NEET: ಕೇಂದ್ರ ಸರಕಾರ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು (ನೇರ ನೋಟ)

ಎನ್‌ಡಿಎ ಸರಕಾರ ಈಗ ಎಚ್ಚೆತ್ತುಕೊಂಡಿದೆ. ವಿದ್ಯಾರ್ಥಿಗಳಿಗೆ ಸಾಂತ್ವನದ ಮಾತುಗಳನ್ನು ಆಡುತ್ತಿದೆ. ಸಂಧಾನದ ಬಾಗಿಲು ತೆರೆದಿದೆ. ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಹ ಪರಿಸ್ಥಿತಿ ಇದು.
Cockroach Janata Party (CJP) supporters raise slogans during a protest at the Jantar Mantar, in New Delhi, early Thursday, July 23, 2026.
ಜುಲೈ 23, 2026 ರ ಗುರುವಾರ ಮುಂಜಾನೆ ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಬೆಂಬಲಿಗರು ಘೋಷಣೆಗಳನ್ನು ಕೂಗಿದರು.Photo |PTI
Updated on

ಅದು ಗಂಭೀರ ಸಮಸ್ಯೆ. ಆದರೆ, ಒಂದು ಸರಕಾರಕ್ಕೆ ನಿಭಾಯಿಸಲು ಕಷ್ಟವಿರಲಿಲ್ಲ. ಉದಾಸೀನ ತೋರಿತು. ಜಾಣ ಮೌನಕ್ಕೆ ಜಾರಿತು. ಪರಿಸ್ಥಿತಿ ಕೈಮೀರಿತು. ಅಮಾಯಕ 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು. ಜೆನ್‌ ಜೀ ಬೀದಿಗಿಳಿದರು. ಈಗ ಆಳುವವರು ಮಾತಾಡಲು ಆರಂಭಿಸಿದ್ದಾರೆ. ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸರಕಾರಕ್ಕೆ ಕಳಂಕ ತಟ್ಟಿದೆ.

ದೇಶದಲ್ಲಿ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ನಂತರದ ವಿದ್ಯಮಾನಗಳನ್ನು ಕೇಂದ್ರದ ಎನ್‌ಡಿಎ ಸರಕಾರ ಸಮರ್ಥವಾಗಿ ನಿಭಾಯಿಸಲು ಎಡವಿತು. ಮೊದಲು ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕಿತ್ತು. ಇಲ್ಲಿ ವಿಫಲವಾಯಿತು. ಸೋರಿಕೆ ನಂತರ ತನಿಖೆಯ ಹಾದಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಒಂದು ಕಡೆಯಾದರೆ, ನೊಂದ ವಿದ್ಯಾರ್ಥಿಗಳಿಗೆ ಸಾಂತ್ವನ, ಧೈರ್ಯದ ಮಾತು ಆಡುವುದು ಮತ್ತೊಂದೆಡೆ. ಈ ಮಾರ್ಗದಲ್ಲಿಯೂ ಎನ್‌ಡಿಎ ಸರಕಾರ ಮುಗ್ಗರಿಸಿತು. ತನ್ನ ಸರಕಾರದ ವಿರುದ್ಧ ಪ್ರತಿಭಟನೆಗೆ ತಾನೇ ಆಹ್ವಾನಿಸಿಕೊಂಡಿತು. ದೆಹಲಿಯ ಬೀದಿಗಳು ಈಗ ರಣಾಂಗಣ.

ಎನ್‌ಡಿಎ ಸರಕಾರ ಈಗ ಎಚ್ಚೆತ್ತುಕೊಂಡಿದೆ. ವಿದ್ಯಾರ್ಥಿಗಳಿಗೆ ಸಾಂತ್ವನದ ಮಾತುಗಳನ್ನು ಆಡುತ್ತಿದೆ. ಸಂಧಾನದ ಬಾಗಿಲು ತೆರೆದಿದೆ. ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಹ ಪರಿಸ್ಥಿತಿ ಇದು. ಜನತಂತ್ರದಲ್ಲಿ ಸಂಧಾನ, ಮಾತುಕತೆಯೇ ಜೀವಾಳ.

