

ಗುದದ್ವಾರದ (ಏನಲ್ ಅಬ್ಸೆಸ್) ಕುರು ಎಂಬುದು ಗುದದ್ವಾರದ ಸುತ್ತಲಿನ ಪ್ರದೇಶದಲ್ಲಿ ಸೋಂಕಿನಿಂದಾಗಿ ಕೀವು ಸಂಗ್ರಹವಾಗಿ ಬಾವು ಮತ್ತು ನೋವು ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಯಾಗಿದೆ.
ಗುದದ್ವಾರದ ಒಳಭಾಗದಲ್ಲಿರುವ ಸಣ್ಣ ಗ್ರಂಥಿಗಳು ಮಲವಿಸರ್ಜನೆಗೆ ಸಹಾಯ ಮಾಡುತ್ತವೆ. ಆದರೆ ಕೆಲವೊಮ್ಮೆ ಮಲದ ಕಣಗಳು, ಸಣ್ಣ ಗಾಯಗಳು ಅಥವಾ ಇತರ ಕಾರಣಗಳಿಂದ ಈ ಗ್ರಂಥಿಗಳು ಮುಚ್ಚಿಹೋಗುತ್ತವೆ. ಹೀಗೆ ಗ್ರಂಥಿಗಳು ಮುಚ್ಚಿಕೊಂಡಾಗ ಅಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಸೋಂಕು ಉಂಟಾಗುತ್ತದೆ ಮತ್ತು ಇದು ಕ್ರಮೇಣ ಕೀವು ತುಂಬಿದ ಬಾವಾಗಿ ಕುರುವಾ ರೂಪಗೊಳ್ಳುತ್ತದೆ.
ಈ ಸಮಸ್ಯೆಯು ಯಾರಿಗಾದರೂ ಬರಬಹುದು. ಆದರೆ ಪುರುಷರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ಇದು ಕೇವಲ ದೈಹಿಕ ನೋವು ಮಾತ್ರವಲ್ಲದೆ ರೋಗಿಗಳಲ್ಲಿ ಮುಜುಗರವನ್ನು ಉಂಟುಮಾಡುವುದರಿಂದ ಅನೇಕರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಆದರೆ ಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ಇದು ಫಿಸ್ಟುಲಾದಂತಹ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡಬಹುದು ಆದ್ದರಿಂದ ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ.
ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಗುದದ್ವಾರದ ಸುತ್ತ ಬಾವು ಮತ್ತು ನೋವು ಕಾಣಿಸಿಕೊಳ್ಳುವುದು. ಈ ನೋವು ಕುಳಿತಾಗ ಅಥವಾ ಮಲವಿಸರ್ಜನೆ ಮಾಡುವಾಗ ಉಲ್ಬಣಗೊಳ್ಳುತ್ತದೆ. ಕುರು ಉಂಟಾದ ಜಾಗವು ಕೆಂಪಾಗಿ ಊದಿಕೊಂಡಿರುತ್ತದೆ ಮತ್ತು ಮುಟ್ಟಿದರೆ ಬಿಸಿಯಾಗಿರುತ್ತದೆ.
ಸೋಂಕು ಹೆಚ್ಚಾದಂತೆ ರೋಗಿಗೆ ಜ್ವರ, ಚಳಿ ಮತ್ತು ಅತಿಯಾದ ಸುಸ್ತು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಕುರು ತಾನಾಗಿಯೇ ಒಡೆದು ಕೀವು ಹೊರಬರುತ್ತದೆ. ಆದರೆ ಇದರಿಂದ ನೋವು ತಾತ್ಕಾಲಿಕವಾಗಿ ಕಡಿಮೆಯಾದರೂ ಒಳಗಿನ ಸೋಂಕು ಪೂರ್ತಿಯಾಗಿ ಗುಣವಾಗಿರುವುದಿಲ್ಲ. ಇನ್ನು ಕೆಲವು ಕುರುಗಳು ಚರ್ಮದ ಮೇಲೆ ಕಾಣಿಸದೆ ಗುದನಾಳದ ಒಳಗಿನ ಆಳದಲ್ಲಿ ಇರುತ್ತವೆ ಅಂತಹ ಸಂದರ್ಭದಲ್ಲಿ ಹೊರಭಾಗದಲ್ಲಿ ಊತ ಕಾಣಿಸದಿದ್ದರೂ ಒಳಗಿನಿಂದ ಒತ್ತಡ ಮತ್ತು ನೋವಿನ ಅನುಭವವಾಗುತ್ತದೆ. ಇದನ್ನು ಪತ್ತೆಹಚ್ಚಲು ವೈದ್ಯರು ದೈಹಿಕ ಪರೀಕ್ಷೆಯ ಜೊತೆಗೆ ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್ ಮಾಡುತ್ತಾರೆ. ಈ ರೋಗನಿರ್ಣಯ ಪ್ರಕ್ರಿಯೆಯು ಸೋಂಕು ಎಷ್ಟು ಆಳಕ್ಕೆ ಹರಡಿದೆ ಮತ್ತು ಸ್ನಾಯುಗಳ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.
