ಹೆಪಟೈಟಿಸ್ ಬಿ ಎಂಬ ಸಾಂಕ್ರಾಮಿಕ ರೋಗ (ಕುಶಲವೇ ಕ್ಷೇಮವೇ)

ಹೆಪಟೈಟಿಸ್ ಬಿ ಯಕೃತ್ತಿನ (Liver) ಒಂದು ಸಾಂಕ್ರಾಮಿಕ ರೋಗ. ಹೆಪಟೈಟಿಸ್ ಬಿ ಎಂಬ ವೈರಸ್ಸಿನಿಂದ (ಎಚ್.ಬಿ.ವಿ.) ರೋಗ ಬರುತ್ತದೆ.
ಹೆಪಟೈಟಿಸ್ ಬಿ (ಸಾಂಕೇತಿಕ ಚಿತ್ರ)
ಹೆಪಟೈಟಿಸ್ ಬಿ (ಸಾಂಕೇತಿಕ ಚಿತ್ರ)

ಹೆಪಟೈಟಿಸ್ ಬಿ ಯಕೃತ್ತಿನ (Liver) ಒಂದು ಸಾಂಕ್ರಾಮಿಕ ರೋಗ. ಹೆಪಟೈಟಿಸ್ ಬಿ ಎಂಬ ವೈರಸ್ಸಿನಿಂದ (ಎಚ್.ಬಿ.ವಿ.) ರೋಗ ಬರುತ್ತದೆ. ಈ ವೈರಸ್ ಸೋಂಕಿನೊಂದಿಗೆ ಸಂಬಂಧಿಸಿದ ಅನಾರೋಗ್ಯ ಮತ್ತು ಅದರ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಕೆಲವರು ಈ ರೋಗ ಬಂದರೂ ಬೇಗನೇ ಗುಣಮುಖರಾಗುತ್ತಾರೆ. ಆದರೆ ಇತರರು ದೀರ್ಘಕಾಲದವರೆಗೆ ಅನಾರೋಗ್ಯಪೀಡಿತರಾಗುತ್ತಾರೆ. ಈ ದೀರ್ಘಕಾಲದ ಸೋಂಕಿನೊಂದಿಗೆ ಸಂಬಂಧಿಸಿದ ರೋಗಗಳ ಜಾಗತಿಕ ಹೊರೆ ಹೆಚ್ಚಾಗಿದೆ. ವಿಶ್ವಾದ್ಯಂತ ಅಂದಾಜು 257 ಮಿಲಿಯನ್ ಜನರು ದೀರ್ಘಕಾಲಿಕವಾಗಿ ಈ ಸೋಂಕಿಗೆ ಒಳಗಾಗಿದ್ದಾರೆ. ಇಂತಹ ದೀರ್ಘಕಾಲದ ಸೋಂಕು ಯಕೃತ್ತಿನ ವೈಫಲ್ಯ ಅಥವಾ ಯಕೃತ್ತಿನ ಕ್ಯಾನ್ಸರಿನಂತಹ ತೊಡಕುಗಳಿಗೆ ಕಾರಣವಾಗುತ್ತದೆ.

ಹೆಪಟೈಟಿಸ್ ಬಿ ರೋಗ ಹೇಗೆ ಬರುತ್ತದೆ?

ಸೋಂಕಿತ ವ್ಯಕ್ತಿಗಳಲ್ಲಿ ರಕ್ತ, ಲಾಲಾರಸ (ಜೊಲ್ಲು), ವೀರ್ಯ ಮತ್ತು ಯೋನಿ ದ್ರವಗಳಲ್ಲಿ ಎಚ್.ಬಿ.ವಿ. ಇರುತ್ತದೆ ಮತ್ತು ಆ ದ್ರವಗಳ ಸಂಪರ್ಕದ ಮೂಲಕ ವೈರಸ್ ಹರಡುತ್ತದೆ. ಜಾಗತಿಕವಾಗಿ ಜನನದ ಸಮಯದಲ್ಲಿ ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆ ಮತ್ತು ಬಾಲ್ಯದ ಪ್ರಸರಣ (ಸೋಂಕಿತ ವ್ಯಕ್ತಿಯ ಸಂಪರ್ಕದ ಮೂಲಕ) ಎಚ್.ಬಿ.ವಿ. ಸೋಂಕಿನ ಪ್ರಮುಖ ವಿಧಾನಗಳಾಗಿವೆ. ಲೈಂಗಿಕ ಸಂಪರ್ಕ ಮತ್ತು ಸೂಜಿ ಹಂಚಿಕೆ ಮೂಲಕ (ಉದಾ, ಡ್ರಗ್ಸ್ ಬಳಕೆದಾರರಲ್ಲಿ) ಸೋಂಕಿತ ವ್ಯಕ್ತಿಗಳಿಗೆ ಎಚ್.ಬಿ.ವಿ. ಹರಡುವ ಇತರ ವಿಧಾನಗಳಾಗಿವೆ. ಇದು ಆಹಾರ ಅಥವಾ ನೀರಿನ ಮೂಲಕ ಹರಡುವುದಿಲ್ಲ. ಇದು ಯಾವುದೇ ವಯಸ್ಸಿನ ವ್ಯಕ್ತಿಗಳ ಮೇಲೆ ಪರಿಣಾಮ ಬೀರಬಹುದು. ಸೋಂಕು ಪೀಡಿತ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕ, ಸೂಜಿಗಳು, ಸಿರಿಂಜ್‌ಗಳು ಮತ್ತು ಅಗತ್ಯ ವಸ್ತುಗಳನ್ನು ಅಂತಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದು ಅಥವಾ ಸೋಂಕುಪೀಡಿತ ತಾಯಿಯಿಂದ ಹುಟ್ಟಲಿರುವ ಮಗುವಿಗೆ ರೋಗ ಬರಬಹುದು. 

