ಬಚ್ಚಿಟ್ಟ ಯೂರಿಯಾ ಬಿಕ್ಕಟ್ಟು ಈಗ ಬಯಲು!

ಯೂರಿಯಾ ಎನ್ನುವುದು ಕೇವಲ ಯಾವುದೋ ರಾಸಾಯನಿಕವಲ್ಲ. ಇದು ಆಧುನಿಕ ಕೃಷಿಯ ಜೀವನಾಡಿಯೂ ಹೌದು. ಅಕ್ಕಿ, ಗೋಧಿ, ಮತ್ತು ಜೋಳದಂತಹ ಬೆಳೆಗಳು ಬಲವಾಗಿ ಬೆಳೆದು, ಫಸಲು ನೀಡಲು ಸಾರಜನಕ ಬೇಕು.
India’s urea supply crisis (file photo)
ಯೂರಿಯಾ ಬಿಕ್ಕಟ್ಟು (ಸಂಗ್ರಹ ಚಿತ್ರ)online desk
Updated on

ಇತ್ತೀಚಿನ ಇರಾನ್ - ಅಮೆರಿಕ ಉದ್ವಿಗ್ನತೆಗಳು ಜಗತ್ತಿಗೆ ಒಂದು ಅಹಿತಕರ ಸತ್ಯವನ್ನು ಪ್ರದರ್ಶಿಸಿವೆ. ಅದೇನೆಂದರೆ, ಸಮಸ್ತ ಜಗತ್ತು ತಾನು ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಶ್ಚಿಮ ಏಷ್ಯಾದ ಮೇಲೆ ಅವಲಂಬಿತವಾಗಿದೆ. ಅತಿದೊಡ್ಡ ಆಘಾತಗಳಲ್ಲಿ ಒಂದು ಬಹುತೇಕರು ನಿರೀಕ್ಷಿಸಿಯೇ ಇರದ ಕ್ಷೇತ್ರದಲ್ಲಿ ಬಂದೆರಗಿದೆ. ಅದುವೇ ರಸಗೊಬ್ಬರ. ಗಲ್ಫ್ ಪ್ರದೇಶ ಜಗತ್ತಿನ ಬಹುತೇಕ ಅರ್ಧದಷ್ಟು ಯೂರಿಯಾ ವ್ಯಾಪಾರವನ್ನು ಪೂರೈಸುತ್ತಿದ್ದು, ಈ ಬಿಕ್ಕಟ್ಟು ಆರಂಭಗೊಂಡ ಬಳಿಕ, ವಾರದ ಉತ್ಪಾದನೆ 50%ಕ್ಕೂ ಹೆಚ್ಚಿನ ಕುಸಿತ ಕಂಡಿದೆ. ಇದು ಮೇಲ್ನೋಟಕ್ಕೆ ದೂರದ ತೊಂದರೆಯಂತೆ ಕಾಣಬಹುದು. ಆದರೆ, ಇದರ ಪರಿಣಾಮಗಳು ಮೌನವಾಗಿಯೇ ನಮ್ಮ ಅಡುಗೆ ಮನೆಗಳ ಬಳಿ ತಲುಪುತ್ತದೆ.

ಯೂರಿಯಾ ಎನ್ನುವುದು ಕೇವಲ ಯಾವುದೋ ರಾಸಾಯನಿಕವಲ್ಲ. ಇದು ಆಧುನಿಕ ಕೃಷಿಯ ಜೀವನಾಡಿಯೂ ಹೌದು. ಅಕ್ಕಿ, ಗೋಧಿ, ಮತ್ತು ಜೋಳದಂತಹ ಬೆಳೆಗಳು ಬಲವಾಗಿ ಬೆಳೆದು, ಫಸಲು ನೀಡಲು ಸಾರಜನಕ ಬೇಕು. ಯೂರಿಯಾ ಸಸ್ಯಗಳಿಗೆ ಅಗತ್ಯವಾದ ಸಾರಜನಕವನ್ನೇ ನೀಡುತ್ತದೆ. ಆದ್ದರಿಂದ, ಯಾವಾಗ ಯೂರಿಯಾ ಪೂರೈಕೆ ಬಿಗಿಯಾಗುತ್ತದೋ, ಆಗ ಆಹಾರ ಉತ್ಪಾದನೆಯೂ ನಿಧಾನವಾಗುತ್ತದೆ, ಬೆಲೆಗಳು ಹೆಚ್ಚಾಗುತ್ತವೆ. ಇದರ ಪರಿಣಾಮ ಅಂತಿಮವಾಗಿ ನಮಗೆ ದಿನಸಿ ಬೆಲೆಯ ರೂಪದಲ್ಲಿ ತಟ್ಟುತ್ತದೆ.

