ರವಿಶಾಸ್ತ್ರಿ ಆಯ್ಕೆ ನಿಮಿತ್ತ ಕ್ಯಾಪ್ಟನ್ ಕೊಹ್ಲಿಯನ್ನು ಸಂಪರ್ಕಿಸಿಯೇ ಇಲ್ಲ: ಸಿಎಸಿ ಮುಖ್ಯಸ್ಥ ಕಪಿಲ್ ದೇವ್ ಅಚ್ಚರಿ ಹೇಳಿಕೆ

ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಸಂಬಂಧ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನಾವು ಸಂಪರ್ಕಿಸಿಯೇ ಇಲ್ಲ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಅಚ್ಚರಿ ಮೂಡಿಸಿದ್ದಾರೆ.
ಕಪಿಲ್ ದೇವ್ ಸುದ್ದಿಗೋಷ್ಠಿ
ಕಪಿಲ್ ದೇವ್ ಸುದ್ದಿಗೋಷ್ಠಿ

ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಸಂಬಂಧ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನಾವು ಸಂಪರ್ಕಿಸಿಯೇ ಇಲ್ಲ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಅಚ್ಚರಿ ಮೂಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲು ರವಿಶಾಸ್ತ್ರಿ ಅವರಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದ್ದು, ಈ ಸಂಬಂಧ ಇಂದು ಮುಂಬೈನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ ಆರು ಮಂದಿ ಹಿರಿಯ ಕೋಚ್‌ಗಳನ್ನು ಸಂದರ್ಶಿಸಿತು. ಎಲ್ಲ ಪ್ಕಕ್ರಿಯೆ ಮುಕ್ತಾಯದ ಬಳಿಕ ಸಮಿತಿ ರವಿಶಾಸ್ತ್ರಿ ಹೆಸರನ್ನು ಶಿಫಾರಸು ಮಾಡಿದೆ. 

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಅವರು, 'ಈ ಆಯ್ಕೆಯು ಬಹಳ ಕಠಿಣವಾಗಿತ್ತು. ಏಕೆಂದರೆ ಎಲ್ಲರೂ ಉತ್ತಮ ಜ್ಞಾನ ಮತ್ತು ಅನುಭವ ಹೊಂದಿದವರಾಗಿದ್ದಾರೆ. ನಮ್ಮ ಮುಂದಿದ್ದ ಪಟ್ಟಿಯಲ್ಲಿಯೇ ಮೂವರನ್ನು ಅಂತಿಮಗೊಳಿಸಿದ್ದೇವೆ. ಅದರಲ್ಲಿ ಮೊದಲ ಸ್ಥಾನದಲ್ಲಿ ರವಿಶಾಸ್ತ್ರಿ, ಎರಡನೇ ಸ್ಥಾನದಲ್ಲಿ ಟಾಮ್‌ ಮೂಡಿ ಮತ್ತು ಮೂರನೇ ಸ್ಥಾನದಲ್ಲಿ ಮೈಕ್ ಹಸ್ಸಿ ಇದ್ದರು ಎಂದು ಹೇಳಿದರು.

'ನಾನು, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಪ್ರತ್ಯೇಕವಾಗಿ ಅಂಕಗಳನ್ನು ನೀಡಿದ್ದೆವು. ಪ್ರತಿಯೊಬ್ಬ ಅಭ್ಯರ್ಥಿಗೂ ಗರಿಷ್ಠ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಅವರ ಅನುಭವ, ಆಟದ ಕುರಿತ ಜ್ಞಾನ, ಸಂವಹನ ಕಲೆ, ತಂಡವನ್ನು ಒಗ್ಗೂಡಿಸಿ ಮುನ್ನಡೆಸುವ ತಂತ್ರಗಳು ಮತ್ತಿತರ ವಿಷಯಗಳ ಕುರಿತು ಅವರು ನೀಡಿದ ಪ್ರಾತ್ಯಕ್ಷಿಕೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಅದರ ಆಧಾರದ ಮೇಲೆ ಅಂಕಗಳನ್ನು ನೀಡಲಾಯಿತು. ನಾವು ಮೂರು ಜನರು ಅಂಕಗಳನ್ನು ನೀಡುವ ಕುರಿತು ಯಾವುದೇ ಹಂತದಲ್ಲಿಯೂ ಪರಸ್ಪರ ಮಾತನಾಡಿಲ್ಲ ಅಥವಾ ಪೂರ್ವನಿರ್ಧಾರಗಳನ್ನೂ ಮಾಡಿರಲಿಲ್ಲ. ಆದರೆ ಅಂತಿಮ ಅಂಕಪಟ್ಟಿ ಸಿದ್ಧವಾದಾಗ ಎಲ್ಲರ ನಿರ್ಧಾರವೂ ಒಂದೇ ಆಗಿತ್ತು' ಎಂದು ಕಪಿಲ್ ದೇವ್ ಹೇಳಿದ್ದಾರೆ.

