ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ತವರಿನ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೇವಲ 6 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಮುಂಬೈ ನೀಡಿದ 188 ರನ್ ಗಳ ಬೃಹತ್ ಗುರಿಯನ್ನು ಬೆನ್ನುಹತ್ತಿದ ಬೆಂಗಳೂರು ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ(46 ರನ್) ಹಾಗೂ ಸ್ಫೋಟಕ ಬ್ಯಾಟ್ಸಮನ್ ಎಬಿಡಿ ವಿಲಿಯರ್ಸ್ (ಅಜೇಯ 70 ರನ್) ಬೆನ್ನುವಾಗಿ ನಿಂತಿದ್ದರು. ಮಾಲಿಂಗ ಎಸೆದ ಅಂತಿಮ ಓವರ್ ನಲ್ಲಿ 10 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮಾಲಿಂಗ ಎಸೆದ ಕೊನೇ ಎಸೆತದಲ್ಲಿ ಆರ್ ಸಿಬಿ ಗೆಲುವಿಗೆ 7 ರನ್ ಅಗತ್ಯವಿತ್ತು. ಈ ವೇಳೆ ಶಿವಂ ದುಬೇ ಲಾಂಗ್ ಆನ್ ನತ್ತ ಚೆಂಡನ್ನು ಬಾರಿಸಿ 1 ರನ್ ಪೇರಿಸಿದ ಬೆನ್ನಲ್ಲಿಯೇ ಮುಂಬೈ ವಿಜಯೋತ್ಸವ ಆರಂಭಿಸಿತ್ತು. ಆದರೆ, ಮಾಲಿಂಗ ಎಸೆದ ಈ ಎಸೆತ ನೋಬಾಲ್ ಆಗಿದ್ದನ್ನು ಅಂಪೈರ್ ಎಸ್.ರವಿ ಗಮನಿಸಲಿಲ್ಲ. ಆದರೆ ಇದನ್ನು ಗಮನಿಸಿದ್ದ ಆರ್ ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲೇ ನೋಬಾಲ್ ನೋಬಾಲ್ ಎಂದು ಕೂಗಿದರು. ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.