
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹಿರಿಮೆಗೆ ಮತ್ತೊಂದು ಗರಿ ಲಭಿಸಿದ್ದು, ಇದೇ ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಸಬ್ ಏರ್ ವ್ಯವಸ್ಥೆ ಅಳವಡಿಸುವ ಕಾರ್ಯ ಆರಂಭವಾಗಿದೆ.
ಮಳೆ ಬಂತು ಪಂದ್ಯ ನಿಂತು ಹೋಯಿತು ಎಂಬ ಮಾತುಗಳು ಇನ್ನು ಮುಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ಕೇಳಿಬರುವುದಿಲ್ಲ. ಮಳೆ ನಿಂತ ಕೆಲವೇ ಕ್ಷಣಗಳಲ್ಲಿ ಕ್ರೀಡಾಂಗಣವನ್ನು ಕ್ಷಣಮಾತ್ರದಲ್ಲಿ ಒಣಗಿಸುವ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಅನ್ನು ಚಿನ್ನಸ್ವಾಮಿಗೆ ಅಳವಡಿಸಲಾಗುತ್ತಿದ್ದು, ಈಗಾಗಲೇ ಇದರ ಕಾಮಕಾಗಿ ಆರಂಭವಾಗಿದೆ. ಗಂಟೆಗಟ್ಟಲೆ ಮಳೆ ಬಂದು ಮೈದಾನವೆಲ್ಲಾ ತೊಯ್ದು ಹೋದರೂ ಕೆಲವೇ ನಿಮಿಷಗಳಲ್ಲಿ ಔಟ್ ಫೀಲ್ಡ್ ಅನ್ನು ಸ್ವಚ್ಚಗೊಳಿಸಿ ಪಂದ್ಯ ನಡೆಯುವಂತೆ ಮಾಡುವ ಸಾಮರ್ಥ್ಯ ‘ಸಬ್ ಏರ್’ ಯಂತ್ರ ಹೊಂದಿದೆ.
ಈ ಮಹತ್ವದ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಇನ್ನು ಮೂರು ತಿಂಗಳಲ್ಲಿ ‘ಸಬ್ ಏರ್’ ಯಂತ್ರ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದೆ. ಹೈದರಾಬಾದ್ ಮೂಲದ ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಎನ್ನುವ ಸಂಸ್ಥೆ ಈ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುವ ಸಾಧ್ಯತೆ. ಆ ಮೂಲಕ ಸಬ್ ಏರ್ ಸಿಸ್ಟಮ್ ತಂತ್ರಜ್ಞಾನವನ್ನು ಅಳವಡಿಸಿದ ವಿಶ್ವದ ಮೊಟ್ಟ ಮೊದಲ ಕ್ರಿಕೆಟ್ ಕ್ರೀಡಾಂಗಣ ಎಂಬ ಹಿರಿಮೆಗೆ ಚಿನ್ನಸ್ವಾಮಿ ಪಾತ್ರವಾಗಲಿದೆ. ಅಮೆರಿಕ, ಲಂಡನ್ ಮತ್ತು ಆಸ್ಟ್ರೇಲಿಯಾದ ಗಾಲ್ಫ್ ಸ್ಟೇಡಿಯಂಗಳಲ್ಲಿ ಇಂತಹ ಅತ್ಯಾಧುನಿಕ ವ್ಯವಸ್ಥೆ ಇದ್ದು ಇದೀಗ ಕ್ರಿಕೆಟ್ ಕ್ಷೇತ್ರದಲ್ಲಿ ಈ ಆಧುನಿಕ ವ್ಯವಸ್ಥೆ ಅಳವಡಿಸಿದ ಮೊಟ್ಟ ಮೊದಲ ಕ್ರೀಡಾಂಗಣ ಎಂಬ ಖ್ಯಾತಿಗೆ ಚಿನ್ನಸ್ವಾಮಿ ಪಾತ್ರವಾಗಲಿದೆ.
