ಪ್ಯಾಂಕ್ರಿಯಾಟೈಟಿಸ್ ಎಂಬ ಮೇದೋಜೀರಕ ಗ್ರಂಥಿಯ ಉರಿಯೂತ ಸಮಸ್ಯೆ (ಕುಶಲವೇ ಕ್ಷೇಮವೇ)

ಮೇದೋಜೀರಕ ಗ್ರಂಥಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಈ ಗ್ರಂಥಿಯು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಕಾರ್ಯ ದೊಡ್ಡದಾಗಿದೆ.
ಪ್ಯಾಂಕ್ರಿಯಾಟೈಟಿಸ್ (ಸಂಗ್ರಹ ಚಿತ್ರ)
ಪ್ಯಾಂಕ್ರಿಯಾಟೈಟಿಸ್ (ಸಂಗ್ರಹ ಚಿತ್ರ)

ಮೇದೋಜೀರಕ ಗ್ರಂಥಿಯು ನಮ್ಮ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಅಂಗಗಳಲ್ಲಿ ಒಂದು. ಈ ಗ್ರಂಥಿಯು ಗಾತ್ರದಲ್ಲಿ ಸಣ್ಣದಾಗಿದ್ದರೂ ಇದರ ಕಾರ್ಯ ದೊಡ್ಡದಾಗಿದೆ. ಇದು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿಯಾಗಿದೆ. ಮುಖ್ಯವಾಗಿ ಇದು ಎರಡು ಕಾರ್ಯಗಳನ್ನು ಮಾಡುತ್ತದೆ. ಮೊದಲನೆಯದಾಗಿ ಇದು ಆಹಾರ ಸಣ್ಣ ಕರುಳಿನಲ್ಲಿ ಜೀರ್ಣವಾಗಲು ಜೀರ್ಣಕಾರಿ ಕಿಣ್ವಗಳನ್ನು ಹರಿಸುತ್ತದೆ. ಕೊಬ್ಬು ಮತ್ತು ಪ್ರೋಟೀನುಗಳನ್ನು ಒಡೆದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಎರಡನೆಯದಾಗಿ ಇದು ಇನ್ಸುಲಿನ್ ಮತ್ತು ಗ್ಲುಕಗನ್‌ನಂತಹ ಹಾರ್ಮೋನುಗಳನ್ನು ರಕ್ತಪ್ರವಾಹಕ್ಕೆ ಬಿಡುಗಡೆ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಈ ಗ್ರಂಥಿಗೆ ತೊಂದರೆಯಾದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. 

ಪ್ಯಾಂಕ್ರಿಯಾಟೈಟಿಸ್ ಎಂದರೇನು?

ಪ್ಯಾಂಕ್ರಿಯಾಟೈಟಿಸ್ ಮೇದೋಜೀರಕ ಗ್ರಂಥಿಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅನಾರೋಗ್ಯಕರ ಉರಿಯೂತ. ಇದರಲ್ಲಿ ಎರಡು ವಿಧಗಳಿವೆ: ತೀವ್ರ ಪ್ಯಾಂಕ್ರಿಯಾಟೈಟಿಸ್ ಮತ್ತು ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್. ತೀವ್ರ ತರಹದ ಪ್ಯಾಂಕ್ರಿಯಾಟೈಟಿಸ್ ಆದರೆ ಮೇದೋಜೀರಕ ಗ್ರಂಥಿಯು ಇದ್ದಕ್ಕಿದ್ದಂತೆ ಊದಿಕೊಳ್ಳಲು ಆರಂಭಿಸುತ್ತದೆ. ಅತಿ ಹೆಚ್ಚು ಮದ್ಯಪಾನ ಮಾಡುತ್ತಿದ್ದರೆ ದೀರ್ಘ ಕಾಲದ ಪ್ಯಾಂಕ್ರಿಯಾಟೈಟಿಸ್ ಉಂಟಾಗುತ್ತದೆ. ಈ ಗ್ರಂಥಿಯ ಉರಿಯೂತದ ಕೋಶಗಳು ಮತ್ತು ರಾಸಾಯನಿಕಗಳ ಉತ್ಪಾದನೆಯು ಶ್ವಾಸಕೋಶಗಳು, ಮೂತ್ರಪಿಂಡಗಳು ಮತ್ತು ಹೃದಯವನ್ನು ಗಾಯಗೊಳಿಸಬಹುದು. ಇದು ರಕ್ತನಾಳಗಳಲ್ಲಿ ಕಿರಿಕಿರಿ, ಉರಿಯೂತ ಮತ್ತು ದಟ್ಟಣೆಗೆ ಕಾರಣವಾಗುತ್ತದೆ.

