ಕರುಳಿನಲ್ಲಿರುವ ಆರೋಗ್ಯಕಾರಕ ಸೂಕ್ಷ್ಮಾಣುಜೀವಿಗಳು (ಕುಶಲವೇ ಕ್ಷೇಮವೇ)

ಕರುಳಿನ ಸೂಕ್ಷ್ಮಾಣುಜೀವಿಗಳ ಪ್ರಮುಖ ಕೆಲಸ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದು — ಅದರಲ್ಲಿಯೂ ವಿಶೇಷವಾಗಿ ನಮ್ಮ ದೇಹಕ್ಕೆ ಸ್ವತಃ ಜೀರ್ಣಿಸಲು ಆಗದ ಭಾಗಗಳನ್ನು ಒಡೆಯುವುದು....
Gut microbes (file photo)
ಕರುಳಿನಲ್ಲಿರುವ ಆರೋಗ್ಯಕಾರಕ ಸೂಕ್ಷ್ಮಾಣುಜೀವಿಗಳು (ಸಾಂಕೇತಿಕ ಚಿತ್ರ)online desk
Updated on

ನಮ್ಮ ಜೀರ್ಣಾಂಗವ್ಯೂಹದೊಳಗೆ ಅದರಲ್ಲಿಯೂ ಮುಖ್ಯವಾಗಿ ದೊಡ್ಡ ಕರುಳಿನಲ್ಲಿ ಟ್ರಿಲಿಯನ್ನುಗಟ್ಟಲೆ ಸೂಕ್ಷ್ಮಾಣುಜೀವಿಗಳು ಇವೆ. ಇವುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಇತರ ಸೂಕ್ಷ್ಮಾಣುಜೀವಿಗಳು ಸೇರಿವೆ. ಸಾಮಾನ್ಯವಾಗಿ "ಸೂಕ್ಷ್ಮಾಣುಜೀವಿಗಳು" ಎಂಬ ಹೆಸರು ಹಾನಿಕಾರಕವೆಂದು ತೋರುತ್ತದೆಯಾದರೂ ಕರುಳಿನಲ್ಲಿರುವ ಬಹುತೇಕ ಸೂಕ್ಷ್ಮಾಣುಜೀವಿಗಳು ನಮ್ಮ ಆರೋಗ್ಯಕ್ಕೆ ಸಹಾಯಕವಾಗಿವೆ ಹಾಗೂ ನಿರುಪದ್ರವಿಯಾಗಿವೆ.

ಪ್ರತಿಯೊಬ್ಬ ವ್ಯಕ್ತಿಯ ಕರುಳಿನ ಸೂಕ್ಷ್ಮಾಣುಜೀವಿಗಳು ವಿಶಿಷ್ಟವಾಗಿವೆ. ಬೆರಳಚ್ಚು ಇದ್ದ ಹಾಗೆ. ಇವು ಜನನ ವಿಧಾನ (ಸಾಮಾನ್ಯ ಹೆರಿಗೆ ಅಥವಾ ಸಿ-ಸೆಕ್ಷನ್), ಸ್ತನ್ಯಪಾನ, ಆಹಾರ, ಪರಿಸರ, ಔಷಧಿಗಳು (ವಿಶೇಷವಾಗಿ ಆಂಟಿಬಯಾಟಿಕ್ಸ್), ವಯಸ್ಸು ಮತ್ತು ಜೀವನಶೈಲಿಯಿಂದ ರೂಪುಗೊಳ್ಳುತ್ತವೆ. ದೇಹದೊಂದಿಗೆ ಆರೋಗ್ಯಕರವಾಗಿ ಒಟ್ಟಾಗಿ ಕೆಲಸ ಮಾಡುವ ಕರುಳಿನ ಸೂಕ್ಷ್ಮಾಣುಜೀವಿಗಳು ವೈವಿಧ್ಯಮಯ ಸಮತೋಲನವನ್ನು ಹೊಂದಿರುತ್ತದೆ.

