ಸಿಹಿಕಾರಕ ಸ್ಟೀವಿಯಾ (ಕುಶಲವೇ ಕ್ಷೇಮವೇ)

ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ನಿರಂತರವಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೀವಿಯಾ ಆರೋಗ್ಯಕರ ಪರ್ಯಾಯವಾಗಿ ಗಮನ ಸೆಳೆಯುತ್ತಿದೆ.
Stevia Plant
ಸ್ಟೀವಿಯಾ ಗಿಡDamian Apanasowicz / Pexels.com
Updated on

"ಸಕ್ಕರೆ ಕಡಿಮೆ ಮಾಡಿ" ಮತ್ತು "ಸಿಹಿ ತಿನ್ನುವುದನ್ನು ನಿಯಂತ್ರಿಸಿ" ಎಂಬ ಸಲಹೆ ಇಂದು ಬಹುತೇಕ ಪ್ರತಿಯೊಂದು ಮನೆಯಲ್ಲೂ ಕೇಳಿಬರುತ್ತಿದೆ. ಮಧುಮೇಹ, ಬೊಜ್ಜು, ಅಧಿಕ ರಕ್ತದೊತ್ತಡ, ಕೊಬ್ಬಿನ ಯಕೃತ್ತಿನ ಸಮಸ್ಯೆ, ಹೃದಯರೋಗಗಳಂತಹ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸಿಹಿಯ ಮೇಲಿನ ಆಸೆಯನ್ನು ಬಿಟ್ಟುಕೊಡುವುದು ಅನೇಕರಿಗೆ ಕಷ್ಟವಾಗಿದೆ. ಹೀಗಿರುವಾಗ ಸಿಹಿಯ ರುಚಿಯನ್ನು ಉಳಿಸಿಕೊಂಡೇ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಗೆ ಪ್ರಕೃತಿಯೇ ನೀಡಿರುವ ಉತ್ತರ ಸ್ಟೀವಿಯಾ ಗಿಡದ ಎಲೆಗಳು. ಇದನ್ನು ಸಿಹಿ ತುಳಸಿ ಎಂದೂ ಕರೆಯಲಾಗುತ್ತದೆ.

ಸ್ಟೀವಿಯಾ ಗಿಡ

ಸ್ಟೀವಿಯಾ ಗಿಡದ ಮೂಲ ದಕ್ಷಿಣ ಅಮೆರಿಕದ ದೇಶಗಳಾದ ಪರಾಗ್ವೆ ಮತ್ತು ಬ್ರೆಜಿಲ್. ಈ ಪುಟ್ಟ ಗಿಡವನ್ನು ಅಲ್ಲಿನ ಜನರು ಶತಮಾನಗಳಿಂದ ಸಿಹಿಕಾರಕವಾಗಿ ಬಳಸುತ್ತಿದ್ದಾರೆ. ಇಂದು ಈ ಗಿಡ ವಿಶ್ವದಾದ್ಯಂತ ಆಹಾರ ಪದ್ಧತಿಯ ಭಾಗವಾಗಿ ಬೆಳೆಯುತ್ತಿದೆ ಮತ್ತು ನಮ್ಮ ದೇಶದಲ್ಲಿಯೂ ಜನಪ್ರಿಯವಾಗುತ್ತಿದೆ.

"ಸ್ವೀಟ್ ಲೀಫ್" ಅಥವಾ "ಸಿಹಿ ಎಲೆ" ಎಂದು ಹೆಸರಾಗಿರುವ ಸ್ಟೀವಿಯಾದ ಎಲೆಗಳಲ್ಲಿ ಇರುವ ಸ್ಟೀವಿಯೊಲ್ ಗ್ಲೈಕೋಸೈಡ್ಸ್ ಎಂಬ ನೈಸರ್ಗಿಕ ಸಂಯುಕ್ತಗಳು ಸಾಮಾನ್ಯ ಸಕ್ಕರೆಗಿಂತ ಸುಮಾರು 200 ರಿಂದ 300 ಪಟ್ಟು ಹೆಚ್ಚು ಸಿಹಿಯಾಗಿವೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಈ ಎಲೆಯಲ್ಲಿ ಕ್ಯಾಲೊರಿ ಅತ್ಯಂತ ಕಡಿಮೆ. ಜೊತೆಗೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚೇನೂ ಹೆಚ್ಚಿಸುವುದಿಲ್ಲ.

