ಯೂರೋಪು ವಲಸೆ: ಭಾರತೀಯರ ಮುಂದಿದೆ ಸವಾಲು-ಅವಕಾಶ! (ಹಣಕ್ಲಾಸು)

ಹಣಕ್ಲಾಸು-359ರಂಗಸ್ವಾಮಿ ಮೂನಕನಹಳ್ಳಿ
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಯೂರೋಪು ಹಣಕಾಸಿನ ಮುಗ್ಗಟ್ಟಿನಲ್ಲಿ ಮುಳುಗೇಳುತ್ತಿದೆ. ಹಣದುಬ್ಬರ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. 100/150 ಯುರೋ ತಿಂಗಳಿಗೆ ಎಲೆಕ್ಟ್ರಿಸಿಟಿಗೆ ಕರ್ಚಾಗುತ್ತಿದ್ದ ಜಾಗದಲ್ಲಿ ಇಂದು 350/400 ಯುರೋ ಖರ್ಚಾಗುತ್ತಿದೆ ಎಂದರೆ ನೀವು ಹಣದುಬ್ಬರದ ಮಟ್ಟವನ್ನ ಊಹಿಸಿಕೊಳ್ಳಬಹುದು. ಹಾಲಿನ ಬೆಲೆ 85ಸೆಂಟ್ ನಿಂದ 89 ಸೆಂಟ್ಗೆ ಜಿಗಿಯಲು ಬರೋಬ್ಬರಿ 15 ವರ್ಷ ತೆಗೆದುಕೊಂಡಿತ್ತು ಎಂದು ಹೇಳಿದರೆ, ಅದು ಇವತ್ತಿಗೆ ಕಥೆಯಂತೆ ಕೇಳಿಸುತ್ತದೆ. ಇಂದಿಗೆ ಒಂದು ಲೀಟರ್ ಹಾಲಿನ ಬೆಲೆ ಒಂದು ಯುರೋ ಮೂವತ್ತೈದು ಸೆಂಟ್ ಮೀರಿದೆ. ಯಾವುದೇ ಕಾಫಿ ಬಾರಿನಲ್ಲಿ ಕಾಫಿಯ ಬೆಲೆ ಕೂಡ ಒಂದು ಕಪ್ಪಿಗೆ 50/70 ಸೆಂಟ್ ಹೆಚ್ಚಳ  ಕಂಡಿದೆ. ಯೂರೋಪಿನಲ್ಲಿ ಬದುಕು ದುಸ್ತರವಾಗಿದೆ. ಸಾಮಾನ್ಯ ಯೂರೋಪಿಯನ್ ಬದುಕುವುದಕ್ಕೆ ಹರಸಾಹಸ ಪಡೆಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಟೂರಿಸಂ ನಂಬಿಕೊಂಡು ಬದುಕುವ ಕೆಲವು ದೇಶಗಳ ಕಥೆ ಇನ್ನಷ್ಟು ದುಸ್ತರವಾಗಿದೆ.

