ಐಸಿಸಿ ಚಾಂಪಿಯನ್ಸ್ ಟ್ರೋಫಿ: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ನಿರೀಕ್ಷೆಯಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮಣಿಸಿದ್ದು, ಫೈನಲ್ ಗೇರಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ
ಲಂಡನ್: ನಿರೀಕ್ಷೆಯಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಮಣಿಸಿದ್ದು, ಫೈನಲ್ ಗೇರಿದೆ.
ಲಂಡನ್ ನ ಎಡ್ಜ್ ಬ್ಯಾಸ್ಟನ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 265 ರನ್ ಗಳ ಸವಾಲಿನ ಗುರಿಯನ್ನು ಕೇವಲ 1 ವಿಕೆಟ್ ಕಳೆದುಕೊಂಡು ಭಾರತ ಗುರಿ ಮುಟ್ಟಿದೆ. ಆ ಮೂಲಕ ಬಾಂಗ್ಲಾದೇಶವನ್ನು ಬರೊಬ್ಬರಿ 9 ವಿಕೆಟ್ ಗಳ ಅಂತರದಿಂದ ಮಣಿಸಿ ಫೈನಲ್ ಗೇರಿದೆ.
ಬಾಂಗ್ಲಾದೇಶ ನೀಡಿದ 265 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತಕ್ಕೆ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಭಾರತದ ವಿಕೆಟ್ ಪಡೆಯಲು ಬಾಂಗ್ಲಾ ಬೌಲರ್ ಗಳು ಅಕ್ಷರಶಃ ಬೆವರು ಹರಿಸಬೇಕಾಯಿತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಧವನ್ ಕ್ರಮೇಣ ಭಾರತದ ರನ್ ವೇಗ ಹೆಚ್ಚಿಸಿ ನೋಡ ನೋಡುತ್ತಿದ್ದಂತೆಯೇ ಅರ್ಧಶತಕದ ಜೊತೆಯಾಟ ನೀಡಿದರು. ಬಾಂಗ್ಲಾ ನಾಯಕ ಮೋರ್ತಾಜಾ ಎಷ್ಟೇ ಬೌಲಿಂಗ್ ಬದಲಾವಣೆ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ಭಾರತದ ಮೊತ್ತ 87 ರನ್ ಗಳಾಗಿದ್ದಾಗ 46 ರನ್ ಗಳಿಸಿ ಅರ್ಧಶತಕದ ಹೊಸ್ತಿಲಲ್ಲಿದ್ದ ಧವನ್ ಔಟ್ ಆದರು. 
ಬಳಿಕ ರೋಹಿತ್ ಶರ್ಮಾ ಜೊತೆಗೂಡಿದ ವಿರಾಟ್ ಕೊಹ್ಲಿ ತಂಡಕ್ಕೆ ಮತ್ತೆ ಯಾವುದೇ ಅಪಾಯವಾಗದಂತೆ ನೋಡಿಕೊಂಡರು. ಭರ್ಜರಿ ಹೊಡೆತಗಳ ಮೂಲಕ ಗಮನ ಸೆಳೆದ ಈ ಜೋಡಿ 150 ರನ್ ಗಳ ಭರ್ಜರಿ ಜೊತೆಯಾಟವಾಡಿತು. ಇದೇ ಹೊತ್ತಿನಲ್ಲೇ ಶರ್ಮಾ ಶತಕ ಸಿಡಿಸಿ ಸಂಭ್ರಮಿಸಿದರೆ, ಕೊಹ್ಲಿ ಅರ್ಧಶತಕ ದಾಟಿ ಶತಕದತ್ತ ಹೆಜ್ಜೆ ಹಾಕಿದ್ದರು. ಅಂತಿಮವಾಗಿ ಭಾರತ ತಂಡ 40.1 ಓವರ್ ನಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿ ಜಯಭೇರಿ ಭಾರಿಸಿತು.
ಅಂತೆಯೇ ಫೈನಲ್ ಗೆ ಲಗ್ಗೆ ಇಟ್ಟಿತು. ಇದೇ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಪ್ರಶಸ್ತಿಗಾಗಿ ಸೆಣಸಿಲಿದ್ದು, ಇದೇ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿರುವ ಪಾಕ್ ತಂಡ ಸೆಣಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com