ಗುದದ್ವಾರದ ಕುರುವಿಗೆ ಕೇವಲ ಮಾತ್ರೆಗಳು ಅಥವಾ ಆಂಟಿಬಯೋಟಿಕ್‌ಗಳಿಂದ ಸಂಪೂರ್ಣ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಇದಕ್ಕೆ ಇರುವ ಮುಖ್ಯ ಪರಿಹಾರವೆಂದರೆ ಶಸ್ತ್ರಚಿಕಿತ್ಸೆಯ ಮೂಲಕ ಕೀವನ್ನು ಹೊರಹಾಕುವುದು. ವೈದ್ಯರು ಸಣ್ಣದೊಂದು ಗಾಯವನ್ನು ಮಾಡುವ ಮೂಲಕ ಸಂಗ್ರಹವಾದ ಕೀರನ್ನು ಹೊರತೆಗೆಯುತ್ತಾರೆ ಇದರಿಂದ ತಕ್ಷಣವೇ ನೋವು ಮತ್ತು ಒತ್ತಡ ಕಡಿಮೆಯಾಗುತ್ತದೆ. ಬಾವು ಎಷ್ಟು ಆಳದಲ್ಲಿದೆ ಎಂಬುದರ ಆಧಾರದ ಮೇಲೆ ಸ್ಥಳೀಯ ಅಥವಾ ಸಾಮಾನ್ಯ ಅರಿವಳಿಕೆಯನ್ನು ನೀಡಿ ಈ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ ಗಾಯವನ್ನು ಬೇಗನೆ ಹೊಲಿಯುವುದಿಲ್ಲ ಬದಲಾಗಿ ಅದು ಒಳಗಿನಿಂದಲೇ ನೈಸರ್ಗಿಕವಾಗಿ ಗುಣವಾಗಲು ಬಿಡಲಾಗುತ್ತದೆ. ಈ ಅವಧಿಯಲ್ಲಿ ರೋಗಿಯು ಪ್ರತಿದಿನ ಗಾಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಉಗುರುಬೆಚ್ಚನೆಯ ನೀರಿನಲ್ಲಿ ಕುಳಿತುಕೊಳ್ಳುವುದು ಅವಶ್ಯಕವಾಗಿರುತ್ತದೆ. ಗುಣಮುಖರಾಗುವ ಈ ಹಂತದಲ್ಲಿ ವೈದ್ಯರು ಸೂಚಿಸಿದ ಆಂಟಿಬಯೋಟಿಕ್ ಕೋರ್ಸನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ, ಇಲ್ಲದಿದ್ದರೆ ಸೋಂಕು ಮತ್ತೆ ಮರುಕಳಿಸುವ ಸಾಧ್ಯತೆ ಇರುತ್ತದೆ.
ಗುದದ್ವಾರದ ಕುರು ಸೋಂಕು ತಡೆಗಟ್ಟುವುದು ಹೇಗೆ?
ಈ ಸಮಸ್ಯೆಯನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಮುಖ್ಯವಾಗಿ ಮಲಬದ್ಧತೆಯನ್ನು ತಡೆಗಟ್ಟಲು ನಾರಿನಂಶವಿರುವ ತರಕಾರಿಗಳು (ಬೀನ್ಸ್, ಕ್ಯಾರೆಟ್, ಬೀಟ್ರೂಟ್, ಬ್ರೊಕೋಲಿ, ಎಲೆಕೋಸು, ಪಾಲಕ್ ಸೊಪ್ಪು, ದಂಟು ಸೊಪ್ಪು, ನುಗ್ಗೆಕಾಯಿ ಮತ್ತು ಸುವರ್ಣಗಡ್ಡೆ) ಮತ್ತು ಹಣ್ಣುಗಳನ್ನು (ಸೀಬೆ, ಸೇಬು, ಪಪ್ಪಾಯಿ, ಬಾಳೆಹಣ್ಣು, ಕಿತ್ತಳೆ, ಮೂಸಂಬಿ, ಸಪೋಟ, ಅಂಜೂರ ಮತ್ತು ಸ್ಟ್ರಾಬೆರಿ) ಹೆಚ್ಚಾಗಿ ಸೇವಿಸಬೇಕು ಹಾಗೂ ಪ್ರತಿದಿನ ಸಾಕಷ್ಟು ನೀರು (ಮೂರರಿಂದ ನಾಲ್ಕು ಲೀಟರ್) ಕುಡಿಯಬೇಕು. ರಾಗಿ, ಜೋಳ, ಓಟ್ಸ್, ಬ್ರೌನ್ ರೈಸ್ (ಕುಚ್ಚಲಕ್ಕಿ), ನವಣೆ, ಹೆಸರುಕಾಳು, ಕಡಲೆಕಾಳು, ಅವರೆಕಾಳು ಮತ್ತು ಸೋಯಾಬೀನ್ ಮತ್ತು ಬಾದಾಮಿ, ಅಕ್ರೋಟ್ (ವಾಲ್‌ನಟ್), ಒಣ ದ್ರಾಕ್ಷಿ, ಅಗಸೆ ಬೀಜ (ಫ್ಲಾಕ್ಸ್ ಸೀಡ್ಸ್), ಚಿಯಾ ಬೀಜ ಮತ್ತು ಕುಂಬಳಕಾಯಿ ಬೀಜಗಳನ್ನು ನಿಯಮಿತವಾಗI ಸೇವಿಸಬೇಕು. ಮಧುಮೇಹವಿದ್ದವರು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಏಕೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾದಾಗ ಸೋಂಕುಗಳು ಬೇಗನೆ ಹರಡುತ್ತವೆ.