ಭಾರತದ ಪಾಲಿಗೆ ಇದು ನಿಜಕ್ಕೂ ಗಂಭೀರವಾದ ಆತಂಕದ ವಿಚಾರ. ನಾವು ಪ್ರತಿವರ್ಷವೂ 400 ಲಕ್ಷ ಟನ್ ಯೂರಿಯಾ ಬಳಸುತ್ತಿದ್ದು, ಇದರ ಪೈಕಿ ಕೇವಲ 300 ಲಕ್ಷ ಟನ್ ಯೂರಿಯಾ ಮಾತ್ರ ಭಾರತದಲ್ಲಿ ಉತ್ಪಾದನೆಯಾಗುತ್ತದೆ. ಇನ್ನುಳಿದ 25% ಯೂರಿಯಾವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಬಹುಪಾಲು ಗಲ್ಫ್ ದೇಶಗಳಿಂದಲೇ ಆಮದಾಗುತ್ತದೆ. ಇದರೊಡನೆ, ಇಲ್ಲೊಂದು ಆಳವಾದ ವಿಚಾರವೂ ಅಡಗಿದೆ. ಅದೇನೆಂದರೆ, ನಮ್ಮ ಭಾರತದಲ್ಲೇ ತಯಾರಾಗುವ ಯೂರಿಯಾ ಸಹ ಸಂಪೂರ್ಣ ಭಾರತೀಯವಲ್ಲ!

ಯೂರಿಯಾ ಉತ್ಪಾದಿಸಲು ನಮಗೆ ಅಮೋನಿಯಾದ ಅಗತ್ಯವಿದೆ. ಅಮೋನಿಯಾವನ್ನು ನೈಸರ್ಗಿಕ ಅನಿಲದಿಂದ ಪಡೆಯಲಾಗುತ್ತದೆ. ವಾಸ್ತವವಾಗಿ, ಯೂರಿಯಾದ 80%ದಷ್ಟು ಉತ್ಪಾದನಾ ವೆಚ್ಚ ನೇರವಾಗಿ ನೈಸರ್ಗಿಕ ಅನಿಲದ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿನ ರಹಸ್ಯವೇನು? ಭಾರತದ ರಸಗೊಬ್ಬರ ಘಟಕಗಳು ಬಳಸುವ ಅಂದಾಜು 86% ನೈಸರ್ಗಿಕ ಅನಿಲ ವಿದೇಶಗಳಿಂದ ಆಮದಾಗುತ್ತಿದ್ದು, ಇದರಲ್ಲಿ ಬಹುಪಾಲು ಹೊರ್ಮುಸ್ ಜಲಸಂಧಿ ಎನ್ನುವ ಕಿರಿದಾದ ಸಮುದ್ರ ಮಾರ್ಗದ ಮೂಲಕವೇ ಬರುತ್ತದೆ. ಆದರೆ ಈಗ ಈ ಜಲಸಂಧಿಯೇ ಅಪಾರವಾದ ಉದ್ವಿಗ್ನತೆಗೆ ತುತ್ತಾಗಿದೆ. ಆದ್ದರಿಂದ, ನಮ್ಮ ಕಾರ್ಖಾನೆಗಳೇ ಯೂರಿಯಾ ಉತ್ಪಾದನೆ ನಡೆಸಿದರೂ, ಅವು ಮೌನವಾಗಿಯೇ ಜಾಗತಿಕ ರಾಜಕಾರಣದೊಡನೆ ಬೆಸೆದುಕೊಂಡಿವೆ.

