ವೃತ್ತಿ ಜೀವನದಲ್ಲೇ 1999ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣ ಸರಣಿಯಾಗಿತ್ತು: ಸಚಿನ್ ತೆಂಡೂಲ್ಕರ್

ತಮ್ಮ ಇಡೀ ವೃತ್ತಿ ಜೀವನದಲ್ಲೇ 1999ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣ ಪ್ರವಾಸವಾಗಿತ್ತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತಮ್ಮ ಇಡೀ ವೃತ್ತಿ ಜೀವನದಲ್ಲೇ 1999ರ ಆಸ್ಟ್ರೇಲಿಯಾ ಪ್ರವಾಸ ಅತ್ಯಂತ ಕಠಿಣ ಪ್ರವಾಸವಾಗಿತ್ತು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

24 ವರ್ಷಗಳ ಹಿಂದಿನ ಸರಣಿಯನ್ನು ಇಂದಿಗೂ ಮರೆಯದ ಸಚಿನ್ ತಂಡೂಲ್ಕರ್ ಅವರು, ಅಂದಿನ ಸರಣಿ ಸೋಲು ನಿಜಕ್ಕೂ ಎಂದೂ ಮರೆಯಲಾಗದ ಸೋಲು. ನಾವು ಸರಣಿ ಸೋತೆವಾದರೂ ಒಂದು ಅತ್ಯುತ್ತಮ ತಂಡದ  ಎದುರು ಸೋತಿದ್ದೇವೆ ಎಂಬ ಸಮಾಧಾನವಿದೆ. ಏಕೆಂದರೆ ಅಂದಿನ ಸ್ಟೀವ್ ವಾ ಪಡೆಯಲ್ಲಿ 7-8 ಮಂದಿ ಮ್ಯಾಚ್ ವಿನ್ನಿಂಗ್ ಆಟಗಾರರಿದ್ದರು. ಉಳಿದ ಆಟಗಾರರೂ ಕೂಡ ಉತ್ತಮ ಫಾರ್ಮ್ ನಲ್ಲಿದ್ದರು. ಆ ಸರಣಿಯನ್ನು ನಾವು 3-0  ಅಂತರದಲ್ಲಿ ಹೀನಾಯವಾಗಿ ಸೋತಿದ್ದೆವು.

ಅಂದಿನ ಸ್ಟೀವ್ ವಾ ತಂಡ ದಶಕಗಳ ಕಾಲ ಆಸ್ಟ್ರೇಲಿಯಾ ತಂಡ ಕ್ರಿಕೆಟ್ ರಂಗವನ್ನು ಆಳುವಂತೆ ಭದ್ರ ಬುನಾದಿ ಹಾಕಿತ್ತು. ಅವರ ಆಟದ ವೈಖರಿ ಹಾಗೂ ಅತ್ಯಂತ ಆಕ್ರಮಣ ಶೀಲ ಮನೋಭಾವ ಯಾವುದೇ ಆಟಗಾರರನ್ನು ಕೂಡ  ವಿಚಲಿತರನ್ನಾಗುವಂತೆ ಮಾಡುತ್ತಿತ್ತು. ನನಗೂ ಈಗಲೂ ನೆನಪಿದೆ ಅಡಿಲೇಡ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ತಂಡ ನಿಜಕ್ಕೂ ಕ್ಲಾಸ್ ಆಟವನ್ನು ಆಡಿದ್ದರು. ಅವರ ಅದ್ಭುತ ಆಟ ಇಡೀ ವಿಶ್ವದ ಗಮನ ಸೆಳೆದಿತ್ತು.  ತಂಡದ ಪ್ರತಿಯೊಬ್ಬ ಆಟಗಾರ ಕೂಡ ಉತ್ತಮ ಆಟ ಪ್ರದರ್ಶಿಸಿದ್ದ. ಅಷ್ಟು ಮಾತ್ರವಲ್ಲದೇ ಅದೇ ಉತ್ತಮ ಆಟವನ್ನು ಸರಣಿಯುದ್ದಕ್ಕೂ ಪ್ರದರ್ಶಿಸಲು ಸಾಕಷ್ಟು ಶ್ರಮ ವಹಿಸಿದ್ದರು.

