

ನವದೆಹಲಿ: ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಅವರ ರಾಜಿನಾಮೆಗೆ ನಾಯಕ ವಿರಾಟ್ ಕೊಹ್ಲಿ ಅವರೇ ಕಾರಣ ಎಂಬ ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಕುಂಬ್ಳೆ ರಾಜಿನಾಮೆಗೆ "ಸುಪ್ರೀಂ" ನೇಮಿತ ಬಿಸಿಸಿಐ ಕಾರಣ ಎಂದು ಹೇಳಿದ್ದಾರೆ.
ಕುಂಬ್ಳೆ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್ ಕೊಹ್ಲಿ ಅವರನ್ನು ಅನಾವಶ್ಯಕವಾಗಿ ದೂಷಿಸಲಾಗುತ್ತಿದೆ. ಕೊಹ್ಲಿ ನಿಜಕ್ಕೂ ಓರ್ವ ಅದ್ಬುತ ಆಟಗಾರ. ಮುಂದಿನ 10 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕುಂಬ್ಳೆ ರಾಜಿನಾಮೆಗೆ ಕೊಹ್ಲಿ ಕಾರಣ ಎಂಬ ಚರ್ಚೆಯನ್ನು ಬಿಡಬೇಕು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಇನ್ನು ಕುಂಬ್ಳೆ ರಾಜಿನಾಮೆಗೆ ಕೊಹ್ಲಿ ಅಲ್ಲ ಬದಲಿಗೆ ಬಿಸಿಸಿಐ ಕಾರಣ ಎಂದು ಹೇಳಿರುವ ಠಾಕೂರ್, ಈ ಹಿಂದೆಯೂ ಸಾಕಷ್ಟು ಭಾರಿ ಇಂತಹ ಸಮಸ್ಯೆಗಳು ಉದ್ಭವಿಸಿತ್ತು. ಆಗ ಬಿಸಿಸಿಐ ಆ ಸಮಸ್ಯೆಗಳನ್ನು ಬಗೆಹರಿಸಿತ್ತು. ಆದರೆ ಈಗ "ಸುಪ್ರೀಂ ನೇಮಿತ ಬಿಸಿಸಿಐ" ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಈ ಹಿಂದಿನ ಬಿಸಿಸಿಐ ಕೂಡ ಸಾಕಷ್ಟು ಬಾರಿ ಇಂತಹ ಸಮಸ್ಯೆಗಳನ್ನು ಎದುರಿಸಿತ್ತು. ಆಗ ಇಷ್ಟರ ಮಟ್ಟಿಗೆ ಸಮಸ್ಯೆ ಉಲ್ಬಣಗೊಂಡಿರಲಿಲ್ಲ. ತಂಡದಲ್ಲಿನ ಯಾವುದೇ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ "ಆಗಿನ ಬಿಸಿಸಿಐ"ಗೆ ಇತ್ತು. ಆದರೀಗ ತಂಡದಲ್ಲಿನ ಸಮಸ್ಯೆ ಬಗೆಹರಿಸುವಲ್ಲಿ ಬಿಸಿಸಿಐ ವಿಫಲವಾಗಿದೆ ಎಂದು ಹೇಳಿದ್ದಾರೆ.
ಕುಂಬ್ಳೆ ಅವರನ್ನು ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಕೋಚ್ ಆಗಿ ನೇಮಿಸಿದ್ದಾಗ ಕೇಳದ ಪ್ರಶ್ನೆ, ಈಗೇಕೆ?
ಇದೇ ವೇಳೆ ಬಿಸಿಸಿಐನ ಒಂದು ವರ್ಷದ ಅವಧಿಯ ಕೋಚ್ ನೇಮಕ ಪ್ರಕ್ರಿಯೆ ಬಗ್ಗೆ ಠಾಕೂರ್ ಕಿಡಿಕಾರಿದ್ದಾರೆ. "ನನ್ನ ಪ್ರಕಾರ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಗೆ ಕೋಚ್ ಆಯ್ಕೆಯಷ್ಟೇ ಅಲ್ಲ ಇತರೆ ಸಂಪೂರ್ಣ ಅಧಿಕಾರಗಳನ್ನು ನೀಡಬೇಕಿತ್ತು. ಮೊದಲಿಗೆ ಅನಿಲ್ ಕುಂಬ್ಳೆರಂತಹ ನುರಿತ ಕ್ರಿಕೆಟಿಗರನ್ನು ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಕೋಚ್ ಆಗಿ ನೇಮಿಸಿದ್ದಾಗ ಬಿಸಿಸಿಐನ ಕ್ರಮದ ಬಗ್ಗೆ ಪ್ರಶ್ನಿಸಬೇಕಿತ್ತು. ಆದರೆ ಆಗ ಯಾರೂ ಈ ಬಗ್ಗೆ ಪ್ರಶ್ನಿಸಿರಲಿಲ್ಲ. ಬಿಸಿಸಿಐಗೆ ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಯ ಕೋಚ್ ಆಗಿ ನೇಮಿಸುವ ಅಧಿಕಾರವಿದೆ ಎಂದಾದರೆ, ತಂಡದಲ್ಲಿ ಉದ್ಭವಿಸುವ ಸಮಸ್ಯೆ ಪರಿಹಾರದ ಜವಾಬ್ದಾರಿ ಕೂಡ ಬಿಸಿಸಿಐನದ್ದೇ ಆಗಿರುತ್ತದೆ. 6 ತಿಂಗಳ ಹಿಂದೆಯೇ ಸಮಸ್ಯೆ ಶುರುವಾಗಿದ್ದರೂ, ಅದನ್ನು ಬಗೆಹರಿಸುವಲ್ಲಿ ಬಿಸಿಸಿಐ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.
ಒಟ್ಟಾರೆ ಕೋಚ್ ಕುಂಬ್ಳೆ ವಿಚಾರವನ್ನೇ ಮುಂದಿಟ್ಟುಕೊಂಡು ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಸುಪ್ರೀಂ ಕೋರ್ಟ್ ಮತ್ತು ಅದರ ನೇಮಿತ ಬಿಸಿಸಿಐ ಅಧಿಕಾರಿಗಳನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಮೂಲಕ ಬಿಸಿಸಿಐ ಅಧ್ಯಕ್ಷ ಗಾದಿಯಿಂದ ತಮ್ಮನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಕ್ರಮಕ್ಕೆ ಅನುರಾಗ್ ಠಾಕೂರ್ ಟಾಂಗ್ ನೀಡಿದ್ದಾರೆ.