ಹೈದರಾಬಾದ್: ಐಪಿಎಲ್ ಟಿ20 ಪಂದ್ಯಾವಳಿಯಲ್ಲಿ ಗುರುವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 13 ರನ್ ಗಳಿಂದ ಗೆಲುವು ದಾಖಲಿಸಿದೆ.
ಇಂದು ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕುವ ಮೂಲಕ ಪಂಜಾಬ್ ಗೆಲುವಿಗೆ 133 ರನ್ ಗಳ ಸಾಧಾರಣ ಗುರಿ ನೀಡಿತು.
ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್, ಹೈದರಾಬಾದ್ ಸಾಂಘಿಕ ದಾಳಿಗೆ ಕುಸಿತ ಕಂಡು 19.2 ಓವರ್ ಗಳಲ್ಲೇ 119ಕ್ಕೆ ಸರ್ವಪತನ ಕಂಡಿತ್ತು. ಇದರೊಂದಿಗೆ ಪಂಜಾಬ್ ವೇಗಿ ಅಂಕಿತ್ ರಜಪೂತ್ (14ಕ್ಕೆ 5 ವಿಕೆಟ್) ಮಿಂಚಿನ ದಾಳಿಯು ವ್ಯರ್ಥವಾಯಿತು.
ಹೈದರಾಬಾದ್ ತಂಡದ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಗಮನ ಸೆಳೆದರೆ, ಸಂದೀಪ್ ಶರ್ಮಾ, ಶಕೀಬ್ ಅಲ್ ಹಸನ್ ಹಾಗೂ ಬಾಸಿಲ್ ತಂಪಿ ತಲಾ ಎರಡು ವಿಕೆಟ್ ಗಳಿಸಿ ಮಿಂಚಿದರು.