ಗುದದ್ವಾರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮಲವಿಸರ್ಜನೆಯ ಸಮಯದಲ್ಲಿ ಅತಿಯಾಗಿ ಒತ್ತಡ ಹಾಕದಿರುವುದು ಈ ಸಮಸ್ಯೆಯಿಂದ ದೂರವಿರಲು ಸಹಾಯ ಮಾಡುತ್ತದೆ. ಮಲವಿಸರ್ಜನೆಯ ನಂತರ ಆ ಭಾಗವನ್ನು ಒಣಗಿಸಿ ಇಟ್ಟುಕೊಳ್ಳುವುದು ಮತ್ತು ಸುಗಂಧರಹಿತ ಸ್ವಚ್ಛತಾ ಪದಾರ್ಥಗಳನ್ನು ಬಳಸುವುದು ಸೂಕ್ತ.
ಒಂದು ವೇಳೆ ಪದೇ ಪದೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ ಅದು ಕರುಳಿನ ಉರಿಯೂತದಂತಹ ಇತರ ಗಂಭೀರ ಕಾಯಿಲೆಗಳ ಲಕ್ಷಣವಾಗಿರಬಹುದು. ಆದ್ದರಿಂದ ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ. ನಿರ್ಲಕ್ಷ್ಯ ಮಾಡಿದರೆ ಇದು ಫಿಸ್ಟುಲಾ ಎಂಬ ದೀರ್ಘಕಾಲದ ಸಮಸ್ಯೆಗೆ ಕಾರಣವಾಗಿ ಮತ್ತೆ ಮತ್ತೆ ಶಸ್ತ್ರಚಿಕಿತ್ಸೆ ಮಾಡುವ ಅನಿವಾರ್ಯತೆ ಉಂಟಾಗಬಹುದು. ಅಲ್ಲದೆ, ಸೋಂಕು ರಕ್ತಕ್ಕೆ ಹರಡಿ ಸೆಪ್ಸಿಸ್ ಎಂಬ ಪ್ರಾಣಾಪಾಯದ ಸ್ಥಿತಿಗೂ ತಲುಪಬಹುದು. ಆದ್ದರಿಂದ ಆರಂಭಿಕ ಹಂತದ ಸಣ್ಣ ಊತವನ್ನೂ ಕಡೆಗಣಿಸದೇ ವೈದ್ಯರನ್ನು ಸಂಪರ್ಕಿಸುವುದು ಕ್ಷೇಮ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಲೇಸರ್ ಚಿಕಿತ್ಸೆಗಳೂ ಲಭ್ಯವಿದ್ದು, ಇವು ಕಡಿಮೆ ನೋವಿನೊಂದಿಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ.
ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ಸರಿಯಾದ ಆಹಾರ ಕ್ರಮ, ನಿಯಮಿತ ವ್ಯಾಯಾಮ ಮತ್ತು ವೈಯಕ್ತಿಕ ಶುಚಿತ್ವದ ಮೂಲಕ ಈ ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಿದೆ. ಆರೋಗ್ಯಕರ ಜೀವನಶೈಲಿಯೇ ಈ ಸಮಸ್ಯೆಯನ್ನು ತಡೆಗಟ್ಟಲು ಇರುವ ಅತ್ಯುತ್ತಮ ಮಾರ್ಗವಾಗಿದೆ.
Advertisement