ದೇಶದಲ್ಲಿ 2026 ರಲ್ಲಿ ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೇ 3 ರಂದು ನಡೆಯಿತು. ಇಪ್ಪತ್ತೆರಡು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಂತರ ಬೆಳಕಿಗೆ ಬಂತು. ಪರೀಕ್ಷೆಯನ್ನು ರದ್ದುಪಡಿಸಿ ಮರು ಪರೀಕ್ಷೆಗೆ ಕೇಂದ್ರ ಸರಕಾರ ಆದೇಶಿಸಿತು. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೆಲವರನ್ನು ಬಂಧಿಸಿತು. ಪರೀಕ್ಷೆ ರದ್ದಾಗಿದ್ದರಿಂದ ವಿದ್ಯಾರ್ಥಿಗಳು ನೊಂದುಕೊಂಡರು. ಸುಮಾರು 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು.

ಈ ಹಂತದಲ್ಲೇ ಸರಕಾರ ತನ್ನ ಉತ್ತರದಾಯಿತ್ವವನ್ನು ಒಪ್ಪಿಕೊಂಡು ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಬೇಕಿತ್ತು. ತಪ್ಪಿತಸ್ಥರ ಹೆಡೆಮುರಿ ಕಟ್ಟುತ್ತೇವೆ ಎನ್ನಬೇಕಿತ್ತು. ಲೋಪ ಎಸಗಿದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕಿತ್ತು. ವಿದ್ಯಾರ್ಥಿಗಳಿಗೆ ಧೈರ್ಯದ ಮಾತನ್ನು ಆಡಬೇಕಿತ್ತು. ಸಾಂತ್ವನದ ನುಡಿಗಳನ್ನು ಹೇಳಬೇಕಿತ್ತು. ಹೀಗಾಗಿದ್ದರೆ ಪರಿಸ್ಥಿತಿ ಈ ಹಂತಕ್ಕೆ ತಲುಪುತ್ತಿರಲಿಲ್ಲ. ಸರಕಾರ ಇಲ್ಲಿ ಸೋತಿತು.

ಸರಕಾರ ಮೌನವಾದಾಗ ನೊಂದ ವಿದ್ಯಾರ್ಥಿಗಳು ನಿರೀಕ್ಷಿಸಿದ್ದು ಲೋಪವನ್ನು ಒಪ್ಪಿಕೊಳ್ಳುವ ಹೊಣೆಗಾರಿಕೆತನ. ಎತ್ತಿದ್ದು ನೈತಿಕತೆಯ ಪ್ರಶ್ನೆ. ಕೇಳಿದ್ದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಕೋರಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬದವರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಧನ. ಆದರೆ, ಸರಕಾರ ಮಾತ್ರ ತಟಸ್ಥ. ಪರಿಣಾಮ- ಕಾಕ್ರೋಚ್‌ ಜನತಾ ಪಾರ್ಟಿ ಉದಯ. ಇದಕ್ಕೆ ನೆಪವಾಗಿದ್ದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಕಾಮೆಂಟ್‌. ಮುಖ್ಯ ನ್ಯಾಯಮೂರ್ತಿಗಳ ಕಾಮೆಂಟ್‌ ಅನ್ನು ತಪ್ಪಾಗಿ ಅರ್ಥೈಸಿದ್ದು.

ಕೇಂದ್ರ ಸರಕಾರ ಜಂತರ್‌ ಮಂತರ್‌ನಲ್ಲಿ ಕುಳಿತ ಪ್ರತಿಭಟನಾಕಾರರ ಬೇಡಿಕೆ ಆಲಿಸಬೇಕಿತ್ತು. ಉಪವಾಸ ಕುಳಿತ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್‌ ಜೊತೆ ಮಾತಾಡಬೇಕಿತ್ತು. ಆಗಲೂ ಅದೇ ನಿರ್ಲಕ್ಷ್ಯ. ಸುಮಾರು ಒಂದು ತಿಂಗಳು ಮೌನ ಮುರಿಯಲೇ ಇಲ್ಲ. ಪ್ರತಿಭಟನೆ ಆರಂಭವಾದರೂ ಉಪೇಕ್ಷಿಸಿತು.

