ಕ್ರಿಕೆಟ್ ಲೆಜೆಂಡ್ ಗಳಿಗೆ ಸಿಎಬಿ ಸನ್ಮಾನ

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಲೆಜೆಂಡರಿ ಆಟಗಾರರನ್ನು ಸನ್ಮಾನಿಸಲಾಯಿತು...
ಕ್ರಿಕೆಟ್ ಲೆಜೆಂಡ್ ಗಳಿಗೆ ಸಿಎಬಿ ಸನ್ಮಾನ (ಚಿತ್ರಕೃಪೆ: ಕ್ರಿಕ್ ಇನ್ಫೋ)
ಕ್ರಿಕೆಟ್ ಲೆಜೆಂಡ್ ಗಳಿಗೆ ಸಿಎಬಿ ಸನ್ಮಾನ (ಚಿತ್ರಕೃಪೆ: ಕ್ರಿಕ್ ಇನ್ಫೋ)

ಕೋಲ್ಕತಾ: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಲೆಜೆಂಡರಿ ಆಟಗಾರರನ್ನು  ಸನ್ಮಾನಿಸಲಾಯಿತು.

ದಶಕಗಳ ಕಾಲ ಕ್ರಿಕೆಟ್ ಗೆ ಸೇವೆ ಸಲ್ಲಿಸಿದ ಭಾರತ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗರನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಆಹ್ವಾನಿಸಿದ್ದ ಬೆಂಗಾಲ್ ಕ್ರಿಕೆಚ್ ಸಂಸ್ಥೆ  ಪಂದ್ಯಕ್ಕೂ ಮುನ್ನ ಅವರಿಗೆ ಸ್ಮರಣಿಕೆಗಳನ್ನು ನೀಡುವ ಮೂಲಕ ಸನ್ಮಾನಿಸಿತು.  ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್, ವಸೀಂ ಅಕ್ರಮ್, ವಕಾರ್ ಯೂನಿಸ್, ಇಂತಿಕಾಬ್ ಆಲಂ ಮತ್ತು ಭಾರತದ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ  ಸೆಹ್ವಾಗ್, ಸುನಿಲ್ ಗವಾಸ್ಕರ್ ಮತ್ತು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರನ್ನು ಕೋಲ್ಕತಾ ಕ್ರಿಕೆಟ್ ಸಂಸ್ಥೆಯ ವತಿಯಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು  ಸನ್ಮಾನಿಸಿದರು.

ಇನ್ನು ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಸ್ಚರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬಂಗಾಳಿ ಭಾಷೆಯಲ್ಲಿ ಭಾರತ ತಂಡಕ್ಕೆ ಹಾರೈಸಿದಾಗ ಮೈದಾನದಲ್ಲಿ ನೆರೆದಿದ್ದ ಕ್ರಿಕೆಟ್‌ ಪ್ರೇಮಿಗಳ  ಸಂಭ್ರಮ ಮುಗಿಲು ಮುಟ್ಟಿತ್ತು. ‘ಈಡನ್‌ ಅಂಗಳದಲ್ಲಿರುವ ವಾತಾವರಣ ಕಂಡು ಅತೀವ ಸಂತೋಷವಾಗುತ್ತಿದೆ. ಪಾಕಿಸ್ತಾನ ತಂಡವನ್ನು ಬೆಂಬಲಿಸಲು ಅನೇಕ ಜನ ಇಲ್ಲಿಗೆ ಬಂದಿದ್ದಾರೆ.  ಅವರನ್ನೂ ನಾವು ಸ್ವಾಗತಿಸುತ್ತೇವೆ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಕ್ರಿಕೆಟ್‌ ಅನ್ನು ಪ್ರೀತಿಸಿ’ ಎಂದು ಸಚಿನ್‌ ಹೇಳಿದರು.

‘ನಮಗೆ ಭಾರತದಲ್ಲಿ ಭರ್ಜರಿ ಸ್ವಾಗತ ನೀಡಿ ಗೌರವಿಸಿದ್ದೀರಿ. ಇದರಿಂದ ತುಂಬಾ ಸಂತೋಷವಾಗಿದೆ. ಇದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯನ್ನೂ ಸೆಳೆಯುವ ಪಂದ್ಯ. ಈ ಕ್ರೀಡಾಂಗಣದಲ್ಲಿ  ನಾನಾಡಿದ ಕೊನೆಯ ಪಂದ್ಯದಲ್ಲಿ ಫಲಿತಾಂಶ ಏನಾಗಿತ್ತೊ, ಈಗಲೂ ಅದೇ ಫಲಿತಾಂಶ ಬರಲಿದೆ’ ಎಂದು ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಹೇಳಿದರು. ಇಮ್ರಾನ್ ಖಾನ್‌  1989–90ರ ನೆಹರು ಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಆಡಿದ್ದರು. ಆಗ ಪಾಕ್ ತಂಡ ವೆಸ್ಟ್ ಇಂಡೀಸ್ ಎದುರು ಗೆಲುವು ಪಡೆದು ಟ್ರೋಫಿ  ಗೆದ್ದುಕೊಂಡಿತ್ತು. ಇದೇ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿತ್ತು.

‘ಇಷ್ಟೊಂದು ಜನ ಸೇರಿರುವ ದೊಡ್ಡ ವೇದಿಕೆಯಲ್ಲಿ ರಾಷ್ಟ್ರಗೀತೆ ಹಾಡಲು ಅವಕಾಶ ಲಭಿಸಿದ್ದಕ್ಕೆ ಅತೀವ ಸಂತೋಷ ವಾಗಿದೆ’ ಎಂದು ಬಚ್ಚನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com