ಹೈದರಾಬಾದ್: ಮುಂದಿನ ಚಾಂಪಿಯನ್ಸ್ ಟ್ರೋಫಿ ಕೂಟದ ಮೇಲೆ ಭಾರತೀಯ ಕ್ರಿಕೆಟ್ ತಂಡದ ಆದ್ಯತೆ ಹೆಚ್ಚಿದ್ದು ಹೀಗಾಗಿ ನಾನು ಸಂಪೂರ್ಣ ಫಿಟ್ ಆದ ನಂತರ ಐಪಿಎಲ್ ನಲ್ಲಿ ಭಾಗವಹಿಸುತ್ತೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸದ್ಯ ಭುಜದ ನೋವು ಕ್ರಮೇಣ ಕಡಿಮೆಯಾಗಿದೆ. ಈ ಮಧ್ಯೆ ಐಪಿಎಲ್ ನಲ್ಲಿ ಆಡಿ ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ. ಶೇಕಡಾ 120ರಷ್ಟು ದೈಹಿಕ ಕ್ಷಮತೆ ಹೊಂದಿದ ಬಳಿಕ ಐಪಿಎಲ್ ಗೆ ಮರಳುತ್ತೇನೆ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ಗೆ ಎಂಟ್ರಿ ಕೊಡುವ ಬಗ್ಗೆ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಆದರೆ ಸಾಧ್ಯವಾದಷ್ಟು ಬೇಗ ಐಪಿಎಲ್ ಗೆ ಮರಳಲು ಬಯಸುತ್ತೇನೆ. ಗಾಯದ ಸಮಸ್ಯೆಯಿಂದ ಐಪಿಎಲ್ ನಲ್ಲಿ ಆಡಲು ಸಾಧ್ಯವಾಗದ್ದಕ್ಕೆ ನಿರಾಸೆಯಾಗಿದೆ ಎಂದು ವಿರಾಟ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆದಿದ್ದು ಈ ವೇಳೆ ಕೊಹ್ಲಿ ಬೌಂಡರಿ ಲೈನ್ ನಲ್ಲಿ ಚೆಂಡನ್ನು ತಡೆಯುವ ಯತ್ನದಲ್ಲಿ ಭುಜದ ಗಾಯಕ್ಕೆ ತುತ್ತಾಗಿದ್ದರು.