2ನೇ ಏಕದಿನ: ಕಿವೀಸ್ ಬೌಲರ್ ಗಳ ಮೇಲೆ ಟೀಂ ಇಂಡಿಯಾ ಸವಾರಿ, ಗೆಲ್ಲಲು 325 ರನ್ ಗಳ ಬೃಹತ್ ಗುರಿ

ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಗುರಿ ನೀಡಿದೆ.
ಧೋನಿ ಬ್ಯಾಟಿಂಗ್ ವೈಖರಿ
ಧೋನಿ ಬ್ಯಾಟಿಂಗ್ ವೈಖರಿ
ಮೌಂಟ್​​​ ಮೌಂಗನ್ಯುಯಿ: ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ (87 ರನ್)ಹಾಗೂ (66 ರನ್) ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್ ಗೆ ಶತಕದ ಜೊತೆಯಾಟ (154 ರನ್)ವಾಡಿದ ಈ ಜೋಡಿ ಆಗಲೇ ಬೃಹತ್ ರನ್ ಗಳ ಗುರಿ ನೀಡುವ ಮುನ್ಸೂಚನೆ ನೀಡಿತು. ಆದರೆ ಈ ಹಂತದಲ್ಲಿ 66 ರನ್ ಗಳಿಸಿ ಶತಕದತ್ತ ದಾಪುಗಾಲು ಹಾಕುತ್ತಿದ್ದ ಶಿಖರ್ ಧವನ್ ಟ್ರೆಂಟ್ ಬೌಲ್ಟ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಬಳಿಕ 87 ರನ್ ಗಳಿಸಿದ್ದ ರೋಹಿತ್ ಶರ್ಮಾ ಕೂಡ ಲಾಕಿ ಫರ್ಗುಸನ್ ಬೌಲಿಂಗ್ ನಲ್ಲಿ ಔಟಾದರು.
ಆದರೆ ಇವರಿಬ್ಬರ ವಿಕೆಟ್ ಭಾರತದ ರನೇ ವೇಗದ ಮೇಲೆ ಯಾವುದೇ ರೀತಿಯ ಕಡಿವಾಣ ಹಾಕಲಿಲ್ಲ. ರೋಹಿತ್ ಶರ್ಮಾ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ (43 ರನ್) ಮತ್ತು ಅಂಬಾಟಿ ರಾಯುಡು (47 ರನ್) ಜೋಡಿ ರನ್ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಆದರೆ ಇನ್ನಿಂಗ್ಸ್ ನ 40ನೇ ಓವರ್ ನಲ್ಲಿ 43 ರನ್ ಗಳಿಸಿದ್ದ ಕೊಹ್ಲಿ ಬೌಲ್ಟ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ಬಳಿಕ ಅಂಬಾಟಿ ರಾಯುಡು ಕೂಡ ಫರ್ಗುಸನ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಕ್ರೀಸ್ ಗೆ ಆಗಮಿಸಿದ ಎಂಎಸ್ ಧೋನಿ (ಅಜೇಯ 48 ರನ್) ಮತ್ತು ಕೇದಾರ್ ಜಾದವ್ (ಅಜೇಯ 22 ರನ್) ಜೋಡಿ ಅಂತಿಮ ಓವರ್ ಗಳಲ್ಲಿ ರನ್ ಮಳೆಯನ್ನೇ ಹರಿಸಿದರು. ಅಲ್ಲದೆ ಭಾರತ ರನ್ ಗಳಿಕೆ 300ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 324 ರನ್ ಗಳಿಸಿ, ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಗುರಿ ನೀಡಿತು.
ಇನ್ನು ಕಿವೀಸ್ ಪರ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com