ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಹಿನ್ನೆಲೆ ಟೀಂ ಇಂಡಿಯಾ ಲಂಡನ್ ನಲ್ಲಿ ನಿರಂತರ ಅಭ್ಯಾಸ ನಡೆಸುತ್ತಿದೆ. ಈ ಮಧ್ಯೆ ನೆಟ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಕೋಚ್ ಅನಿಲ್ ಕುಂಬ್ಳೆ ಬಂದೊಡನೆ ಅಭ್ಯಾಸವನ್ನು ನಿಲ್ಲಿಸಿದರು ಎಂದು ವರದಿಯಾಗಿದೆ.
ಕೋಚ್ ಅನಿಲ್ ಕುಂಬ್ಳೆ ಹಾಗೂ ಟೀಂ ಇಂಡಿಯಾ ಆಟಗಾರರ ನಡುವಿನ ಸಂಬಂಧ ಹಳಸಿದೆ ಎಂಬುದಕ್ಕೆ ಇದು ಸಾಕ್ಷಿಯಾದಂತಿದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಿಂತಲೂ ಈ ಸಂಗತಿ ಹೆಚ್ಚಿನ ಮಹತ್ವ ಪಡೆದದ್ದು ನಿಜಕ್ಕೂ ಭಾರತೀಯ ಕ್ರಿಕೆಟಿನ ದುರಂತವೆ ಸರಿ.
ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಇತರರು ಅಭ್ಯಾಸ ನಡೆಸುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಅನಿಲ್ ಕುಂಬ್ಳೆ ಮೈದಾನ ಪ್ರವೇಶಿಸಿದ್ದಾರೆ. ಕೂಡಲೇ ಕೊಹ್ಲಿ ಅಭ್ಯಾಸ ಬಿಟ್ಟು ಹೊರನಡೆದರಂತೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.