"ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್" ಐಸಿಸಿ ಕನಸಿಗೆ ಬಿಸಿಸಿಐನಿಂದಲೇ ಅಡ್ಡಗಾಲು!

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎನ್ನುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕನಸಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಬೇಕು ಎನ್ನುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕನಸಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರೋಧ ವ್ಯಕ್ತಪಡಿಸಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮುಂಬರುವ 2024ರ ಒಲಿಂಪಿಕ್ಸ್ ಕ್ರೀಡೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ನಡೆಯಲಿದ್ದು, ಈ ವೇಳೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡಿಸಬೇಕು ಎನ್ನುವುದು ಐಸಿಸಿಯ ಮಹತ್ವಾಕಾಂಕ್ಷೆಯಾಗಿದೆ. ಆದರೆ  ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟ್ ಸೇರಿಸಲು ವಿಶ್ವದ ಕ್ರಿಕೆಟ್ ಆಡುವ ಎಲ್ಲ ದೇಶಗಳ ಬೆಂಬಲ ಅತ್ಯಗತ್ಯವಾಗಿದ್ದು, ಈಗಾಗಲೇ ಬಹುತೇಕ ಪ್ರಮುಖ ಕ್ರಿಕೆಟ್ ದೇಶಗಳು ಒಪ್ಪಿಗೆ ನೀಡಿವೆ. ಆದರೆ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಭಾವ  ಬೀರಿರುವ ಬಿಸಿಸಿಐ ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ.

ಈಗಲೂ ಐಸಿಸಿಯ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ಬಿಸಿಸಿಐ, ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು ತನ್ನ ಪದಾಧಿಕಾರಿಗಳು ಹಾಗೂ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ  ಐಸಿಸಿಯ ಪ್ರಯತ್ನಕ್ಕೆ ತಣ್ಣೀರೆರಚುವ ಕೆಲಸಕ್ಕೆ ಕೈಹಾಕಿದೆ. ಕ್ರಿಕೆಟ್ ತಜ್ಞರ ಅಭಿಪ್ರಾಯದಂತೆ ವಿಶ್ವ ಕ್ರಿಕೆಟ್ ನಲ್ಲಿ ಯಾವುದೇ ಪ್ರಮುಖ ನಿರ್ಣಯ ಕೈಗೊಳ್ಳಲು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐನ  ಪಾತ್ರ  ಪ್ರಮುಖವಾಗಿರುತ್ತದೆ. ಬಿಸಿಸಿಐ ಒಪ್ಪಿದೆ ಎಂದರೆ ಬಹುತೇಕ ಎಲ್ಲ ಕ್ರಿಕೆಟ್ ರಾಷ್ಟ್ರಗಳೂ ಕೂಡ ಒಪ್ಪಿಗೆ ನೀಡುತ್ತವೆ.

ಆದರೆ ಈ ವಿಚಾರಕ್ಕೆ ಮಾತ್ರ ಬಿಸಿಸಿಐ ತನ್ನ ವಿರೋಧ ವ್ಯಕ್ತಪಡಿಸುತ್ತಿರುವುದು ಐಸಿಸಿಯ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಸಿಸಿಐ ಈ ಬಗ್ಗೆ ಶೀಘ್ರ ಸ್ಪಷ್ಟ ನಿಲುವು  ತಳೆಯದಿದ್ದರೆ 2024ರಲ್ಲೂ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಐಸಿಸಿಯ ಶ್ರಮ ಫಲಿಸಿದರೆ ಭಾರತಕ್ಕೆ ಒಲಿಂಪಿಕ್ಸ್ ಚಿನ್ನ?
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡ ಒಂದು. ಭಾರತದ ಮಟ್ಟಿಗೆ ವಿಶ್ವ ಕ್ರಿಕೆಟ್ ನಲ್ಲಿ ಭಾರತವೇ ಬಲಿಷ್ಟ ತಂಡ. ಹೀಗಾಗಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ "ಹುಳಿದ್ರಾಕ್ಷಿ"ಯಾಗಿರುವ ಚಿನ್ನದ ಪದಕವನ್ನು ಕ್ರಿಕೆಟ್ ಮೂಲಕ  ಗೆಲ್ಲಬಹುದು ಎಂಬುದು ಭಾರತೀಯ ಕ್ರೀಡಾಭಿಮಾನಿಗಳ ಆಸೆ. ಹೀಗಾಗಿ ಇದೀಗ ಜನಪ್ರಿಯವಾಗಿರುವ ಟ್ವೆಂಟಿ-20 ಕ್ರಿಕೆಟ್‌ ನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಲು ಐಸಿಸಿ ಪ್ರಯತ್ನ ಮುಂದುವರಿಸಿದೆ. ಐಸಿಸಿ ಪ್ರಯತ್ನ ಫಲ ನೀಡಿದರೆ  2024ರಲ್ಲಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಮತ್ತೆ ಕ್ರಿಕೆಟ್ ನೋಡಲು ಸಾಧ್ಯ. 1900ರಲ್ಲಿ ಮೊದಲ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡಿತ್ತು. ಬಳಿಕ ಈ ತನಕ  ಒಲಿಂಪಿಕ್ಸ್‌ನಿಂದ ಕ್ರಿಕೆಟ್ ದೂರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com