ಕರುಳಿನ ಸೂಕ್ಷ್ಮಾಣುಜೀವಿಗಳ ಕಾರ್ಯ

ಕರುಳಿನ ಸೂಕ್ಷ್ಮಾಣುಜೀವಿಗಳ ಪ್ರಮುಖ ಕೆಲಸ ಆಹಾರ ಜೀರ್ಣಕ್ರಿಯೆಗೆ ಸಹಾಯ ಮಾಡುವುದು — ಅದರಲ್ಲಿಯೂ ವಿಶೇಷವಾಗಿ ನಮ್ಮ ದೇಹಕ್ಕೆ ಸ್ವತಃ ಜೀರ್ಣಿಸಲು ಆಗದ ಭಾಗಗಳನ್ನು ಒಡೆಯುವುದು. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಬೇಳೆಗಳಲ್ಲಿ ಇರುವ ಆಹಾರದ ನಾರುಗಳನ್ನು ಕರುಳಿನ ಬ್ಯಾಕ್ಟೀರಿಯಾಗಳು ಹುದುಗಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅವು ಬ್ಯುಟೈರೇಟ್, ಅಸಿಟೇಟ್, ಪ್ರೊಪಿಯೊನೇಟ್ ಎಂಬ ಸಣ್ಣ ಸರಪಳಿ ಕೊಬ್ಬಿನಾಮ್ಲಗಳನ್ನು ಉತ್ಪಾದಿಸುತ್ತವೆ. ಇವು ಕರುಳಿನ ಒಳಪದರದ ಜೀವಕೋಶಗಳನ್ನು ಪೋಷಿಸಿ, ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ನೆರವಾಗುತ್ತವೆ.

ಕರುಳಿನ ಸೂಕ್ಷ್ಮಾಣುಜೀವಿಗಳು ಪೋಷಕಾಂಶಗಳ ಶೋಷಣೆಯಲ್ಲೂ ಮುಖ್ಯ ಪಾತ್ರ ವಹಿಸುತ್ತವೆ. ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಾದ ವಿಟಮಿನ್ ಕೆ ಹಾಗೂ ಶಕ್ತಿ ಉತ್ಪಾದನೆ ಮತ್ತು ಮೆದುಳಿನ ಸಮರ್ಪಕ ಕಾರ್ಯಕ್ಕೆ ಮುಖ್ಯವಾದ ಕೆಲವು ಬಿ ಸಮೂಹದ ಜೀವಸತ್ವಗಳ ನಿರ್ಮಾಣದಲ್ಲೂ ಇವು ಸಹಕಾರಿಯಾಗಿವೆ.

ಕರುಳಿನ ಆರೋಗ್ಯ

ನಮ್ಮ ರೋಗನಿರೋಧಕ ವ್ಯವಸ್ಥೆಯ ದೊಡ್ಡ ಭಾಗ ಕರುಳಿನಲ್ಲೇ ಇದೆ. ಕರುಳಿನ ಸೂಕ್ಷ್ಮಾಣುಜೀವಿಗಳು ನಿರಂತರವಾಗಿ ಜೀವಕೋಶಗಳ ಜೊತೆ ಸಂವಹನ ನಡೆಸಿ, ಹಾನಿಕಾರಕ ಜೀವಾಣುಗಳು ಮತ್ತು ಹಾನಿಕಾರಕವಲ್ಲದ ಪದಾರ್ಥಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ತರಬೇತಿ ನೀಡುತ್ತವೆ. ಇದರ ಪರಿಣಾಮವಾಗಿ ಅನಗತ್ಯ ಉರಿಯೂತ ಹಾಗೂ ಅಲರ್ಜಿಯ ಪ್ರತಿಕ್ರಿಯೆಗಳ ಅಪಾಯ ಕಡಿಮೆಯಾಗುತ್ತದೆ. ರೋಗನಿರೋಧಕತೆಯೂ ಹೆಚ್ಚುತ್ತದೆ.

ಸೂಕ್ಷ್ಮಾಣುಜೀವಿಗಳ ಸಮತೋಲನ ಸರಿಯಾಗಿದ್ದರೆ ಕರುಳಿನ ಒಳಪದರ ಬಲವಾಗಿದ್ದು ರಕ್ಷಣಾತ್ಮಕ ತಡೆಗೋಡೆಯಾಗಿ ಕೆಲಸ ಮಾಡುತ್ತದೆ. ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಪದಾರ್ಥಗಳು ರಕ್ತಪ್ರವಾಹಕ್ಕೆ ಪ್ರವೇಶಿಸುವುದನ್ನು ತಡೆಯಬಹುದು. ಈ ಸಮತೋಲನ ಹದಗೆಟ್ಟರೆ ಡಿಸ್ಬಯೋಸಿಸ್ ಎಂಬ ಸಮಸ್ಯೆ ಬರುತ್ತದೆ. ಅಂದರೆ ಕರುಳಿನ ತಡೆಗೋಡೆ ದುರ್ಬಲವಾಗಿ “ಸೋರುವ ಕರುಳು” ಸ್ಥಿತಿ ಉಂಟಾಗಬಹುದು. ಇದು ಉರಿಯೂತ ಹೆಚ್ಚಾಗಲು ಕಾರಣವಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಹಾನಿಕಾರಕ ಸೂಕ್ಷ್ಮಾಣುಜೀವಿಗಳ ಜೊತೆ ಸ್ಥಳ ಮತ್ತು ಪೋಷಕಾಂಶಗಳಿಗಾಗಿ ಸ್ಪರ್ಧಿಸುತ್ತವೆ. ಕೆಲವು ವೇಳೆ ಅವು ಅಪಾಯಕಾರಿ ಜೀವಾಣುಗಳ ಬೆಳವಣಿಗೆಯನ್ನು ತಡೆಯುವ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಹೀಗಾಗಿ ಆರೋಗ್ಯಕರ ಕರುಳಿನ ಸೂಕ್ಷ್ಮಾಣುಜೀವಿಗಳು ನಮ್ಮ ದೇಹಕ್ಕೆ ನೈಸರ್ಗಿಕ ರಕ್ಷಣಾ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತವೆ.

