
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯ ಹಲವು ರೋಚಕತೆಗೆ ಸಾಕ್ಷಿಯಾಗಿತ್ತು. ಅಂತೆಯೇ ಒಂದು ಕ್ಷಣ ಬಾಂಗ್ಲಾದೇಶದ ಮುಜುಗರಕ್ಕೂ ಕಾರಣವಾಗಿತ್ತು.
ತೀವ್ರ ರೋಚಕವಾಗಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಇನ್ನೇನು ಗೆದ್ದೇ ಬಿಟ್ಟಿತು ಎನ್ನುವ ಸಂದರ್ಭದಲ್ಲಿ ನಡೆದ ಮ್ಯಾಜಿಕ್ ಆ ತಂಡದಿಂದ ಗೆಲುವನ್ನು ಕಸಿದು ಭಾರತ ತಂಡಕ್ಕೆ ನೀಡಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ಆಟಗಾರರು ಮತ್ತು ಬಾಂಗ್ಲಾದ ಅಭಿಮಾನಿಗಳು ತೀವ್ರ ಮುಜುಗರಕ್ಕೀಡಾಗಿದ್ದರು. ಇಷ್ಟಕ್ಕೂ ಅವರ ಮುಜುಗರಕ್ಕೆ ಕಾರಣವೇನು ಗೊತ್ತೆ..? ಪಂದ್ಯದ ಗೆಲುವಿಗೂ ಮುನ್ನವೇ ಸಂಭ್ರಮಾಚರಣೆ ನಡೆಸಿದ ಪರಿ...
ಪಂದ್ಯದ ಕೊನೆಯ ಓವರ್ ನಲ್ಲಿ ಬಾಂಗ್ಲಾಗೆ ಗೆಲ್ಲಲು 11 ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಬೌಲಿಂಗ್ ಮಾಡಿದ ಪಾಂಡ್ಯಾ ಮೊದಲ ಎಸೆತದಲ್ಲಿ 1 ರನ್ ನೀಡಿದರೆ ಎರಡು ಮತ್ತು ಮೂರನೇ ಎಸೆತದಲ್ಲಿ ಸತತ 2 ಬೌಂಡರಿ ನೀಡಿದರು. ಪಾಂಡ್ಯಾ ಬೌಲಿಂಗ್ ಎದುರಿಸದ ಮುಶ್ಫಿಕರ್ ರಹೀಮ್ 2ನೇ ಎಸೆತದಲ್ಲಿ ಒಂದು ಬೌಂಡರಿ ಬಾರಿಸಿದರು. ಬಳಿಕ ಮೂರನೇ ಎಸೆತದಲ್ಲಿಯೂ ಕೂಡ ರಹೀಮ್ ಸ್ಕೂಪ್ ಮಾಡುವ ಮೂಲಕ ಬೌಂಡರಿ ಗಿಟ್ಟಿಸಿದರು. ಅತ್ತ ಬಾಲ್ ಬೌಂಡರಿ ಗೆರೆ ದಾಟುತ್ತಿದ್ದಂತೆಯೇ ಇತ್ತ ಗ್ಯಾಲರಿಯಲ್ಲಿದ್ದ ಬಾಂಗ್ಲಾ ಆಟಗಾರರು ಕುಣಿದು ಕುಪ್ಪಳಿಸಿದ್ದರು. ಅಂತೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಂಗ್ಲಾ ಪರ ಅಭಿಮಾನಿಗಳು ಕೂಡ ಸಂಭ್ರಮಾಚರಣೆಯಲ್ಲಿ ತೊಡಗಿದರು. ಆದರೆ ಆ ಬಳಿಕ ಪಾಂಡ್ಯಾ ಎಸೆದ ರೋಚಕ ಎಸೆತಗಳು ಬಾಂಗ್ಲಾದ ಗೆಲುವು ಕಸಿದುಕೊಳ್ಳುತ್ತಿದ್ದಂತೆಯೇ ಬಾಂಗ್ಲಾದೇಶದ ಅಭಿಮಾನಿಗಳು ಕಣ್ಣೀರಿನ ಮೊರೆ ಹೋಗಿದ್ದರು. ಬಾಂಗ್ಲಾದ ಆಟಗಾರರಲ್ಲಿಯೂ ಕೂಡ ನಿರಾಸೆ ಮನೆ ಮಾಡಿತ್ತು.
ಗೆಲುವಿಗೂ ಮುನ್ನ ಸಂಭ್ರಮ ಪಡಬೇಡ: ರಹೀಮ್ ಗೆ ಕಿವಿಮಾತು ಹೇಳಿದ್ದ ಸುರೇಶ್ ರೈನಾ
ಇನ್ನು ಸುರೇಶ್ ರೈನಾ ಕೂಡ ಬಾಂಗ್ಲಾದೇಶದ ಆಟಗಾರ ಮುಶ್ಪಿಕರ್ ರಹೀಮ್ ಗೆ ಇದೇ ಮಾತನ್ನು ಹೇಳಿದ್ದರು. ಪಾಂಡ್ಯಾರ 3ನೇ ಎಸೆತವನ್ನೂ ಬೌಂಡರಿಗೆ ಅಟ್ಟಿ ಕ್ರೀಡಾಂಗಣದಲ್ಲಿಯೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಮುಶ್ಫಿಕರ್ ರಹೀಮ್ ರನ್ನು ಉದ್ದೇಶಿಸಿ ಮಾತನಾಡಿದ್ದ ಭಾರತದ ಸುರೇಶ್ ರೈನಾ ಗೆಲುವಿಗೂ ಮುನ್ನ ಸಂಭ್ರಮ ಪಡಬೇಡ ಎಂದು ಹೇಳಿದ್ದರು. ಆ ಬಳಿಕ ಬಾಂಗ್ಲಾದೇಶ 1 ರನ್ ಅಂತರದಲ್ಲಿ ಭಾರತದ ವಿರುದ್ಧ ವಿರೋಚಿತ ಸೋಲುಕಂಡಿತ್ತು.
ಬಳಿಕ ಸುರೇಶ್ ರೈನಾ ತಮ್ಮ ಟ್ವಿಟರ್ ವಾಲ್ ನಲ್ಲಿಯೂ ಮುಶ್ಫಿಕರ್ ರಹೀಮ್ ರನ್ನು ಉದ್ದೇಶಿಸಿ ಬರೆದಿದ್ದರು. ಅಂತಿಮದ ವರೆಗೂ ಗೆಲುವಿಗಾಗಿ ಪ್ರಯತ್ನ ಕೈಬಿಡಬಾರದು, ಗೆಲುವಿಗೂ ಮುನ್ನ ಸಂಭ್ರಮಿಸಬಾರದು ಎಂದು ಬರೆದುಕೊಂಡಿದ್ದರು.
Don't give up till the end Don't celebrate before you win! #IndvsBan Wat a game
Advertisement