವ .... ಇತ್ಯಾದಿ ವಿದ್ಯೆಗಳೂ , ಅನೇಕಾನೇಕ ಸಂಗೀತ ಕಲಾ ಪ್ರಾಕಾರಗಳೂ , ಪ್ರಪಂಚದೆಲ್ಲ ಬಗೆಯ ನೃತ್ಯ ವೈವಿಧ್ಯಗಳೂ , ವಿಙ್ಞಾನದ ವಿಶೇಷ ಆವಿಷ್ಕಾರಗಳ ಮೂಲ ರಹಸ್ಯಗಳೂ , ನೆಲ , ಜಲ , ಗಗನದ ಪಶು , ಪಕ್ಷಿ , ಪ್ರಾಣಿಗಳ ಸಂಕೇತಗಳೂ , ಮನುಷ್ಯ ಭಾಷೆಗಳೂ , ಎಲ್ಲ ಬಗೆಯ , ಎಲ್ಲ ರೀತಿಯ ವಿದ್ಯೆಗಳೂ , ಪಾಂಡಿತ್ಯ , ಪ್ರತಿಭೆ , ಪ್ರಙ್ಞೆ , ವಾಗ್ಮಿತೆ , ಪ್ರಾಸ , ಯತಿ , ಪದ್ಯ - ಗದ್ಯ - ವ್ಯಾಖ್ಯಾನ - ಪ್ರಬಂಧ - ನಾಟಕ - ಕಾವ್ಯ - ಮಹಾಕಾವ್ಯಗಳೂ .... ಒಟ್ಟಿನಲ್ಲಿ ಎಲ್ಲ ವಿಧದ ಅರಿವಿನ , ಙ್ಞಾನದ , ಪ್ರಙ್ಞಾನದ ಪ್ರಾಕಾರಗಳೆಲ್ಲ ಮೂರ್ತಿವೆತ್ತಾಗಿ ಶಾರದೆಯ ಸೇವೆಯಲ್ಲಿ ನಿರತವಾಗಿವೆ . ತೊಡೆಗಳ ಮೇಲೆ ಮಲಗಿರುವ ವೀಣೆ ದಿವ್ಯ ಕಚ್ಛಪಿ . ಅದರಿಂದ ಹೊರಬರುತ್ತಿರುವ ನಾದ ಮಾಧುರ್ಯ ಇಡೀ ಸತ್ಯಲೋಕವನ್ನೇ ತುಂಬಿದೆ . 
ತುಂಬು ಹೃದಯಂಗಮವಾಗಿ ಮೂಡುತ್ತಿದ್ದ ಮಂದಾನಿಲ ಸಂಚಾರದ ನಾದ ತರಂಗಗಳು ಇದ್ದಕ್ಕಿದ್ದಂತೆಯೇ ನಿಂತುಬಿಟ್ಟಿತು ! ತಕ್ಷಣ ಬ್ರಹ್ಮ ಕಣ್ಣು ಬಿಟ್ಟ . ಅತ್ತ ತಿರುಗಿದ . ಎಲ್ಲೋ ಯಾವುದೋ ಮುಹೂರ್ತದಲ್ಲಿ ತನ್ಮಯಳಾಗಿದ್ದ ವಾಣಿ , ಆ ಕ್ಷಣಕ್ಕೆ ವಾಸ್ತವಕ್ಕೆ ಬಂದಳು . " ಏಕೆ " ಎಂಬ ಮುಖಮುದ್ರೆಯ ಪತಿಗೆ ನುಡಿದಳು ಸತಿ ; " ಸ್ವಾಮಿ , ಎಲ್ಲವೂ ಸುಖವಾಗಿದೆ . ಸಲೀಸಾಗಿದೆ , ಸರಾಗವಾಗಿದೆ , ಸುಗಮವಾಗಿದೆ . ಅಲ್ಲಿ ನೋಡಿ ಅಯೋಧ್ಯೆಯಲ್ಲಿ ಶ್ರೀರಾಮ - ಸೀತೆಯರು , ತಂದೆ - ತಾಯಿಯರ ಶುಶ್ರೂಷೆಯಲ್ಲಿ ಹಾಯಾಗಿದ್ದಾರೆ . ವಿವಾಹವಾಗಿ ವರ್ಷಗಳೇ ಕಳೆದರೂ ಯುವ ಜೋಡಿಯಂತೆ ಮೈಮರೆತು ವಿಹರಿಸುತ್ತಿದ್ದಾರೆ . ಅದೆಷ್ಟೇ ತನ್ಮಯರಾಗಿದ್ದರೂ ಶ್ರೀರಾಮರು ಪ್ರತಿ ನಿತ್ಯ ಪುರಪ್ರಮುಖರ ಭೇಟಿ , ನಗರದರ್ಶನ , ಪ್ರಜಾಸಂವಾದ , ಮಾಂಡಲಿಕರ ಮಹತ್ವದ ಚರ್ಚೆ , ಅರಮನೆಯ ಆಗುಹೋಗುಗಳು , ಭಂಡಾರದ ತನಿಖೆ , .... ಈ ಎಲ್ಲವುಗಳ ಬಗ್ಗೆಯೂ ನಿಗಾ ವಹಿಸುತ್ತಿದ್ದಾರೆ . ಪ್ರಜೆಗಳೆಲ್ಲ ರಾಮರಾಜ್ಯದ ಸವಿ - ಸಮಾಧಾನಗಳನ್ನು ಅನುಭವಿಸುತ್ತಿದ್ದಾರೆ ; ಶ್ರೀರಾಮರು ಮಹಾರಾಜರಾಗದೆಯೇ ! ಅತ್ತ ನೋಡಿ ದಶಾನನನ ಅಟ್ಟಹಾಸ ಮೇರೆ ಮೀರುತ್ತಿದೆ .
 ಮಾತೆತ್ತಿದರೆ ವಿಜಯ ಯಾತ್ರೆ ಮಾಡುತ್ತಿದ್ದಾನೆ . ಅರಸರ ನಗರಗಳನ್ನು ದೋಚುತ್ತಿದ್ದಾನೆ . ಯುದ್ಧ ಘೋಷಿಸುತ್ತಾನೆ . ನಿರ್ದಯವಾಗಿ ರಾಜರನ್ನು ಕೊಚ್ಚಿ ಹಾಕುತ್ತಿದ್ದಾನೆ . ಋಷಿಗಳನ್ನು ಹಿಂಸಿಸುತ್ತಿದ್ದಾನೆ . ಸಣ್ಣ - ಪುಟ್ಟ ಋಷಿಗಳನ್ನು ಬಲಿಹಾಕುತ್ತಿದ್ದಾನೆ . ಯಙ್ಞ - ಯಾಗಾದಿಗಳನ್ನು ಧ್ವಂಸಮಾಡುತ್ತಿದ್ದಾನೆ . ಕೊಬ್ಬಿ ಹೋಗಿದ್ದಾನೆ . ಇಷ್ಟೆಲ್ಲಾ ಆಗಿರುವುದು ನಿಮ್ಮಿಂದಲೇ ! ನೀವಿತ್ತ ವರದಿಂದಲೇ ! ನೊಂದ ಜೀವಿಗಳ , ಆರ್ತನಾದ ಮಾಡುತ್ತಿರುವ ಋಷಿ - ಮುನಿಗಳ , ಸೊರಗುತ್ತಿರುವ ಸುರರ , ಸತ್ತುಹೋಗುತ್ತಿರುವ ಸಾಧುಗಳ ... ಈ ಎಲ್ಲರ ನರಳಾಟ ದೊಡ್ಡದಾಗಿ ನನ್ನ ತಪಸ್ಸು ಭಂಗವಾಗಿ , ಬೆರಳು ತಂತಿ ಮೀಟುವುದನ್ನು ನಿಲ್ಲಿಸಿತು . ತಮ್ಮ ಸೃಷ್ಟಿ ಕ್ರಿಯೆಗೆ ಭಂಗವಾಯಿತು . " 