ಈಗಾಗಲೇ ಸೌರ ವಿದ್ಯುತ್ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ಕ್ರಿಕೆಟ್ ಪಂದ್ಯಗಳ ವೇಳೆ ವಿಶೇಷ ಚೇತನರಿಗೆ ನೆರವಾಗಲು ವಿದ್ಯುತ್ ಚಾಲಿತ ಕುರ್ಚಿಯನ್ನು ಅಳವಡಿಸಿರುವ ಚಿನ್ನಸ್ವಾಮಿಯ ವೈಶಿಷ್ಠ್ಯತೆಗೆ ಸಬ್ ಏರ್ ಸಿಸ್ಟಮ್ ಹೊಸ ಸೇರ್ಪಡೆಯಾಗಲಿದೆ.
10 ವರ್ಷಗಳ ಹಿಂದೆಯೇ ಯೋಜನೆ ಸಿದ್ಧವಾಗಿತ್ತು
1969ರಲ್ಲಿ ಕ್ರೀಡಾಂಗಣ ನಿರ್ಮಾಣವಾದ ಬಳಿಕ ಕೆಎಸ್‌ಸಿಎ ಹಂತ ಹಂತವಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಆದರೆ ಸಬ್ ಏರ್ ಸೌಲಭ್ಯ ಅಳವಡಿಸಿಕೊಳ್ಳಲು ಹತ್ತು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಸತತವಾಗಿ ಕ್ರಿಕೆಟ್ ಟೂರ್ನಿಗಳನ್ನು ಆಯೋಜಿಸಬೇಕಿದ್ದ ಕಾರಣ ಸಬ್ ಏರ್ ಸೌಲಭ್ಯ ಅಳವಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ಕೆಎಸ್ ಸಿಎ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿರುವ ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಷ್ ಪಟೇಲ್ ಅವರು, ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಸೋಲಾರ್ ವ್ಯವಸ್ಥೆಯನ್ನು ಬಿಸಿಸಿಐ ಮೆಚ್ಚಿಕೊಂಡಿದೆ. ಎಲ್ಲಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳಿಗೆ ಕೆಎಸ್‌ಸಿಎ ಕೆಲಸ ಮಾದರಿ ಎಂದೂ ಶ್ಲಾಘಿಸಿದೆ. ಇಲ್ಲಿನ ಗ್ಯಾಲರಿ ವ್ಯವಸ್ಥೆ ಬಗ್ಗೆ ಆಟಗಾರರು ಮತ್ತು ಪ್ರೇಕ್ಷಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಬಳಿಕ ಬಿಸಿಸಿಐ ಉತ್ತಮ ಮೈದಾನ ಪ್ರಶಸ್ತಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀಡಿದೆ. ಆದ್ದರಿಂದ ಸಬ್ ಏರ್ ಕೆಲಸವನ್ನು ಬೇಗನೆ ಮುಗಿಸಲು ಪಣ ತೊಟ್ಟಿದ್ದೇವೆ’ ಎಂದು ಅವರು ಹೇಳಿದರು.
ಏನಿದು ಸಬ್ ಏರ್ ಸಿಸ್ಟಮ್?
ಸಾಮಾನ್ಯವಾಗಿ ಕ್ರೀಡಾಂಗಣದಲ್ಲಿ ಮಳೆಯಾದರೆ ಹೊರಾಂಗಣವನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ. ರೋಲರ್, ನೀರನ್ನು ಹಿಂಗಿಸುವ ಯಂತ್ರಗಳ ಬಳಕೆಯಿಂದ ನೀರನ್ನು ಹೊರಗೆ ಹಾಕುವ ಕೆಲಸಗಳು ನಡೆಯುತ್ತಿತ್ತು. ಇನ್ನು ಮುಂದೆ ಇವುಗಳ ಹೆಚ್ಚಿನ ಅವಶ್ಯಕತೆಯೇ ಇರುವುದಿಲ್ಲ. ಏಕೆಂದರೆ ಕ್ರೀಡಾಂಗಣಕ್ಕೆ ಅಳವಡಿಸಲಾಗುವ ಸಬ್ ಏರ್ ವ್ಯವಸ್ಥೆ ಕ್ಷಣ ಮಾತ್ರದಲ್ಲಿ ನೀರಿನಿಂದ ತೊಯ್ದ ಹೊರಾಂಗಣವನ್ನು ಕ್ಷಣಮಾತ್ರದಲ್ಲಿ ಒಣಗಿಸುತ್ತದೆ.