Gut microbes (file photo)
ಆರೋಗ್ಯಕ್ಕಾಗಿ ಆರೋಮಾ ಥೆರಪಿ (ಕುಶಲವೇ ಕ್ಷೇಮವೇ)

ಅಂಟಿಬಯಾಟಿಕ್ ಔಷಧಿಗಳು ಜೀವ ರಕ್ಷಕವಾದರೂ ಅವು ಕೆಲವೊಮ್ಮೆ ಹೊಟ್ಟೆನೋವು ಅಥವಾ ಅತಿಸಾರ ಉಂಟುಮಾಡುತ್ತವೆ. ಅವು ಹಾನಿಕಾರಕ ಜೀವಾಣುಗಳ ಜೊತೆಗೆ ಉಪಕಾರಿ ಕರುಳಿನ ಬ್ಯಾಕ್ಟೀರಿಯಾಗಳನ್ನೂ ನಾಶಪಡಿಸಿ ತಾತ್ಕಾಲಿಕ ಅಸಮತೋಲನ ಉಂಟುಮಾಡಬಹುದು. ಆದ್ದರಿಂದ ಆಂಟಿಬಯಾಟಿಕ್ ಔಷಧಿಗಳನ್ನು ಅಗತ್ಯವಿದ್ದಾಗ ಮಾತ್ರ ತೆಗೆದುಕೊಳ್ಳಬೇಕು.

ಕರುಳು ಮತ್ತು ಮೆದುಳಿನ ನಿಕಟ ಸಂಪರ್ಕ

ಕರುಳು ಮತ್ತು ಮೆದುಳು ಪರಸ್ಪರ ನಿಕಟವಾಗಿ ಸಂಪರ್ಕ ಹೊಂದಿವೆ - ಇದನ್ನು ʼಕರುಳು–ಮೆದುಳು ಅಕ್ಷʼ ಎಂದು ಕರೆಯುತ್ತಾರೆ. ಕರುಳಿನ ಸೂಕ್ಷ್ಮಾಣುಜೀವಿಗಳು ಸೆರೋಟೋನಿನ್, ಡೋಪಮೈನ್ ಮುಂತಾದ ಮನಸ್ಥಿತಿ ಮತ್ತು ಮೆದುಳಿನ ಕಾರ್ಯಕ್ಕೆ ಸಂಬಂಧಿಸಿದ ರಾಸಾಯನಿಕಗಳ (ಹಾರ್ಮೋನುಗಳ) ಉತ್ಪಾದನೆಯ ಮೇಲೆ ಪ್ರಭಾವ ಬೀರುತ್ತವೆ. “ಒಳ್ಳೆಯ ಭಾವನೆ”ಯ ರಾಸಾಯನಿಕವೆಂದು ಕರೆಯುವ ಸೆರೋಟೋನಿನ್‌ನ ದೊಡ್ಡ ಭಾಗ ಕರುಳಿನಲ್ಲಿ ಉತ್ಪತ್ತಿಯಾಗುತ್ತದೆ.