ಏನೋ ಹೇಳುತ್ತಿದ್ದ ಸರಸ್ವತಿಯ ಮಾತುಗಳ ಕೊನೆ ತನ್ನನ್ನೇ ಗುರಿಯಾಗಿಸಿದ್ದು ಬ್ರಹ್ಮಾನಿಗೆ ಮೆಲುನಗೆ ತಂದಿತು . ಸಾಮಾನ್ಯವಾಗಿ ಹೆಂಡತಿಯರು ತಮ್ಮ ಅಸಮಾಧಾನಕ್ಕೆ ಅಂತೂ ಇಂತೂ ಗಂಡನ ತಲೆಯನ್ನೇ ಮೊಟಕುವಂತೆ , ಶಾರದೆಯೂ ವಿನಾಯ್ತಿ ಇಲ್ಲದೇ ಗಂಡನನ್ನೇ ಗುರಿಯಾಗಿಸಿದ್ದಳು . ನಸುನಗುತ್ತ ನುಡಿದ ವಿರಿಂಚಿ ; " ದೇವಿ , ಏಕೆ ಇದ್ದಕ್ಕಿದ್ದಂತೆ ಉದ್ವಿಗ್ನಳಾಗಿದ್ದೀ . ನನ್ನದು ತಪ್ಪೆಂದು ಆರೋಪ ಮಾಡುತ್ತಿದ್ದೀ ? ಏನು ನಿನ್ನ ಮನಸ್ಸನ್ನು ಕೆಡಿಸಿದೆ ? " ಮಾತು ಮುಗಿಯುವ ಮುನ್ನವೇ ಮಾತಿನೊಡತಿ ಮಾತನಾಡಿದಳು . "
 ಮತ್ತೇನು ಹೇಳಲಿ ಸ್ವಾಮಿ , ತಾವು ಅಯೋಧ್ಯೆಗೆ ಹೋಗಿದ್ದೇಕೆ ? ಯಾಗ ಮಂಟಪದ ಮೇಲೆ ದೇವತೆಗಳಿಗೆ ಇತ್ತ ಭಾಷೆಯೇನು ? ಶ್ರೀರಾಮರ ಉದಯಕ್ಕೆ ಮುನ್ನ ವಿಷ್ಣು ಮಾಡಿದ ಪ್ರತಿಙ್ಞೆ ಏನು ? ಈಗ ಏನಾಗಿದೆ ? ಏನೂ ಆಗಿಲ್ಲ . ಅಲ್ಲಿ ನೋಡಿದರೆ ರಾವಣನ ಹಿಂಸಾಕಾಂಡ ವಿಜೃಂಭಿಸುತ್ತಿದೆ , ಋಷಿಗಳ ಕರುಣಾಕಾಂಡ ಗೋಳಾಡುತ್ತಿದೆ , ಶ್ರೀರಾಮ - ಸೀತೆಯರು ಸುಖವಾಗಿ , ಎಲ್ಲವನ್ನೂ ಮರೆತು ಶೃಂಗಾರದಲ್ಲಿ ವಿಹರಿಸುತ್ತ , ದಾಂಪತ್ಯವನ್ನು ಅನುಭವಿಸುತ್ತ , ಹಿರಿಯರಿಗೆ ಶುಶ್ರೂಷೆ ಮಾಡುತ್ತ , ಪ್ರಜಾವತ್ಸಲರಾಗಿದ್ದಾರೆ . ಇದಕ್ಕಾಗಿ ಅವರು ಅವತರಿಸಬೇಕಿತ್ತೆ ? ಹುಟ್ಟಿದ ಕಾರಣವನ್ನೇ ಮರೆತಿದ್ದಾರಲ್ಲ ? .... " ಚಡಪಡಿಸುತ್ತ ಹೇಳಿದಳು ವಾಣಿ ; ಗಿರ್ವಾಣಿ . " ಓಹ್ ! " ಬ್ರಹ್ಮ ತನ್ನ ಸಹಜ ಮಿದುನಗೆಯಲ್ಲೇ ನುಡಿದ ; " ಇದೋ ನಿನ್ನ ಆರೋಪಕ್ಕೆ ಕಾರಣ ? ಎಲ್ಲಕ್ಕೂ ಒಂದು ಕಾಲ ಬರಬೇಕಲ್ಲ ದೇವಿ ? ಇಲ್ಲಿವರೆಗೆ ಈ ಬಗ್ಗೆ ಕೇಳದ ನೀನು ಈಗಲೇ ಏಕೆ ಕೇಳಿದೆ ಈ ವಿಷಯವನ್ನು ? ಕಾರಣ ಗೊತ್ತೇ ? ಆ ಮುಹೂರ್ತ ಈಗ ಬಂದಿದೆ . ನಿನ್ನ ಅಪೇಕ್ಷೆಯಂತೆ ಶ್ರೀರಾಮ - ರಾವಣರು ಸಂಧಿಸಬೇಕಲ್ಲ ! ಶ್ರೀರಾಮರು ಅಯೋಧ್ಯೆ ಬಿಟ್ಟು ಲಂಕೆಯೆಡೆಗೆ ಹೋಗಬೇಕಲ್ಲ ? ಇದೀಗ ನೋಡು ಆ ದಿವ್ಯ ಪ್ರಯಾಣದ ಆರಂಭವನ್ನು . ನೋಡು ರಾಜವಿಹಾರದ ಬದಲು ವನವಿಹಾರಕ್ಕೆ ಸಿದ್ಧತೆಯನ್ನು !! ಈಗ ನೋಡು ದಶರಥನಿಗೆ ತಟ್ಟಬೇಕಾದ ಶಾಪ ಫಲವನ್ನು . ಅಲ್ಲಿ ನೋಡು ಪರಮ ಪತಿವ್ರತೆಯ ಅಗ್ನಿ ದಿವ್ಯದೆಡೆಗಿನ ಪ್ರಥಮ ಹೆಜ್ಜೆಯನ್ನು . ಅಲ್ಲಿ ನೋಡು ಅಂದು ಅಮೃತಮಂಥನದಲ್ಲಿ ಉದಿಸಿದ ಅರುವತ್ತು ಸಾವಿರ ಅಪ್ಸರಸಿಯರಲ್ಲಿ ಅಸೂಯಾಪರ ಕುಮತಿ ಕುತ್ಸಿತೆಯೊಬ್ಬಳು ಅಪವಾದವಾಗಿ ವಿನಾಕಾರಣ ದುಷ್ಟೆಯಾದಳು . ಏಕೆ ಗೊತ್ತೆ ? ಹುಟ್ಟಿದ ಹಾಲಾಹಲವನ್ನು ನೀಲಕಂಠ ಕುಡಿದು ಮುಗಿಸಿದ್ದರೂ ಗಾಳಿಯಲ್ಲಿದ್ದ ಅಣುಮಾತ್ರ ಗಂಧವನ್ನು ಕುಡಿದವಳವಳು . ಅಂದಿನಿಂದಿನವರೆಗೆ ಸಾವಿರಾರು ಜನ್ಮಗಳನ್ನೆತ್ತಿ ಇದೀಗ ಇಲ್ಲಿ ಅಯೋಧ್ಯೆಯಲ್ಲಿದ್ದಾಳೆ ನೋಡು . ಇವಳೀಗ ಸಹಜವಾಗಿ ಎಚ್ಚತ್ತಿದ್ದಾಳೆ ನೋಡು . " ಬ್ರಹ್ಮ ಬೊಟ್ಟಿಟ್ಟ ಕಡೆ ನೋಡಿ ಸರಸ್ವತಿ ಬೆಚ್ಚಿಬಿದ್ದಳು.
---೦೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com