ಈ ಸಬ್ ಏರ್ ವ್ಯವಸ್ಥೆಯಲ್ಲಿ ಮೈದಾನದ ಹೊರಾಂಗಣ (ಔಟ್‌ಫೀಲ್ಡ್‌ನಲ್ಲಿ)ವನ್ನು ಅಗೆದು ಸುಮಾರು ಅರ್ಧದಿಂದ ಒಂದು ಅಡಿ ಅಳದಲ್ಲಿ ಕೊಳವೆಗಳನ್ನು ಅಳವಡಿಸಲಾಗುತ್ತದೆ. ಕೊಳವೆಗಳ ಮೂಲಕ ಸಂಗ್ರಹವಾಗುವ ನೀರನ್ನು ಹೀರಲು ಕ್ರೀಡಾಂಗಣದ ಕೊಠಡಿಯೊಂದರಲ್ಲಿ ಅತ್ಯಾಧುನಿಕ ಯಂತ್ರವನ್ನು ಹಾಕಲಾಗುತ್ತದೆ. ಮಳೆ ಆರಂಭವಾದ ಕ್ಷಣದಿಂದ ಸಬ್ ಏರ್ ಸಿಸ್ಟಮ್ ನೀರನ್ನು ಹೀರುವ ಕಾರ್ಯದಲ್ಲಿ ತೊಡಗುತ್ತದೆ. ಅಲ್ಲದೆ ನೀರನ್ನು ಸಂಪೂರ್ಣವಾಗಿ ಹೀರಿದ ಬಳಿಕ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಕ್ರೀಡಾಂಗಣಕ್ಕೆ ರವಾನಿಸುತ್ತದೆ. ಕ್ರೀಡಾಂಗಣವನ್ನು ಪಂದ್ಯಕ್ಕೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ಶೀಘ್ರವಾಗಿ ನೀರನ್ನು ತೆಗೆದು ಮೈದಾನವನ್ನು ಒಣಗಿಸಲು ಈ ವ್ಯವಸ್ಥೆ ತುಂಬಾ ಸಹಕಾರಿಯಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈಗಾಗಲೇ ಸಬ್ ಏರ್ ಸಿಸ್ಟಮ್ ವಿಶ್ವದ ಹಲವಾರು ಬೇಸ್‌ಬಾಲ್, ಫುಟ್ಬಾಲ್, ಗಾಲ್ಫ್ ಹಾಗೂ ರಗ್ಬಿ ಕ್ರೀಡಾಂಗಣಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.
ಯಂತ್ರ ಹೇಗೆ ಕೆಲಸ ಮಾಡುತ್ತದೆ?
ಪಂದ್ಯದ ವೇಳೆ ಮಳೆ ಬಂದರೆ ಸಬ್ ಏರ್ ಯಂತ್ರದ ಕೆಲಸ ಆರಂಭವಾಗುತ್ತದೆ. ಮಳೆಯ ನೀರು ಭೂಮಿಯ ಮೂಲಕ ಕೊಳವೆಯ ಒಳಗೆ ಸೇರಲು ವ್ಯವಸ್ಥೆ ಇದೆ. ಮಳೆಯ ನೀರಿನ ಜೊತೆ ಮಣ್ಣು ಕೂಡ ಒಳ ಸೇರದಂತೆ ಎಚ್ಚರಿಕೆ ವಹಿಸಲು ಜಲ್ಲಿಕಲ್ಲು ಹಾಕಲಾಗುತ್ತದೆ. ಕೃತಕವಾಗಿ ಹಾಕಲಾಗಿರುವ ಹುಲ್ಲಿನ ಮೇಲೆ ಬೀಳುವ ಮಳೆ ನೀರು ಸಣ್ಣ ಸಣ್ಣ ಕೊಳವೆಗೆ ಹೋಗುತ್ತದೆ. ಈ ನೀರು ಮುಖ್ಯ ಕೊಳವೆಗೆ ಸೇರಿ ಹೊರ ಹೋಗುತ್ತದೆ. ಹಾಗೆ ಕೊಳವೆಯಲ್ಲಿ ಸಂಗ್ರಹವಾದ ನೀರು ಹೊರ ಹೋದ ಬಳಿಕ ಒಂದೆಡೆ ಸಂಗ್ರಹಿಸಲು ಕೆಎಸ್‌ಸಿಎ ವ್ಯವಸ್ಥೆ ಮಾಡಿಕೊಂಡಿದೆ. ಮಳೆಯ ನೀರು ಹೊರಬಂದ ಬಳಿಕ ಅದೇ ಕೊಳವೆಯ ಮೂಲಕ ಯಂತ್ರದ ಸಹಾಯದಿಂದ ವೇಗವಾಗಿ ಗಾಳಿಯನ್ನು ಹಾಯಿಸಲಾಗುತ್ತದೆ.