ಅಂತೆಯೇ 'ಸುಮಾರು ಆರು ತಾಸುಗಳ ಈ ಸಂದರ್ಶನದಲ್ಲಿ ಸಾಕಷ್ಟು ಉತ್ತಮ ಅಂಶಗಳ ವಿಚಾರ ವಿನಿಮಯ ನಡೆಯಿತು. ನಾವು ಕೂಡ ಬಹಳಷ್ಟು ಹೊಸ ವಿಷಯಗಳನ್ನು ಕಲಿತೆವು. ಮೂವರು ಆಕಾಂಕ್ಷಿಗಳು ಪಡೆದಿರುವ ಅಂಕಗಳಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಕೂದಲೆಳೆಯಷ್ಟು ಅಂತರ ಇದೆ ಅಷ್ಟೇ. ಪ್ರಸ್ತುತ ನಾವು ನಮ್ಮ ಕೆಲಸವನ್ನು ಪೂರ್ತಿ ಮಾಡಿದ್ದೇವೆ. ಬಿಸಿಸಿಐಗೆ ವರದಿ ನೀಡಿದ್ದೇವೆ.  ಈಗ ಮಂಡಳಿಯು ಅಂತಿಮ ನಿರ್ಧಾರ ಕೈಗೊಳ್ಳುವುದು. ಕೋಚ್ ಆಯ್ಕೆ, ಕಾರ್ಯದ ಅವಧಿ ಮತ್ತು ವೇತನಗಳ ಕುರಿತು ಮಂಡಳಿಯೇ ನಿರ್ಧರಿಸುವುದು ಎಂದು ಕಪಿಲ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಯ್ಕೆ ಪ್ರಕ್ರಿಯೆ ವೇಳೆ ಕೊಹ್ಲಿಯನ್ನು ಸಂಪರ್ಕಿಸಿಲ್ಲ
ಇನ್ನು ಇದೇ ವೇಳೆ ಅಚ್ಚರಿ ಹೇಳಿಕೆ ನೀಡಿದ ಕಪಿಲ್ ದೇವ್ ಅವರು, ಕೋಚ್ ಆಯ್ಕೆ ಪ್ರಕ್ರಿಯೆ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಿಲ್ಲ. ಒಂದು ವೇಳೆ ನಾಯಕನ್ನು ಸಂಪರ್ಕಿಸಿದ್ದರೆ, ಆಗ ಇಡೀ ತಂಡದ ಆಟಗಾರರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಹೀಗಾಗಿ ಕೊಹ್ಲಿ ಅಭಿಪ್ರಾಯ ಕೇಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಮೈಕ್ ಹಸ್ಸಿ, ಟಾಮ್ ಮೋಡಿ, ರಾಬಿನ್ ಸಿಂಗ್, ಲಾಲಚಂದ್ ರಜಪೂತ್, ಫಿಲ್ ಸಿಮಂಸ್ ಹಾಗೂ ಹಾಲಿ ಕೋಚ್ ರವಿ ಶಾಸ್ತ್ರಿ ಹೆಸರಗಳು ಅಂತಿಮ ಪಟ್ಟಿಯಲ್ಲಿತ್ತು. ಪತ್ರಿಕಾಗೋಷ್ಠಿಯಲ್ಲಿ ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com