ಮೊದಲ ಏಕದಿನ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ

ಕಿಂಗ್ಸ್ ಮೇಡ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಕೊಹ್ಲಿ-ರಹಾನೆ ಜೋಡಿ
ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಕೊಹ್ಲಿ-ರಹಾನೆ ಜೋಡಿ
ಡರ್ಬನ್: ಕಿಂಗ್ಸ್ ಮೇಡ್ ಮೈದಾನದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್ ಗಳ ಅಂತರದಲ್ಲಿ ಮಣಿಸಿದೆ.
ಆಫ್ರಿಕಾ ನೀಡಿದ 270 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನುಹತ್ತಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಹಾಗೂ ಅಜಿಂಕ್ಯಾ ರಹಾನೆ ಅವರ ಅಮೋಘ ಅರ್ಧಶತಕದ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು ಸಾಧಿಸಿತು. ಆ ಮೂಲಕ ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆ ಶುಭಾರಂಭ ಮಾಡಿದೆ.
ಇನ್ನು ಭಾರತ ಪರ ಬ್ಯಾಟಿಂಗ್ ಆರಂಭಿಸಿದ ರೋಹಿತ್ ಶರ್ಮಾ (20 ರನ್) ಮತ್ತು ಶಿಖರ್ ಧವನ್ (35 ರನ್)ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 33 ರನ್ ಕಲೆಹಾಕಿತ್ತು. ಆದರೆ 7ನೇ ಓವರ್ ನಲ್ಲಿ 20 ರನ್ ಗಳಿಸಿದ್ದ ರೋಹಿತ್ ಶರ್ಮಾ ಔಟ್ ಆದರು. ಬಳಿಕ ಧವನ್ ಕೂಡ 13ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. 
ಈ ವೇಳೆ ಭಾರತದ ಪಾಳಯದಲ್ಲಿ ಕೊಂಚ ಆತಂಕ ಮೂಡಿತ್ತಾದರೂ, ಕ್ರೀಸ್ ಗೆ ಆಗಮಿಸಿದ ನಾಯಕ ಕೊಹ್ಲಿ ತಮ್ಮ ಜವಾಬ್ದಾರಿ ಅರಿತು ಸಮಯೋಚಿತ ಆಟ ಪ್ರದರ್ಶನ ಮಾಡಿದರು. ಅಲ್ಲದೆ ಶತಕ ಕೂಡ ಸಿಡಿಸಿದರು. ಮತ್ತೊಂದು ತುದಿಯಲ್ಲಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ರಹಾನೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 79 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ರಹಾನೆ ಗೆಲುವಿಗೆ ಇನ್ನು ಕೆಲವೇ ರನ್ ಗಳ ಅಗತ್ಯವಿರುವಾಗ ನಿರ್ಗಮಿಸಿದರು. ಬಳಿಕ ಕೊಹ್ಲಿ ಕೂಡ 112 ರನ್ ಗಳಿಸಿ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯಾ ಜೊತೆಗೂಡಿದ ಮಾಜಿ ನಾಯಕ ಧೋನಿ ಗೆಲುವಿನ ಔಪಚಾರಿಕತೆ ಮುಗಿಸಿದರು.
ಇನ್ನು ಈ ಹಿಂದೆ ಟೆಸ್ಟ್ ಸರಣಿ ಸೋತಿದ್ದ ಭಾರತ ತಂಡ ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅಲ್ಲದೆ ಈ ಸರಣಿಯನ್ನು ಭಾರತ ಗೆದ್ದರೆ ಏಕದಿನ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com