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ನಗರಗಳಲ್ಲಿ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಲ್ಲಿಯೂ ಬೊಜ್ಜು ಮತ್ತು ಚಯಾಪಚಯ ಕ್ರಿಯೆ (ಮೆಟಬಾಲಿಸಂ) ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಂಸ್ಕರಿತ ಆಹಾರಗಳು, ಸಕ್ಕರೆ ಮಿಶ್ರಿತ ಪಾನೀಯಗಳು, ಸಿಹಿತಿಂಡಿಗಳ ಅತಿಯಾದ ಸೇವನೆ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ನಿರಂತರವಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೀವಿಯಾ ಆರೋಗ್ಯಕರ ಪರ್ಯಾಯವಾಗಿ ಗಮನ ಸೆಳೆಯುತ್ತಿದೆ. ಈ ಕಾರಣದಿಂದ ಚಹಾ ಮತ್ತು ಕಾಫಿಗೆ ಸಿಹಿ ರುಚಿ ನೀಡಲು ಸ್ಟೀವಿಯಾದ ಎಲೆಗಳನ್ನು ಬಳಸಲಾಗುತ್ತದೆ. ಜೊತೆಗೆ ಈ ಎಲೆಗಳು ಉತ್ಕರ್ಷಣ ನಿರೋಧಕ ಅಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ಕಬ್ಬಿಣ, ಪ್ರೋಟೀನ್, ಫೈಬರ್, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ, ವಿಟಮಿನ್ ಎ, ಸಿ ಮುಂತಾದ ಪೋಷಕಾಂಶಗಳು ಹೇರಳವಾಗಿವೆ.

ಸ್ಟೀವಿಯಾದ ಪ್ರಯೋಜನಗಳು

ಸ್ಟೀವಿಯಾದ ಪ್ರಮುಖ ಪ್ರಯೋಜನವೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಏರಿಸುವುದಿಲ್ಲ. ಹೀಗಾಗಿ ತಜ್ಞರ ಸಲಹೆಯ ಮೇರೆಗೆ ಮಧುಮೇಹಿಗಳು ಇದನ್ನು ಸಕ್ಕರೆಯ ಪರ್ಯಾಯವಾಗಿ ಬಳಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ನೆರವಾಗಬಹುದು. ಇದು ದೇಹಕ್ಕೆ ಹೆಚ್ಚುವರಿ ಕ್ಯಾಲೊರಿ ಸೇರಿಸದ ಕಾರಣ ಆಹಾರದ ಒಟ್ಟು ಶಕ್ತಿಮೌಲ್ಯವನ್ನು ಕಡಿಮೆ ಮಾಡಲು ಸಹಕಾರಿ. ಹಲ್ಲುಗಳಲ್ಲಿ ಹುಳುಕುಂಟುಮಾಡುವ ಸಾಧ್ಯತೆಯೂ ಕಡಿಮೆ.

ಕೆಲವು ವೈಜ್ಞಾನಿಕ ಅಧ್ಯಯನಗಳು ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣಗಳಿರಬಹುದೆಂದು ಸೂಚಿಸಿವೆ. ಆದರೂ ಯಾವುದೇ ಆಹಾರ ಪದಾರ್ಥದಂತೆ ಸ್ಟೀವಿಯಾವನ್ನೂ ಮಿತವಾಗಿ ಹಾಗೂ ವೈದ್ಯಕೀಯ ಸಲಹೆಯೊಂದಿಗೆ ಬಳಸುವುದು ಸೂಕ್ತ.

ಸ್ಟೀವಿಯಾ ಕೃಷಿ

ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿಯೂ ಸ್ಟೀವಿಯಾ ಕೃಷಿ ಆರಂಭವಾಗಿದೆ. ನಮ್ಮ ರಾಜ್ಯ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಸುತ್ತಿದ್ದಾರೆ. ಔಷಧೀಯ ಮತ್ತು ಆಹಾರ ಉದ್ಯಮಗಳಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಇದು ರೈತರಿಗೆ ಉತ್ತಮ ಆದಾಯದ ಬೆಳೆಯಾಗುವ ಸಾಧ್ಯತೆಯನ್ನೂ ಹೊಂದಿದೆ.

ಮನೆಯ ತೋಟದಲ್ಲಿಯೂ ಅಥವಾ ಕುಂಡಗಳಲ್ಲಿಯೂ ಸ್ಟೀವಿಯಾವನ್ನು ಸುಲಭವಾಗಿ ಬೆಳೆಸಬಹುದು. ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅಥವಾ ತಾಜಾ ಎಲೆಗಳನ್ನೇ ಚಹಾ, ಕಾಫಿ ಹಾಗೂ ವಿವಿಧ ಪಾನೀಯಗಳಿಗೆ ಸಿಹಿಕಾರಕವಾಗಿ ಬಳಸಬಹುದು.