India’s urea supply crisis (file photo)
ಕುಸಿದ ಜಾಗತಿಕ ವ್ಯವಸ್ಥೆಯನ್ನು ಉಳಿಸಬಲ್ಲದೇ ಗ್ಲೋಬಲ್ ಸೌತ್? (ಜಾಗತಿಕ ಜಗಲಿ)

ಇನ್ನು ಬರುವುದು ಎರಡನೇ ವಿಚಾರ. ಅದುವೇ ಯೂರಿಯಾದ ಬೆಲೆ ನಿಗದಿ. ರೈತರು 45 ಕೆಜಿಯ ಯೂರಿಯಾ ಚೀಲವನ್ನು ಕೇವಲ 266 ರೂಪಾಯಿಗೆ ಖರೀದಿಸುತ್ತಾರೆ. ಆದರೆ, ವಾಸ್ತವವಾಗಿ ಯೂರಿಯಾ ಚೀಲದ ಬೆಲೆ 1,200 ರೂಪಾಯಿಯಿಂದ 1,700 ರೂಗಳ ನಡುವೆ ಇರುತ್ತದೆ. ರೈತರು 266 ರೂಪಾಯಿ ಪಾವತಿಸಿದರೆ, ಇನ್ನುಳಿದ ಮೊತ್ತವನ್ನು ಸರ್ಕಾರ ಸಬ್ಸಿಡಿಯ ರೂಪದಲ್ಲಿ ಪಾವತಿಸುತ್ತದೆ. ಈ ಮೊತ್ತವೇ ಪ್ರತಿವರ್ಷವೂ ಲಕ್ಷಾಂತರ ಕೋಟಿ ರೂಪಾಯಿ ಆಗುತ್ತದೆ. ಇದು ಭಾರತೀಯ ಕೃಷಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಕೃಷಿ ಮಾಡಲು ಅನುಕೂಲ ಕಲ್ಪಿಸುತ್ತದೆ. ಆದರೆ, ಇದು ಒಂದು ವಿಚಿತ್ರವಾದ ಅಭ್ಯಾಸಕ್ಕೂ ಕಾರಣವಾಗಿದೆ. ಅದೇನೆಂದರೆ, ಯೂರಿಯಾ ಅತ್ಯಂತ ಕಡಿಮೆ ಬೆಲೆಗೆ ಲಭಿಸುವುದರಿಂದ, ರೈತರು ಅದನ್ನೇ ಅತಿಯಾಗಿ ಬಳಸಿ, ಬೇರೆ ರಸಗೊಬ್ಬರಗಳನ್ನು ಕಡೆಗಣಿಸುತ್ತಾರೆ.

ಮಾನವರ ರೀತಿಯಲ್ಲೇ, ಬೆಳೆಗಳಿಗೆ ಸಮತೋಲನದ ಪೋಷಕಾಂಶಗಳ ಅವಶ್ಯಕತೆಯಿದೆ. ಸಸ್ಯಗಳಿಗೆ ಪೂರಕವಾದ ಪೋಷಕಾಂಶಗಳ ಅನುಪಾತವೆಂದರೆ 4:2:1 - ಸಾರಜನಕ, ಗಂಧಕ, ಮತ್ತು ಪೊಟ್ಯಾಸಿಯಂ. ಸಸ್ಯಗಳಿಗೆ ಇವು ಸರಿಯಾದ ಸಮತೋಲನದಲ್ಲಿ ಇರಬೇಕು. ಸಾರಜನಕ ಎಲೆಗಳು ಮತ್ತು ಕಾಂಡಗಳು ಹಸಿರಾಗಿ ಬೆಳೆಯಲು ನೆರವಾದರೆ, ಗಂಧಕ ಬೇರುಗಳು ಮತ್ತು ಹೂಗಳಿಗೆ ಶಕ್ತಿ ನೀಡುತ್ತದೆ. ಇನ್ನು ಪೊಟ್ಯಾಸಿಯಂ ಸಸ್ಯಗಳಿಗೆ ಶಕ್ತಿ ತುಂಬಿ, ರೋಗನಿರೋಧಕ ಶಕ್ತಿಯನ್ನೂ ಒದಗಿಸುತ್ತದೆ. ಆದರೆ, ಭಾರತದಲ್ಲಿ ಈ ನೈಜ ಅನುಪಾತ 10.9:4.1:1 ಎನ್ನುವಂತಾಗಿದ್ದು, ಅತಿಯಾದ ಸಾರಜನಕವನ್ನು ಸಸ್ಯಗಳಿಗೆ ಒದಗಿಸಲಾಗುತ್ತಿದೆ. ಕಾಲಕ್ರಮೇಣ ಇದು ಮಣ್ಣಿಗೆ ಹಾನಿಯುಂಟುಮಾಡಿ, ಆಹಾರ ಬೆಳೆಯುವ ಸಾಮರ್ಥ್ಯವನ್ನೇ ಕುಂಠಿತಗೊಳಿಸುತ್ತದೆ.