ಬಾರ್ಸಿಲೋನಾದಂತಹ ನಗರದಲ್ಲಿ ವಾಸಿಸಲು ವೇತನದ 6೦/65 ಪ್ರತಿಶತ ಬಾಡಿಗೆ ಕಟ್ಟಲು ವ್ಯಯಿಸಬೇಕಾಗುತ್ತದೆ, ಆಹಾರಕ್ಕೆ 28/30 ಪ್ರತಿಶತ ಬೇಕೇಬೇಕು, ಉಳಿದ ಬದುಕಿಗೆ ಹಣವೆಲ್ಲಿಂದ ತರುವುದು? ಒಂದು ವೇತನದಲ್ಲಿ ಇಂದು ಇಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಪೇನ್ ದೇಶದಲ್ಲಿ 27 ಪ್ರತಿಶತ ಜನರನ್ನ ಬಡತನದ ರೇಖೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಉಳಿದ 20/25 ಪ್ರತಿಶತ ಜನ ತಿಂಗಳ ಕೊನೆ ಕಾಣುವುದು ಬಹಳ ಕಷ್ಟವಾಗಿದೆ ಎಂದಿದ್ದಾರೆ. ಹತ್ತರಿಂದ ಹದಿನೈದು ಪ್ರತಿಶತ ಜನರಿಗೆ ಪರಿಸ್ಥಿತಿಯ ದಾರುಣತೆ ಅಷ್ಟಾಗಿ ತಟ್ಟಿಲ್ಲ ಎನ್ನುವುದು ಬಿಟ್ಟರೆ ಸಮಾಜದ ಮೆಜಾರಿಟಿ ಜನ ಒಂದಲ್ಲ ಒಂದು ರೀತಿಯಲ್ಲಿ ಹೊಂದಾವಣಿಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸ್ಪೇನ್ ದೇಶದ ಕಥೆಯಲ್ಲ, ಯೂರೋಪಿನ ಕಥೆ. ಅದರಲ್ಲೂ ಇಂಗ್ಲೆಂಡ್ ದೇಶದ ಕಥೆ ಇನ್ನಷ್ಟು ಕರುಣಾಜನಕ.

ಹಣದುಬ್ಬರ, ವಿತ್ತೀಯ ಕೊರತೆಗಳ ನಡುವೆ ಈ ದೇಶದಲ್ಲಿ ವೃದ್ಧರ ಸಂಖ್ಯೆ ಕೂಡ ಏರುಗತಿಯಲ್ಲಿದೆ. ಸ್ಪೇನ್ ದೇಶದಲ್ಲಿ ಪ್ರತಿ 5 ಜನರಲ್ಲಿ ಒಬ್ಬರು 65ಕ್ಕೂ ಹೆಚ್ಚಿನ ವಯೋಮಾನದವರು