ಭಾರತ ನೀಡಿದ 304 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಆಫ್ರಿಕಾ ತಂಡ 40 ಓವರ್ ಗಳಲ್ಲಿ ಕೇವಲ 179 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಭಾರತದ ವಿರುದ್ಧ 124 ರನ್ ಗಳ ಹೀನಾಯ ಸೋಲು ಕಂಡಿತು. ಆ ಮೂಲಕ 6 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಫ್ರಿಕಾಗೆ ಸರಣಿ ಜೀವಂತವಾಗಿರಿಸಿಕೊಳ್ಳಲು ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಸರಣಿ ಸೋತರೆ ಆಫ್ರಿಕಾ ತಂಡಕ್ಕೆ ತೀವ್ರ ಮುಖಭಂಗವಾಗಲಿದ್ದು, ಸುಧೀರ್ಘ ಸಮಯದ ಬಳಿಕ ತವರಿನಲ್ಲಿ ಭಾರತದ ವಿರುದ್ಧ ಸರಣಿ ಸೋತಂತಾಗುತ್ತದೆ.
ಇನ್ನು ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ನಡೆಸಿದ ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಅಜೇಯ ಶತಕ (160 ರನ್) ಮತ್ತು ಶಿಖರ್ ಧವನ್ (76 ರನ್) ಅವರ ಅಮೋಘ ಆಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 303 ರನ್ ಕಲೆಹಾಕಿತ್ತು.