ಹೆಪಟೈಟಿಸ್ ರೋಗದ ವಿಧಗಳು

ಹೆಪಟೈಟಿಸ್ ಎನ್ನುವುದು ಮೂಲತ: ಯಕೃತ್ತಿನ ಉರಿಯೂತಕ್ಕೆ ಸಂಬಂಧಿಸಿರುವ ಸಮಸ್ಯೆ. ಇದು ಸೌಮ್ಯ ಅಥವಾ ತೀವ್ರತರವಾದ ತೊಂದರೆಯಾಗಿರಬಹುದು. ಹೆಪಟೈಟಿಸ್ಸಿನಲ್ಲಿ ಎ, ಬಿ, ಸಿ ಡಿ ಮತ್ತು ಇ ಎಂಬ ಐದು ವಿಧಗಳಿವೆ. ಇದು ಒಂದಕ್ಕಿಂತ ಒಂದು ಭಿನ್ನ. ಹೀಗಾಗಿ ಒಂದೊಂದಕ್ಕೂ ರೋಗಲಕ್ಷಣಗಳು ಬೇರೆಯಾಗಿವೆ. ಇದರಲ್ಲಿ ಕೆಲವು ಬಹಳ ಅಪಾಯಕಾರಿ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ದೀರ್ಘಕಾಲದ ಕಾಯಿಲೆಗಳಾಗಿವೆ. ಹೆಪಟೈಟಿಸ್ ಬಿ ಹೆಪಟೈಟಿಸ್ ಸಿ ಗಿಂತ ಐದರಿಂದ ಹತ್ತು ಪಟ್ಟು ಗಂಭೀರವಾದ ಸಾಂಕ್ರಾಮಿಕ ರೋಗವಾಗಿದೆ. 

ಹೆಪಟೈಟಿಸ್ ರೋಗದ ಲಕ್ಷಣಗಳು

ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಜ್ವರ, ವಾಕರಿಕೆ, ವಾಂತಿ, ದೌರ್ಬಲ್ಯ, ತುರಿಕೆ, ಹಸಿವಾಗದೇ ಇರುವುದು ಮತ್ತು ಕಾಮಾಲೆಗಳು ಸಾಮಾನ್ಯವಾಗಿ ಹೆಪಟೈಟಿಸ್ ಬಿ ಸೋಂಕು ತಗುಲಿದರೆ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಹೆಪಟೈಟಿಸ್ ಬಿ ತೀವ್ರ ಮತ್ತು ದೀರ್ಘಕಾಲದ ಯಕೃತ್ತಿನ ಸಮಸ್ಯೆಯನ್ನು ಉಂಟು ಮಾಡಬಹುದು. ಇದು ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಉಂಟುಮಾಡುವ ಕಾರಣದಿಂದ ಕ್ರಮೇಣ ಮಾರಣಾಂತಿಕವಾಗಬಹುದು. 

ಹೆಪಟೈಟಿಸ್ ಬಿ ರೋಗ ಬರದಂತೆ ತಡೆಯುವುದು ಹೇಗೆ?

