
ಮುಂಬೈ: ಭಾರತೀಯ ಪತ್ರಕರ್ತರ ಮೇಲೆ ಬೀಳಬೇಕಿದ್ದ ಬುಲೆಟ್ ಗಳು ನನ್ನ ಮೇಲೆ ಬಿದ್ದವು ಎಂದು ಆಸ್ಟ್ರೇಲಿಯಾ ಪತ್ರಕರ್ತ ಫೆರಿಸ್ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಸೆಮಿಫೈನಲ್ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸುದ್ದಿಗೋಷ್ಠಿ ವೇಳೆ ನಿವೃತ್ತಿ ಕುರಿತು ಪ್ರಶ್ನೆ ಕೇಳಿ ಧೋನಿ ಅವರಿಂದ ತಮಾಷೆಯ ಉತ್ತರ ಪಡೆದಿದ್ದ ಸ್ಯಾಮುಯೆಲ್ ಫೆರಿಸ್, ತಮ್ಮ ಮತ್ತು ಧೋನಿ ಅವರ ನಡುವಿನ ಈ ಹಾಸ್ಯಾಸ್ಪದ ಸನ್ನಿವೇಶವನ್ನು ವೆಬ್ ಸೈಟಿನಲ್ಲಿ ಬರೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ಧೋನಿ ಪಕ್ಕದಲ್ಲಿ ಕುಳಿತು ಮಾತನಾಡುವ ಮೂಲಕ ವಿಶ್ವದ ಗಮನಸೆಳೆದಿರುವ ಫೆರಿಸ್ ತಮ್ಮ ಅನುಭವವನ್ನು ‘ಕ್ರಿಕೆಟ್ ಆಸ್ಟ್ರೇಲಿಯಾ’ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದು, ‘ಭಾರತೀಯ ಮಾಧ್ಯಮಮಿತ್ರರಿಗೆ ಬೀಳಬೇಕಿದ್ದ ಬುಲೆಟ್ ನಾನು ಎದುರಿಸಿದೆ’ ಎಂದಿದ್ದಾರೆ.
"ಮೊದಲು ಧೋನಿ ಪಕ್ಕದಲ್ಲಿ ಕೂರಲು ಹಿಂಜರಿಕೆಯಾಯಿತು. ಆದರೆ, ಭಾರತ ಕಂಡ ಸರ್ವಶ್ರೇಷ್ಠ ನಾಯಕನ ಪಕ್ಕದಲ್ಲಿ ಕುಳಿತ ಕ್ಷಣವನ್ನು ಜೀವನದಲ್ಲಿ ಮರೆಯಲಾರೆ. ನನ್ನ ಹೆಗಲ ಮೇಲೆ ಧೋನಿ ಕೈ ಹಾಕಿದ್ದು, ಸಾವಿರಾರು ಜಾಹೀರಾತುಗಳಲ್ಲಿ ನೋಡಿದ್ದ ಧೋನಿ ನಗುವನ್ನು ತೀರಾ ಹತ್ತಿರದಿಂದ ನೋಡಿದ್ದನ್ನು ವರ್ಣಿಸಲು ಸಾಧ್ಯವಿಲ್ಲ ಎಂದು ಫೆರಿಸ್ ಬರೆದಿದ್ದಾರೆ.
ಒಟ್ಟಾರೆ ಆಸ್ಟ್ರೇಲಿಯಾ ಪತ್ರಕರ್ತನ ಒಂದು ಪ್ರಶ್ನೆ ಇದೀಗ ಆತನನ್ನು ಕ್ರಿಕೆಟ್ ರಂಗದಲ್ಲಿ ಭಾರಿ ಖ್ಯಾತಿಗೆ ಕಾರಣವಾಗಿದೆ.
Advertisement