ಎನ್ನುವುದನ್ನ ಅಂಕಿಅಂಶ ಹೇಳುತ್ತಿದೆ. ಒಬ್ಬ ನಿವೃತ್ತರಿಗೆ ಪಿಂಚಣಿ ನೀಡಬೇಕಾದರೆ ಕನಿಷ್ಠ 5/8 ಜನ ದುಡಿಯುತ್ತಿರಬೇಕು ಎನ್ನುವುದು ಕೂಡ ಸರಳ ಲೆಕ್ಕಾಚಾರ. ಈ ಕಾರಣಕ್ಕಾಗಿ ಯೂರೋಪಿನ ಬಹಳಷ್ಟು ದೇಶಗಳು ಇವತ್ತಿಗೆ ತಮ್ಮ ವಲಸೆ ನೀತಿಯನ್ನ ಬದಲಿಸಕೊಳ್ಳುತ್ತಿವೆ. ಹಲವಾರು ದೇಶಗಳು ಈ ವರ್ಷ ಅಂದರೆ ಏಪ್ರಿಲ್ ೨೦೨೩ ರಿಂದ ಆಗಲೇ ಹೊಸ ವಲಸೆ ನೀತಿಯನ್ನ ಜಾರಿಗೆ ತಂದಿವೆ. ಇದರಿಂದ ಭಾರತದಿಂದ ಯಾರಾದರೂ ಜರ್ಮನಿ, ಡೆನ್ಮಾರ್ಕ್, ಸ್ವೀಡೆನ್, ಆಸ್ಟ್ರಿಯಾ ಇತ್ಯಾದಿ ದೇಶಗಳಿಗೆ ವಲಸೆ ಹೋಗಲು ಬಯಸಿದರೆ ತಿಂಗಳೊಪ್ಪತ್ತಿನಲ್ಲಿ ಅಲ್ಲಿರಬಹುದು. ಆಯಾ ದೇಶದ ಸರಕಾರಿ ವೆಬ್ ಸೈಟ್ಗಳಲ್ಲಿ ಕೊರತೆಯಿರುವ ಕೆಲಸಗಳ ಪಟ್ಟಿಯನ್ನ ನೀಡಲಾಗಿರುತ್ತದೆ. ನಮ್ಮ ಪ್ರೊಫೈಲ್ ಮ್ಯಾಚ್ ಆಗುತ್ತದೆ ಎನ್ನಿಸಿದರೆ ಅಲ್ಲೇ ಅದಕ್ಕೆ ಅರ್ಜಿ ಗುಜರಾಯಿಸಬಹುದು. ಮೇಲೆ ನಮೂದಿಸಿರುವ ದೇಶಗಳಲ್ಲಿ, ಪ್ರತಿ ದೇಶದಲ್ಲೂ ೮೦ ರಿಂದ ಲಕ್ಷ ಜನರ ಅಂದರೆ ಕೆಲಸಗಳ ಕೊರತೆಯಿದೆ. ಜಗತ್ತಿನಾದ್ಯಂತ ಕೌಶಲ ಜನರ ಕೊರತೆ ಬಹಳವಿದೆ. ಇಲ್ಲಿನ ದೇಶಗಳಲ್ಲಿ ಬಹುತೇಕರು ಸ್ಕೂಲ್ ಡ್ರಾಪ್ ಔಟ್ ಆಗುವ ಕಾರಣ ಭಾರತೀಯರಿಗೆ ಬಹಳಷ್ಟು ಅವಕಾಶಗಳು ತೆರೆದುಕೊಂಡಿವೆ.

