ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2-1 ಅಂತರದ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ
ಲಂಡನ್: ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2-1 ಅಂತರದ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಇಷ್ಟೇ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಅಗ್ರ ಸ್ಥಾನದಲ್ಲಿದೆ.
ಅರೆ ಇದೇನಿದು ಆಸ್ಟ್ರೇಲಿಯಾ ಕೂಡ ಭಾರತದಷ್ಟೇ ಪಂದ್ಯಗಳನ್ನು ಗೆದ್ದರೂ ಅಂಕಪಟ್ಟಿಯಲ್ಲಿ ಏಕೆ ದ್ವಿತೀಯ ಸ್ಥಾನದಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಐಸಿಸಿಯ ಚಾಂಪಿಯನ್ ಷಿಪ್ ಟೂರ್ನಿಯ ನಿಯಮಾವಳಿ.
ಹೌದು.. ಐಸಿಸಿ ನಡೆಸುತ್ತಿರುವ ಸುದೀರ್ಘ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಭಾರತ ತಂಡ ವಿಂಡೀಸ್ ವಿರುದ್ದದ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಒಟ್ಟು 120 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, ಆದರೆ ಇಷ್ಟೇ ಪಂದ್ಯ ಗೆದ್ದರೂ ಆಸ್ಟ್ರೇಲಿಯಾ ಮಾತ್ರ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ 2 ಪಂದ್ಯ ಗೆದ್ದರೂ ಅದರ ಅಂಕಗಳಿಕೆ 56ರಲ್ಲಿದೆ. ತಲಾ ಒಂದೊಂದು ಪಂದ್ಯ ಗೆದ್ದು ತಲಾ 60 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
ಉಳಿದಂತೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇನ್ನೂ ಅಂಕಗಳ ಖಾತೆ ತೆರೆದಿಲ್ಲ.
2 ಪಂದ್ಯಗೆದ್ದರೂ ಆಸಿಸ್ ಗಿಲ್ಲ ಅಗ್ರ ಸ್ಥಾನದ ಪಟ್ಟ
ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಐಸಿಸಿ ಟೆಸ್ಟ್ ಸರಣಿಯೊಂದಕ್ಕೆ 120 ಅಂಕಗಳನ್ನು ಮೀಸಲಿರಿಸಿದೆ. ಸರಣಿಯಲ್ಲಿ ತಂಡಗಳು ಆಡುವ ಪಂದ್ಯಗಳಿಗೆ ಅನುಗುಣವಾಗಿ ಈ ಅಂಕಗಳು ವಿಭಜಿಸಲ್ಪಡುತ್ತವೆ. ಭಾರತ ವಿಂಡೀಸ್ ವಿರುದ್ಧ 2 ಪಂದ್ಯಗಳ ಸರಣಿಯಾಡಿದ್ದು, ಹೀಗಾಗಿ 120 ಅಂಕಗಳನ್ನು ಪ್ರತೀ ಪಂದ್ಯಕ್ಕೆ 60 ಅಂಕಗಳಂತೆ ಮೀಸಲಿಡಲಾಗಿತ್ತು. ಆದರೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿ ಒಟ್ಟು 5 ಪಂದ್ಯಗಳ ಸರಣಿಯಾಗಿದ್ದು, ಇದೇ ಕಾರಣಕ್ಕೆ ಇಡೀ ಸರಣಿಗೆ ನೀಡುವ 120 ಅಂಕಗಳನ್ನು ಐದು ಪಂದ್ಯಗಳಿಗೆ ವಿಭಜಿಸಲಾಗಿದೆ. ಅದರಂತೆ ಈ ಸರಣಿಯ ಪ್ರತೀ ಪಂದ್ಯಕ್ಕೆ 24 ಅಂಕಗಳನ್ನು ಮೀಸಲಿಡಲಾಗಿದೆ.
ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಕೂಡ ಭಾರತದಂತೆ 2 ಟೆಸ್ಟ್ ಪಂದ್ಯಗಳನ್ನು ಗೆದ್ದರೂ ಕೂಡ ಅದರ ಅಂಕಗಳಿಕೆ 56ರಲ್ಲೇ ಇದೆ. ಈ ಪೈಕಿ ಒಂದು ಪಂದ್ಯ ಡ್ರಾ ಕೂಡ ಆಗಿತ್ತು.
Advertisement