
ಬೆಂಗಳೂರು: ತವರು ನೆಲದಲ್ಲಿ ವಿಜಯದ ಕಿರೀಟವನ್ನು ಮುಡಿಗೇರಿಸಿಕೊಳ್ಳಲು ಆರ್ ಸಿಬಿಗೆ ಇನ್ನು ಕೇವಲ ಒಂದು ಒಂದು ಮೆಟ್ಟಿಲು ಬಾಕಿಯಿದ್ದು, ಐಪಿಎಲ್ ನ ಅಂತಿಮ ಹಣಾಹಣಿಗೆ ಮಳೆ ಭೀತಿ ಎದುರಾಗಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ), ತಂಡ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡ ಅಂತಿಮ ಹಣಾಹಣಿ ನಡೆಸಲಿದೆ. ಕಳೆದ 9 ವರ್ಷಗಳಿಂದ ಮರೀಚಿಕೆಯಾಗುತ್ತಲೇ ಬಂದಿದ್ದ ಪ್ರಶಸ್ತಿ ಇದೀಗ ತವರಿನಲ್ಲೇ ಎತ್ತಿ ಹಿಡಿಯುವ ಸುವರ್ಣಾವಕಾಶ ಆರ್ ಸಿಬಿಗೆ ಒದಗಿಬಂದಿದೆ.
ಇನ್ನು ಫೈನಲ್ ಹಣಾಹಣಿಗಾಗಿ ಈಗಾಗಲೇ ಸಕಲ ಸಿದ್ಧತೆ ನಡೆಸಿರುವ ಆರ್ ಸಿಬಿಗೆ ಇದೀಗ ಮಳೆ ಭೀತಿ ಎದುರಾಗಿದ್ದು, ಈಗಾಗಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಉಂಟಾಗಿದೆ. ಸಾಕಷ್ಟು ಪ್ರದೇಶಗಳಲ್ಲಿ ಈಗಾಗಲೇ ತುಂತುರು ಮಳೆಯಾಗುತ್ತಿದೆ. ಹೀಗಾಗಿ ಫೈನಲ್ ಫೈಟ್ ಗೆ ಮಳೆ ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಮಾತನಾಡಿರುವ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ, ಇಂದು ಸಂಜೆ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಈ ಮಳೆ ಬೇಸಿಗೆ ಮಳೆಯಾಗಿದ್ದು, 5 ಮಿ.ಮೀ ಮತ್ತು 1 ಸೆ.ಮೀ ನಷ್ಟು ಮಳೆಯಾಗಲಿದೆ. ಈ ಮಳೆ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ನಗರದ ಜನತೆ ಹಲವು ದಿನಗಳಿಂದಲೂ ಬಿಸಿಲಿನಿಂದ ಸಾಕಷ್ಟು ನರಳಿದ್ದಾರೆ. ಮಳೆಯಿಂದ ಬೇಸರವಿಲ್ಲ. ಆದರೆ, ಒಂದು ದಿನದ ನಂತರ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ. ಐಪಿಎಲ್ ನೋಡಲು ಟಿಕೆಟ್ ಪಡೆಯುವ ಸಲುವಾಗಿ ಸಾಕಷ್ಟು ಕಷ್ಟ ಪಟ್ಟಿದ್ದೇವೆ. ನಮ್ಮ ಯೋಜನೆಗಳಿಗೆ ಮಳೆ ತಣ್ಣೀರು ಎರಚುವುದಿಲ್ಲ ಎಂದುಕೊಂಡಿದ್ದೇವೆಂದು ಕ್ರಿಕೆಟ್ ಅಭಿಮಾನಿ ಹಾಗೂ ಬ್ಯಾಂಕ್ ಉದ್ಯೋಗಿ ರವಿ ಶಂಕರ್ ಹೇಳಿದ್ದಾರೆ.
ಭಾನುವಾರ ಮಳೆಯಾಗುವುದಿಲ್ಲ ಎಂದು ನಂಬಿದ್ದೇವೆ. ಇಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ನೋಡಲು ಕಾತುರಳಾಗಿದ್ದೇನೆ. ಮಳೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆರ್ ಸಿಬಿಯನ್ನು ಫೈನಲ್ ನಲ್ಲಿ ನೋಡಲು ಇಚ್ಛಿಸಿದ್ದೇವು. ಇದೀಗ ಜಯಗಳಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಕಾಲೇಜು ವಿದ್ಯಾರ್ಥಿನಿ ರೀಮಾ. ಎಸ್. ಪಿ ಹೇಳಿದ್ದಾರೆ.
Advertisement