ಜರ್ಮನಿ ದೇಶದಲ್ಲಿ ಇಂದಿಗೆ ಯೂನಿವೆರ್ಸಿಟಿ ಕಲಿಕೆಯಲ್ಲಿ ಇಲ್ಲವೆನ್ನುವಷ್ಟು ಜರ್ಮನರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಬಹುತೇಕರು ಜಾಬ್ ಓರಿಯೆಂಟೆಡ್ ಕೋರ್ಸ್ ಮಾಡಿಕೊಂಡು ಬೇಗ ಹಣ ಗಳಿಸುವ ದಾರಿಯನ್ನ ಹುಡುಕಿಕೊಳ್ಳುತ್ತಿದ್ದಾರೆ. ಬೇರೆಲ್ಲವೂ ಸರಿ , ಆದರೆ ವೈದ್ಯಕೀಯ, ರಿಸರ್ಚ್ ಇತ್ಯಾದಿ ಹೆಚ್ಚಿನ ವಿದ್ಯಾಭ್ಯಾಸವನ್ನ ಬೇಡುವ ಕೆಲಸಗಳಿಗೆ ಜನರೇ ಇಲ್ಲವಾಗುತ್ತಿದ್ದಾರೆ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ.

ಕಳೆದ ತಿಂಗಳು ಮೂರು ವಾರ ಸ್ಪೇನ್ ದೇಶದಲ್ಲಿ ಕಳೆಯುವ ಅವಕಾಶ ಒದಗಿಬಂದಿತ್ತು. ಆಗ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳನ್ನ, ಭಾರತೀಯ ಮಕ್ಕಳನ್ನ ಮಾತನಾಡಿಸುವ ಅವಕಾಶ ಕೂಡ ಸಿಕ್ಕಿತ್ತು. ಇಂದಿನ ಯುವ ಜನತೆಯ ಯೋಚನಾ ಲಹರಿ ಬಹಳ ವಿಭಿನ್ನ. ೨೩ ವರ್ಷದ ಕೆಳೆಗೆ ಪ್ರಥಮ ಬಾರಿಗೆ ಸ್ಪೇನ್ ತಲುಪಿದ್ದಾಗ ನನಗೇನೂ ಸಾದಿಸಿದ ಖುಷಿಯಿತ್ತು. ಆದರೆ ಇಂದಿನ ಹುಡುಗರಲ್ಲಿ ಅದ್ಯಾವುದೂ ಇಲ್ಲ. ಅದಕ್ಕೆ ಪ್ರಮುಖ ಕಾರಣ ಬದಲಾದ ಭಾರತ , ಪೋಷಕರ ಆರ್ಥಿಕ ಭದ್ರತೆ, ಇವುಗಳ ಜೊತೆಗೆ ಕುಸಿತ ಕಾಣುತ್ತಿರುವ ಯೂರೋಪ್ ಮತ್ತು ಅಮೆರಿಕ ಆರ್ಥಿಕತೆ . ಇವತ್ತಿನ ಹೊಸ ಭಾರತೀಯ ಜನತೆ ನಾವ್ಯಾಕೆ ನಮ್ಮ ದೇಶ, ಜನ ಬಿಟ್ಟು ಅಷ್ಟು ದೂರ ಹೋಗಬೇಕು? ಆ ಚಳಿಯಲ್ಲಿ, ಸೋಶಿಯಲ್ ಲೈಫ್ ಇಲ್ಲದೆ, ಹೆಚ್ಚಿನ ಪ್ರಮಾಣದಲ್ಲಿ ಹಣವನ್ನ ಕೂಡ ಉಳಿಸಿಕೊಳ್ಳಲಾಗದೆ ಅಲ್ಲಿಗೇಕೆ ಹೋಗಬೇಕು? ಎನ್ನುವ ಹಂತಕ್ಕೆ ಬಂದಿದ್ದಾರೆ. ವಿದ್ಯಾಭ್ಯಾಸ ಮುಗಿಸಿ ಮರಳಿ ಭಾರತಕ್ಕೆ ಹಿಂತಿರುಗುವ ಭಾವನೆಯನ್ನ ವ್ಯಕ್ತಪಡಿಸಿದವರ ಸಂಖ್ಯೆ ಹೆಚ್ಚು. ಆದರೆ ಇಂದಿಗೆ ಯೂರೋಪಿಗೆ ವಲಸಿಗರು ಬೇಕು. ಅದು ಭಾರತೀಯರಾದರೆ ತೆರೆದ ಬಾಹುಗಳಿಂದ ಸ್ವಾಗತಿಸುತ್ತಾರೆ. ಅದರಲ್ಲೂ ಜರ್ಮನಿ ಎರಡನೇ ಇಂಗ್ಲೆಂಡ್ ಆಗುತ್ತಿದೆ. ಭಾರತೀಯರ ಸಂಖ್ಯೆ ಈ ದೇಶದಲ್ಲಿ ಏರುಗತಿಯಲ್ಲಿದೆ.

ಇವತ್ತಿಗೆ ಭಾರತದಲ್ಲೂ ವಿದೇಶಿ ಭಾಷೆ ಕಲಿಯುವುದಕ್ಕೆ ಹೆಚ್ಚಿನ ಆಸಕ್ತಿಯನ್ನ ತೋರಿಸುತ್ತಿದ್ದಾರೆ. ಜರ್ಮನ್, ಸ್ಪ್ಯಾನಿಷ್ , ಜಪಾನೀಸ್ ಮತ್ತು ಮ್ಯಾಂಡರಿನ್ ಭಾಷೆಗಳಲ್ಲಿ ಒಂದನ್ನ ಕಲಿಯುವುದು ಇಂದಿಗೆ ಜಾಣತನ ಎನ್ನವಂತಾಗಿದೆ. ಫ್ರೆಂಚ್ ತನ್ನ ಹಳೆಯ ಕಿಮ್ಮತ್ತು ಉಳಿಸಿಕೊಳ್ಳುವಲ್ಲಿ ಎಡವಿದೆ. ಉಳಿದಂತೆ ಇಂಗ್ಲಿಷ್ ಜಾಗತಿಕ ಭಾಷೆಯಾಗಿ ತನ್ನ ವರ್ಚಸ್ಸು ಉಳಿಸಿಕೊಂಡಿದೆ.