ಅಂಕಿಸಂಖ್ಯೆಗಳು ಆತಂಕಕಾರಿ ಕಥೆಯನ್ನು ಹೇಳುತ್ತಿವೆ. 1980ರ ದಶಕದಲ್ಲಿ, ಒಂದು ಟನ್ ಸಾರಜನಕ ರಸಗೊಬ್ಬರ ಬಳಸಿ, ಅಂದಾಜು 35 ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಇಂದು ಅದರಿಂದ ಕೇವಲ 16 ಟನ್‌ಗಳಷ್ಟು ಆಹಾರ ಬೆಳೆಯಲಾಗುತ್ತಿದೆ. ರೈತರು ಹೆಚ್ಚು ಹೆಚ್ಚು ರಸಗೊಬ್ಬರಗಳನ್ನು ಬಳಸಿದರೂ, ಕಡಿಮೆ ಇಳುವರಿ ಪಡೆಯುತ್ತಿದ್ದಾರೆ. ಯಾಕೆಂದರೆ, ಭೂಮಿಗೂ ಅವೈಜ್ಞಾನಿಕ ರಸಗೊಬ್ಬರ ಬಳಕೆಯಿಂದ ಸುಸ್ತಾಗಿದೆ.

ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನ್ಯಾನೋ ಯೂರಿಯಾದಂತಹ ಪರಿಹಾರವನ್ನು ಪರಿಚಯಿಸಲಾಗಿತ್ತು. ಇದು ಹೆಚ್ಚಿನ ನಿರೀಕ್ಷೆ ಹೊಂದಿದ್ದರೂ, ಪರೀಕ್ಷೆಗಳಲ್ಲಿ ಅಕ್ಕಿ ಮತ್ತು ಗೋಧಿಯಂತಹ ಬೆಳೆಗಳು 20% ಇಳುವರಿ ಕಡಿಮೆಯಾಗಿ, ಪ್ರೊಟೀನ್ ಮಟ್ಟವೂ ಕಡಿಮೆಯಾಗಿರುವುದ‌ನ್ನು ಪ್ರದರ್ಶಿಸಿತ್ತು. ಆದ್ದರಿಂದ ಈಗಿರುವ ಆತಂಕ ಕೇವಲ ನಾವು ಎಷ್ಟು ಬೆಳೆಯುತ್ತೇವೆ ಎನ್ನುವುದು ಮಾತ್ರವಲ್ಲ, ಅದರೊಡನೆ ನಾವು ಬೆಳೆಯುವ ಆಹಾರ ಧಾನ್ಯಗಳಲ್ಲಿ ಪೊಷಕಾಂಶಗಳು ಎಷ್ಟಿವೆ ಎನ್ನುವುದೂ ಚಿಂತಿಸಬೇಕಾದ ವಿಚಾರವಾಗಿದೆ.

