ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದ್ದು ಮುಂದಿನ ಎದುರಾಳಿ ತಂಡ ಶ್ರೀಲಂಕಾ ವಿರುದ್ಧವು ಜಯ ಗಳಿಸುತ್ತೇವೆ ಎಂಬ ಭರವಸೆಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ.
ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು 124 ರನ್ ಗಳಿಂದ ಮಣಿಸಿ ಟೂರ್ನಿಗೆ ಗೆಲುವಿನ ಮೂಲಕ ಎಂಟ್ರಿಕೊಟ್ಟಿದ್ದು ಇದೀಗ ಶ್ರೀಲಂಕಾ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಅಜೇಯ ಓಟ ಮುಂದುವರೆಸಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿತ್ತು. ಅನಾನುಭವಿ ಆಟಗಾರರನ್ನು ಹೊಂದಿರುವ ಶ್ರೀಲಂಕಾ ತಂಡವನ್ನು ಬಗ್ಗು ಬಡಿಯುತ್ತೇವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಪಂದ್ಯಾವಳಿಯ ಪ್ರತಿಯೊಂದು ಪಂದ್ಯ ನಮಗೆ ಮಹತ್ವದ್ದು, ಟೀಂ ಇಂಡಿಯಾದಲ್ಲಿನ ಪ್ರತಿಯೊಬ್ಬ ಯುವ ಆಟಗಾರನು ಉತ್ತಮ ಪ್ರದರ್ಶನ ನೀಡುತ್ತಿದ್ದು ತಮ್ಮ ಕ್ರಿಕೆಟ್ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು.
ಜೂನ್ 9ರಂದು ಶ್ರೀಲಂಕಾ ಮತ್ತು ಭಾರತ ನಡುವಿನ ಪಂದ್ಯ ಲಂಡನ್ ನ ಓವಲ್ ಮೈದಾನದಲ್ಲಿ ನಡೆಯಲಿದೆ. ಪಂದ್ಯ 3 ಗಂಟೆಗೆ ಶುರುವಾಗಲಿದೆ.