ಧರ್ಮನಿರ್ಣಯಕ್ಕೆ ಆಧಾರವಾದ ಋಕ್, ಯಜುಸ್, ಸಾಮಗಳೆ ಅವರಿಗೆ ವಾಚೋವಿಧೇಯವಾಗಿವೆ. ವೈಙ್ಞಾನಿಕವಾಗಿ ವಾತ್ಸ್ಯಾಯನ ಕಾಮಸೂತ್ರಗಳಿಗೆ ಅವರು ವ್ಯಾಖ್ಯಾನ ಮಾಡಬಲ್ಲರು. ಅರ್ಥ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ರಾಜಾದಾಯ, ಪ್ರಜಾ ಸಂಪತ್ತು, ದೇಗುಲ ಪ್ರಗತಿ, ರಾಜ್ಯ ಭದ್ರತಾ ಭಂಡಾರ... ಈ ಎಲ್ಲವುಗಳ ಬಗ್ಗೆಯೂ ಅತ್ಯಂತ ನಿಖರ ನಿಗಾ ಹೊಂದಿದ್ದಾರೆ. ಇನ್ನು ತತ್ವ ಶಾಸ್ತ್ರದ ಬಗ್ಗೆ ಕಠ, ಕೇನ, ಷಟ್ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಈಶಾವಾಸ್ಯ, ಬೃಹದಾರಣ್ಯಕಗಳೆಲ್ಲ ಅವರಿಗೆ ಅಂಗೈ ನೆಲ್ಲಿ. ಅವರ ನೆನಪಿನ ಶಕ್ತಿ ಒಂದು ಅದ್ಭುತ. ನಮ್ಮ ರಾಜ್ಯದಲ್ಲಿ ಹಲ ವರ್ಗದ ಐದು ನೂರಕ್ಕೂ ಹೆಚ್ಚು ನ್ಯಾಯಾಧೀಶರಿದ್ದಾರೆ. ಶ್ರೀರಾಮರು ಪ್ರತಿಯೊಬ್ಬರನ್ನೂ ಹೆಸರು ಹಿಡಿದು ಮಾತನಾಡಿಸುತ್ತಾರೆ.