ಇಂದಿಗೆ ಭಾರತೀಯ ಯುವ ಜನತೆಯ ಮುಂದೆ ಬಹಳಷ್ಟು ಅವಕಾಶವಿದೆ. ಬಹಳಷ್ಟು ಮುಂದುವರಿದ ದೇಶಗಳಲ್ಲಿ ವಲಸಿಗರ ಅಗತ್ಯತೆ ಬಹಳ ಹೆಚ್ಚಾಗಿದೆ. ಎಲ್ಲೆಡೆಯೂ ಇಂದಿಗೆ ಪಾಯಿಂಟ್ ಬೇಸ್ಡ್ ಇಮಿಗ್ರೇಷನ್ ಪಾಲಿಸಿ ಬಂದಿದೆ. ಹೀಗಾಗಿ ಇವತ್ತು ಜಗತ್ತು ಒಂದು ತೆರೆದ ಮನೆಯಾಗಿದೆ.ಕೆನಡಾ ಮತ್ತು ಅಮೆರಿಕಾ ಅತ್ಯಂತ ದೂರ ಹಾಗೂ ವಿಶೇಷ ಪ್ಯಾಕೇಜ್ ಇಲ್ಲವಾದಲ್ಲಿ ಅಲ್ಲಿಗೆ ಹೋಗದಿರುವುದು ಉತ್ತಮ.ಉಳಿದಂತೆ ಯೂರೋಪು ಬದುಕಲು ಯೋಗ್ಯವಾದ ವಾತಾವರಣ ನೀಡುತ್ತದೆ . ಆದರೂ ವಲಸೆಗೆ ಮುನ್ನ ಒಂದಷ್ಟು ಅಂಶಗಳನ್ನ ಗಮನಿಸಬೇಕಾಗುತ್ತದೆ .

ಕಾಸ್ಟ್ ಆಫ್ ಲಿವಿಂಗ್ ಎಷ್ಟೆನ್ನುವುದು ಮೊದಲಿಗೆ ತಿಳಿದುಕೊಳ್ಳಬೇಕು: ಒಂದು ಸರಳ ಮಂತ್ರ ಹೇಳುತ್ತೇನೆ ಕೇಳಿ , ಯೂರೋಪಿನಲ್ಲಿ ದೇಶದಿಂದ ದೇಶಕ್ಕೆ ಖರ್ಚು ಬದಲಾಗುತ್ತದೆ. ಹೀಗಿದ್ದೂ ಭಾರತದಲ್ಲಿ ಎಷ್ಟು ಖರ್ಚಾಗುತ್ತದೆ ಅದನ್ನ ಎಂಟರಿಂದ ಗುಣಿಸಬೇಕು. ಆಗ ಅಲ್ಲಿನ ಖರ್ಚು ತಿಳಿಯುತ್ತದೆ. ಅಂದರೆ ಇಲ್ಲಿ ಹೋಟೆಲ್ನಲ್ಲಿ ತಿಂದರೆ ಇಬ್ಬರಿಗೆ 1500/2000 ಖರ್ಚಾಗುತ್ತದೆ ಎಂದುಕೊಂಡರೆ ಅದನ್ನ 8 ರಿಂದ ಗುಣಿಸಬೇಕು, ಅಷ್ಟು ಅಲ್ಲಿನ ಊಟದ ಖರ್ಚು. ಎಲ್ಲವೂ 8 ಪಟ್ಟು ಹೆಚ್ಚು ಎನ್ನುವಂತಿಲ್ಲ, ಕಾರು, ಪೆಟ್ರೋಲ್ ಇತ್ಯಾದಿಗಳು ಜಾಗತಿಕವಾಗಿ ಹೆಚ್ಚು ಕಡಿಮೆ ಸೇಮ್ ಇರುತ್ತದೆ. ಹೀಗಾಗಿ ಗಮನಿಸಿ ಅಲ್ಲಿ ಭಾರತೀಯ ರೂಪಾಯಿಯಲ್ಲಿ 60/80 ಲಕ್ಷ ವಾರ್ಷಿಕ ಎಂದು ಖುಷಿಯಾಗಿ ವಲಸೆ ಹೋಗುವ ಮುನ್ನ ಖರ್ಚಿನ ಲೆಕ್ಕ ಮಾಡಿ. ನಿಮಗಿಲ್ಲ 20/25 ಲಕ್ಷ ಪ್ಯಾಕೇಜ್ ಇದ್ದರೆ ಅಲ್ಲಿ 80 ಲಕ್ಷ ಬಂದರೂ ಅದು ಕಡಿಮೆ. ಉಳಿಸುವುದೆಲ್ಲಿ ? ಭಾರತದಲ್ಲಿ 20/25 ವಾರ್ಷಿಕ ಪ್ಯಾಕೇಜ್ ಉಳ್ಳವರು ಅಲ್ಲಿನ ಲೆಕ್ಕದಲ್ಲಿ 1.2 ಕೋಟಿ ಮೀರಿದ ಆದಾಯ ಬರುವಂತಿದ್ದರೆ ಮಾತ್ರ ವಲಸೆ ಹೋಗಬಹುದು .