ಸೋನಂ ವಾಂಗ್ಚುಕ್‌ ಅವರ ದೇಹಸ್ಥಿತಿ ಗಂಭೀರವಾದಾಗ ಪ್ರತಿಭಟನೆ ಕಾವು ಏರಿತು. ಸಂಸತ್‌ ಚಲೋಗೆ ಪ್ರತಿಭಟನಾಕಾರರು ಹೊರಟಾಗ ಪರಿಸ್ಥಿತಿ ಕೈಮೀರಿತು. ಹಿಂಸಾಚಾರ ಭುಗಿಲೆದ್ದಿತು. ಸರಕಾರ ಆಗ ಎಚ್ಚೆತ್ತುಕೊಂಡಿತು. ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈಮೀರಿತ್ತು. ಒಂದು ಚಳವಳಿ ಎಂದಾಗ ನಾನಾ ಶಕ್ತಿಗಳ ಪ್ರವೇಶವಾಗುತ್ತದೆ. ಪ್ರತಿಭಟನೆಗೆ ಇಳಿದಾಗ ಇದರ ಲಾಭವನ್ನು ಪಡೆಯುವ ಶಕ್ತಿಗಳೂ ಇರುತ್ತವೆ. ಪ್ರತಿಭಟನೆ ಹೆಸರಿನಲ್ಲಿ ಕೆಲವು ದುಷ್ಟ ಶಕ್ತಿಗಳು ಸೇರಿಕೊಂಡಿರುವ ಆರೋಪಗಳೂ ಇವೆ. ಪ್ರತಿಭಟನೆ ನೇತೃತ್ವ ವಹಿಸಿರುವ ನಿಜವಾದ ವಿದ್ಯಾರ್ಥಿ ನಾಯಕರು ಈ ಬಗ್ಗೆ ಗಮನ ಹರಿಸಬೇಕು. ಇದು ಅವರ ಹೊಣೆಗಾರಿಕೆ ಕೂಡ.

Cockroach Janata Party (CJP) supporters raise slogans during a protest at the Jantar Mantar, in New Delhi, early Thursday, July 23, 2026.
ಸಾಂಪ್ರದಾಯಿಕ ವೈರತ್ವಕ್ಕೆ ಬಿಡದಿ ಬಿಕ್ಕಟ್ಟು ನೆಪ (ನೇರ ನೋಟ)

ಇದೇ ಸಂದರ್ಭ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರನ್ನು ಭಯೋತ್ಪಾದಕರ ಬಿ ತಂಡ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಆರೋಪಿಸಿರುವುದು ವಿದ್ಯಾರ್ಥಿಗಳನ್ನು ಕೆರಳಿಸಿತು. ಪೊಲೀಸರ ಲಾಠಿ ಏಟು ಬಿದ್ದರೂ ಪ್ರತಿಭಟನಾಕಾರರು ಎದೆಯೊಡ್ಡಿ ನಿಂತರು. ಘರ್ಷಣೆಯಲ್ಲಿ ಪೊಲೀಸರೂ ಗಾಯಗೊಂಡರು. ಪೊಲೀಸ್‌ ಸಮವಸ್ತ್ರದಲ್ಲಿ ಇಲ್ಲದ ಕೆಲವರು ಲಾಠಿ ಹಿಡಿದು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದರು. ಇವರು ಯಾರು ಎಂಬುದು ಪತ್ತೆಯಾಗಬೇಕಿದೆ. ಪ್ರತಿಭಟನೆ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದವರ ಉದ್ದೇಶ ಏನಿತ್ತು ಎಂಬುದು ತಿಳಿಯಬೇಕಿದೆ.

ಈಗ ದೆಹಲಿಯಲ್ಲಿ ಬೀದಿಗಿಳಿದಿರುವ ಜೆನ್‌ ಜೀ ಪೀಳಿಗೆಯ ಪೋಷಕರೇ 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಮತ ನೀಡಿದ್ದು. ಆದರೆ, ಇವತ್ತು ಅದೇ ಪೋಷಕರು ಪ್ರಶ್ನೆಪತ್ರಿಕೆಗಳ ಸೋರಿಕೆ ಹಾಗೂ ನಂತರ ಎನ್‌ಡಿಎ ಸರಕಾರದ ಧೋರಣೆ ಕಂಡು ಆತಂಕಗೊಂಡಿದ್ದಾರೆ.

ಪ್ರತಿಭಟನಾಕಾರರ ಸಂಸತ್‌ ಭವನ ಚಲೋ ಎರಡನೇ ದಿನ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಸಂಸದರ ಸಭೆಯಲ್ಲಿ ನೀಟ್‌ ಪ್ರಶ್ನೆ ಪತ್ರಿಕೆ ಕುರಿತು ಪ್ರಸ್ತಾಪಿಸಿದರು. ಪ್ರಶ್ನೆಪತ್ರಿಕೆ ಸೋರಿಕೆ ಘೋರ ಪಾಪ. ಭಾಗಿಯಾದವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲಾಗಿದೆ. ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದು ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ ಅಂದರು. ಹೋರಾಟ ನಿರತ ಯುವಕರನ್ನು ಭೇಟಿ ಮಾಡಿ ಆತಂಕವನ್ನು ನಿವಾರಿಸಬೇಕು ಎಂದು ಎನ್‌ಡಿಎ ಸಂಸದರಿಗೆ ಪ್ರಧಾನಿ ಮನವಿ ಕೂಡ ಮಾಡಿದರು.

ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್‌ ಖಾತೆಯಲ್ಲಿ ಯುವ ಪೀಳಿಗೆಯವರ ಭವಿಷ್ಯಕ್ಕಿಂತ ಯಾವುದೂ ಮುಖ್ಯವಲ್ಲ. ಪ್ರಶ್ನೆಪತ್ರಿಕೆಗಳ ಸೋರಿಕೆ ಹಗರಣದ ವಿಚಾರಣೆಗಾಗಿ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ಗಳನ್ನು ಸ್ಥಾಪಿಸುತ್ತೇವೆ ಎಂದರು. ಇದೇ ಭರವಸೆಯ ಮಾತುಗಳನ್ನು ಮೊದಲೇ ಆಡಿದ್ದರೆ ಕಾಕ್ರೋಚ್‌ ಜನತಾಪಾರ್ಟಿಗೆ ಇಷ್ಟೊಂದು ಬಲ ಸಿಗುತ್ತಿರಲಿಲ್ಲ. ಪ್ರತಿಭಟನೆಯ ಕಾವನ್ನು ಕುಗ್ಗಿಸಬಹುದಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ವಿಶ್ವಾಸ ಮೂಡುತ್ತಿತ್ತು. ವಿದ್ಯಾರ್ಥಿಗಳು ಹದಗೆಟ್ಟ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಬಯಸಿದ್ದರೇ ವಿನಾ ಸರಕಾರದ ವಿರುದ್ಧ ಆಕ್ರೋಶವಿರಲಿಲ್ಲ.

ಇನ್ನು ನೀಟ್‌ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ವಿತರಣೆಗೆ ಕೇಂದ್ರ ಸರಕಾರ ಸೇನೆಯನ್ನು ಬಳಸಬೇಕಾಯಿತು ಅಂದರೆ ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ. ಪ್ರಶ್ನೆ ಪತ್ರಿಕೆ ಸಿದ್ದಪಡಿಸುವ ಈಗಿನ ವ್ಯವಸ್ಥೆ ಹಾಗೂ ಅಧಿಕಾರಿಗಳ ಮೇಲೆ ವಿಶ್ವಾಸವಿಲ್ಲ ಎಂಬ ಸಂದೇಶ ಅದು. ಇದು ನಿಜಕ್ಕೂಆತಂಕಕಾರಿ. ಯಾರು ಯಾವ ಕೆಲಸ ಮಾಡಬೇಕೋ ಅವರೇ ಮಾಡಬೇಕು. ಅವರ ಕೈಯಲ್ಲೇ ಆ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಿಸಬೇಕು. ಎಷ್ಟು ವರ್ಷಗಳ ಕಾಲ ಹೀಗೆ ಸೇನೆಯನ್ನು ಪ್ರಶ್ನೆ ಪತ್ರಿಕೆ ವಿತರಣೆಗೆ ಬಳಸಲು ಸಾಧ್ಯ? ನೀಟ್‌ ಪರೀಕ್ಷೆಯನ್ನು ಸೇನೆಯನ್ನು ಬಳಸಿ ಮಾಡುವ ಸ್ಥಿತಿ ಒದಗಿ ಬಂದಿದ್ದು ಶೋಚನೀಯವಲ್ಲವೇ?

Cockroach Janata Party (CJP) supporters raise slogans during a protest at the Jantar Mantar, in New Delhi, early Thursday, July 23, 2026.
ಬಿಜೆಪಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಹಾದಿ ಕಠಿಣ (ನೇರ ನೋಟ)

ಪ್ರಶ್ನೆಪತ್ರಿಕೆಗಳ ಸೋರಿಕೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೂ ಆಗಿದೆ. ರಾಜಸ್ತಾನದಲ್ಲಿ ಪರೀಕ್ಷೆಯೊಂದರ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಕಾಂಗ್ರೆಸ್‌ ಸರಕಾರವಿತ್ತು. ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿ ಆಗಿದ್ದರು. ಆಗ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ಇಡೀ ದೇಶದಲ್ಲಿದೆ. ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದಿದ್ದರು.