ಇದೇವೇಳೆ ಆಮದುಗಳು ಹೆಚ್ಚು ದುಬಾರಿಯಾಗುತ್ತಿದ್ದು, ಆಮದು ನಡೆಸುವುದು ಕಷ್ಟಕರವೂ ಆಗುತ್ತಿದೆ. ಸರ್ಕಾರ ಈಗ ಸ್ಥಳೀಯ ಯೂರಿಯಾ ಉತ್ಪಾದನೆಯನ್ನು ಉತ್ತೇಜಿಸಲು ಹೊಸ ನೀತಿಯನ್ನು ರೂಪಿಸಲು ಯೋಜಿಸಿದೆ. ಕಾರ್ಖಾನೆಗಳಿಗೆ ನೇರವಾಗಿ ಹಣ ವರ್ಗಾಯಿಸುವ ಬದಲು, ಅವುಗಳಿಗೆ ಎಂಟು ವರ್ಷಗಳ ತನಕ ಬೆಲೆಯ ಗ್ಯಾರಂಟಿ ನೀಡಲು ಯೋಜಿಸಲಾಗುತ್ತಿದೆ. ಇದು ಖಾಸಗಿ ಕಂಪನಿಗಳಿಗೆ ಹೂಡಿಕೆ ನಡೆಸಲು ಆತ್ಮವಿಶ್ವಾಸ ಮೂಡಿಸಿದೆ. 2012ರಲ್ಲಿ ಕೈಗೊಂಡಿದ್ದ ಇಂತಹ ಕ್ರಮದಿಂದಾಗಿ 76 ಲಕ್ಷ ಟನ್‌ಗಳಷ್ಟು ಉತ್ಪಾದನೆಯಾಗಿತ್ತು. ಈಗಲೂ ಸರ್ಕಾರ ಭಾರತದಲ್ಲಿರುವ 100 ಲಕ್ಷ ಟನ್‌ಗಳಷ್ಟು ಉತ್ಪಾದನಾ ಕೊರತೆಯನ್ನು ಸರಿದೂಗಿಸುವ ಉದ್ದೇಶ ಹೊಂದಿದೆ.

ಆದರೆ ಈ ಕ್ರಮವೂ ಭಾರತದ ಸಮಸ್ಯೆಗೆ ಪೂರ್ಣ ಉತ್ತರವಲ್ಲ. ಹೊಸ ಘಟಕಗಳನ್ನು ಸ್ಥಾಪಿಸಿ ಬೆಳೆಸಲು ವರ್ಷಗಳೇ ಬೇಕಾಗುತ್ತವೆ. ಅದರೊಡನೆ, ಅವುಗಳು ಆಮದು ಮಾಡಿಕೊಂಡ ಅನಿಲದಿಂದಲೇ ಕಾರ್ಯಾಚರಿಸುವುದರಿಂದ, ಜಾಗತಿಕ ಆಘಾತಗಳು ನಮಗೆ ತೊಂದರೆ ಉಂಟುಮಾಡಬಲ್ಲವು. ಆದ್ದರಿಂದಲೇ ಭಾರತ ಪರ್ಯಾಯ ಮಾರ್ಗಗಳ ಹುಡುಕಾಟ ನಡೆಸುತ್ತಿದೆ.

ಇವುಗಳಲ್ಲಿ ಒಂದು ಕಲ್ಲಿದ್ದಲಿನ ಅನಿಲೀಕರಣ. ಭಾರತದ ಬಳಿ ಕಲ್ಲಿದ್ದಲಿನ ಅಪಾರ ಸಂಗ್ರಹವಿದ್ದು, ಕಲ್ಲಿದ್ದಲನ್ನು 'ಸಿನ್‌ಗ್ಯಾಸ್' ಆಗಿ ಪರಿವರ್ತಿಸಲು ಸಾಧ್ಯವಿದೆ. ಇದು ಬಳಿಕ ಅಮೋನಿಯಾ ಆಗಿ, ಅಂತಿಮವಾಗಿ ಯೂರಿಯಾ ಆಗುತ್ತದೆ. ಇದು ಆಮದಿನ ಮೇಲಿನ ಅವಲಂಬನೆ ಕಡಿಮೆಗೊಳಿಸುತ್ತದಾದರೂ, ಮಾಲಿನ್ಯ ಹೆಚ್ಚಿಸಿ, ದಕ್ಷತೆ ಕಡಿಮೆಗೊಳಿಸುತ್ತದೆ. ಇನ್ನೊಂದು ಪರಿಹಾರವೆಂದರೆ ಹಸಿರು ಯೂರಿಯಾ. ಇದನ್ನು ಸೌರ ಅಥವಾ ಪವನ ಶಕ್ತಿಯಿಂದ ಉತ್ಪಾದಿಸಿದ ಜಲಜನಕದಿಂದ ತಯಾರಿಸಲಾಗುತ್ತದೆ. ಇದು ಶುದ್ಧ ಮತ್ತು ಭವಿಷ್ಯದ ವಿಧಾನವಾಗಿದ್ದರೂ, ಇಂದು ದೊಡ್ಡ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ದುಬಾರಿಯಾಗಿದೆ.