ಈ ರೋಗ ಬರದಂತೆ ತಡೆಗಟ್ಟಲು ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ಮಾಡುವ ಮೊದಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಲೈಂಗಿಕ ಸಂಪರ್ಕದಿಂದ ಈ ಸಮಸ್ಯೆ ಹರಡುವ ಸಾಧ್ಯತೆ ಅಧಿಕ. ಡ್ರಗ್ಸ್ ಸೇವನೆ ಮಾಡದಿರುವುದೇ ಒಳಿತು. ಏಕೆಂದರೆ ಡ್ರಗ್ಸನ್ನು ಚುಚ್ಚಿಕೊಳ್ಳುವ ಸೂಜಿಯನ್ನು (ಸಿರಿಂಜುಗಳು) ಒಮ್ಮೆಲೇ ಅನೇಕ ಜನರು ಬಳಸಿದರೆ ಈ ರೋಗ ಒಬ್ಬರಿಂಧ ಇನ್ನೊಬ್ಬರಿಗೆ ಇದು ಸುಲಭವಾಗಿ ಹರಡಬಹುದು. ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುವಾಗಲೂ ಇಂಜಕ್ಷನ್ ನೀಡುವ ಸೂಜಿ ಎಲ್ಲರಿಗೂ ಪ್ರತ್ಯೇಕವಾಗಿರಬೇಕು. ಆದ್ದರಿಂದ ಅಧಿಕೃತವಾಗಿ ನೋಂದಾಯಿಸಿದ ಆಸ್ಪತ್ರೆಗಳು ಮತ್ತು ವೈದ್ಯರಿಂದ ಚಿಕಿತ್ಸೆಯನ್ನು ಪಡೆಯಬೇಕು. ಅವರು ವೈದ್ಯಕೀಯ ಮಂಡಳಿ ವಿಧಿಸಿರುವ ನಿಯಮಗಳನ್ನು ಪಾಲಿಸುತ್ತಾರೆ. ಹಾಗೆಯೇ ಒಂದೊಮ್ಮೆ ರಕ್ತ ತೆಗೆದುಕೊಳ್ಳುವ ಅಗತ್ಯವಿದ್ದಲ್ಲಿ ನೋಂದಾಯಿತ ರಕ್ತ ನಿಧಿಯಿಂದ ರಕ್ತವನ್ನು ಪಡೆಯಬೇಕು. ಅಧಿಕೃತವಾಗಿ ನೋಂದಣಿಯಾಗದೇ ಇರುವ, ರಸ್ತೆ ಬದಿಯಲ್ಲಿ, ಜಾತ್ರೆಗಳಲ್ಲಿ ಹಚ್ಚೆ ಹಾಕಿಸಿಕೊಳ್ಳುವುದನ್ನು ತಪ್ಪಿಸಬೇಕು. ಹೇರ್ ಕಟಿಂಗ್ ಸಲೂನುಗಳಲ್ಲಿ ಶೇವ್ ಮಾಡಿಸಿಕೊಳ್ಳುವ ಮೊದಲು ಅಲ್ಲಿರುವ ಬ್ಲೇಡಿನಂತಹ ವಸ್ತುಗಳು ಹೊಸದಾಗಿವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಅವುಗಳನ್ನು ಸ್ಯಾನಿಟೈಸ್ ಮಾಡಿದ್ದರೆ ಉತ್ತಮ. ಸೋಂಕಿನ ಸಾಧ್ಯತೆಯನ್ನು ತಡೆಗಟ್ಟಲು ಹೆಪಟೈಟಿಸ್ ಬಿ ಲಸಿಕೆಯನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಯಕೃತ್ತಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು. 

ಹೆಪಟೈಟಿಸ್ ಬಿ ರೋಗಕ್ಕೆ ಚಿಕಿತ್ಸೆ

ಹೆಪಟೈಟಿಸ್ ಬಿ ರೋಗಲಕ್ಷಣಗಳನ್ನು ಗುರುತಿಸಿದ ನಂತರ ಲಸಿಕೆಯನ್ನು ಪಡೆಯುವುದು ಅತ್ಯುತ್ತಮ ಚಿಕಿತ್ಸೆಯ ಆಯ್ಕೆಗಳು ಕ್ಯಾಪ್ಸುಲ್‌ಗಳು, ಮಾತ್ರೆಗಳು ಮತ್ತು ದ್ರವಗಳ ರೂಪದಲ್ಲಿ ಔಷಧಿಗಳನ್ನು ಒಳಗೊಂಡಿರುತ್ತವೆ. ಜೀವನಶೈಲಿಯ ಬದಲಾವಣೆಗಳು -ಲೈಂಗಿಕತೆಯನ್ನು ಸುರಕ್ಷಿತವಾಗಿಸುವಂತಹ ಸರಳ ಜೀವನಶೈಲಿಯ ಬದಲಾವಣೆಗಳು ಹೆಪಟೈಟಿಸ್ ಬಿ ಚಿಕಿತ್ಸೆಯ ಪ್ರಧಾನ ಆಯ್ಕೆಗಳಲ್ಲಿ ಒಂದಾಗಿದೆ ಆದಷ್ಟೂ ರೇಜರ್‌ಗಳು, ಟೂತ್‌ಬ್ರಶ್‌ಗಳು, ಬ್ಲೇಡ್‌ಗಳು ಮತ್ತು ಇತರ ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಈ ರೋಗ ಗಂಭೀರವಾಗಿರುವುದರಿಂದ ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತಿವರ್ಷ ವಿಶ್ವ ಹೆಪಟೈಟಿಸ್ ದಿನವನ್ನು ಜುಲೈ 28 ರಂದು ಆಚರಿಸಲಾಗುತ್ತಿದೆ.

ಆರಂಭದಲ್ಲಿ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದದಲ್ಲಿ ಔಷಧಿಗಳು ಮತ್ತು ಚಿಕಿತ್ಸೆಗಳಿವೆ. ಇವುಗಳ ಜೊತೆಗೆ ಜೀವನಶೈಲಿಯಲ್ಲಿ ಸೂಕ್ತ ಬದಲಾವಣೆಗಳು ಮತ್ತು ಆಹಾರ ಪದ್ಧತಿಗಳನ್ನು ಪಾಲನೆ ಮಾಡಿದರೆ ಈ ರೋಗದಿಂದ ದೂರವಿರಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com