ಪೌಷ್ಟಿಕಾಂಶದ ಮಹತ್ವ ತಿಳಿಸಿದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ
ಇದೇ ವೇಳೆ 1989ರಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದಾಗ ದಕ್ಷಿಣ ಆಫ್ರಿಕಾದ ವಿರುದ್ಧದ ಸರಣಿಯಲ್ಲಿ ನಾನು ಪೌಷ್ಠಿಕಾಂಶಗಳ ಮಹತ್ವ ತಿಳಿದುಕೊಂಡೆ. ನನಗಾಗ 13 ವರ್ಷ. ಅಂದಿನ ಪಂದ್ಯದ ಊಟದ ವಿರಾಮದ ನಂತರ ನಾನು ಔಟ್  ಆಗಿದ್ದೆ. ನಾನ್ ಸ್ಟ್ರೈಕರ್ ಎಂಡ್ ನಲ್ಲಿ ರನ್ ಗಾಗಿ ನಾನು ಸಾಕಷ್ಟು ಓಡಿದ್ದೆ. ಇದು ನನ್ನ ದಣಿವಿಗೆ ಕಾರಣವಾಗಿತ್ತು, ವಿಶ್ವ ಕ್ರಿಕೆಟ್ ನಲ್ಲಿ ಅಂದಿನ ಕಾಲಕ್ಕೆ ಸುಮಾರು 25 ಮಂದಿ ವಿಶ್ವ ದರ್ಜೆಯ ಉತ್ತಮ ಬೌಲರ್ ಗಳಿದ್ದರು. ಈ ಪೈಕಿ  ದಕ್ಷಿಣ ಆಫ್ರಿಕಾ ತಂಡದಲ್ಲೇ 3 ಬೌಲರ್ ಗಳಿದ್ದರು. ಹ್ಯಾನ್ಸಿ ಕ್ರೋನಿಯಾ, ಶಾನ್ ಪೊಲ್ಲಾಕ್ ಮತ್ತು ಅಲನ್ ಡೊನಾಲ್ಡ್.  ಈ ಪೈಕಿ ನಾನು  ಹ್ಯಾನ್ಸಿ ಕ್ರೋನಿಯಾ ಬೌಲಿಂಗ್ ನಲ್ಲಿ ಹೆಚ್ಚಾಗಿ ಬ್ಯಾಟಿಂಗ್ ಮಾಡಲು ಇಚ್ಛಿಸುತ್ತಿದ್ದೆ. ಅವರ  ತಿರುವಿನ ಎಸೆತಗಳು ನನಗೆ ಸಾಕಷ್ಟು ಸವಾಲು ಒಡ್ಡುತ್ತಿತ್ತು. ಹೀಗಾಗಿ ಅವರ ಬೌಲಿಂಗ್ ನಲ್ಲಿ ನನ್ನ ಬ್ಯಾಟಿಂಗ್ ಸಮಾಧಾನಕರವಾಗಿರಲಿಲ್ಲ. ಅಂದು ನಾನು ಬೇಗನೆ ಔಟ್ ಆಗಿದ್ದೆ. ನಾನು ಎಷ್ಟರ ಮಟ್ಟಿಗೆ ದಣಿದಿದ್ದೆ ಎಂದರೆ ಡ್ರೆಸಿಂಗ್ ರೂಂ ಗೆ ಹೋದ ಕೂಡಲೇ ತಿನ್ನಲು ಏನಾದರು ಕೊಡಿ ಎಂದು ಕೇಳಿದ್ದೆ. ಅಂದು ನನಗೆ ಪೌಷ್ಠಿಕಾಂಶಗಳ ಮಹತ್ವ ತಿಳಿಯಿತು. ಅಂದಿನಿಂದ ನಾನು ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಮಾತ್ರ ಸೇವಿಸುತ್ತೇನೆ. ಪ್ರಮುಖವಾಗಿ ದಣಿವು ನನ್ನ ಔಟ್ ಗೆ ಕಾರಣವಾಗಬಾರದು ಎಂದು ನಿರ್ಧರಿಸಿದ್ದೆ ಎಂದು ಸಚಿನ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com