India’s urea supply crisis (file photo)
ಹೊರ್ಮುಸ್, ಹಣದುಬ್ಬರ, ಮತ್ತು ಚುನಾವಣೆಗಳು: ಸಮಸ್ಯೆಯ ಸುಳಿಯಲ್ಲಿ ಟ್ರಂಪ್ (ಜಾಗತಿಕ ಜಗಲಿ)

ಇದು ನಮ್ಮ ಮುಂದೆ ನೈಜ ಪ್ರಶ್ನೆಯನ್ನು ತಂದಿಡುತ್ತದೆ. ಭಾರತ ಹೆಚ್ಚು ಹೆಚ್ಚು ಯೂರಿಯಾವನ್ನು ಉತ್ಪಾದಿಸಬೇಕೇ? ಅಥವಾ ಯೂರಿಯಾವನ್ನು ಹೆಚ್ಚು ಬುದ್ಧಿವಂತಿಕೆಯಿಂದ ಬಳಸಬೇಕೆ? ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ನಡೆಸುವುದು ಇಂದಿನ ಸಮಸ್ಯೆಯನ್ನೇನೋ ಪರಿಹರಿಸಬಹುದು. ಆದರೆ, ಅಗ್ಗದ ಯೂರಿಯಾ ಅತಿಯಾದ ಬಳಕೆಯನ್ನು ಪ್ರೋತ್ಸಾಹಿಸಿ, ನಿಧಾನವಾಗಿ ಮಣ್ಣಿನ ಆರೋಗ್ಯವನ್ನೇ ಹಾಳುಗೆಡವುತ್ತದೆ. ಈಗಿರುವ ನೈಜ ಪರಿಹಾರ ಹೆಚ್ಚಿನ ಪೂರೈಕೆ ನಡೆಸುವುದಲ್ಲ, ಬದಲಿಗೆ ಯೂರಿಯಾವನ್ನು ಬುದ್ಧಿವಂತಿಕೆಯಿಂದ ಬಳಸುವುದು.

ಜಾಗತಿಕ ಬಿಕ್ಕಟ್ಟುಗಳು ರಾತ್ರೋರಾತ್ರಿ ಪೂರೈಕೆ ಕಡಿತಗೊಳಿಸಬಲ್ಲದ್ದರಿಂದ, ಸದ್ಯದ ಭವಿಷ್ಯದಲ್ಲಿ ಸ್ಥಳೀಯವಾಗಿ ಉತ್ಪಾದನೆ ಹೆಚ್ಚಿಸುವುದು ಅವಶ್ಯಕವಾಗಿದೆ. ಆದರೆ, ದೀರ್ಘಾವಧಿಯ ಪರಿಹಾರಕ್ಕಾಗಿ, ರಸಗೊಬ್ಬರ ಬಳಕೆಯಲ್ಲಿ ಸಮತೋಲನ, ಮಣ್ಣಿನ ಆರೋಗ್ಯ ಸುಧಾರಣೆ, ಮತ್ತು ರೈತರನ್ನು ಒಂದೇ ಪೋಷಕಾಂಶದ ಮೇಲೆ ಅತಿಯಾಗಿ ಅವಲಂಬಿಸದಂತೆ ತಡೆಯುವ ಸ್ಮಾರ್ಟ್ ಸಬ್ಸಿಡಿಗಳನ್ನು ಪರಿಚಯಿಸಬೇಕು. ಏಕೆಂದರೆ, ನಮ್ಮ ಮುಂದಿರುವ ನೈಜ ಅಪಾಯ ಯೂರಿಯಾದ ಅಲಭ್ಯತೆಯಲ್ಲ. ಬದಲಿಗೆ, ಅದರ ಮೇಲೆ ಮಿತಿಮೀರಿದ ಅವಲಂಬನೆ ಹೊಂದುವುದು!

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್ : girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com