ಸಂಶೋಧನೆಗಳು ಕರುಳಿನ ಸೂಕ್ಷ್ಮಾಣುಜೀವಿಗಳ ಅಸಮತೋಲನವು ಆತಂಕ, ಖಿನ್ನತೆ ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರಬಹುದು ಎಂದು ಸೂಚಿಸುತ್ತವೆ. ಇದರಿಂದ ಕರುಳಿನ ಆರೋಗ್ಯವು ನಮ್ಮ ಮನೋಭಾವ ಮತ್ತು ಭಾವನಾತ್ಮಕ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಕರುಳಿನ ಸೂಕ್ಷ್ಮಾಣುಜೀವಿಗಳು ದೇಹದ ಚಯಾಪಚಯ ಕ್ರಿಯೆಯ ಮೇಲೂ ಪ್ರಭಾವ ಬೀರುತ್ತವೆ. ಕೊಬ್ಬು ಸಂಗ್ರಹಿಸುವ ರೀತಿ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಆಹಾರದಿಂದ ಶಕ್ತಿ ಪಡೆಯುವ ವಿಧಾನ ಇವುಗಳ ಮೇಲೆ ಅವು ಪ್ರಭಾವ ಬೀರುತ್ತವೆ. ಕೆಲವು ಸೂಕ್ಷ್ಮಾಣುಜೀವಿ ಮಾದರಿಗಳು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದೊಂದಿಗೆ ಸಂಬಂಧಪಟ್ಟಿವೆ. ಇವುಗಳ ದೀರ್ಘಕಾಲದ ಅಸಮತೋಲನವು ಹೃದ್ರೋಗ ಮತ್ತು ಕೆಲವು ಸ್ವಯಂಪ್ರತಿರೋಧಕ ಕಾಯಿಲೆಗಳ ಜೊತೆ ಸಂಬAಧ ಹೊಂದಿದೆ. ಇಲ್ಲಿ ಏಕೈಕ ಕಾರಣ ಸೂಕ್ಷ್ಮಾಣುಜೀವಿಗಳು ಅಲ್ಲದಿದ್ದರೂ ಅವು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಗಮನಾರ್ಹ.

ಕರುಳಿನ ಆರೋಗ್ಯಕ್ಕೆ ಪೂರಕ ಆಹಾರ

ಕರುಳಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಖಲು ನಾವು ನಾರು ಸಮೃದ್ಧವಾಗಿರುವ ಆಹಾರ ಸೇವಿಸಬೇಕು. ಮೊಸರು, ಮಜ್ಜಿಗೆ, ಇಡ್ಲಿ/ದೋಸೆ, ನೈಸರ್ಗಿಕ ಉಪ್ಪಿನಕಾಯಿ ಮುಂತಾದ ಹುದುಗಿಸಿದ ಆಹಾರಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಹೆಚ್ಚು ಸಂಸ್ಕರಿಸಿದ ಆಹಾರ ಮತ್ತು ಸಕ್ಕರೆ ಸೇವನೆ ಆದಷ್ಟೂ ಕಡಿಮೆ ಮಾಡಬೇಕು. ನಿಯಮಿತ ದೈಹಿಕ ಚಟುವಟಿಕೆಗಳು ದೈಹಿಕ ಸದೃಢತೆಗಾಗಿ ಇರಬೇಕು ಮತ್ತು ಅನಗತ್ಯವಾಗಿ ಆಂಟಿಬಯಾಟಿಕ್ ಔಷಧಗಳ ಸೇವನೆಯನ್ನು ನಿಲ್ಲಿಸಬೇಕು.

ಕೊನೆಮಾತು: ಸರಳವಾಗಿ ಹೇಳುವುದಾದರೆ, ಕರುಳಿನ ಸೂಕ್ಷ್ಮಾಣುಜೀವಿಗಳು ನಮ್ಮ ದೇಹದ “ನಿವಾಸಿಗಳು” ಅಲ್ಲ - ಅವು ನಮ್ಮ ಆರೋಗ್ಯದ ಸಕ್ರಿಯ ಪಾಲುದಾರರು. ಜೀರ್ಣಕ್ರಿಯೆಯಿಂದ ನಮ್ಮ ಮನಸ್ಥಿ:ತಿವರೆಗೆ, ರೋಗನಿರೋಧಕ ಶಕ್ತಿಯಿಂದ ದೀರ್ಘಕಾಲದ ಆರೋಗ್ಯದವರೆಗೆ ಅವುಗಳ ಪ್ರಭಾವ ವ್ಯಾಪಕವಾಗಿದೆ. ಅವುಗಳನ್ನು ಚನ್ನಾಗಿ ಕಾಪಾಡುವುದು ನಮ್ಮ ಆರೋಗ್ಯವನ್ನು ಕಾಪಾಡುವ ಪ್ರಮುಖ ಹೆಜ್ಜೆಯಾಗಿದೆ ಎಂಬುದನ್ನು ನಾವು ನೆನಪಿಡಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com