ಅಂಬಾಟಿ ರಾಯುಡು ವಿಚಾರದಲ್ಲಿ ತಾರತಮ್ಯವಾಗಿಲ್ಲ: ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್

ಇತ್ತೀಚಿಗೆ ನಿವೃತ್ತಿ ಘೋಷಿಸಿದ ಕ್ರಿಕೆಟಿಗ ಅಂಬಾಟಿ ರಾಯುಡು ವಿಚಾರದಲ್ಲಿ ಆಯ್ಕೆ ಸಮಿತಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.
ಮುಂಬೈ: ಇತ್ತೀಚಿಗೆ ನಿವೃತ್ತಿ ಘೋಷಿಸಿದ ಕ್ರಿಕೆಟಿಗ ಅಂಬಾಟಿ ರಾಯುಡು ವಿಚಾರದಲ್ಲಿ ಆಯ್ಕೆ ಸಮಿತಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.
ಇಂದು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡದ ಆಯ್ಕೆ ಸಭೆ ಬಳಿಕ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್, ವಿಶ್ವಕಪ್ ಟೂರ್ನಿಗಾಗಿ ತಂಡವನ್ನು ಆಯ್ಕೆ ಮಾಡುವಾಗ ತಂಡದ ಆಟಗಾರರ ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದಲ್ಲಿಯೇ ತಂಡದ ಆಯ್ಕೆ ಮಾಡಲಾಗಿದೆ. ಹೀಗಾಗಿ ಅಂಬಾಟಿ ರಾಯುಡು ವಿಚಾರದಲ್ಲಿ ಭುಗಿಲೆದ್ದಿರುವ ವಿವಾದದಲ್ಲಿ ಹುರುಳಿಲ್ಲ ಎಂದು  ಹೇಳಿದರು.
ಅಂಬಾಟಿ ರಾಯುಡು ನಿವೃತ್ತಿ ವಿಚಾರ ಅವರ ವೈಯುಕ್ತಿಕ ನಿರ್ಧಾರವಷ್ಟೇ.. ಈ ಹಿಂದೆ ತಂಡಕ್ಕೆ ಅವರನ್ನು ಅವರ ಟಿ20 ಟೂರ್ನಿ ಮತ್ತು ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಆ ಬಳಿಕ ನಡೆದ ಫಿಟ್ನೆಸ್ ಟೆಸ್ಟ್ ನಲ್ಲಿ ಅವರು ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಫಿಟ್ನೆಸ್ ಪ್ರೋಗ್ರಾಮ್ ಗೆ ಹಾಕಲಾಗಿತ್ತು. ಆದರೆ ಆ ಬಳಿಕ ತಂಡದ ಸಂಯೋಜನೆ ವಿಚಾರ ಬಂದಾಗ ನಮ್ಮ ಆಲೋಚನೆಗಳು ಬದಲಾಗಿತ್ತು. ಇಂಗ್ಲೆಂಡ್ ನ ಸ್ಲೋ ಪಿಚ್ ಗಳಿಗೆ ಒಗ್ಗಿ ಕೊಂಡು ಆಡುವ ಆಟಗಾರರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.
ವಿಂಡೀಸ್ ಪ್ರವಾಸಕ್ಕೆ ಧೋನಿ ಇಲ್ಲ
ಇದೇ ವೇಳೆ ಹಾಲಿ ವಿಂಡೀಸ್ ಪ್ರವಾಸಕ್ಕೆ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ತೆರಳುತ್ತಿಲ್ಲ. ಅವರಾಗಿಯೇ ತಂಡದಿಂದ ದೂರ ಉಳಿಯಲು ನಿರ್ಧರಿಸಿದ್ದು, ಈ ಕುರಿತಂತೆ ಅವರು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ನಾವು ಮುಂಬರುವ ವಿಶ್ವಕಪ್ ಗೂ ಈಗಿನಿಂದಲೇ ಸಿದ್ಧರಾಗಬೇಕಿದ್ದು, ಆ ಕುರಿತಂತೆ ಯೋಜನೆ ಮತ್ತು ಸರಣಿ ಆಯೋಜನೆಯ ಪಟ್ಟಿ ಮಾಡಲಾಗುತ್ತಿದೆ ಎಂದು ಪ್ರಸಾದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com