ತೆರಿಗೆ ಲೆಕ್ಕ ಹಾಕುವುದು ಮರೆಯಬೇಡಿ: ಯೂರೋಪಿನಲ್ಲಿ 60 ಸಾವಿರಕ್ಕೂ ಹೆಚ್ಚಿನ ಯುರೋ ವಾರ್ಷಿಕ ಸಂಬಳ ಸಿಕ್ಕರೆ ಮತ್ತು ಅದು ಲಕ್ಷ ಯುರೋ ಮೀರುತ್ತಿದ್ದರೆ ಹೆಚ್ಚು ಕಡಿಮೆ 49 ಪ್ರತಿಶತ ತೆರಿಗೆಯಿರುತ್ತದೆ. ಹೀಗಾಗಿ ವಲಸೆ ಹೋಗುವ ಮುನ್ನ ಆಯಾ ದೇಶದಲ್ಲಿ ಎಷ್ಟು ಆದಾಯ ತೆರಿಗೆಯಿದೆ ಎನ್ನುವುದನ್ನ ತಿಳಿದುಕೊಂಡು ಲೆಕ್ಕಾಚಾರ ಮಾಡಿ ಹೋಗಬೇಕು. ಅಲ್ಲಿಗೆ ಹೋಗಿ ದುಡಿದು ಅವರಿಗೆ ತೆರಿಗೆ ಕಟ್ಟುವ ಜೀವನ ನಮ್ಮದಾಗಬಾರದು.

ಪ್ರತಿಕೂಲ ವಾತಾವರಣ, ಒಂಟಿತನ ಭಾದಿಸುತ್ತದೆ ಎಚ್ಚರ: ಹೌದು, ಭಾರತದಲ್ಲಿ ನಾಲ್ಕೈದು ಜೊತೆ ಬಟ್ಟೆಯಿದ್ದರೆ ಸಾಕು, ಆದರೆ ಚಳಿ ದೇಶದಲ್ಲಿ ವಿಂಟರ್, ಸಮ್ಮರ್ ಹೀಗೆ ವಾತಾವರಣಕ್ಕೆ ತಕ್ಕ ಬಟ್ಟೆಗಳು ಬೇಕು. ಖರ್ಚು ಹೆಚ್ಚು, ಜೊತೆಗೆ ದೇಹದ ಮೇಲೆ ಸದಾ ಮೂರ್ನಾಲ್ಕು ಕೇಜಿ ಭಾರದ ಜಾಕೆಟ್, ಗ್ಲೋವ್ಸ್ ಎಲ್ಲವನ್ನೂ ಹೊತ್ತು ತಿರುಗುವುದು ಪ್ರಯಾಸಕರ. ಇವೆಲ್ಲವುದರ ಜೊತೆಗೆ ಸೋಶಿಯಲ್ ಲೈಫ್ ಇಲ್ಲಿನಷ್ಟು ಇರಲು ಸಾಧ್ಯವೇ ಇಲ್ಲ. ಬಹುಪಾಲು ಮನೆಯೇ ಮಂತ್ರಾಲಯ . ಬದುಕಿನ ಒಂದಲ್ಲ ಒಂದು ಹಂತದಲ್ಲಿ ಒಂಟಿತನ ಕಾಡದೆ ಬಿಡುವುದಿಲ್ಲ. ಅದಕ್ಕೆ ಸಿದ್ಧರಿರಬೇಕು.