ಸ್ಟೀವಿಯಾ ಭಾರತೀಯ ಮೂಲದ ಸಸ್ಯವಲ್ಲ. ಆದ್ದರಿಂದ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯಂ ಮೊದಲಾದ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಇದರ ನೇರ ಉಲ್ಲೇಖವಿಲ್ಲ. ಆದರೆ ಆಯುರ್ವೇದದ ಮೂಲ ತತ್ವಗಳನ್ನು ಆಧರಿಸಿ ನೋಡಿದರೆ ಇದರ ಬಳಕೆಯ ಬಗ್ಗೆ ಆಸಕ್ತಿದಾಯಕ ವಿವರಣೆ ದೊರೆಯುತ್ತದೆ.

ಆಯುರ್ವೇದದಲ್ಲಿ 'ಮಧುರ ರಸ' ದೇಹಕ್ಕೆ ಪೋಷಣೆ ನೀಡುತ್ತದೆ. ಆದರೆ ಸಂಸ್ಕರಿಸಿದ ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ ಕಫದೋಷ ಹೆಚ್ಚಾಗಿ ಬೊಜ್ಜು, ಮಧುಮೇಹ, ಆಲಸ್ಯ ಮತ್ತು ಇತರ ಮೆಟಾಬಾಲಿಕ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಈ ದೃಷ್ಟಿಯಿಂದ ನೋಡಿದರೆ ಸ್ಟೀವಿಯಾ ಸಿಹಿಕಾರಕ. ಸಾಮಾನ್ಯ ಸಕ್ಕರೆಯಂತೆ ದೇಹಕ್ಕೆ ಹೆಚ್ಚಿನ ಕ್ಯಾಲೊರಿ ನೀಡುವುದಿಲ್ಲ. ಆದರೆ ಅತಿಯಾಗಿ ಸೇವಿಸುವುದು ಬೇಡ.

ಯಾವುದೇ ಒಂದು ಪದಾರ್ಥವೇ ಆರೋಗ್ಯದ ಸಂಪೂರ್ಣ ಪರಿಹಾರವಲ್ಲ. ವ್ಯಕ್ತಿಯ ಪ್ರಕೃತಿ (ವಾತ, ಪಿತ್ತ, ಕಫ), ವಯಸ್ಸು, ಋತು, ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಹಾಗೂ ಜೀರ್ಣಶಕ್ತಿಯನ್ನು ಪರಿಗಣಿಸಿ ಆಹಾರವನ್ನು ಆಯ್ಕೆ ಮಾಡಬೇಕು. ಸ್ಟೀವಿಯಾವೂ ಇದಕ್ಕೆ ಹೊರತಲ್ಲ. ಇದು ಆರೋಗ್ಯಕರ ಜೀವನಶೈಲಿಯ ಒಂದು ಭಾಗವಾಗಬಹುದು; ಆದರೆ ಔಷಧಿಗೆ ಪರ್ಯಾಯವಲ್ಲ.

ಕೊನೆಮಾತು: ಇಂದಿನ ಯುಗದಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡುವುದು, ನೈಸರ್ಗಿಕ ಆಹಾರಗಳನ್ನು ದೈನಂದಿನ ಬಳಕೆಗೆ ಅಳವಡಿಸಿಕೊಳ್ಳುವುದು, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಹಾಗೂ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡುವುದು ಆರೋಗ್ಯಕರ ಬದುಕಿನ ಮೂಲಮಂತ್ರಗಳಾಗಿವೆ. ಈ ಪೈಕಿ ಸ್ಟೀವಿಯಾ ಒಂದು ಸಣ್ಣ ಬದಲಾವಣೆಯಂತೆ ಕಾಣಬಹುದು. ಆದರೆ ಸಣ್ಣ ಬದಲಾವಣೆಗಳೇ ದೀರ್ಘಾವಧಿಯಲ್ಲಿ ದೊಡ್ಡ ಆರೋಗ್ಯ ಲಾಭಗಳನ್ನು ತಂದುಕೊಡುತ್ತವೆ. ಸಿಹಿಯ ಸವಿಯನ್ನು ಉಳಿಸಿಕೊಂಡೇ ಆರೋಗ್ಯದತ್ತ ಹೆಜ್ಜೆ ಇಡಲು ಬಯಸುವವರಿಗೆ ಸ್ಟೀವಿಯಾ ಪ್ರಕೃತಿಯ ಕೊಡುಗೆಯಾಗಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com