ಸಮೀಕ್ಷೆಯೊಂದು 2014 ರಿಂದ 24ರ ವರೆಗೆ 89 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಹೇಳುತ್ತದೆ. ಎನ್‌ಡಿಎ ಹಾಗೂ ಎನ್‌ಡಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಹಾಗೇ ನೋಡಿದರೆ ನೀಟ್‌ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ. ಅದು 2010ನೇ ಇಸವಿ. ಮೊದಲ ನೀಟ್‌ ಪರೀಕ್ಷೆ ನಡೆದಿದ್ದು 2013ರಲ್ಲಿ ಆಗ ಡಾ.ಮನಮೋಹನಸಿಂಗ್‌ ಪ್ರಧಾನಮಂತ್ರಿಯಾಗಿದ್ದರು.

ಅಣ್ಣಾ ಹಜಾರೆ ಚಳವಳಿಯನ್ನು ಸಿಜೆಪಿ ಹೋರಾಟ ನೆನಪಿಸಿದೆ. ಸಿಜೆಪಿಗೆ ರಾಜಕೀಯ ಮಹಾತ್ವಾಕಾಂಕ್ಷೆ ಇದೆ ಎಂದು ಈಗಲೇ ಹೇಳುವುದು ಕಷ್ಟ. ಆದರೆ ಅದು ಎತ್ತಿರುವ ಪ್ರಶ್ನೆಗಳನ್ನು ನಿರ್ಲಕ್ಷಿಸುವಂತಿಲ್ಲ. ಹೋರಾಟದಲ್ಲಿ ನಿರುದ್ಯೋಗಿ ಯುವಕರೂ ಸೇರಿದ್ದಾರೆ. ಸಿಜೆಪಿ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿದೆ.

ಜೆನ್‌ ಜೀಗಳ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಎಲ್ಲರೂ ಕಾಕ್ರೋಚ್‌ ಜನತಾ ಪಾರ್ಟಿಯನ್ನು ಬೆಂಬಲಿಸುವವರು ಎನ್ನುವಂತಿಲ್ಲ. ಆದರೆ, ಸಿಜೆಪಿ ಎತ್ತಿರುವ ವಿಷಯವನ್ನು ಬೆಂಬಲಿಸಿದ್ದಾರೆ.

ಕಾಕ್ರೋಚ್‌ ಜನತಾ ಪಾರ್ಟಿ ಸೋಮಾರಿ ಹಾಗೂ ನಿರುದ್ಯೋಗಿಗಳ ಧ್ವನಿ ಅಂತ ವೆಬ್‌ ಸೈಟ್ ನಲ್ಲಿದೆ. ಚುನಾವಣಾ ಆಯೋಗದಲ್ಲಿ ಈ ಪಕ್ಷ ನೋಂದಣಿಯಾಗಿಲ್ಲ. ಮುಖ್ಯ ನ್ಯಾಯಮೂರ್ತಿಗಳು ಕಾಮೆಂಟ್‌ ಮಾಡಿದ ಮರುದಿನವೇ ಮೇ 16 ರಂದು ಆನ್‌ಲೈನ್‌ನಲ್ಲಿ ಈ ಪಕ್ಷ ಸ್ಥಾಪನೆಯಾಯಿತು. ಅಭಿಜಿತ್‌ ದೀಪ್ಕೆ ಕಾಕ್ರೋಚ್‌ ಜನತಾ ಪಾರ್ಟಿ ಹೆಸರಿನಲ್ಲಿ ಇನ್‌ಸ್ಟಾ ಗ್ರಾಂನಲ್ಲಿ ಖಾತೆ ತೆರೆಯುತ್ತಿದ್ದಂತೆ ಲಕ್ಷಾಂತರ ಜನರು ಇದನ್ನು ಫಾಲೋ ಮಾಡಿದರು. ಇದು ಎಷ್ಟರಮಟ್ಟಿಗೆ ಜನಪ್ರಿಯತೆ ಪಡೆಯಿತೆಂದರೆ ಬಿಜೆಪಿಯನ್ನು ಫಾಲೋ ಮಾಡುವವರ ಸಂಖ್ಯೆಯನ್ನೂ ಮೀರಿಸಿತು.

ಸಿಜೆಪಿ ಇನ್ನೂ ರಾಜಕೀಯ ಪಕ್ಷದ ಸ್ವರೂಪ ಪಡೆದಿಲ್ಲ. ಇದರ ತತ್ವ, ಸಿದ್ದಾಂತಗಳೇನು ಎಂಬುದು ಸ್ಪಷ್ಟವಾಗಿಲ್ಲ. ಈ ಪಕ್ಷವನ್ನು ಯಾರಾದರೂ ವಿರೋಧಿಸಬಹುದು. ಆದರೆ, ಅದು ಎತ್ತಿರುವ ಪ್ರಶ್ನೆಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com