ಸ್ಥಳೀಯ, ಪರಕೀಯ/ವಲಸಿಗ ಎನ್ನುವ ತಿಕ್ಕಾಟ ಇದ್ದೆ ಇರುತ್ತದೆ: ಮೇಲಿನ ಕಾರಣಗಳನ್ನ ನಾವು ಮೀರಿ ಬೆಳೆದರೂ ಕೂಡ ಅಲ್ಪ ಮಟ್ಟಿನ ಸ್ಥಳೀಯ-ಪರಕೀಯ ತಿಕ್ಕಾಟ ಇದ್ದೆ ಇರುತ್ತದೆ. ವೈದ್ಯ ವೃತ್ತಿಯಲ್ಲಂತೂ ಇದನ್ನ ಪ್ರತ್ಯಕ್ಷವಾಗಿ ಕಾಣಬಹುದು. ಉಳಿದ ವೃತ್ತಿಗಳಲ್ಲಿ ಅಷ್ಟೊಂದು ಕಣ್ಣಿಗೆ ಕಾಣುವಂತೆ ಇರದಿದ್ದರೂ, ಅದರ ಇರುವಿಕೆಯನ್ನ ತಳ್ಳಿ ಹಾಕುವಂತಿಲ್ಲ.

ನಮಗೇನು ಬೇಕು? ಎನ್ನುವ ಪ್ರಜ್ಞೆ ಎಲ್ಲಕ್ಕಿಂತ ಮುಖ್ಯ: ಕಾರಣಗಳು ಕಾರಣಗಳಷ್ಟೇ, ಅವೆಲ್ಲವನ್ನೂ ಮೀರಿ ಬೆಳೆಯುವ , ನೆಲೆ ನಿಲ್ಲಲು ಬೇಕಾಗಿದ್ದು ಮನೋಬಲ, ನಮಗೇನು ಬೇಕು ಎನ್ನುವ ನಿಖರತೆ, ಬದುಕಿಗೆ ನಾವು ಕಟ್ಟಿಕೊಳ್ಳುವ ಉದ್ದೇಶ. ಹೀಗಾಗಿ ಎಲ್ಲಕ್ಕೂ ಮೊದಲಿಗೆ ಈ ನಿಖರತೆ ಪಡೆದುಕೊಳ್ಳಬೇಕಾಗಿದ್ದು ಅತಿ ಮುಖ್ಯ .

ಕೊನೆಮಾತು: ಜಾಗತಿಕ ಮಟ್ಟದಲ್ಲಿ ಭಾರತೀಯರಿಗೆ ಹಿಂದಿಗಿಂತ ಇಂದಿನ ಕಾಲಘಟ್ಟದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಗೌರವವಿದೆ. ಕೆಲಸದ ಅವಕಾಶಗಳು ಕೂಡ ಹೇರಳವಾಗಿದೆ. ಹೀಗಾಗಿ ನಮಗೇನು ಬೇಕು ಎನ್ನುವುದರ ನಿಖರತೆ ನಮ್ಮದಾದರೆ ನಿಜಾರ್ಥದಲ್ಲಿ ಜಗತ್ತು ಒಂದು ಪುಟಾಣಿ ಹಳ್ಳಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ವಲಸೆ ಹೋಗುವುದು ಅಥವಾ ಇಲ್ಲೇ ನೆಲಸುವುದು ತೀರಾ ವೈಯಕ್ತಿಕ ವಿಚಾರ. ಇದು ಸರಿ ಇದು ತಪ್ಪು ಎನ್ನಲು ಬಾರದು. ಏಕೆಂದರೆ ಮುಂದಿನ ಎರಡು ದಶಕ ಭಾರತದಲ್ಲಿ ಉತ್ಪನ್ನವಾಗುವ ಅವಕಾಶಗಳನ್ನ ಸರಿಯಾಗಿ ಬಳಸಿಕೊಂಡರೆ ಜಗತ್ತು ನಿಬ್ಬೆರಗಾಗಿ ನಿಂತು ನೋಡುವ ಸಾಧನೆ ನಮ್ಮಲ್ಲಿ ಯಾರು ಬೇಕಾದರೂ ಮಾಡಬಹುದು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com