ಒಂದು ಸಬ್ ಏರ್ ಯಂತ್ರದ ಬೆಲೆ 3.5 ಕೋಟಿ ರು.
ಸಬ್ ಏರ್ ಸಿಸ್ಟಮ್ ಅನ್ನು ಅಳವಡಿಸುವುದರಿಂದ ಮುಂದಿನ ದಿನಗಳಲ್ಲಿ ಎಷ್ಟೇ ಮಳೆ ಬಂದರೂ ಚಿನ್ನಸ್ವಾಮಿ ಕ್ರೀಡಾಂಗಣ ಕೆಲವೇ ನಿಮಿಷಗಳಲ್ಲಿ ಪಂದ್ಯಕ್ಕೆ ಸಜ್ಜುಗೊಳ್ಳಲಿದೆ. ಆ ಮೂಲಕ ಪಂದ್ಯ ರದ್ದಾಗುವ ಭೀತಿಯನ್ನು ತಪ್ಪಿಸಿಕೊಳ್ಳಬಹುದು. ಸಬ್ ಏರ್ ಸಿಸ್ಟಮ್‌ನಲ್ಲಿ ನೀರು ಹೀರುವ ಯಂತ್ರವನ್ನು ಅಮೆರಿಕದಿಂದ ತರಿಸಿಕೊಳ್ಳಲು ಕೆಎಸ್‌ಸಿಎ ನಿರ್ಧರಿಸಿದ್ದು, ಆ ಯಂತ್ರದ ಬೆಲೆ 3.5 ಕೋಟಿ ರುಪಾಯಿಯಂತೆ. ಸಬ್ ಏರ್ ಸಿಸ್ಟಮ್‌ನ ಇನ್ನೊಂದು ಉಪಯೋಗವೆಂದರೆ ಇದು ಕ್ರೀಡಾಂಗಣದ ಮೇಲ್ಪದರಕ್ಕೆ ಹಾಕಲಾಗುವ ಹುಲ್ಲುಹಾಸಿಗೆ ಬೇರು ಮಟ್ಟದಲ್ಲಿ ಗಾಳಿ ಸಿಗುವಂತೆ ಮಾಡಲಿದೆ. ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆಯಿಂದ ಕ್ರೀಡಾಂಗಣದಲ್ಲಿರುವ ಹುಲ್ಲು ರೋಗ ರಹಿತವಾಗಿ ಆರೋಗ್ಯಕರವಾಗಿ ಬೆಳೆಯುವಂತಾಗುತ್ತದೆ.
ಒಟ್ಟಾರೆ ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿರುವ ಚಿನ್ನಸ್ವಾಮಿ ಕ್ರೀಡಾಂಗಣ ಇದೀಗ ಸಬ್ ಏರ್ ಸಿಸ್ಟಮ್ ಅಳವಡಿಸಿಕೊಳ್ಳುವ ಮೂಲಕ ಕ್ರಿಕೆಟ್ ಆಡುವ ದೇಶಗಳಿಗೆ ಮಾದರಿ ಕ್ರೀಡಾಂಗಣವಾಗಿದೆ.
Advertisement