ಭಾರತಕ್ಕೇ ನಮ್ಮ ಬೆಂಬಲ, ಕೊಹ್ಲಿ ಪಡೆ ವಿಶ್ವಕಪ್ ಜಯಿಸಲಿ, ಅದಕ್ಕೆ ಅವರೇ ಅರ್ಹರು: ಶೊಯೆಬ್ ಅಖ್ತರ್

ಹಾಲಿ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಹಂತ ತಲುಪಿದ್ದು, ಪ್ರಸ್ತುತ ಸೆಮೀಸ್ ಅರ್ಹತೆ ಪಡೆದಿರುವ ತಂಡಗಳ ಪೈಕಿ ನಮ್ಮ ಬೆಂಬಲ ಭಾರತಕ್ಕೇ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.
ಶೊಯೆಬ್ ಅಖ್ತರ್
ಶೊಯೆಬ್ ಅಖ್ತರ್
ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಹಂತ ತಲುಪಿದ್ದು, ಪ್ರಸ್ತುತ ಸೆಮೀಸ್ ಅರ್ಹತೆ ಪಡೆದಿರುವ ತಂಡಗಳ ಪೈಕಿ ನಮ್ಮ ಬೆಂಬಲ ಭಾರತಕ್ಕೇ ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಹೇಳಿದ್ದಾರೆ.
ಎಂದಿನಂತೆ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮಾತನಾಡಿರುವ ಅಖ್ತರ್, ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವಕಪ್ ಜಯಿಸುವ ತಮ್ಮ ಫೇವರಿಟ್ ತಂಡ ಭಾರತ... ಟೂರ್ನಿಯಲ್ಲಿ ಭಾರತ ಆಡಿರುವುದನ್ನು ನಾನು ಗಮನಿಸಿದ್ದೇನೆ. ಎಲ್ಲ ವಿಭಾಗಗಳಲ್ಲಿಯೂ ಭಾರತ ಶ್ರೇಷ್ಠ ಪ್ರದರ್ಶನ ನೀಡುತ್ತಿದೆ. ಪ್ರಮುಖವಾಗಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅದ್ಭುತ ಫಾರ್ಮ್ ನಲ್ಲಿದ್ದು, ಟೂರ್ನಿಯಲ್ಲಿ ಈಗಾಗಲೇ ಐದು ಶತಕಗಳನ್ನು ಸಿಡಿಸಿದ್ದಾರೆ.
ಅವರ ಶಾಟ್ ಸೆಲೆಕ್ಷನ್ ಮತ್ತು ಟೈಮಿಂಗ್ ಅದ್ಭುತವಾಗಿದ್ದು, ಅವರನ್ನು ಕಟ್ಟಿ ಹಾಕಲು ಯಾವುದೇ ತಂಡಕ್ಕಾದರೂ ಸವಾಲೇ ಸರಿ... ಸೆಮೀಸ್ ಗೆ ಮೊದಲು ಭಾರತಕ್ಕೆ ಮತ್ತೊಂದು ಶಕ್ತಿ ಸೇರಿದ್ದು, ಅದು ಕೆಎಲ್ ರಾಹುಲ್.. ಹೌದು ಕೆಎಲ್ ರಾಹುಲ್ ಅದ್ಭುತ ಕಮ್ ಬ್ಯಾಕ್ ಮಾಡಿದ್ದು, ಶತಕದ ಮೂಲಕ ಫಾರ್ಮ್ ಗೆ ಮರಳಿದ್ದಾರೆ. ಗುಂಪು ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತ ತಂಡ ಪ್ರಸಕ್ತ ಸಾಲಿನ ಐಸಿಸಿ ವಿಶ್ವಕಪ್‌ ಪ್ರಶಸ್ತಿ ಮುಡಿಗೇರಿಸಿಕೊಳ್ಳಬೇಕು ಎಂದು ಶೊಯೆಬ್‌ ಅಖ್ತರ್‌ ಹೇಳಿದ್ದಾರೆ.
ಇದೇ ವೇಳೆ ನ್ಯೂಜಿಲೆಂಡ್ ತಂಡದ ಕುರಿತು ಮಾತನಾಡಿದ ಅಖ್ತರ್, 'ನ್ಯೂಜಿಲೆಂಡ್ ಗೆ ಒತ್ತಡ ನಿಭಾಯಿಸಲು ಬರುವುದಿಲ್ಲ. ಈ ಬಾರಿ ಅವರು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ವಿಶ್ವಕಪ್‌ ಉಪಖಂಡಕ್ಕೆ ಒಲಿಯಲಿದೆ. ಟೂರ್ನಿಯಲ್ಲಿ ಏಷ್ಯಾ ಖಂಡದ ತಂಡಗಳು ಅತ್ಯಂತ ಯಶಸ್ವಿಯಾಗಿ ಆಡಿದ್ದು, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಅತ್ಯಂತ ಯಶಸ್ವಿಯಾಗಿ ಒತ್ತಡವನ್ನು ನಿಭಾಯಿಸಿಕೊಂಡು ಆಡಿವೆ. ಆ ಕಲೆ ಅವರಿಗೆ ಕರಗತ ಕೂಡ ಆಗಿದೆ. ಆದರೆ ನ್ಯೂಜಿಲೆಂಡ್ ಈ ವಿಚಾರದಲ್ಲಿ ಇನ್ನೂ ಪಳಗಿಲ್ಲ. ಹೀಗಾಗಿ ಸೆಮೀಸ್ ಮತ್ತು ಫೈನಲ್ ನಲ್ಲಿ ಭಾರತವೇ ಗೆಲ್ಲುವ ಫೇವರಿಟ್.. ಭಾರತ ತಂಡದ ಪ್ರಶಸ್ತಿ ಗೆಲ್ಲುವ ಹಾದಿಗೆ ಸಹಕಾರ ನೀಡುತ್ತೇನೆ ಎಂದು ಅಖ್ತರ್‌ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ತಿಳಿಸಿದ್ದಾರೆ. 
ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳಿಂದ ಏಳರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 15 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದಿರುವ ಟೀಮ್‌ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಅದೇ ನ್ಯೂಜಿಲೆಂಡ್ ತಂಡದ ವಿರುದ್ಧವೇ ಭಾರತ ಅಂತಿಮ ನಾಲ್ಕರ ಘಟ್ಟದಲ್ಲಿ ಮಂಗಳವಾರ ಸೆಣಸಲು ಸಿದ್ಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com