ಅಪಾಯಕಾರಿ ತಂಡದ ಎದುರು ಹುಲಿಗಳಂತೆ ಆಡಿದಿರಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದು ಯಾರಿಗೆ?

ಟಿ20 ಕ್ರಿಕೆಟ್ ಮಾದರಿಯ ಕ್ರಿಕೆಟ್ ನಲ್ಲಿ ಅಪಾಯಕಾರಿ ಎನಿಸಿಕೊಂಡಿದ್ದ ತಂಡದ ಎದುರು ಹುಲಿಗಳಂತೆ ಆಡಿದಿರಿ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಟಿ20 ಕ್ರಿಕೆಟ್ ಮಾದರಿಯ ಕ್ರಿಕೆಟ್ ನಲ್ಲಿ ಅಪಾಯಕಾರಿ ಎನಿಸಿಕೊಂಡಿದ್ದ ತಂಡದ ಎದುರು ಹುಲಿಗಳಂತೆ ಆಡಿದಿರಿ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಇಷ್ಚಕ್ಕೂ ರವಿಶಾಸ್ತ್ರಿ ಅವರ ಈ ಹೊಗಳಿಕೆಗೆ ಪಾತ್ರರಾಗಿರುವುದು ಬೇರಾರೂ ಅಲ್ಲ. ಅದು ಕೊಹ್ಲಿ ಪಡೆ. ಹೌದು.. ವಿಶ್ವ ಕ್ರಿಕೆಟ್ ನಲ್ಲಿ ಟಿ20 ಮಾದರಿಯಲ್ಲಿ ಅಪಾಯಕಾರಿ ತಂಡ ಎನಿಸಿಕೊಂಡಿರುವ ದೈತ್ಯ ವೆಸ್ಟ್ ಇಂಡೀಸ್ ತಂಡದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಭೇರಿ ಭಾರಿಸಿದ ಟೀಂ ಇಂಡಿಯಾ ಆಟಕ್ಕೆ ಕೋಚ್ ರವಿಶಾಸ್ತ್ರಿ ತಲೆಬಾಗಿದ್ದಾರೆ.

ಸರಣಿ ಮುಕ್ತಾಯವಾಗಿ ಎರಡು ದಿನಗಳ ಬಳಿಕ ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಹರ್ಷ ವ್ಯಕ್ತಪಡಿಸಿರುವ ರವಿಶಾಸ್ತ್ರಿ ಕೊಹ್ಲಿ ಪಡೆಯನ್ನು ಹುಲಿಗಳೆಂದು ಶ್ಲಾಘಿಸಿದ್ದಾರೆ. 'ಟಿ20 ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ತಂಡ ಎನಿಸಿರುವ ವಿಂಡೀಸ್‌ ಎದುರು ಹುಲಿಗಳಂತೆ ಆಡಿದ್ದೀರಿ ಎಂದು ಬರೆದುಕೊಳ್ಳುವ ಮೂಲಕ ಕೊಹ್ಲಿ ಪಡೆಯ ಬೆನ್ನು ತಟ್ಟಿದ್ದಾರೆ. 

3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ 2-1 ಅಂತರದಲ್ಲಿ ಜಯಭೇರಿ ಭಾರಿಸಿತ್ತು. ಸರಣಿಯ ಮೊದಲ ಪಂದ್ಯದಲ್ಲಿ ಭಾರತವು 208 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿ ಗೆದ್ದಿತ್ತು. ಹೈದರಾಬಾದ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನಾಯಕ ವಿರಾಟ್‌ ಕೇವಲ 50 ಎಸೆತಗಳಲ್ಲಿ ತಲಾ 6 ಬೌಂಡರಿ ಮತ್ತು 6 ಸಿಕ್ಸರ್ ಸಿಡಿಸಿ ಔಟಾಗದೆ 94 ರನ್‌ ಗಳಿಸಿದ್ದರು. ಹೀಗಾಗಿ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಗೆಲುವು ಸಾಧ್ಯವಾಗಿತ್ತು.

ಇನ್ನು ಫೀಲ್ಡಿಂಗ್‌ ವೇಳೆ ಮಾಡಿದ ಎಡವಟ್ಟುಗಳಿಂದಾಗಿ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಸೋಲು ಕಂಡಿತ್ತು. ತಿರುವನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಕೊಹ್ಲಿ ಪಡೆ, 170 ರನ್‌ ಕಲೆ ಹಾಕಿತ್ತು. ಈ ಮೊತ್ತವನ್ನು ನಿರಾಯಾಸವಾಗಿ ಬೆನ್ನಟ್ಟಿದ ವಿಂಡೀಸ್‌ 9 ಎಸೆತಗಳು ಬಾಕಿ ಇರುವಂತೆಯೇ ತಲುಪಿ ಭಾರತಕ್ಕೆ ತಿರುಗೇಟು ನೀಡಿತ್ತು.

ಸರಣಿಯ ಫೈನಲ್ ಎನಿಸಿದ್ದ ಮೂರನೇ ಪಂದ್ಯದಲ್ಲಿ ಕೊಹ್ಲಿ ಪಡೆ ಅಕ್ಷರಶಃ ಅಬ್ಬರದ ಆಟವಾಡಿತ್ತು. ಆಕ್ರಮಣಕಾರಿಯಾಗಿ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ಮೊದಲ ವಿಕೆಟ್‌ಗೆ 11.4 ಓವರ್‌ ಗಳಲ್ಲಿ 135 ರನ್‌ ಪೇರಿಸಿದರು. ಬಳಿಕ ವಿರಾಟ್‌ ಕೊಹ್ಲಿಯೂ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದರು. ಹೀಗಾಗಿ ತಂಡದ ಮೊತ್ತ 240ಕ್ಕೆ ಏರಿತ್ತು. ರೋಹಿತ್‌ ಶರ್ಮಾ 34 ಎಸೆತಗಳಲ್ಲಿ 71 ರನ್‌ ಗಳಿಸಿದರೆ, ರಾಹುಲ್‌ 56 ಎಸೆತಗಳಲ್ಲಿ 91 ರನ್‌ ಬಾರಿಸಿದರು. ಅವರಿಗೆ ಭರ್ಜರಿ ಸಾಥ್ ನೀಡಿದ ನಾಯಕ ಕೊಹ್ಲಿ 29 ಎಸೆತಗಳಲ್ಲಿ 70 ರನ್‌ ಸಿಡಿಸಿದರು.

ಬೃಹತ್‌ ಗುರಿಯೆದುರು ನಿಗದಿತ 20 ಓವರ್‌ಗಳಲ್ಲಿ 173 ರನ್‌ ಗಳಿಸಲಷ್ಟೇ ಶಕ್ತವಾದ ವಿಂಡೀಸ್‌, 67 ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ವಿಂಡೀಸ್‌ ಪರ ನಾಯಕ ಕೀರನ್‌ ಪೊಲಾರ್ಡ್‌ 68 ರನ್‌ ಗಳಿಸಿ ಹೋರಾಟ ನಡೆಸಿದ್ದರು. ಈ ಪಂದ್ಯದಲ್ಲಿ ಒಟ್ಟು 28 ಸಿಕ್ಸರ್‌ಗಳು ದಾಖಲಾದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com