ಪ್ಯಾಂಕ್ರಿಯಾಟೈಟಿಸ್ ಲಕ್ಷಣಗಳು

ದೀರ್ಘ ಕಾಲದ ಪ್ಯಾಂಕ್ರಿಯಾಟೈಟಿಸ್‌ನ ಲಕ್ಷಣಗಳು ಹಲವು ವರ್ಷಗಳವರೆಗೆ ಗೋಚರಿಸುವುದಿಲ್ಲ. ಆದರೆ ತೀವ್ರತರದ ಪ್ಯಾಂಕ್ರಿಯಾಟೈಟಿಸ್ ರೋಗ ಲಕ್ಷಣಗಳು ಬೇಗನೇ ಕಾಣಿಸಿಕೊಳ್ಳುತ್ತವೆ. ಹೊಟ್ಟೆಯ ಮೇಲ್ಭಾಗದಲ್ಲಿ ನಿಧಾನವಾಗಿ ಅಥವಾ ಇದ್ದಕ್ಕಿದ್ದಂತೆ ನೋವು ಹೆಚ್ಚಾಗಿ ಕಾಣಿಸಿಕೊಳ್ಳುವುದು, ಜ್ವರ, ವಾಕರಿಕೆ, ಊಟ ಸೇರದಿರುವುದು, ಕೆಲವೊಮ್ಮೆ ಬೆನ್ನು ನೋವು ಮತ್ತು ವಾಂತಿ ಇದರ ಲಕ್ಷಣಗಳು. ಇತ್ತೀಚೆಗೆ ಧೂಮಪಾನ ಮತ್ತು ಮದ್ಯಪಾನದಂತಹ ದುರಭ್ಯಾಸಗಳು ಸಾಮಾನ್ಯವಾಗಿರುವ ಕಾರಣದಿಂದ ಪ್ಯಾಂಕ್ರಿಯಾಟೈಟಿಸ್ ಜೀವನಶೈಲಿಯ ರೋಗವಾಗಿ ಮಾರ್ಪಟ್ಟಿರುವುದು ಕಂಡುಬಂದಿದೆ. 

ಪ್ಯಾಂಕ್ರಿಯಾಟೈಟಿಸ್ ಬರಲು ಕಾರಣಗಳು ಮತ್ತು ಚಿಕಿತ್ಸೆ

ಪ್ಯಾಂಕ್ರಿಯಾಟೈಟಿಸ್ ಬರಲು ಕಾರಣ ಪಿತ್ತಜನಕಾಂಗದ ಕಲ್ಲುಗಳು (ಗಾಲ್ ಸ್ಟೋನ್), ಅತಿಯಾದ ಮದ್ಯಪಾನ, ಧೂಮಪಾನ, ಕೆಲವು ಔಷಧಗಳು, ರಕ್ತದಲ್ಲಿ ಟ್ರೈಗ್ಲಿಸರೈಡುಗಳ ಹೆಚ್ಚಾಗುವಿಕೆ (ಕೊಲೆಸ್ಟೆರಾಲ್ ಹೆಚ್ಚಳ) ಮತ್ತು ಕೆಲವು ಸೋಂಕುಗಳು. ಸಾಮಾನ್ಯವಾಗಿ ಈ ರೋಗಕ್ಕೆ ಆಸ್ಪತ್ರೆಗೆ ದಾಖಲಾಗಿ ರಕ್ತ ಪರೀಕ್ಷೆ, ಪ್ಯಾಂಕ್ರಿಯಾಟಿಕ್, ಸಿಟಿ-ಎಂ ಆರ್ ಐ ಸ್ಕ್ಯಾನಿಂಗ್ ಪರೀಕ್ಷೆಗಳನ್ನು ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಕೆಲವೊಂದು ತೀವ್ರ ಪ್ರಕರಣಗಳಲ್ಲಿ ಗ್ರಂಥಿಯಿಂದ ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಕೆಲವು ರೋಗಿಗಳಿಗೆ ನಾಲ್ಕೈದು ದಿನಗಳು ಅಥವಾ ಒಂದು ವಾರದ ತನಕ ಚಿಕಿತ್ಸೆ ತೆಗೆದುಕೊಂಡರೆ ರೋಗ ಗುಣವಾಗಬಹುದು. ಇತರರಿಗೆ ಹಲವಾರು ವಾರಗಳ ತನಕ ಚಿಕಿತ್ಸೆ ಬೇಕಾಗಬಹುದು. 

