

ನವದೆಹಲಿ: ಡಿಸೆಂಬರ್ 30ರೊಳಗೆ ಅಪೆಕ್ಸ್ ಕೌನ್ಸಿಲ್ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ನೇಮಿಸಿದ್ದ ಲೋಧಾ ಸಮಿತಿ ಬಿಸಿಸಿಐಗೆ ಗಡುವು ನೀಡಿದೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಹಾಗೂ ಐಪಿಎಲ್ ಆಡಳಿತ ಮಂಡಳಿ ರಚನೆ ಸಂಬಂಧ ಸುಪ್ರೀಂಕೋರ್ಟ್ ರಚಿಸಿದ್ದ ಲೋಧಾ ಸಮಿತಿ ಬುಧವಾರ ತನ್ನ ಆದೇಶ ಹೊರಡಿಸಿದ್ದು, ಡಿಸೆಂಬರ್ 30ರೊಳಗೆ ಹೊಸ ಅಪೆಕ್ಸ್ ಕೌನಿಲ್ಸ್ ನೇಮಿಸುವಂತೆ ಬಿಸಿಸಿಐಗೆ ಆದೇಶಿಸಿದೆ. ಹಾಲಿ ಇರುವ ಬಿಸಿಸಿಐನ 14 ಮಂದಿ ಕಾರ್ಯಕಾರಿ ಸಮಿತಿಯ ಬದಲು 9 ಮಂದಿಯ ಅಪೆಕ್ಸ್ ಕೌನ್ಸಿಲ್ ಅನ್ನು ಆಯ್ಕೆ ಮಾಡಲು ಸುಪ್ರೀಂ ಕೋರ್ಟ್ ನೇಮಿಸಿರುವ ಲೋಧಾ ಸಮಿತಿ ಬಿಸಿಸಿಐಗೆ ಡಿಸೆಂಬರ್ 30ರ ಗಡುವು ನೀಡಿದೆ.
ಮೂಲಗಳ ಪ್ರಕಾರ ಈಗಾಗಲೇ ಬಿಸಿಸಿಐ ಇದೇ ಸೆಪ್ಟೆಂಬರ್ 21ರಂದು ಐಪಿಎಲ್ ಆಡಳಿತ ಮಂಡಳಿ ಪುನಾರಚನೆ ಕುರಿತಂತೆ ಚರ್ಚೆ ನಡೆಸಲು ಮುಂದಾಗಿದ್ದು, ಲೋಧಾ ಸಮಿತಿ ಪ್ರಸ್ತುತ ಆದೇಶದಿಂದಾಗಿ ಬಿಸಿಸಿಐ ತನ್ನ ಕಾರ್ಯವನ್ನು ತ್ವರಿತಗತಿಯಲ್ಲಿ ಮಾಡುವಂತಾಗಿದೆ. ಡಿಸೆಂಬರ್ 30ರ ಒಳಗಾಗಿ ಹೊಸ ನಿಯಮದ ಅನ್ವಯ ಬಿಸಿಸಿಐ ಸಮಿತಿಗಳಿಗೆ ಹೊಸಬರ ನೇಮಕವಾಗಬೇಕಿದೆ.
ಇನ್ನು ಲೋಧಾ ಸಮಿತಿಯ ಎಲ್ಲ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕಾರಣ ಅದರ ತೀರ್ಪಿಗಾಗಿ ಕಾಯಬೇಕಿದೆ. ಬಿಸಿಸಿಐನ ಅಧಿಕಾರಿಗಳು ಮೂರು ವರ್ಷದ ಅವಧಿಗೆ ಗರಿಷ್ಠ ಮೂರು ಬಾರಿ ಮಾತ್ರ ಚುನಾವಣೆಗೆ ನಿಲ್ಲಬಹುದು ಎಂದು ಲೋಧಾ ಸಮಿತಿ ಈ ಹಿಂದೆ ಶಿಫಾರಸು ಮಾಡಿತ್ತು.