
ಕೊಚ್ಚಿನ್: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾರತ ತಂಡದ ಪಾರಮ್ಯ ಮುಂದುವರೆದಿದ್ದು, ಇದೀಗ ಅಂಧರ ಟಿ-20 ಪಂದ್ಯದಲ್ಲೂ ಭಾರತ ಜನ್ನ ಜಯಭೇರಿ ಮುಂದುವರೆಸಿದೆ.
ನಿನ್ನೆ ಕೇರಳ ಕೊಚ್ಚಿಯಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಂಧರ ತಂಡವನ್ನು ಭಾರತ ಭರ್ಜರಿ 128 ರನ್ ಗಳ ಅಂತರದಿಂದ ಮಣಿಸಿತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆರಿಸಿಕೊಂಡ ಆಸ್ಚ್ರೇಲಿಯಾ ತಂಡ ನಿರೀಕ್ಷಿತ ಫಲಕಾಣಲಿಲ್ಲ. ಭಾರತದ ಬ್ಯಾಟ್ಸಮನ್ ಸುನಿಲ್ ಸಿಡಿಸಿದ ಅಜೇಯ ಭರ್ಜರಿ ಶತಕ (163 ರನ್ , 72 ಎಸೆತ-ಗಾಯಗೊಂಡು ನಿವೃತ್ತಿ) ಹಾಗೂ ಮಹಮದ್ ಫರ್ಹಾನ್ (53 ರನ್, 35ಎಸೆತ ), ಇಕ್ಬಾಲ್ ಜಾಫರ್ ಅಜೇಯ (30 ರನ್, 13 ಎಸೆತ) ಅವರ ಬ್ಯಾಟಿಂಗ್ ನೆರವಿನಿಂದ ವಿಕೆಟ್ ನಷ್ಟವಿಲ್ಲದೇ ನಿಗದಿತ 20 ಓವರ್ ಗಳಲ್ಲಿ 272 ರನ್ ಗಳನ್ನು ಕಲೆಹಾಕಿತು.
ಈ ಭಾರಿ ಮೊತ್ತವನ್ನು ಬೆನ್ನು ಹತ್ತಿದ ಆಸಿಸ್ ಪಡೆ 18.4 ಓವರ್ ಗಳಲ್ಲಿ ಕೇವಲ 144 ರನ್ ಗಳಿಗೆ ಆಲ್ ಔಟ್ ಆಯಿತು. ಡೇನಿಯಲ್ ಜೇಮ್ಸ್ ಪ್ರಿಚರ್ಡ್ ಗಳಿಸಿದ 32 ರನ್ ಗಳೇ ಆ ತಂಡದ ಗರಿಷ್ಠ ಸ್ಕೋರ್ ಆಗಿತ್ತು. ಇನ್ನು ಭಾರತದ ಪರ ಅಜಯ್ ಕುಮಾರ್ ರೆಡ್ಡಿ 2 ವಿಕೆಟ್ ಪಡೆದರೆ, ಇಕ್ಬಾಲ್ ಜಾಫರ್ ಮತ್ತು ಪ್ರೇಮ್ ಕುಮಾರ್ ತಲಾ 1 ವಿಕೆಟ್ ಪಡೆದರು. ಆ ಮೂಲಕ ಭಾರತ 128 ರನ್ ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದ ಗೆಲುವಿನೊಂದಿಗೆ ಭಾರತದ ಸೆಮಿಫೈನಲ್ ಹಾದಿ ಸುಗಮವಾಗಿದ್ದು, ಅಂಕ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನಕ್ಕೇರಿದೆ. ಭಾರತ ಒಟ್ಟು 7 ಪಂದ್ಯಗಳನ್ನು ಆಡಿರುವ ಭಾರತ 6 ಗೆಲುವು ಹಾಗೂ 1 ಸೋಲಿನ ಮೂಲಕ ಒಟ್ಟು 18 ಅಂಕಗಳನ್ನು ಗಳಿಸಿದೆ. ಅಂತೆಯೇ ಭಾರತದ ನೆಟ್ ರನ್ ರೇಟ್ ಕೂಡ ಹೆಚ್ಚಿದ್ದು, +4.634ರಷ್ಟಿದೆ. 5 ಪಂದ್ಯಗಳಲ್ಲಿ ಐದನ್ನೂ ಗೆದ್ದಿರುವ ಪಾಕಿಸ್ತಾನ ತಂಡ 15 ಅಂಕಗಳನ್ನು ಗಳಿಸಿದ್ದು, 2ನೇ ಸ್ಥಾನದಲ್ಲಿದೆ.
Advertisement