ಪ್ಯಾಂಕ್ರಿಯಾಟೈಟಿಸ್ ನಿಯಂತ್ರಣಕ್ಕೆ ಆಹಾರ ಮತ್ತು ಜೈವನಶೈಲಿ ಅತಿಮುಖ್ಯ

ಮೇದೋಜೀರಕ ಗ್ರಂಥಿಗೆ ಹಾನಿಯಾಗದಂತೆ ತಡೆಯಲು ಆದಷ್ಟೂ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ಸಮತೋಲನ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ದೇಹದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು. ಜಂಕ್ ಫುಡ್ ಸೇವನೆ ಸಲ್ಲದು. ಸಕ್ಕರೆ ಇರುವ ಪಾನೀಯಗಳು ಅದರಲ್ಲಿಯೂ ವಿಶೇಷವಾಗಿ ಹಣ್ಣಿನ ರಸಗಳು ಮತ್ತು ಸಕ್ಕರೆ ಹೆಚ್ಚಾಗಿ ಬೆರೆತಿರುವ ಸೋಡಾಗಳನ್ನು ಹೆಚ್ಚಾಗಿ ಕುಡಿಯಬಾರದು. ಜೊತೆಗೆ ಬಿಳಿ ಬ್ರೆಡ್, ಕೇಕ್ ಮತ್ತು ಕುಕೀಗಳಂತಹ ಸಂಸ್ಕರಿಸಿದ ಕಾರ್ಬೋಹೈಡ್ರೇಟುಗಳಿರುವ ಆಹಾರಗಳಿಂದ ದೂರವಿರುವುದು ಒಳ್ಳೆಯದು. 

ದೈನಂದಿನ ಆಹಾರದಲ್ಲಿ ಬಾಳೆಹಣ್ಣು, ಸೀಬೆ, ಸಪೋಟ, ಸೇಬು, ದ್ರಾಕ್ಷಿ ಮತ್ತು ಚರ‍್ರಿಯಂತಹ ತಾಜಾ ಹಣ್ಣುಗಳು, ಆಲೂಗಡ್ಡೆ, ಹಾಗಲಕಾಯಿ, ಬಟಾಣಿ, ಅಣಬೆಗಳು, ಕ್ಯಾರೆಟ್, ಗೆಣಸು, ಕೋಸು, ಮತ್ತು ಕಡು ಹಸಿರು ಮೆಂತ್ಯ, ದಂಟು, ಹರಿವೆ, ಪಾಲಕ್, ಸಬ್ಬಸಿಗೆ, ಪುದಿನ, ಕೊತ್ತಂಬರಿ ಸೊಪ್ಪುಗಳನ್ನು ಸೇವಿಸಬೇಕು. ಜೊತೆಗೆ ಅರಿಶಿಣ, ಶುಂಠಿ, ಮಸೂರ್ ಧಾಲ್, ಬೀನ್ಸ್, ಸೋಯಾಬೀನ್ ಮತ್ತು ಟೋಫು, ಓಟ್ಸ್, ಕೆಂಪು ಅಕ್ಕಿ ಮತ್ತು ಬಾರ್ಲಿಗಳು ನಮ್ಮ ಆಹಾರದಲ್ಲಿ ಸೇರಿರಬೇಕು. ಕಡಿಮೆ ಕೊಬ್ಬಿನ ಅಂಶವಿರುವ ಡೈರಿ ಪದಾರ್ಥಗಳು, ಮೊಟ್ಟೆ, ಹಸಿರು ಟೀ, ತೆಂಗಿನಕಾಯಿ, ಕುಸುಬೆ ಎಣ್ಣೆ, ತೆಂಗಿನೆಣ್ಣೆ ಮತ್ತು ಕಡಲೆಕಾಯಿ ಎಣ್ಣೆ ಇದ್ದರೆ ಬಹಳ ಉತ್ತಮ. 

ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಸಾಕಷ್ಟು ನಾರಿನಂಶ ಇರುವುದು ಬಹಳ ಮುಖ್ಯ. ನಾರಿನಂಶವು ದೇಹದಿಂದ ತ್ಯಾಜ್ಯಪದಾರ್ಥಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಒಣಗಿದ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಖರ್ಜೂರದಂತಹ ಡ್ರೈ ಫ್ರೂಟ್ಸ್), ಸಲಾಡ್ಗಳು ಮತ್ತು ಓಟ್ಸ್ ಸೇವಿಸುವುದು ಹಿತಕಾರಿ. ಎಲ್ಲಕ್ಕಿಂತ ಮುಖ್ಯವಾಗಿ ಸಾಕಷ್ಟು ನೀರನ್ನು ದಿನವೂ ತಪ್ಪದೇ ಕುಡಿಯಬೇಕು. ವ್ಯಾಯಾಮವನ್ನು ನಿಯಮಿತವಾಗಿ ಮಾಡಬೇಕು. ವಿಶೇಷವಾಗಿ ಯೋಗ, ನಡಿಗೆ, ನಿಯಮಿತವಾದ ಧ್ಯಾನಾಭ್ಯಾಸ ಮತ್ತು ಮನಸ್ಸನ್ನು ನೆಮ್ಮದಿಯಾಗಿಕೊಳ್ಳುವುದು ಒಟ್ಟಾರೆ ಆರೋಗ್ಯಕ್ಕೆ ಸಹಾಯಕಾರಿ. ಈ ಉರಿಯೂತದ ದೀರ್ಘಕಾಲದ ತೊಡಕುಗಳು ಮಧುಮೇಹ, ಅಪೌಷ್ಟಿಕತೆ ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರನ್ನು ಒಳಗೊಂಡಿರಬಹುದು. ಆದ್ದರಿಂದ ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದಿರಬೇಕು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com