ಭಾರತ ಗುರುವಾರದಿಂದ ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತನ್ನ 500 ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಹಿನ್ನಲೆಯಲ್ಲಿ, ಈ ಮೈಲಿಗಲ್ಲನ್ನು ಗುರುತಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ
ದುಬೈ: ಭಾರತ ಗುರುವಾರದಿಂದ ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತನ್ನ 500 ನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಜ್ಜಾಗುತ್ತಿರುವ ಹಿನ್ನಲೆಯಲ್ಲಿ, ಈ ಮೈಲಿಗಲ್ಲನ್ನು ಗುರುತಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಅಭಿನಂದಿಸಿದೆ.
"ಇದು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಮೈಲಿಗಲ್ಲು. ಭಾರತ ಐಸಿಸಿಯ ಅತಿ ಪ್ರಮುಖ ಸದಸ್ಯ ಮತ್ತು ಇದಕ್ಕೆ ಅತಿ ದೊಡ್ಡ ಪರಂಪರೆ ಇದೆ" ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಭಾರತ ವಿಶ್ವ ದರ್ಜೆಯ ಕ್ರಿಕೆಟರ್ ಗಳನ್ನು ಹೊರಹೊಮ್ಮಿಸಿದ್ದು, ವಿಶ್ವದಾದ್ಯಂತ ಅಭಿಮಾನಿಗಳನ್ನು ರಂಜಿಸಿದೆ. ಈ ಐತಿಹಾಸಿಕ ಸಮಯದಲ್ಲಿ ಬಿಸಿಸಿಐಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ" ಎಂದು ಕೂಡ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಗ್ರೀನ್ ಪಾರ್ಕ್ ಮೈದಾನದಲ್ಲಿ ಗೌರವಾಗಿ ಬಿಸಿಸಿಐಗೆ ಬೆಳ್ಳಿ ತಟ್ಟೆಯನ್ನು ನೀಡಲಿರುವ ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್ ರಿಚರ್ಡ್ಸನ್ "ಇಲ್ಲಿ ಅಭಿಮಾನಿಗಳಿಗೆ ಕ್ರಿಕೆಟ್ ಬಗ್ಗೆ ಇರುವ ಪ್ಯಾಷನ್ ಅನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ಇಲ್ಲಿ ನಾನು ಕ್ರಿಕೆಟ್ ಆಟವನ್ನು ಬಹಳ ಸಂತಸದಿಂದ ನೋಡಿದ್ದೇನೆ. 500 ನೇ ಟೆಸ್ಟ್ ಪಂದ್ಯದ ಸಂಭ್ರಮದಲ್ಲಿ ಭಾಗಿಯಾಗಲು ನನಗೆ ಆಹ್ವಾನ ನೀಡಿರುವುದು ನನಗೆ ಸಿಕ್ಕ ಗೌರವ" ಎಂದಿದ್ದಾರೆ.