ಪ್ರಧಾನ ಕೋಚ್ ಹುದ್ದೆ: ಬಹಿರಂಗವಾಗಿಯೇ ವಿರಾಟ್ ಕೊಹ್ಲಿ ರವಿ ಶಾಸ್ತ್ರಿ ಬೆನ್ನಿಗೆ ನಿಂತದ್ದು ಎಷ್ಟು ಸರಿ?

ತಂಡದ ನೂತನ ಕೋಚ್ ಹುದ್ದೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಹೊತ್ತಿನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಹಾಲಿ ಕೋಚ್ ರವಿಶಾಸ್ತ್ರಿ ಬೆನ್ನಿಗೆ ನಿಂತಿರುವುದು ಹಲವರ ಕಣ್ಣು ಕೆಂಪಾಗಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಸಾಕಷ್ಟು ಆಂತರಿಕ ಬೆಳವಣಿಗೆಗಳು ನಡೆಯುತ್ತಿದ್ದು, ಆಟಗಾರರ ನಡುವಿನ ವೈಮನಸ್ಸಿನ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇದೇ ಹೊತ್ತಿನಲ್ಲೇ ತಂಡದ ನೂತನ ಕೋಚ್ ಹುದ್ದೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಹೊತ್ತಿನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ಬಹಿರಂಗವಾಗಿಯೇ ಹಾಲಿ ಕೋಚ್ ರವಿಶಾಸ್ತ್ರಿ ಬೆನ್ನಿಗೆ ನಿಂತಿರುವುದು ಹಲವರ ಕಣ್ಣು ಕೆಂಪಾಗಿಸಿದೆ.
ಹೌದು... ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ರವಿಶಾಸ್ತ್ರಿ ಕೋಚ್ ಹುದ್ದೆಯ ಅವಧಿ ಕೂಡ ಮುಕ್ತಾಯವಾಗಿತ್ತು. ಆದರೆ ವಿಂಡೀಸ್ ಪ್ರವಾಸದ ಹಿನ್ನಲೆಯಲ್ಲಿ ಈ ಅವಧಿಯನ್ನು ವಿಸ್ತರಿಸಲಾಗಿತ್ತು. ಬಿಸಿಸಿಐನ ಕ್ರಿಕೆಟ್ ಆಡಳಿತ ಮಂಡಳಿ ನೂತನ ಕೋಚ್ ಆಯ್ಕೆ ಪ್ರಕ್ರಿಯೆಯ ಜವಾಬ್ದಾರಿಯನ್ನು ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಮಂಡಳಿಗೆ ವಹಿಸಿದೆ. ಹೀಗಾಗಿ ನೂತನ ಕೋಚ್ ಆಯ್ಕೆಯ ಸಂಪೂರ್ಣ ಜವಾಬ್ದಾರಿ ಈ ಆಯ್ಕೆ ಮಂಡಳಿಯದ್ದೇ ಆಗಿದ್ದು, ಅದಕ್ಕೂ ಮೊದಲೇ ತಂಡದ ನಾಯಕ ವಿರಾಟ್ ಕೊಹ್ಲಿ ಹಾಲಿ ಕೋಚ್ ರವಿಶಾಸ್ತ್ರಿ ಅವರ ಬೆನ್ನಿಗೆ ನಿಂತಿದ್ದಾರೆ.
ವಿಂಡೀಸ್ ಪ್ರವಾಸಕ್ಕೂ ಮುನ್ನ ನಡೆದ ಸುದ್ದಿಗೋಷ್ಟಿ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿ ರವಿಶಾಸ್ತ್ರಿ ಅವರೇ ತಂಡದ ಕೋಚ್ ಆಗಿ ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಅವರ ಈ ನಡೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ತಂಡದ ಸಹ ಆಟಗಾರರನ್ನು ಗಮನದಲ್ಲಿಟ್ಟುಕೊಳ್ಳದೇ ಕೊಹ್ಲಿ ಹೇಗೆ ಇಂತಹ ಹೇಳಿಕೆ ನೀಡಲು ಸಾಧ್ಯ. ಕೊಹ್ಲಿ ಹೇಳಿಕೆ ಕೋಚ್ ಆಯ್ಕೆ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 
ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಖ್ಯಾತ ಕ್ರಿಕೆಟ್ ವಿಶ್ಲೇಷಕ ವೇಟೂರಿ ಶ್ರೀವತ್ಸ ಅವರು, ಮುಂಬರುವ ದಿನಗಳಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳಲಿದೆ. ವಿಂಡೀಸ್ ಪ್ರವಾಸ, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಇದ್ದು, ಈ ಮೂರು ಮಾದರಿಯ ಕ್ರಿಕೆಟ್ ಗೆ ಹೊಂದಿಕೊಳ್ಳುವ ತಂಡದ ಸಂಯೋಜನೆ ಮಾಡುವ ಕೋಚ್ ಅಗತ್ಯವಿದೆ. ಈಗಾಗಲೇ ಬಿಸಿಸಿಐ ಪ್ರಧಾನ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಸಾಕಷ್ಟು ನುರಿತ ಕ್ರಿಕೆಟಿಗರು ಅರ್ಜಿ ಸಲ್ಲಿಕೆಗೆ ಉತ್ಸಾಹ ತೋರಿದ್ದಾರೆ. ಹೀಗಿರುವಾಗ ಕೊಹ್ಲಿ ಅವರ ಇಂತಹ ಹೇಳಿಕೆ ಸರಿಯಲ್ಲ ಎಂದು ಹೇಳಿದ್ದಾರೆ.
ಅಂತೆಯೇ ನಾಯಕ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾರ ನಡುವಿನ ಶೀಥಲ ಸಮರದ ಕುರಿತು ಮಾತನಾಡಿರುವ ಶ್ರೀವತ್ಸ ಅವರು, ಕೊಹ್ಲಿ-ರೋಹಿತ್ ಗಾಸಿಪ್ ರಂಪಾಟ ಇದೀಗ ಜಗಜ್ಜಾಹಿರಾಗಿದೆ. ಅವರ ಕುಟುಂಬಗಳೂ ಕೂಡ ಸುದ್ದಿಗೆ ಆಹಾರವಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com