2ನೇ ಟಿ20: ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಮತ್ತೊಂದು ವಿಶ್ವದಾಖಲೆ ಬರೆದ ಹಿಟ್ ಮ್ಯಾನ್ ರೋಹಿತ್ ಶರ್ಮಾ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸಿಕ್ಸರ್ ವೀರ ರೋಹಿತ್ ಶರ್ಮಾ
ಸಿಕ್ಸರ್ ವೀರ ರೋಹಿತ್ ಶರ್ಮಾ
ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫ್ಲೋರಿಡಾದ ಲಾಡೇರ್ ಹಿಲ್ ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಕ್ರೀಡಾಂಗಣ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಕೇವಲ 51 ಎಸೆತಗಳಲ್ಲಿ ರೋಹಿತ್ 67 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್ ನಲ್ಲಿ 3 ಭರ್ಜರಿ ಸಿಕ್ಸರ್ ಮತ್ತು 6 ಬೌಂಡರಿ ಸೇರಿತ್ತು. ಇದೀಗ ಇದೇ ಸಿಕ್ಸರ್ ಗಳ ಮೂಲಕ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಾಣ ಮಾಡಿದ್ದು, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದ ಮತ್ತು ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನವರಾಗಿದ್ದಾರೆ.
ಇಂದಿನ ಪಂದ್ಯದ ಮೂರು ಸಿಕ್ಸರ್ ಗಳ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಸಿಕ್ಸರ್ ಗಳ ಸಂಖ್ಯೆಯನ್ನು 106ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಇದೇ ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗೇಯ್ಲ್ ಒಟ್ಟು 105 ಸಿಕ್ಸರ್ ಸಿಡಿಸಿದ್ದು, ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪಟ್ಟಿಯಲ್ಲಿ ಕಿವೀಸ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಮೂರನೇ ಸ್ಥಾನ ಪಡೆದಿದ್ದು, ಗಪ್ಟಿಲ್ ಒಟ್ಟು 103 ಸಿಕ್ಸರ್ ಸಿಡಿಸಿದ್ದಾರೆ.
ಇನ್ನು 2ನೇ ಸ್ಥಾನದಲ್ಲಿರುವ ಕ್ರಿಸ್ ಗೇಯ್ಲ್ ಹಾಲಿ ಟೂರ್ನಿಯಲ್ಲಿ ಆಡುತ್ತಿಲ್ಲ. ಗೇಯ್ಲ್ ಗೆ ಹಾಲಿ ಟೂರ್ನಿಯಿಂದ ವಿಶ್ರಾಂತಿ ನೀಡಲಾಗಿದೆ. 
32 ವರ್ಷದ ರೋಹಿತ್ ಶರ್ಮಾ ಟಿ20 ಮಾದರಿ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರರಾಗಿದ್ದಾರೆ. ಅಲ್ಲದೆ ಟಿ20ಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಕೂಡ ರೋಹಿತ್ ಹೆಸರಿನಲ್ಲಿದೆ. ಈ ಪಟ್ಟಿಗೆ ಇದೀಗ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com